Advertisement

ನಗುವ ಹೂವಿಗೆ ವಂದನೆ, ಅಭಿನಂದನೆ

10:47 PM May 07, 2019 | mahesh |

ಆಫೀಸಿನಲ್ಲಿ ಇರುವಷ್ಟೂ ಹೊತ್ತು ನಸುನಗುತ್ತಲೇ ಇರುವುದು ಸುಲಭವಲ್ಲ. ಯಾಕೆಂದರೆ, ಅವಳಿಗೂ ಖಾಸಗಿ ಬದುಕು ಇರುತ್ತದೆ. ಆಕೆಗೂ ನೋವು, ಚಿಂತೆ, ದುಗುಡಗಳಿರುತ್ತವೆ. ಅದೇನನ್ನೂ ತೋರ್ಪಡಿಸಿಕೊಳ್ಳದೆ ನಗುನಗುತ್ತಾ ಕಾರ್ಯ ನಿರ್ವಹಿಸುವ ಸ್ವಾಗತಕಾರಿಣಿಗೆ ಧನ್ಯವಾದ ಹೇಳಲೇಬೇಕು…

Advertisement

ನೀವೆಲ್ರೂ ಈಕೆಯನ್ನು ನೋಡೆ ನೋಡಿರ್ತೀರಾ…
ಆಫೀಸ್‌ಗಳಲ್ಲಿ, ಬ್ಯಾಂಕ್‌ಗಳಲ್ಲಿ, ಮಾಲ್‌ಗ‌ಳಲ್ಲಿ, ಹೋಟೆಲ್‌ಗ‌ಳಲ್ಲಿ ಹೀಗೆ ಬಹುತೇಕ ಜಾಗಗಳಲ್ಲಿ ಆಕೆ ಕಾಣಸಿಗ್ತಾಳೆ. ಸುಂದರವಾದ ಮುಖ, ಮಾಸದ ನಗು, ಗೌರವ ತುಂಬಿದ ಮಾತುಗಳು… ವ್ಹಾ, ಆಕೇನ ನೋಡೋದೇ ಒಂದು ಚೆಂದ ಬಿಡಿ. ಯಾರಪ್ಪಾ ಆಕೆ ಅಂತ ಕುತೂಹಲವಾಗ್ತಿದೆ ತಾನೆ? ಆಕೆ ಬೇರೆ ಯಾರೂ ಅಲ್ಲ, ರಿಸೆಪ್ಷನಿಸ್ಟ್‌ ಅರ್ಥಾತ್‌ ಸ್ವಾಗತಕಾರಿಣಿ.

ಹೌದು, ಇವಳಿಲ್ಲದ ಜಾಗವಿಲ್ಲ. ಹೆಚ್ಚು ಕಡಿಮೆ, ಪ್ರತಿ ಆಫೀಸ್‌ನಲ್ಲೂ ಈಕೆ ಇರುತ್ತಾಳೆ. ಕೆಲವು ಕಡೆ ಇವಳ ಜಾಗವನ್ನು ಪುರುಷರು ತುಂಬಿರಬಹುದು. ಆದರೆ, ಶೇಕಡಾ ತೊಂಬತ್ತು ಭಾಗ ಈ ಕೆಲಸ ಹೆಣ್ಣು ಮಕ್ಕಳಿಗೇ ಮೀಸಲು.

ಯಾವುದೇ ಆಫೀಸಿನೊಳಗಡೆ ಕಾಲಿಟ್ಟ ತಕ್ಷಣ ಮೊದಲು ಕಣ್ಣಿಗೆ ಬೀಳುವವಳು ಅವಳೇ. ನಮ್ಮನ್ನು ಕಂಡ ತಕ್ಷಣ, ಸರ್‌/ ಮೇಡಂ May i help You ಅಂತ ಅದೆಷ್ಟು ಚೆಂದದ ನಗೆ ಬೀರ್ತಾಳೆ ಅಲ್ವಾ? ನಾವು ಅಲ್ಲಿಗೆ ಬಂದ ಉದ್ದೇಶ, ಅಲ್ಲಿ ಯಾರನ್ನು ಭೇಟಿಯಾಗಬೇಕು ಎಂಬ ಸಂಗತಿಯನ್ನು ನಗುತ್ತಲೇ ತಿಳಿದುಕೊಂಡು, ನಾವಂದುಕೊಂಡ ಸಮಯದೊಳಗೆ ನಮ್ಮ ಕೆಲಸ ಪೂರೈಸಲು ಶಕ್ತಿ ಮೀರಿ ಪ್ರಯತ್ನ ಪಡ್ತಾಳೆ. ಮಧ್ಯದಲ್ಲಿ ಬರುವ ಫೋನ್‌ ಕಾಲ್‌ಗ‌ಳನ್ನೂ ಅಟೆಂಡ್‌ ಮಾಡ್ತ, ಅಲ್ಲಿ ಕೆಲ್ಸ ಮಾಡೋ ಬೇರೆ ಕೆಲಸಗಾರರಿಗೂ ನಗುನಗುತ್ತಲೇ ಸ್ಪಂದಿಸುವ ಆಕೆಯ ಹುರುಪಿಗೊಂದು ಸಲ್ಯೂಟ್‌ ಹೇಳಲೇಬೇಕು. ಆಕೆಯ ಮಾತು ಹಾಗೂ ನಡವಳಿಕೆಯನ್ನು ಗಮನಿಸಿದರೆ ಸಾಕು ಆ ಸಂಸ್ಥೆಯ ಕಾರ್ಯ ವೈಖರಿಯನ್ನು ಅಂದಾಜಿಸಬಹುದು. ಆಕೆ ಒಂಥರಾ ಆ ಸಂಸ್ಥೆಯ ಪ್ರತಿಬಿಂಬವೇ ಆಗಿರ್ತಾಳೆ.

ನಿಮ್ಮಲ್ಲಿ ಅನೇಕರು ಉದ್ಯೋಗದಲ್ಲಿರಬಹುದು. ನಿಮ್ಮ ಆಫೀಸ್‌ನಲ್ಲೂ, ಫ್ಯಾಕ್ಟರಿಯಲ್ಲೂ ರಿಸೆಪ್ಷನಿಸ್ಟ್‌ ಇರುತ್ತಾರೆ. ಎಂದಾದರೂ ಅವರ ಜೊತೆ ಐದೇ ಐದು ನಿಮಿಷ ನಿಂತು ಮಾತನಾಡಿದ್ದೀರಾ? ನಿಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದನ್ನು ಹೊರತುಪಡಿಸಿ, ಬೇರೆ ಸಮಯದಲ್ಲಿ ನೀವು ಅವರನ್ನು ಗಮನಿಸಿದ್ದೀರಾ? ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಒಂದು ಸಣ್ಣ ಥ್ಯಾಂಕ್ಸ್‌ ಹೇಳಿದ್ದೀರಾ? ಇಲ್ಲ ಅಲ್ವಾ??!!
ಆದ್ರೆ, ಆಕೆ ಅಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಹೆಸರನ್ನೂ ಹೇಳಬಲ್ಲಳು. ನಿಮ್ಮ ಕಚೇರಿಯಲ್ಲಿ ಕೆಲಸ ಮಾಡ್ತಾರಲ್ಲ: ಅವರೆಲ್ಲರ ಜನ್ಮದಿನವೂ ಆಕೆಗೆ ನೆನಪಿರಬಹುದು. ಅಲ್ಲಿ ಕೆಲಸ ಮಾಡುವ ನೂರಾರು ಜನರ ಮಾಹಿತಿಯೂ ಆಕೆಗೆ ತಿಳಿದಿರುತ್ತದೆ. ಆದ್ರೆ ಇಡೀ ಕಂಪನಿಯಲ್ಲಿರೋ ಏಕೈಕ ರಿಸೆಪ್ಶನಿಸ್ಟ್ ಬಗ್ಗೆ ಅಲ್ಲಿನ ನೌಕರರಿಗೇ ಹೆಚ್ಚೇನೂ ಗೊತ್ತಿರುವುದಿಲ್ಲ.

Advertisement

ಅಯ್ಯೋ, ಅದರಲ್ಲೇನಿದೆ? ರಿಸೆಪ್ಷನಿಸ್ಟ್‌ ಕೆಲಸವೇ ಬೇರೆಯವರಿಗೆ ಸಹಾಯ ಮಾಡೋದು ಅಂತ ನಿಮ್ಮಲ್ಲನೇಕರು ಹೇಳಬಹುದು. ಹೌದು, ಅದು ಆಕೆಯ ಕೆಲಸವೇ. ಆದರೆ ಅಷ್ಟು ಪ್ರೀತಿಯಿಂದ ಹೊರಗಿನ ಇನ್ಯಾರೋ ನಮ್ಮನ್ನ ಆದರಿಸೋದು ವಿಶೇಷವೇ ಅಲ್ವಾ? ಅವಳಿಗೂ ಖಾಸಗಿ ಬದುಕು ಇರುತ್ತದೆ. ಅದರೊಳಗೆಯೂ ನೋವು, ಚಿಂತೆ, ದುಗುಡಗಳಿರುತ್ತದೆ. ಅದ್ಯಾವುದನ್ನೂ ತೋರ್ಪಡಿಸಿಕೊಳ್ಳದೆ ನಗುನಗುತ್ತಾ ಕಾರ್ಯ ನಿರ್ವಹಿಸುವ ಅವಳಿಗೊಂದು ಧನ್ಯವಾದ ಹೇಳಬೇಕಲ್ಲವೇ?
ಇಷ್ಟೆಲ್ಲಾ ಯಾಕೆ ಹೇಳಿದೆ ಗೊತ್ತಾ? ಪ್ರತಿ ವರ್ಷ ಮೇ ತಿಂಗಳ ಎರಡನೇ ಬುಧವಾರವನ್ನು ನ್ಯಾಷನಲ್‌ ರಿಸೆಪ್ಷನಿಸ್ಟ್‌ ದಿನವನ್ನಾಗಿ ಆಚರಿಸಲಾಗುತ್ತದೆ. ಎರಡನೇ ಬುಧವಾರ ಅಂದ್ರೆ ಇವತ್ತು, ಮೇ 8 ಆಕೆಯ ದಿನ. ನಿಮ್ಮ ಕೆಲಸ ಒತ್ತಡಗಳ ಮಧ್ಯೆ ಬಿಡುವು ಮಾಡಿಕೊಂಡು ಅವಳಿದ್ದಲ್ಲಿಗೆ ಹೋಗಿ ಒಂದೆರಡು ಕ್ಷಣ ಮಾತನಾಡಿ, ಅವಳ ದಿನದ ಅಭಿನಂದನೆ ತಿಳಿಸಿ.

– ಸತ್ಯಾ ಗಿರೀಶ್‌

Advertisement

Udayavani is now on Telegram. Click here to join our channel and stay updated with the latest news.

Next