ಬೆಂಗಳೂರು: ತೊಗಲು ಗೊಂಬೆಯಾಟಕ್ಕೆ ಜೀವಂತಿಕೆ ಕೊಡುವ ನಿಟ್ಟಿನಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಇದೀಗ ಕರ್ನಾಟಕ ಲಲಿತಕಲಾ ಅಕಾಡೆಮಿ ಜತೆಗೂಡಿ ಯೋಜನೆ ರೂಪಿಸಿದೆ.
ಯುವ ಕಲಾವಿದರಿಗೆ ತೊಗಲು ಗೊಂಬೆಯಾಟದ ಪ್ರಸಂಗಗಳ ಕಥೆ ಹೇಳಿ ಚಿತ್ರವನ್ನು ಬರೆಸುವುದು ಆ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ತೊಗಲು ಗೊಂಬೆಯಾಟದ ಪ್ರದರ್ಶನದತ್ತ ಸೆಳೆಯುವ ಉದ್ದೇಶ ಕೂಡ ಇದರಲ್ಲಿ ಸೇರಿದೆ. ಕೊಪ್ಪಳ, ಕೋಲಾರ ಸೇರಿದಂತೆ ರಾಜ್ಯದ ಕೆಲವು ಭಾಗದಲ್ಲಿ ಹಲವು ಸಂಖ್ಯೆಯಲ್ಲಿ ತೊಗಲುಗೊಂಬೆ ಕಲಾವಿದರು ಇನ್ನೂ ಇದ್ದಾರೆ. ಅಂತಹ ಕಲಾವಿದರಿಗೆ ಆಹ್ವಾನ ನೀಡಿ, ಆಸಕ್ತಿ ಇರುವ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಪ್ರದರ್ಶನ ನೀಡುವ ಕುರಿತಂತೆ ತರಬೇತಿ ನೀಡುವ ಆಲೋಚನೆಯನ್ನು ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಹೊಂದಿದೆ.
ರಾಮಾಯಾಣ ಮತ್ತು ಮಹಾಭಾರತದಂತಹ ಪ್ರಸಂಗಗಳನ್ನು ಜನರಿಗೆ ತಲುಪಿಸುವಲ್ಲಿ ತೊಗಲು ಗೊಂಬೆಯಾಟ ಆಗ್ರಪಂಕ್ತಿಯಲ್ಲಿತ್ತು. ಆದರೆ, ತಂತ್ರ ಜ್ಞಾನದ ನಾಗಲೋಟಕ್ಕೆ ಸಿಲುಕಿ ಇದೀಗ ತೊಗಲು ಗೊಂಬೆಯಾಟ ನಶಿಸಿಹೋಗುತ್ತಿದೆ. ಹಿನ್ನೆಲೆ ಯಲ್ಲಿ ಚಿತ್ರಕಲೆ ಮೂಲಕ ತೊಗಲು ಗೊಂಬೆಯನ್ನು ಅರಳಿ ಸುವ ಕೆಲಸದಲ್ಲಿ ಕಲಾಕೇಂದ್ರ ಮುಂದಾಗಿದೆ ಎಂದು ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಬೆಂಗ ಳೂರು ನಿರ್ದೇಶಕ ಡಿ.ಮಹೇಂದ್ರ ಮಾಹಿತಿ ನೀಡಿದ್ದಾರೆ.
ಈಗಾಲೇ ಕರ್ನಾಟಕ ಲಲಿತಕಲಾ ಅಕಾಡೆಮಿ ಜತೆ ಗೂಡಿ ತರಬೇತಿಯ ಬಗ್ಗೆ ಮಾತುಕತೆ ಕೂಡ ನಡೆಸಲಾ ಗಿದೆ.ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಜನೆಯ ರೂಪರೇಷೆಗಳನ್ನು ಸಿದ್ದಪಡಿಸಲಾಗುವುದು. ತೊಗಲು ಗೊಂಬೆಯಾಟಕ್ಕೆ ತನ್ನದೆ ಆದ ಜಾನಪದ ಐತಿಹ್ಯವಿದೆ. ಆದರೆ ಅದು ಈಗ ತನ್ನ ತನವನ್ನು ಕಳೆದುಕೊಂಡಿದೆ. ಆ ಶ್ರೀಮಂತ ಕಲೆಗೆ ಮತ್ತೆ ಮರುಜೀವ ನೀಡುವ ನೀಡಿನಲ್ಲೆ ಕೆಲಸ ನಡೆದಿದೆ ಎಂದು ತಿಳಿಸಿದ್ದಾರೆ.
ಕುಂಚದಲ್ಲಿ ಅರಳಿ ಕಥಾ ಪ್ರಸಂಗಗಳು: ಮಲ್ಲತ್ತಹಳ್ಳಿ ಯಲ್ಲಿರುವ ಇಂದಿರಾಗಾಂಧಿ ಕಲಾ ಕೇಂದ್ರ ತೊಗಲು ಗೊಂಬೆ ಕಲಾ ಪ್ರಕಾರವನ್ನು ಭಿತ್ತಿಗಳ ಪ್ರತಿರೂಪದಲ್ಲಿ ಅರಳಿಸುವ ಕಾರ್ಯದಲ್ಲಿ ನಿರತವಾಗಿದೆ. ಈಗಾಗಲೇ 24 ಶ್ರೇಷ್ಠ ವೃತ್ತಿಪರರ ಜತೆಗೆ ಯುವ ಕಲಾವಿದರನ್ನು ಬಳಸಿಕೊಳ್ಳಲಾಗಿದ್ದು ತೊಗಲು ಬೊಂಬೆಯಾಟದ ಕಲೆಯ ಪ್ರಸಂಗಗಳಿಗೆ ಬಣ್ಣ, ಲಯ, ವಿನ್ಯಾಸ ಹಾಗೂ ಕಥನಕ ನಿರೂಪಣೆಗಳನ್ನು ಹೇಳಿಕೊಡಲಾಗಿದೆ.ತೊಗಲು ಗೊಂಬೆಗಳಿಗೆ ಬಳಕೆ ಮಾಡುವ ಚರ್ಮದ ಬೊಂಬೆಯ ಮೂಲ ರೂಪ, ಆಕೃತಿ ಮತ್ತು ಬಣ್ಣ ಸಂಯೋಜನೆ ಕಲಿಕೆ ಕೂಡ ನೀಡ ಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಈಗ ಕಲಾವಿದರುಗಳನ್ನು ಬಳಕೆ ಮಾಡಿಕೊಂಡು ತೊಗಲು ಗೊಂಬೆಯಾಟದ ಪ್ರಸಂಗಳಿಗೆ ಜೀವಂತಿಕೆ ಕೊಡಲು ಮುಂದಾಗಿದೆ ಎಂದು ಹೇಳಿದ್ದಾರೆ.
ತೊಗಲು ಗೊಂಬೆಯಾಟಕ್ಕೆ ಜೀವಂತಿಕೆ ಕೊಡುವ ನಿಟ್ಟಿನಲ್ಲಿ ಲಲಿತಕಲಾ ಅಕಾಡೆಮಿ ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಕೈ ಜೋಡಿಸಿವೆ. ಭಿತ್ತಿಚಿತ್ರಗಳ ಮೂಲಕ ಯುವ ಸಮೂಹಗಳಲ್ಲಿ ಅರಿವು ಮೂಡಿಸುವ ಜತೆಗೆ ಮುಂದಿನ ದಿನಗಳಲ್ಲಿ ಆಸಕ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಗಲು ಗೊಂಬೆಯಾಟದ ಕುರಿತಂತೆ ತರಬೇತಿ ಕೊಡಿಸುವ ಯೋಜನೆ ರೂಪಿಸಲಾಗಿದೆ.
– ಡಿ.ಮಹೇಂದ್ರ, ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಪ್ರಾದೇಶಿಕ ನಿರ್ದೇಶ
– ದೇವೇಶ ಸೂರಗುಪ್ಪ