ಆಲಮಟ್ಟಿ: ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಅವರು ಬೇನಾಳ ಆರ್.ಎಸ್. ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯಗಳನ್ನು ಸ್ವತ್ಛಗೊಳಿಸುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಚ್ಛತಾ ಅಭಿಯಾನಕ್ಕಾಗಿ ನಿತ್ಯ ಜಾಗೃತಿ ಮೂಡಿಸುವದು ಹಾಗೂ ಅವುಗಳ ಸ್ವಚ್ಛತೆಗಾಗಿ ಹಣ ಖರ್ಚು ಮಾಡುತ್ತಿದ್ದರೂ ಸಂಪೂರ್ಣ ಯಶಸ್ಸು ಕಾಣದಿರುವುದರಿಂದ ಅದರ ಯಶಸ್ವಿಗಾಗಿ ತಾಲೂಕಿನ ಪ್ರತಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶೌಚಾಲಯ ಸ್ವತ್ಛಗೊಳಿಸುವುದರ ಜತೆಗೆ ಶಾಲಾ ಆವರಣ ಸ್ವತ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬೇನಾಳ ಆರ್‌ಎಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉರ್ದು ಪ್ರಾಥಮಿಕ ಶಾಲೆ, ಬೇನಾಳ ಎನ್‌ಎಚ್ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಗಳ ಶೌಚಾಲಯಗಳನ್ನು ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿ ತಳವಾರ ಅವರೇ ಪೊರಕೆ ಹಿಡಿದು, ಬಕೆಟ್ ಮೂಲಕ ನೀರು ಹಾಕಿ ಸ್ವಚ್ಛಗೊಳಿಸಿದರು.
ಜೀವನ ಪೂರ್ತಿ ಇದನ್ನೊಂದು ಮಹತ್ವದ ಕಾರ್ಯವೆಂದು ಭಾವಿಸುತ್ತೇನೆ. ಈ ಮಹತ್ವದ ಕಾರ್ಯಕ್ಕೆ ಮಹಾತ್ಮ ಗಾಂಧಿ ಅವರು ಮಾಡಿದ ಸ್ವತ್ಛತಾ ಆಂದೋಲನವೇ ನನಗೆ ಸ್ಪೂರ್ತಿಯಾಗಿದೆ. ನನ್ನ ಈ ಸೇವಾ ಕಾರ್ಯ ಅವರ ದಾರಿಯಲ್ಲಿಯೇ ಸಾಗುತ್ತದೆ. ನನ್ನ ವಾಹನದಲ್ಲಿ ಸದಾ ಕಾಲಕ್ಕೂ ಸ್ವಚ್ಛತೆ ಮಾಡುವ ಪರಿಕರಗಳನ್ನು ಇಟ್ಟು ಭೇಟಿ ಮಾಡುವ ಯಾವುದೇ ಶಾಲೆ ಇರಲಿ ಅಲ್ಲಿಯ ಶೌಚಾಲಯಗಳನ್ನು ಸ್ವಚ್ಛ ಗೊಳಿಸುತ್ತೇನೆ ಎಂದರು.
ಇದು ನನಗೆ ಆತ್ಮ ತೃಪ್ತಿಯ ಕೆಲಸವಾಗಿದೆ, ಪ್ರಚಾರಕ್ಕಾಗಿ ಅಲ್ಲ. ಇದು ಒಂದೇ ದಿನ ಮಾಡಿ ಈ ಕೆಲಸ ಕೈ ಬಿಡುವುದಿಲ್ಲ. ಈ ಪ್ರಕ್ರಿಯೆ ನಿರಂತರ ನಡೆಯುತ್ತದೆ. ಇದರಿಂದಾದರೂ ತಾಲೂಕಿನ ಎಲ್ಲಾ ಶಾಲೆಗಳು ಸ್ವಚ್ಛವಾಗಿರಲಿ ಎಂಬುದು ಇದರ ಹಿಂದಿನ ಉದ್ದೇಶ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಬಿ.ಟಿ. ಗೌಡರ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೈಗೊಂಡ ಕಾರ್ಯದಿಂದ ಸ್ವಚ್ಛತೆ ಮಾಡಬೇಕಾದವರು ಮೈ ಮರೆತರೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಪರಿಸರದ ಅಗತ್ಯತೆಯ ಬಗ್ಗೆ ಸೂಚ್ಯವಾಗಿ ಸಂದೇಶ ನೀಡಿದಂತಾಗಿದೆ.
ವಿ.ಪಿ. ಜುಳಜುಳಿ, ಆರ್.ಎ. ನದಾಫ್, ಸಲೀಂ ದಡೇದ, ಬಿ.ಎಸ್ ಇಜೇರಿ, ಆರ್.ಎಸ್. ವಂದಗನೂರ, ಜಿ.ಡಿ. ಆಸಂಗಿ, ಪಿಡಿಓ ಬಿಳೇಕುದರಿ, ಶಶಿ ಭಾವಿಕಟ್ಟಿ, ಸುರೇಶ ಹುರಕಡ್ಲಿ, ಎನ್.ಬಿ. ದಾಸರ, ಬಿ. ಹನುಮಂತಪ್ಪ, ಎಸ್.ಸಿ. ರಾಠೊಡ, ಆರ್.ಎಸ್. ಕಮತ, ಕೆ.ವಿ. ಕುಕನೂರ ಮೊದಲಾದವರಿದ್ದರು. ನಂತರ ಮಕ್ಕಳ ಕಲಿಕಾ ಪ್ರಗತಿಯನ್ನು ಪರಿಶೀಲಿಸಿ ಸಲಹೆಯನ್ನು ನೀಡಿದರು.