Advertisement

ಗ್ರಾಮೀಣ ಜನರ ಗೋಳು ಕೇಳುವವರೇ ಇಲ್ಲ

07:57 PM Sep 23, 2021 | Team Udayavani |

ತೊಡಿಕಾನ ಗ್ರಾಮವು ದ.ಕ. ಜಿಲ್ಲೆ ಮತ್ತು ಕೊಡಗು ಜಿಲ್ಲೆಯ ಗಡಿಭಾಗದಲ್ಲಿದ್ದು, ಅರಣ್ಯದಂಚಿನ ಪ್ರದೇಶವಾಗಿದೆ.  ಇಲ್ಲಿ ಮುಖ್ಯವಾಗಿ ದೂರವಾಣಿ, ವಿದ್ಯುತ್‌,ರಸ್ತೆ ಸಮಸ್ಯೆ  ಕಾಡುತ್ತಿದೆ. ಜತೆಗೆ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಹೈರಾಣಾಗಿದ್ದಾರೆ. ಇಲ್ಲಿನ ಚಿತ್ರಣ ಇಂದಿನ “ಒಂದು ಊರು; ಹಲವು ದೂರು’ ಅಂಕಣದಲ್ಲಿ.

Advertisement

ಅರಂತೋಡು: ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೊಡಿಕಾನ ಗ್ರಾಮವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.

ತೊಡಿಕಾನ ಗ್ರಾಮದಲ್ಲಿ ಪುರಾತನ ಶ್ರೀ ಮಲ್ಲಿಕಾರ್ಜುನ ದೇವಾಲಯ, ದೇವರಗುಂಡಿ ಜಲಪಾತ, ದೇಗುಲದ ಪಕ್ಕದ ಮತ್ಸ್ಯ ತಟಾಕದಲ್ಲಿ ಸಾವಿರಾರು ದೇವರ ( ಮಹಷೀರ್‌)ಮೀನುಗಳಿದ್ದು ಇಲ್ಲಿಗೆ ದಿನ ನಿತ್ಯ ಅನೇಕ ಭಕ್ತರು, ಪ್ರವಾಸಿಗರು  ಆಗಮಿಸುತ್ತಾರೆ. ಹೀಗಾಗಿ ತೊಡಿಕಾನ ಪ್ರವಾಸಿ ತಾಣವಾಗಿ, ಶ್ರದ್ದಾ ಕೇಂದ್ರವಾಗಿ ಗುರುತಿಸಿಕೊಂಡಿದೆ. ಆದರೆ ಪ್ರವಾಸೋದ್ಯಮ ಇಲಾಖೆ ಈ ತಾಣದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದೆ.

ವಿದ್ಯುತ್‌, ನೆಟ್‌ವರ್ಕ್‌ ಸಮಸ್ಯೆ:

ತೊಡಿಕಾನ ಗ್ರಾಮದಲ್ಲಿ ಮುಖ್ಯ ವಾಗಿ ಕಾಡುತ್ತಿರುವುದು ನೆಟ್‌ವರ್ಕ್‌ ಸಮಸ್ಯೆ. ಇಲ್ಲಿ ಬಿಎಸ್‌ಎನ್‌ಎನ್‌ಎಲ್‌ ಸಂಚಾರಿ ದೂರವಾಣಿ ಟವರ್‌ ಮಾತ್ರ ಇದ್ದು ವಿದ್ಯುತ್‌ ಇರುವ ಸಂದರ್ಭದಲ್ಲಿ ಮಾತ್ರ ಕಾರ್ಯಾಚರಿಸುತ್ತದೆ. ವಿದ್ಯುತ್‌ ಕೈ ಕೊಟ್ಟ ಕೂಡಲೇ ಮೊಬೈಲ್‌ ಫೋನ್‌ನ ರೇಂಜ್‌ ಮಾಯವಾಗಿ ಬಿಡುತ್ತದೆ. ವಿದ್ಯುತ್‌ ಕಣ್ಣಾಮುಚ್ಚಾಲೆಯಾಟ ನಿರಂತರ ಕಾಡುತ್ತಿದೆ. ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್‌ಗೆ ಫೋನ್‌ ಮಾಡಲು ಕೆಲವೊಮ್ಮೆ ನೆಟ್‌ವರ್ಕ್‌ ಇರುವುದಿಲ್ಲ.

Advertisement

ಈಡೇರದ ರಸ್ತೆಗಳ ಅಭಿವೃದ್ಧಿ ಕಾಮಗಾರಿ:

ತೊಡಿಕಾನ ಗ್ರಾಮದಲ್ಲಿ ಹಲವು ರಸ್ತೆಗಳು ಅಭಿವೃದ್ಧಿ ಯಾಗದೆ ಉಳಿದುಕೊಂಡಿವೆ. ತೊಡಿಕಾನ- ಮುಪ್ಪಸೇರು- ಕುದುರೆಪಾಯ ರಸ್ತೆ ಸಂಪರ್ಕ ರಸ್ತೆ ಸಂಪೂರ್ಣವಾಗಿ ಅಭಿವೃದ್ಧಿಯಾಗದೆ ಇಲ್ಲಿನ ವಾಹನ ಸಂಪರ್ಕಕ್ಕೆ ಸಮಸ್ಯೆಯಾಗಿದೆ. ಇದರಿಂದ ಮುಪ್ಪಸೇರು ಭಾಗದ ಜನರಿಗೆ ಸಾಮಗ್ರಿಗಳನ್ನು ಸಾಗಿಸಲು ಸಮಸ್ಯೆಯಾಗುತ್ತಿದೆ.

ಅಭಿವೃದ್ಧಿ ಕಾಣದ ತೊಡಿಕಾನ-ಕುಂಟುಕಾಡು ರಸ್ತೆ:

ತೊಡಿಕಾನ-ಕುಂಟುಕಾಡು-ಪೆರಾಜೆ ರಸ್ತೆ ಸರ್ವಋತು ರಸ್ತೆಯಾಗಿ ಅಭಿವೃದ್ಧಿ ಹೊಂದಿಲ್ಲ. ಅಲ್ಪ ಸ್ವಲ್ಪ ಈ ಭಾಗದ ರಸ್ತೆಯನ್ನು ಅಭಿವೃದ್ಧಿ ಗೊಳಿಸಲಾಗಿದೆ. ಈ ರಸ್ತೆಯನ್ನು  ಸರ್ವ ಋತು ರಸ್ತೆಯನ್ನಾಗಿ  ಅಭಿವೃದ್ಧಿ ಪಡಿಸಿದರೆ ತೊಡಿಕಾನದಿಂದ ಸುಳ್ಯ ತಾಲೂಕು ಕೇಂದ್ರವನ್ನು  ಅತೀ ಹತ್ತಿರದಿಂದ ಸಂಪರ್ಕಿಸಬಹುದು. ಅರಂತೋಡು ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಸೇರಿದ ಮೂರು ಕಿ.ಮೀ. ರಸ್ತೆ ನನೆಗುದಿಗೆ ಬಿದ್ದಿದೆ. ಈ ಮೂರು ಕಿ.ಮೀ. ರಸ್ತೆ ಅಭಿವೃದ್ಧಿಯಾದರೆ ಪೆರಾಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯನ್ನು ಸೇರಬಹುದು. ತೊಡಿಕಾನ-ದೇವರಗುಂಡಿ ರಸ್ತೆ, ತೊಡಿಕಾನ-ಬಾಳೆಕಜೆ-ಹರ‌್ಲಡ್ಕ ರಸ್ತೆ, ತೊಡಿಕಾನ-ಎಡಾcರ್‌-ಬಾಳಕಜೆ ರಸ್ತೆ ಅಲ್ಪ ಸ್ವಲ್ಪ ಅಭಿವೃದ್ದಿಗೊಂಡಿದ್ದು ಸಂಪೂರ್ಣ ಅಭಿವೃದ್ಧಿಗಾಗಿ ಕಾಯುತ್ತಿದೆ.

ಕೃಷಿಕರಿಗೆ ಕಾಡುಪ್ರಾಣಿಗಳ ಕಾಟ:

ತೊಡಿಕಾನ ಗ್ರಾಮವು ಅರಣ್ಯದಂಚಿನ ಪ್ರದೇಶವಾಗಿರುವ ಕಾರಣ ಇಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಿದೆ. ಮಳೆಗಾಲ ಕಾಡಾನೆಗಳು ಕೃಷಿ ತೋಟಗಳಿಗೆ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ನಾಶಪಡಿಸುತ್ತವೆ. ಬೇಸಗೆಯಲ್ಲಿ ಮಂಗಗಳು ಕೊಕ್ಕೊ, ಅಡಿಕೆ,ಬಾಳೆ, ತರಕಾರಿ, ಗೇರು, ತೆಂಗು ಇತರ ಬೆಳೆಗಳನ್ನು ನಾಶ ಮಾಡುತ್ತವೆ.  ಆದ್ದರಿಂದ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಕೃಷಿಕರು ಆಗ್ರಹಿಸುತ್ತಿದ್ದಾರೆ.

 

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next