ವಾಡಿ: ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳುವಂತೆ ರಾಷ್ಟ್ರೀಯ ಸ್ವತ್ಛ ಭಾರತ ಯೋಜನೆಯಡಿ ಕೇಂದ್ರ ಸರ್ಕಾರ ಸ್ಥಳೀಯ ಸಂಸ್ಥೆಗಳ ಮೂಲಕ ಕೋಟ್ಯಂತರ ಅನುದಾನ ಖರ್ಚು ಮಾಡುತ್ತಿದ್ದರೂ ಬಯಲು ಶೌಚದ ಪಿಡುಗು ಇನ್ನು ತೊಲಗಿಲ್ಲ.
ಪಟ್ಟಣದಲ್ಲಿ ಸುಮಾರು 50 ಸಾವಿರ ಜನಸಂಖ್ಯೆಯಿದೆ. 23 ಸದಸ್ಯರಿರುವ ಪುರಸಭೆ ಆಡಳಿತವಿದೆ. ಈ ಪುರಸಭೆ ವ್ಯಾಪ್ತಿಯ ಪಿಲಕಮ್ಮಾ ಬಡಾವಣೆ, ಅಂಬೇಡ್ಕರ್ ಕಾಲೋನಿ, ಜಾಂಬವೀರ ಕಾಲೋನಿ, ಹನುಮಾನ ನಗರ, ವಿಜಯನಗರ, ಇಂದ್ರಾ ನಗರ, ಸೇವಾಲಾಲ ನಗರ ತಾಂಡಾ, ಬಿಯ್ನಾಬಾನಿ ಬಡಾವಣೆಗಳ ಜನರಿಗೆ ಶೌಚಕ್ಕೆ ಹೋಗಲು ಮುಳ್ಳುಕಂಟಿ ಜಾಗಗಳೇ ಆಸರೆಯಾಗಿವೆ.
ಈ ಭಾಗದ ಜನರು ತಂಬಿಗೆ ಹಿಡಿದು ನಗರದ ಹೊರ ವಲಯದ ದೂರದ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ರಾತ್ರಿಯಾಗುವುದನ್ನೇ ಕಾಯುತ್ತಿರುತ್ತಾರೆ. ಇಲ್ಲವೇ ನಗರದ ರಸ್ತೆಗಳ ಬದಿಯಲ್ಲಿ ರಾತ್ರಿ ನಿಲ್ಲಿಸುವ ಹಾಸುಗಲ್ಲು ಹಾಗೂ ಸಿಮೆಂಟ್ ಸಾಗಾಣಿಕೆ ಲಾರಿಗಳ ಮರೆಯಲ್ಲೇ ನಿತ್ಯದ ಕರ್ಮ ಮುಗಿಸುತ್ತಾರೆ. ಸಂಚರಿಸುವ ವಾಹನಗಳ ಪ್ರಖರ ಬೆಳಕು ಹರಿದಾಗ ಎದ್ದು ನಿಲ್ಲುವ ನರಕಯಾತನೇ ಇಲ್ಲಿನ್ನೂ ಜೀವಂತವಾಗಿದೆ. ಸರ್ಕಾರಿ ಜಾಗದ ಕೊರತೆ ಇರುವುದರಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಸಮುದಾಯ ಶೌಚಾಲಯ ಇರುವ ಕೆಲವು ಬಡಾವಣೆಗಳಲ್ಲಿ ನೀರಿನ ಕೊರತೆಯಿದೆ.
ಇದನ್ನೂ ಓದಿ: ಬಿರುಕು ಬಿಟ್ಟ ರೈಲ್ವೆ ಹಳಿ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ!
ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸಾಕಷ್ಟು ಅನುದಾನವಿದೆ. ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಬಹುತೇಕ ಜನರು ಈಗಾಗಲೇ ಸೌಲಭ್ಯ ಪಡೆದಿದ್ದಾರೆ. ಕೆಲವು ಬಡಾವಣೆಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಸರ್ಕಾರಿ ಜಾಗದ ಕೊರತೆಯಿದೆ. ಅನೇಕ ಬಾಡಿಗೆ ಮನೆಗಳಿಗೆ ಶೌಚಾಲಯ ವ್ಯವಸ್ಥೆಯಿಲ್ಲ. ಇಂತಹ ಮನೆಗಳಲ್ಲಿರುವವರು ಬಯಲು ಶೌಚಕ್ಕೆ ಹೋಗುತ್ತಾರೆ. ಆರೋಗ್ಯ ದೃಷ್ಟಿಯಿಂದ ಜನರು ಬಯಲು ಶೌಚಕ್ಕೆ ಹೋಗುವುದನ್ನು ಕೈಬಿಟ್ಟು, ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಪುರಸಭೆಗೆ ಅರ್ಜಿ ಸಲ್ಲಿಸಬೇಕು.
-ಶರಣು ನಾಟೇಕರ, ಪುರಸಭೆ ಸದಸ್ಯ