ಲೋಕಸಭೆ ಚುನಾವಣೆಯ 7ನೇ ಹಂತದ ಮತದಾನ ರವಿವಾರ ಮುಗಿಯುತ್ತಿದ್ದಂತೆಯೇ ಸಂಜೆ 6.30ರಿಂದ ವಿವಿಧ ಸಂಸ್ಥೆ ಗಳು ಮತದಾನೋತ್ತರ ಸಮೀಕ್ಷೆಗಳನ್ನು ಪ್ರಕಟಿಸಲಿವೆ. ಜನರು ಯಾವ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬ ಸುಳಿವನ್ನು ಈ ಸಮೀಕ್ಷೆ ವರದಿಗಳು ನೀಡಲಿದ್ದು, ಮೇ 23ರಂದು ಚುನಾವಣಾ ಆಯೋಗದ ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನ ದೇಶದ ಭವಿಷ್ಯದ ಅಂದಾಜು ಚಿತ್ರಣ ಲಭ್ಯವಾಗಲಿದೆ. ಈ ಹಿಂದಿನ ಹಲವು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ವೇಳೆ ಪ್ರಕಟವಾದ ಮತದಾನೋತ್ತರ ಸಮೀಕ್ಷೆಗಳು ಅಧಿಕೃತ ಫಲಿತಾಂಶಕ್ಕೆ ಸಮೀಪದಲ್ಲೂ ಇರಲಿಲ್ಲ. ಈ ಹಿಂದೆ 2014ರಲ್ಲಿ ಪ್ರಕಟವಾಗಿದ್ದ ಲೋಕ ಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಬಹು ಮತ ಪಡೆದು ಅಧಿಕಾರಕ್ಕೇರುತ್ತದೆ ಮತ್ತು ಕಾಂಗ್ರೆಸ್ ಭಾರಿ ಸೋಲು ಕಾಣುತ್ತದೆ ಎಂದು ಊಹಿ ಸುವಲ್ಲಿ ವಿಫಲವಾಗಿದ್ದವು. ವಿವಿಧ ಸಂಸ್ಥೆಗಳು ನಡೆಸಿದ ಸಮೀಕ್ಷೆ ಗಳನ್ನು ಸಮೀಕರಿಸಿದರೆ ಎನ್‌ಡಿಎ 283 ಕ್ಷೇತ್ರಗಳಲ್ಲಿ ಹಾಗೂ ಯುಪಿಎ 105 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂದು ಊಹಿಸಲಾಗಿತ್ತು. ಆದರೆ ಸಮೀಕ್ಷೆಯ ಫಲಿತಾಂಶಗಳನ್ನೂ ಮೀರಿ ಎನ್‌ಡಿಎ 336 ಹಾಗೂ ಯುಪಿಎ 60 ಸೀಟ್‌ಗಳನ್ನು ಗಳಿಸಿತ್ತು.