ಬಾಗಲಕೋಟೆ: ಜಿಲ್ಲೆಯ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕ ಶೌಚಾಲಯ ಇರಬೇಕು. ಶೌಚಾಲಯ ಇಲ್ಲದಿದ್ದಲ್ಲಿ ಎನ್‌ಓಸಿ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಪ್ರತಿಯೊಂದು ಪೆಟ್ರೋಲ್ ಬಂಕ್‌ನಲ್ಲಿ ಶೌಚಾಲಯ ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಯಾವ ಬಂಕ್‌ನಲ್ಲಿ ಶೌಚಾಲಯ ಇಲ್ಲವೋ ಆ ಬಂಕ್‌ಗೆ ನೀಡುವ ಎನ್‌ಓಸಿ ತಕ್ಷಣ ರದ್ದು ಮಾಡಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ರಸ್ತೆ ಸುರಕ್ಷತೆ ಹಾಗೂ ತಡೆಗಟ್ಟುವ ಕುರಿತಂತೆ ಕಾರ್ಯಾಗಾರ ಹಮ್ಮಿಕೊಳ್ಳುವುದು ಅಗತ್ಯವಾಗಿದೆ. ಪರಿಷ್ಕೃತಗೊಳಿಸಲಾದ ರಸ್ತೆ ಸುರಕ್ಷತಾ ನಿಯಮಗಳ ಹಾಗೂ ಅವುಗಳನ್ನು ತಡೆಗಟ್ಟುವ ಕುರಿತು ಕಾರ್ಯಾಗಾರ ಅಗತ್ಯವಾಗಿದ್ದು, ಶೀಘ್ರದಲ್ಲಿ ಏರ್ಪಡಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಒಟ್ಟು 33 ಆ್ಯಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 15 ಟಾಟಾ ವಿಂಗರ್, 11 ಮಾರುತಿ ಓಮಿನಿ, 3 ಟೆಂಪೋ ಟ್ರಾವಲರ್, 2 ಈಚರ್ ವಾಹನಗಳಿದ್ದು, ಪ್ರತಿ ವಾಹನಕ್ಕೆ ತಲಾ ಒಬ್ಬ ಚಾಲಕರಿದ್ದಾರೆಂದು ಸಭೆಗೆ ತಿಳಿಸಿದಾಗ ದಿನ 24 ಗಂಟೆಗಳಲ್ಲಿ ಆ್ಯಂಬುಲೆನ್ಸ್ ಕಾರ್ಯನಿರ್ವಹಿಸುತ್ತಿರುವುದರಿಂದ ಪ್ರತಿಯೊಂದು ಆ್ಯಂಬುಲೆನ್ಸ್‌ಗೆ ಇಬ್ಬರು ಚಾಲಕರು ಕಡ್ಡಾಯವಾಗಿ ಇರಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಮಾತನಾಡಿ, ಜಿಲ್ಲೆಯಲ್ಲಿ ಶೇ. 10 ಅಫಘಾತ ಕಡಿಮೆಯಾಗುತ್ತಾ ಹೋಗಬೇಕು. ಅಪಘಾತ ಸಂಭವಿಸಿದಾಗ ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆ, ಲೋಕೋಪಯೋಗಿ ಇಲಾಖೆಯವರು ಜಂಟಿಯಾಗಿ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತಾಗಬೇಕು ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜಯ್ಯ, ಆರೋಗ್ಯ ಇಲಾಖೆಯ ಜಯಶ್ರೀ ಎಮ್ಮಿ, ಎನ್‌ಡಬ್ಲುಕೆಎಸ್‌ಆರ್‌ಟಿಸಿಯ ಡಿಎಂಇ ಗೋಪಾಲಕೃಷ್ಣ, ಜಮಖಂಡಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಯರಾಮ ನಾಯಕ ಉಪಸ್ಥಿತರಿದ್ದರು. ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ ಸ್ವಾಗತಿಸಿದರು.
ಕುಡಿದು ವಾಹನ ಚಾಲನೆ ಮಾಡುತ್ತಿರುವವರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಯಿಂದ 46 ಡ್ರಿಂಕ್ ಮತ್ತು ಡ್ರೈವ್ ಬ್ರೆಕ್ ಎನ್‌ಲೈಜರ್‌ಗಳನ್ನು ಖರೀದಿಸಲಾಗುತ್ತಿದೆ. ಇದರಿಂದ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸುತ್ತಿರುವವರನ್ನು ಪರೀಕ್ಷಿಸಲು ಅನುಕೂಲವಾಗುವುದರಿಂದ ಅಪಘಾತ ತಪ್ಪಿಸಲು ಸಾಧ್ಯವಾಗುತ್ತದೆ.