Advertisement

ಇಂದು ಈಡಿಗರ ಸಮಾವೇಶ: ಹರಿಪ್ರಸಾದ್‌ ಅಪಸ್ವರ

11:12 PM Dec 09, 2023 | Team Udayavani |

ಹುಬ್ಬಳ್ಳಿ: ಬೆಂಗಳೂರಿನಲ್ಲಿ ರವಿವಾರ ಈಡಿಗ ಜಾಗೃತಿ ಸಮಾವೇಶ ನಡೆಯಲಿದ್ದು, ಇದಕ್ಕೆ ಸಮುದಾಯದ ಹಿರಿಯ ನಾಯಕ, ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅಪಸ್ವರ ಎತ್ತಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆಯುವ ಈಡಿಗ ಸಮಾವೇಶ ರಾಜಕೀಯ ಪ್ರೇರಿತ ಹಾಗೂ ಕುತಂತ್ರದ್ದಾಗಿದೆ. ಸಮಾವೇಶದಲ್ಲಿ ನಾನು ಪಾಲ್ಗೊಳ್ಳುತ್ತಿಲ್ಲ. ಈಡಿಗ ಸಮಾಜ ಅಂದಾಜು 50 ಲಕ್ಷ ಜನಸಂಖ್ಯೆ ಹೊಂದಿದೆ. ಆದರೆ ಈಡಿಗ ಸಂಘದಲ್ಲಿ ಇರುವುದು ಕೇವಲ 12 ಸಾವಿರ ಸದಸ್ಯತ್ವ ಮಾತ್ರ. ಸಂಘಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಮಾಡುವುದಾಗಿ ಹೇಳುತ್ತಾರೆ. ಆದರೆ ಸಂಘದ ರಜತ ಹಾಗೂ ಸುವರ್ಣ ಮಹೋತ್ಸವ ಯಾವಾಗ ಮಾಡಿದರೋ ಗೊತ್ತಿಲ್ಲ. ಈಡಿಗ ಸಮಾಜದಲ್ಲಿ ಆರು ಜನ ಸ್ವಾಮೀಜಿಗಳಿದ್ದಾರೆ. ಈ ಪೈಕಿ ಇಬ್ಬರು ಸ್ವಾಮೀಜಿಗಳನ್ನು ಅಮೃತ ಮಹೋತ್ಸವ ಸಮಾರಂಭಕ್ಕೆ ಆಹ್ವಾನಿಸಿಲ್ಲ. ರಾಜ್ಯದಲ್ಲಿ ಸೇಂದಿ, ಸಾರಾಯಿ ನಿಷೇಧ ಮಾಡಿದಾಗ ಈ ಸಂಘದಲ್ಲಿ ಇದ್ದವರು ಏನೂ ಮಾಡಲಿಲ್ಲ ಎಂದು ಕಿಡಿ ಕಾರಿದರು.

ಸಮಾರಂಭದಲ್ಲಿ ಸಂಘದವರು ಸಮಾಜದ ವಿವಿಧ ಬೇಡಿಕೆಗಳನ್ನು ಮಂಡನೆ ಮಾಡಲಿ. ರಾಜ್ಯ ಸರಕಾರ ಅವುಗಳನ್ನು ಪರಿಹರಿಸಲಿ. ಜಾತಿ ಜನಗಣತಿ ವರದಿ ಅನುಷ್ಠಾನಕ್ಕೆ ಪ್ರಬಲ ಸಮಾಜದವರು ಹಿಂದಿನಿಂದಲೂ ವಿರೋಧ ಮಾಡುತ್ತಲೇ ಬಂದಿದ್ದಾರೆ. ಹಾವನೂರು ಆಯೋಗ ವರದಿ ಬಂದಾಗಲೂ ಅಂದು ಪ್ರಬಲ ಸಮಾಜದ ಶಾಸಕರೊಬ್ಬರು ವರದಿಯನ್ನೇ ಸುಟ್ಟಿದ್ದರು. ಆದರೆ ಡಿ.ದೇವರಾಜ ಅರಸು ಮಾತ್ರ ಇದ್ಯಾವುದಕ್ಕೂ ಜಗ್ಗದೆ ವರದಿ ಜಾರಿಗೊಳಿಸಿದ್ದರು. ಹಿಂದುಳಿದ ವರ್ಗದಲ್ಲಿ ಎಷ್ಟೊಂದು ಜಾತಿಗಳಿವೆ. ಆದರೆ, ಮೀಸಲಾತಿ ಸೌಲಭ್ಯವನ್ನು ಕೆಲವೇ ಜಾತಿಗಳು ಪಡೆಯುತ್ತಿವೆ. ಹೀಗಾಗಿ ದೇವರಾಜ ಅರಸು ಮಾದರಿಯಲ್ಲಿ ಇಂದಿನ ರಾಜ್ಯ ಸರಕಾರ ಜಾತಿ ಜನಗಣತಿ ವರದಿ ಅನುಷ್ಠಾನಕ್ಕೆ ಮುಂದಾಗಲಿ ಎಂದರು.

ನಾನೊಂದು ರೀತಿ ಚೆಂಡು ಇದ್ದಂತೆ. ನನ್ನನ್ನು ತುಳಿಯಲು ಯತ್ನಿಸಿದಷ್ಟು ನಾನು ಎತ್ತರಕ್ಕೆ ಪುಟಿದೇಳುತ್ತೇನೆ. ನನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next