ಕನ್ನಡದಲ್ಲಿ ಮಕ್ಕಳ ಸಿನಿಮಾಗಳಿಗೆ ಬರವಿಲ್ಲ. ಅದರಲ್ಲೂ ದಿಟ್ಟತನ ತೋರುವ ಮಕ್ಕಳ ಕಥೆಗಳಂತೂ ಕನ್ನಡದಲ್ಲಿ ಸಾಕಷ್ಟು ಬಂದು ಹೋಗಿವೆ. ಆ ಸಾಲಿಗೆ ಈಗ “ದಿಟ್ಟ ಹೆಜ್ಜೆ’ ಎಂಬ ಚಿತ್ರವೂ ಒಂದು. ಇತ್ತೀಚೆಗೆ ಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ನಾಲ್ವರು ಮಕ್ಕಳು ಹಳ್ಳಿಯಿಂದ ನಾಪತ್ತೆಯಾದರೆ ಏನೆಲ್ಲಾ ಆಗಿಹೋಗುತ್ತೆ. ಅನ್ನೋದು ಕಥೆ.
ಇದೊಂದು ಅಪ್ಪಟ ಮಕ್ಕಳ ಕುರಿತಾದ ಸಿನಿಮಾ ಆಗಿದ್ದು, ಮಕ್ಕಳು ಹೇಗೆ ತಮ್ಮ ದಿಟ್ಟತನ ತೋರಿಸಿ, ಕೆಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ ಎಂಬುದು ಚಿತ್ರದ ಒನ್‌ಲೈನ್. ಇಲ್ಲಿ ಈಗಿನ ವಾಸ್ತವತೆಯ ಅಂಶಗಳೂ ಅಡಗಿದ್ದು, ಇದೊಂದು ಪ್ರೇರಣೆಯಾಗುವಂತಹ ಸಿನಿಮಾ ಎಂಬುದು ಅಂದು ಚಿತ್ರಪ್ರದರ್ಶನದ ವೇಳೆ ಇದ್ದ ಹಿರಿಯ ಸಾಹಿತಿ ದೊಡ್ಡ ರಂಗೇಗೌಡ ಅವರ ಮಾತು.
ಇದು ಈಗಿನ ಕಾಲದ ಮಕ್ಕಳಿಗೆ ಮತ್ತು ಸಮಾಜಕ್ಕೊಂದು ಉತ್ತಮ ಸಂದೇಶ ಸಾರುವ ಸಿನಿಮಾ ಎಂದರು ದೊಡ್ಡ ರಂಗೇಗೌಡ. ಸಿನಿಮಾ ವೀಕ್ಷಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಕೂಡ ಚಿತ್ರದ ಕಥಾವಸ್ತುವನ್ನು ಮೆಚ್ಚಿಕೊಂಡರು. ಇಂತಹ ಸಿನಿಮಾಗಳು ರಾಜ್ಯದ ಪ್ರತಿ ಶಾಲೆಗಳಲ್ಲೂ ಪ್ರದರ್ಶನಗೊಳ್ಳಬೇಕು. ಅಂದಹಾಗೆ, ಈ ಸಿನಿಮಾವನ್ನು ಒಳ್ಳೆಯ ಸಮಯ ನೋಡಿ ಬಿಡುಗಡೆ ಮಾಡಬೇಕು ಎಂದರು ಅವರು.
ಅಂದು ಚಿತ್ರ ವೀಕ್ಷಿಸಲು ಬಂದಿದ್ದ, ಬರಹಗಾರ ಕೆ.ವೈ.ನಾರಾಯಣ ಸ್ವಾಮಿ ಮತ್ತು ನಿರ್ದೇಶಕ ಬಿ.ಎಸ್.ಲಿಂಗದೇವರು ಅವರು ಸಿನಿಮಾದ ತಾತ್ಪರ್ಯವನ್ನು ಕೊಂಡಾಡಿದರು. ಮಕ್ಕಳ ಸಿನಿಮಾಗಳು ಹೆಚ್ಚೆಚ್ಚು ಬಂದಲ್ಲಿ, ಆ ಮೂಲಕ ಒಂದಷ್ಟು ಜಾಗೃತಿ ಮೂಡಿಸಲು ಸಾಧ್ಯವಿದೆ ಎಂಬ ಅಭಿಪ್ರಾಯವನ್ನೂ ಹೊರಹಾಕಿದರು. “ದಿಟ್ಟ ಹೆಜ್ಜೆ’ ಚಿತ್ರದಲ್ಲಿ ಶ್ರೇಯಾ, ಜಯಂತ್, ವಂಶಿ, ಗೋಕುಲ್, ಮನೀಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅನಂತವೆಲು, ಮುನಿ, ಮೋಹನ್ ಜುನಹೇಜಾ, ವಾಸು, ತನುಜಾ, ಗಿರೀಶ್, ಜಟ್ಟಿ ನಟಿಸಿದ್ದಾರೆ ನಟ ಸಂಕೇತ್ ಕಾಶಿ ಕೂಡ ಈ ಚಿತ್ರದಲ್ಲಿ ನಟಿಸಡಿದ್ದಾರೆ. ನಿರ್ದೇಶಕ ಲೂಯಿಸ್ ಮಾರ್ಟಿನ್‌ಗೆ ಇದು ಮೊದಲ ಸಿನಿಮಾ. ಅವರಿಗೆ ಒಳ್ಳೆಯ ಸಿನಿಮಾ ಮಾಡಿರುವ ಖುಷಿ ಇದೆ. ನಿರ್ಮಾಪಕರಾದ ರವಿಕಿರಣ್, ಶಿವಕುಮಾರ್, ಎಸ್.ಡಿ.ಅರವಿಂದ್ ಇತರರು ಇದ್ದರು. ಚಿತ್ರಕ್ಕೆ ರಾಜ್‌ಭಾಸ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ನಾಗರಾಜ್ ಆಧ್ವಾನಿ ಕ್ಯಾಮೆರಾ ಹಿಡಿದಿದ್ದಾರೆ. ಎಸ್.ವಿ.ಉದಯ್ ಸಂಭಾಷಣೆ ಬರೆದಿದ್ದಾರೆ.