Advertisement
ಬಹುತೇಕ ಶೌಚಾಲಯಗಳಲ್ಲಿ ಪರವಾನಗಿ ಪತ್ರವೇ ಇಲ್ಲ. ಕೆಲವು ಕಡೆ ಮನಸೋಇಚ್ಛೆ ಹಣ ಸಂಗ್ರಹ ಮಾಡಲಾಗುತ್ತಿದೆ. ಮೂತ್ರ ವಿಸರ್ಜನೆ ಮಾಡುವುದಕ್ಕೆ ಯಾವುದೇ ಶುಲ್ಕ ಪಡೆದುಕೊಳ್ಳುವಂತಿಲ್ಲ ಎನ್ನುವ ಆದೇಶವಿದ್ದರೂ, ಮೂತ್ರ ವಿಸರ್ಜನೆಗೆ ಹಣ ತೆಗೆದುಕೊಳ್ಳಲಾಗುತ್ತಿದೆ.
Related Articles
Advertisement
ಬಯಲು ಮೂತ್ರ ವಿಸರ್ಜನೆ ನಗರದ ಕಪ್ಪು ಚುಕ್ಕಿ: ನಗರದಲ್ಲಿ ಬಯಲು ಪ್ರದೇಶಗಳಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದು ಕಳೆದ ಬಾರಿ ನಡೆದ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಅಂಕ ಕಡಿಮೆ ಬರುವುದಕ್ಕೆ ಪ್ರಮುಖ ಕಾರಣವಾಗಿತ್ತು. ಆದರೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಬಿಬಿಎಂಪಿ ವಿಫಲವಾಗಿದೆ.
ನಗರದ ಯಾವ ಪ್ರದೇಶದಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಎಂಬ ಪಟ್ಟಿಯನ್ನು ಬಿಬಿಎಂಪಿ ಸಿದ್ದಪಡಿಸಿಕೊಳ್ಳುತ್ತಿದ್ದು, ಇಲ್ಲಿಯವರೆಗೆ 152 ಪ್ರದೇಶಗಳನ್ನು ಗುರುತಿಸಿದೆ. ಆದರೆ, ಇದಕ್ಕೆ ಪರ್ಯಾಯ ವ್ಯವಸ್ಥೆ ಇನ್ನೂ ಆಗಿಲ್ಲ. ಇನ್ನೊಂದು ಕಡೆ ಸಮೀಪದಲ್ಲಿ ಸಾರ್ವಜನಿಕ ಶೌಚಾಲಯಗಳು ಇದ್ದರೂ, ಸಾರ್ವಜನಿಕರು ಅದನ್ನು ಬಳಸದೆ ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿರುವುದು ಬಿಬಿಎಂಪಿಗೂ ತಲೆ ನೋವಾಗಿದೆ.
ಟೆಂಡರ್ ನೀಡುವುದಕ್ಕೆ ಕಾನೂನಿನ ಬಿಕ್ಕಟ್ಟು: ಸಫಾಯಿ ಕರ್ಮಚಾರಿಗಳಿಗೆ ಶೌಚಾಲಯಗಳ ನಿರ್ವಹಣೆಯ ಹೊಣೆಯನ್ನು ನೇರವಾಗಿ (ಟೆಂಡರ್ ಕರೆಯದೆ)ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ, ಸಫಾಯಿ ಕರ್ಮಚಾರಿಗಳಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಸಫಾಯಿ ಕರ್ಮಚಾರಿಗಳೂ ನಿಯಮಾನುಸಾರ ಟೆಂಡರ್ ಮೂಲಕ ಭಾಗವಹಿಸಲು ಅವಕಾಶವಿದೆ ಅಥವಾ ಸರ್ಕಾರ ಕಾನೂನಿಗೆ ತಿದ್ದುಪಡಿ ತಂದರೂ ನೇರ ಅವಕಾಶ ನೀಡಬಹುದು ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸಿದರು.
“ಉದಯವಾಣಿ’ ರಿಯಾಲಿಟಿ ಚೆಕ್: ನಗರದ ಪ್ರಮುಖ ಪ್ರದೇಶಗಳಾದ ಮೆಜೆಸ್ಟಿಕ್, ಕೆ.ಆರ್ ಮಾರ್ಕೆಟ್, ಕಲಾಸಿಪಾಳ್ಯ, ಶಿವಾಜಿನಗರ, ಶ್ರೀರಾಮಪುರ, ಜಯನಗರ ಹಾಗೂ ಮಲ್ಲೇಶ್ವರ ಸೇರಿದಂತೆ ಜನ ಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ “ಉದಯವಾಣಿ’ ರಿಯಾಲಿಟಿ ಚೆಕ್ ನಡೆಸಿದ್ದು, ಸಾರ್ವಜನಿಕ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆಗೆ ಹಣ ಪಡೆದುಕೊಳ್ಳುತ್ತಿರುವುದು, ಪರವಾನಗಿ ಪತ್ರ ಇಲ್ಲದೆ ಇರುವುದು ಹಾಗೂ ಸಮೀಪದಲ್ಲಿ ಶೌಚಾಲಯವಿದ್ದರೂ ರಸ್ತೆಗಳ ಬೀದಿ ಬದಿಯಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ನಗರದಲ್ಲಿ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಸುತ್ತೋಲೆ ಹೊರಡಿಸಲಾಗಿದೆ. ಸ್ವಚ್ಛತೆ ಸೇರಿದಂತೆ ವಿವಿಧ ಸಮಸ್ಯೆಗಳಿರುವ ಶೌಚಾಲಯಗಳನ್ನು ಮುಚ್ಚುವಂತೆ ಹಾಗೂ ಸರ್ಮಪಕ ನಿರ್ವಹಣೆ ಮಾಡದವರ ಪರವಾನಗಿ ರದ್ದು ಮಾಡುವಂತೆಯೂ ಸೂಚಿಸಲಾಗಿದೆ. -ರಂದೀಪ್, ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) * ಹಿತೇಶ್ ವೈ