Advertisement

ಕಾಫಿ, ಅಡಿಕೆ ಜತೆ ತೊಗರಿಗೂ ಸಿಗಲಿ ಮಾನ್ಯತೆ

02:59 AM Mar 25, 2021 | Team Udayavani |

ತೊಗರಿ ಬೆಲೆ ಕುಸಿತ ಹಾಗೂ ಏರಿಕೆಗೆ ಸಂಬಂಧಿಸಿದ ಸಮಸ್ಯೆಗೆ ಶಾಶ್ವತ ಪರಿಹಾರ ಇಲ್ಲವೇ? ಇದು ತೊಗರಿ ಕಣಜ ಕಲಬುರ ಗಿಯಲ್ಲಿ ದಶಕಗಳಿಂದ ಕೇಳಿ ಬರುತ್ತಿರುವ ಪ್ರಶ್ನೆ. ಉತ್ತಮ ಬೆಳೆ ಬಂದಾಗ ಬೆಲೆ ಸಿಗಲ್ಲ. ಇಳುವರಿ ಬಾರದಿದ್ದಾಗ ಬೆಲೆ ಇರುತ್ತದೆ. ಹೀಗಾಗಿ ತೊಗರಿ ಬೆಳೆಯುವ ರೈತ ಕಷ್ಟಕ್ಕೊಳಗಾಗುತ್ತಿದ್ದು, ಕೃಷಿ ಕಾಯಕದಿಂದಲೇ ವಿಮುಖರಾಗುವ ಭಯಾ ನಕ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

Advertisement

ಕಳೆದೊಂದು ದಶಕದ ಅವಧಿಯಲ್ಲಿ ಇದೇ ಮೊದಲ ಬಾರಿ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ತೊಗರಿ ಬೆಲೆ ಹೆಚ್ಚಳವಿದೆ. ವರ್ಷವೂ ರಾಜ್ಯ ಸರಕಾರ ತೊಗರಿ ಕ್ವಿಂಟಾಲ್‌ಗೆ 300 ಇಲ್ಲವೇ 400 ರೂ. ಪ್ರೋತ್ಸಾಹಧನ ನೀಡುತ್ತ ಬಂದಿದೆ. ಆದರೆ ಇತಿಹಾಸದಲ್ಲಿ ಪ್ರಸಕ್ತ ಬಾರಿ ಮಾತ್ರ ನಯಾಪೈಸೆ ಪ್ರೋತ್ಸಾಹಧನ ನೀಡುತ್ತಿಲ್ಲ. ತೊಗರಿ ಬೆಂಬಲ ಬೆಲೆ ಕ್ವಿಂಟಾಲ್‌ಗೆ 6,000 ರೂ. ಇದೆ. ಮಾರುಕಟ್ಟೆಯಲ್ಲಿ 6,500 ರೂ. ದಿಂದ 6,700 ರೂ. ಇದೆ. ಒಂದು ವೇಳೆ ರಾಜ್ಯ ಸರಕಾರ ಕೇವಲ 400 ರೂ. ಪ್ರೋತ್ಸಾಹಧನ ನಿಗದಿ ಮಾಡಿದಲ್ಲಿ ಮಾರುಕಟ್ಟೆಯಲ್ಲಿ ಕನಿಷ್ಟ 7,000 ರೂ. ಕ್ವಿಂಟಾಲ್‌ಗೆ ಬೆಲೆ ಇರುತ್ತದೆ. ಇತ್ತ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾಗುತ್ತಿಲ್ಲ. ಒಟ್ಟಾರೆ ಸರಕಾರದ ಧೋರಣೆ ಹಾಗೂ ವ್ಯಾಪಾ ರಸ್ಥರ ಒಳ ಒಪ್ಪಂದದಿಂದ ತೊಗರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಒಂದು ವೇಳೆ ಸರಕಾರ ಕ್ವಿಂಟಾಲ್‌ಗೆ 400 ರೂ. ಪ್ರೋತ್ಸಾಹಧನ ಘೋಷಣೆ ಮಾಡಿದ್ದರೂ ರೈತ ಖರೀದಿ ಕೇಂದ್ರಗಳಿಗೆ ತೊಗರಿ ತರುವುದಿಲ್ಲ. ಮಾರು ಕಟ್ಟೆಯಲ್ಲಿ ಬೆಲೆ ಮತ್ತಷ್ಟು ಹೆಚ್ಚಳವಾ ಗುವುದರಿಂದ ರೈತರಿಗೆ ಹೆಚ್ಚು ಉಪಯೋಗ ವಾಗುತ್ತದೆ. ಆದರೆ ಈ ಕಾರ್ಯ ಮಾತ್ರ ರಾಜ್ಯ ಸರಕಾರ ಮಾಡುತ್ತಿಲ್ಲ. ಕಲ್ಯಾಣ ಕರ್ನಾಟಕದ ಭಾಗದ ಜನಪ್ರತಿನಿಧಿಗಳು ಸಹ ತೊಗರಿಗೆ ಪ್ರೋತ್ಸಾಹಧನ ಘೋಷಣೆ ಮಾಡಿ ಸುವುದರಲ್ಲಿ ತಮಗೇನು ಲಾಭ ಎಂಬ ಮನೋಧೋರಣೆ ತಳೆದ ಪರಿಣಾಮವೇ ರೇಷ್ಮೆ, ಕಾಫಿ, ಅಡಿಕೆ ಬೆಳೆಗೆ ಸಿಗುವ ಪ್ರಾಮುಖ್ಯ ತೊಗರಿಗೆ ದೊರೆಯುತ್ತಿಲ್ಲ.

ಕಲಬುರಗಿ ಜಿಲ್ಲೆಯೊಂದರಲ್ಲೇ ರಾಜ್ಯದ ಶೇ.55 ತೊಗರಿ ಬೆಳೆಯಲಾಗುತ್ತದೆ. ಮಾರು ಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಬೆಲೆ ಕುಸಿತವಾದಾಗ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಅವುಗಳ ಮೂಲಕ ಖರೀದಿ ಮಾಡಲಾಗುತ್ತಿದೆ. ಖರೀದಿ ಕೇಂದ್ರಗಳು 8ರಿಂದ 10 ಲಕ್ಷ ಕ್ವಿಂಟಾಲ್‌ ಖರೀದಿ ಮಾಡುತ್ತವೆ. ಆದರೆ ಇದೇ ಮೊದಲ ಬಾರಿ ಖರೀದಿ ಕೇಂದ್ರಗಳತ್ತ ರೈತರ್ಯಾರು ಸುಳಿಯುತ್ತಿಲ್ಲ. ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಹೆಚ್ಚಳವಾಗಿರುವುದೇ ಇದಕ್ಕೆ ಕಾರಣ. ಖರೀದಿ ಕೇಂದ್ರಗಳಲ್ಲೇ ತೊಗರಿ ಮಾರಾಟ ಮಾಡಬೇಕೆಂದು ಈ ವರ್ಷ 45 ಸಾವಿರ ರೈತರು ಹೆಸರು ನೋಂದಾಯಿಸಿದ್ದಾರೆ. ಹಿಂದಿನ ವರ್ಷಗಳಲ್ಲಿ ಒಂದೂವರೆ ಲಕ್ಷದಷ್ಟು ರೈತರು ನೋಂದಾಯಿಸಿದ್ದರು.

ಸಚಿವ ಉಮೇಶ ಕತ್ತಿ, ತೊಗರಿ ಬೆಲೆ ಮಾರುಕಟ್ಟೆಯಲ್ಲಿಯೇ ಕ್ವಿಂಟಾಲ್‌ಗೆ 8,000 ರೂ. ಆಗುತ್ತದೆ. ಹೀಗಾಗಿ ತಾಳ್ಮೆಯಿಂದ ಇರಬೇಕೆಂದಿದ್ದರು. ಆದರೆ ರಾಜ್ಯ ಸರಕಾರ ಎಷ್ಟಾದರೂ ಪ್ರೋತ್ಸಾಹ ನೀಡಲಿದೆ ಎಂಬು ದಾಗಿ ಒಂದು ಸಣ್ಣ ಮಾತು ಸಹ ಹೇಳಲಿಲ್ಲ. ಇನ್ನು ತೊಗರಿ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ತೊಗರಿ ಅಭಿವೃದ್ಧಿ ಮಂಡಳಿಯೂ ಹೆಸರಿಗೆ ಮಾತ್ರ ಎನ್ನುವಂತಾಗಿದೆ.

– ಹಣಮಂತರಾವ ಭೈರಾಮಡಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next