Advertisement
ಮಕ್ಕಳ ಜೊತೆ ಮಕ್ಕಳಾಗುವುದು ಸುಲಭದ ಮಾತೇನಲ್ಲ. ಅದಕ್ಕೆ ಮನಸ್ಸು ಮಾಡಬೇಕು. ಅಂದರೆ, ಅವರ ಮನಸ್ಸನ್ನು ಮೊದಲು ಪಳಗಿ ಸಬೇಕು. ಕೇವಲ ಮಕ್ಕಳ ಜೊತೆ ಆಟವಾಡಿದರೆ ಸಾಕೇ… ಇಲ್ಲ, ಮಕ್ಕಳಿಗೆ ನಿಮ್ಮ ಬದುಕಿನ ಕಷ್ಟ ಸುಖಗಳ ಕತೆ ಹೇಳಲು ಸಮಯ ಮೀಸಲಿಡಿ. ಇವತ್ತಿನ ಜನರೇಷನ್‌ಗೆ ಕಷ್ಟಗಳು ಕಡಿಮೆ. ಅದರಲ್ಲೂ, ಮಧ್ಯಮವರ್ಗದ ಕುಟುಂಬದ ಮಕ್ಕಳಿಗೆ, ಹಿಂದಿನ ತಲೆಮಾರಿನಷ್ಟು ಕಷ್ಟವಿರುವುದಿಲ್ಲ. ಹೆತ್ತವರೇ ಎಲ್ಲವನ್ನೂ ಹೆಗಲ ಮೇಲೆ ಎಳೆದುಕೊಂಡು, ಮಕ್ಕಳಿಗೆ ನೆರಳಾಗಿರುತ್ತಾರೆ. ಹೀಗಾಗಿ, ಮಕ್ಕಳನ್ನು ಕೂಡ್ರಿಸಿಕೊಂಡು ದಿನಕ್ಕೊಂದು ಕತೆ ಹೇಳಿ.
ಕತೆ ಹೇಳುತ್ತಾ ಹೋದರೆ, ಅದು ಮಕ್ಕಳ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದುಬಿಡುತ್ತದೆ. ನೀವು ಕತೆಯನ್ನು ಹೇಳುತ್ತಾ ಹೋದಂತೆ, ಆ ಪಾತ್ರಗಳ ಜೊತೆ ತಮ್ಮನ್ನು ಗುರುತಿಸಿಕೊಳ್ಳುತ್ತಾ, ನಿಮಗೆ ಹತ್ತಿರ ವಾಗುತ್ತಾ ಹೋಗುತ್ತಾರೆ. ಕತೆ ಹೇಳಲು ಸಮಯ ನಿಗದಿ ಮಾಡಿ. ಊಟ ತಿಂಡಿ ಮಾಡುವಾಗ ಹಠ ಮಾಡುವ ಮಕ್ಕಳು ಇದ್ದರೆ, ಕತೆಯನ್ನು ಆಗಲೇ ಹೇಳಿ. ಯಾವ ಕಾರಣಕ್ಕೂ ಅವರಿಗೆ ಮೊಬೈಲ್ ಕೊಡಬೇಡಿ. ದಿನಕ್ಕೆ ಮೂರು ಕತೆ ಹೇಳಿ. ಅದರಲ್ಲಿ ಒಂದು ಕತೆ ಮನಸ್ಸಿನಲ್ಲಿ ಕೂತರೂ ಸಾಕು. ಏಕೆಂದರೆ, ಬೇರಿಗೆ ನೀರು ಹಾಕಿದರೆ, ಮೇಲೆ ಮರ ಚಿಗುರುತ್ತದೆ.