ದೊಡ್ಡಬಳ್ಳಾಪುರ: ಪ್ರೇಮಿಗಳ ದಿನಾಚರಣೆ ಪರಿಣಾಮ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಬಳಸುವ ಡಚ್ ರೋಸ್ ಸೇರಿದಂತೆ ವಿವಿಧ ಜಾತಿಯ ಗುಲಾಬಿ ಹೂಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ದರಕ್ಕೆ ಬಿಕರಿಯಾಗುತ್ತಿದ್ದು, ಹೂ ಬೆಳೆಯುವ ತಾಲೂಕಿನ ರೈತರ ಮೊಗದಲ್ಲಿ ಸಂತಸ ತಂದಿದೆ.
ಫೆ.14ರ ಪ್ರೇಮಿಗಳ ದಿನಾಚರಣೆಗೆ ರಪ್ತಾಗುತ್ತಿರುವ 20 ಗುಲಾಬಿ ಹೂಗಳ ಬಂಚ್ ಬೆಲೆ 100 ರೂ. ದಾಟಿದೆ. ಸಾಧಾ ರಣ ಗುಲಾಬಿಗಿಂತ ಭಿನ್ನವಾಗಿರುವ ಡಚ್ ರೋಸ್ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಬೆಳೆಸಲಾಗುತ್ತಿದ್ದು, ಸಾಧಾರಣವಾಗಿ ಮದುವೆ ಸೀಸನ್‌ಗಳಲ್ಲಿ ಹೆಚ್ಚು ಮಾರಾಟವಾಗುವ ಗುಲಾಬಿ ಹೂಗಳಿಗೆ ಪ್ರೇಮಿಗಳ ದಿನಾಚರಣೆ ಬೋನಸ್ ಸಿಕ್ಕಿದ್ದು, ರಪ್ತು ವಹಿವಾಟು ಹೆಚ್ಚಾಗಿದೆ.
ಡಚ್ ರೋಸ್‌ಗಳ ಬೆಳೆ: ಗುಲಾಬಿ ತಳಿಗಳಲ್ಲಿ ಡಚ್, ತಾಜ್ ಮಹಲ್, ಸಮುರಾಯ್, ನೋಬ್ಲೇಸ್, ಸೌರನ್, ರಿವೈವಲ್ ಮೊದಲಾದ ತಳಿಗಳಿದ್ದು , ಡಚ್ ರೋಸ್‌ಗಳನ್ನು ತಾಲೂಕಿನಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಡಚ್ ರೋಸ್‌ಗಳು ಸಾಧಾರಣವಾಗಿ ಕೆಂಪು,ಬಿಳಿ,ಪಿಂಕ್, ಹಳದಿ, ಕಿತ್ತಳೆ ಬಣ್ಣಗಳಲ್ಲಿ ಬೆಳೆಯಲಾಗುತ್ತಿದೆ. ಅತಿ ಹೆಚ್ಚು ಉಷ್ಣತೆ ಯಾದರೆ ಹೂಗಳು ಬೇಗ ಅರಳುತ್ತವೆ. ಹೂ ಗಳು ಬೇಗ ಅರಡುವುದನ್ನು ತಡೆಯಲು ಮೊಗ್ಗುಗಳಿಗೆ ಕ್ಯಾಪ್ ಹಾಕಲಾಗುತ್ತದೆ. ಆ ನಂತರ ಹೂಗಳನ್ನು ಕಾಂಡದ ಸಮೇತ ಕಿತ್ತು ಹೆಚ್ಚುವರಿ ಎಲೆಗಳನ್ನು ತೆಗೆಯಲಾಗುತ್ತದೆ.
ಆನಂತರ ಇವುಗಳನ್ನು ಉದ್ದದ ಆಧಾರದ ಮೇಲೆ ಗ್ರೇಡಿಂಗ್ ಮಾಡಲಾಗುತ್ತದೆ.ಸಾಮಾನ್ಯವಾಗಿ ಹೂಗಳನ್ನು ಕಾಂಡದ ಅಳತೆ 40 ಸೆ.ಮೀ ನಿಂದ 80 ಸೆ.ಮೀನವರೆಗೆ ಉದ್ದವನ್ನು ವಿಂಗಡಿಸಲಾಗುತ್ತದೆ.ಆಮೇಲೆ 20 ಹೂಗಳಿಗೆ ಒಂದು ಹೂ ಗುತ್ಛವನ್ನು ಮಾಡಲಾಗುತ್ತದೆ. ಒಂದು ಎಕರೆಗೆ ಸಾಧಾರಣವಾಗಿ 1500 ಹೂಗಳನ್ನು ಬೆಳೆಯಬಹುದಾಗಿದ್ದು,ಒಂದು ಹೂ ಬೆಲೆ 5 ರಿಂದ 10 ರೂಗಳ ವರೆಗೆ ಇರುತ್ತದೆ. ಪ್ರೇಮಿಗಳ ದಿನಾಚರಣೆ, ಮದರ್ ಡೇ ಮುಂತಾದ ವಿಶೇಷ ಸಂದರ್ಭಗಳಲ್ಲಿ ಬೆಲೆ ಹೆಚ್ಚಾಗುತ್ತದೆ. ಅಂತಾರಾಷ್ಟ್ರೀಯ ಗುಣ ಮಟ್ಟದಲ್ಲಿ ರೋಸ್‌ಗಳು ಪಾಸಾಗದಿದ್ದರೆ, ಸ್ಥಳೀಯ ಮಾರುಕಟ್ಟೆಯಲ್ಲಿ ಕೇಳಿದ ಬೆಲೆಗೆ ನೀಡಬೇಕಾಗುತ್ತದೆ ಎನ್ನುವ ಆತಂಕ ಬೆಳೆಗಾರರದು. ಒಟ್ಟಿನಲ್ಲಿ ಪ್ರೇಮಿಗಳ ದಿನಾಚರಣೆಗಾಗಿ ರೋಸ್‌ಗಳಿಗೆ ಈಗ ಶುಭ ಕಾಲ ಬಂದಿರುವುದಂತೂ ನಿಜ.
ಗುಲಾಬಿ ಹೂವುಗಳನ್ನು ಅಮೆರಿಕಾ, ಯೂರೋಪ್ ಹಾಗೂ ಆಸ್ಟ್ರೇಲಿಯಾ ಅರಬ್ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ದೊಡ್ಡ ಬಂಡವಾಳದಾರರು ನೇರವಾಗಿ ರಪ್ತು ಮಾಡಿದರೆ, ಸಣ್ಣ ರೈತರಿಂದ ಬೆಂಗಳೂರಿನ ಮಾರುಕಟ್ಟೆಯ ಮುಖಾಂತರ ಹೂಗಳು ರಪ್ತಾಗುತ್ತವೆ ತಾಜ್‌ಮಹಲ್ ಆಕರ್ಷಕ ಬಣ್ಣ ಹಾಗೂ ಹೊಳಪನ್ನು ಹೊಂದಿರುವುದರಿಂದ ಈ ಹೂವಿಗೆ ದೇಶೀಯ ಹಾಗೂ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲೂ ಹೆಚ್ಚು ಬೆಲೆ ದೊರೆಯುತ್ತಿದೆ. “ನಾವು ದೊಡ್ಡ ಪ್ರಮಾಣದಲ್ಲಿ ಹೂ ಬೆಳೆದು ರಫ್ತು ಮಾಡುವವರಿಗೆ ಒಂದು ಬಂಚ್ ಗೆ (ಒಂದು ಬಂಚ್‌ಗೆ 20 ಹೂ) 30 ರೂ. ಗಳಂತೆ ನೀಡುತ್ತೇವೆ. ಸಣ್ಣ ಹಿಡುವಳಿದಾರರು 20 ರಿಂದ 30 ಬಂಚ್ ಹೂಗಳನ್ನು ಬೆಂಗಳೂರಿನ ಹೆಬ್ಟಾಳದಲ್ಲಿರುವ ಅಂತರ ರಾಷ್ಟ್ರೀಯ ಹೂ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವುದಕ್ಕೆ ಹೆಚ್ಚು ಖರ್ಚು ಬರುತ್ತದೆ. ಹೀಗಾಗಿ ನಾವು ತೋಟದಲ್ಲಿಯೇ ಬಂಚ್‌ಗಳನ್ನು ಸಿದ್ದಗೊಳಿಸಿ ರಫ್ತು ಮಾಡುವವರಿಗೆ ನೀಡುತ್ತೇವೆ’. ಇದರಿಂದಾಗಿ ಮಾರು ಕಟ್ಟೆಯಲ್ಲಿ ಬೆಲೆ ಏರಿಳಿತವಾದರೂ ನಮಗೆ ಲಾಭವೂ ಇಲ್ಲ. ನಷ್ಟವು ಇಲ್ಲ. ಹೆಬ್ಟಾಳದ ಹೂವುಗಳು ಮಾರುಕಟ್ಟೆಯಲ್ಲಿ ಸಣ್ಣ ಹಿಡು ವಳಿದಾರ ರೈತರ ಹೂವುಗಳನ್ನು ಅಲ್ಲಿನ ಮಾರಾಟಗಾರರು ನಿರ್ಲಕ್ಷ್ಯ ಮಾಡುತ್ತಾರೆ.
ಅಂತರಾಷ್ಟ್ರೀಯ ಮಾರು ಕಟ್ಟೆ ದರಗಳು ಸಣ್ಣ ಬೆಳೆಗಾರರಿಗೆ ಅನ್ವಯಿ ಸುವುದಿಲ್ಲ ಎನ್ನುತ್ತಾರೆ ಹುಸ್ಕೂರು ರೈತ ಮಂಜುನಾಥ್. ಸರ್ಕಾರ ಪುಷ್ಪಗಳ ರಪ್ತುಗೆ ನೆರವು, ಪುಷ್ಪೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಿದರೆ ಇನ್ನಷ್ಟು ರೈತರು ಆರ್ಥಿಕ ಸದೃಢರಾಗುತ್ತಾರೆ ಎನ್ನುವುದು ಬೆಳೆಗಾರರ
ಒತ್ತಾಯವಾಗಿದೆ.
●ಡಿ.ಶ್ರೀಕಾಂತ