Advertisement

ರಂಗಭೂಮಿ ಮನೋರಂಜನೆಗಲ್ಲ; ಮನೋವಿಕಾಸಕ್ಕೆ 

09:54 AM Mar 27, 2019 | Naveen |
ಲಕ್ಷಾಂತರ ಮಂದಿಯ ಬದುಕು ಕಟ್ಟಿಕೊಟ್ಟ ರಂಗಭೂಮಿ ಇಂದು ನೇಪಥ್ಯಕ್ಕೆ ಸರಿಯುತ್ತಿದ್ದರೂ ತನ್ನ ಜೀವಂತಿಕೆ ಉಳಿಸಲು ಹೊಸಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದೆ. ಹೀಗಾಗಿ ಪ್ರತಿ ವರ್ಷ ವಿಶ್ವಾದ್ಯಂತ ಇಂದು (ಮಾ. 27) ರಂಗಭೂಮಿ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ರಂಗ ಸೌಹಾರ್ದತೆ ಕುರಿತು ಜಗತ್ತಿಗೆ ಸಾರಲಾಗುತ್ತಿದೆ.
ಮಾನವ ವಿಕಾಸ ಹೊಂದಿದಂತೆ, ತನ್ನನ್ನು ತಾನು ಬೌದ್ಧಿಕವಾಗಿ ಗುರುತಿಸಿಕೊಂಡನು. ಹೀಗಾಗಿ ಕಲೆ, ಸಾಹಿತ್ಯ, ಸಂಗೀತ ಹಾಗೂ ಇನ್ನಿತರ ವಿಚಾರಗಳಲ್ಲಿ ಏಳಿಗೆಗೆ ಕಾರಣವಾಗಿದ್ದನ್ನು ಮಾನವನ ನೈಜ ವಿಕಾಸದ ಪ್ರಮುಖ ಘಟ್ಟ ಎಂದು ಕರೆಯಲಾಯಿತು. ತನ್ನಲ್ಲಿ ಆಗುತ್ತಿದ್ದ ಬದಲಾವಣೆ ಹಾಗೂ ಭಾವನೆಗಳಿಗೆ ಸಾಹಿತ್ಯ, ಚಿತ್ರಕಲೆ ಹಾಗೂ ನಾಟಕದ ರೂಪುಕೊಟ್ಟ ಪರಿಣಾಮ ಹೊಸದೊಂದು ಸಾಂಸ್ಕೃತಿಕ ಜಗತ್ತಿನ ಏಳಿಗೆಯಿಂದಾಗಿ ರಂಗಭೂಮಿಯ ಉದಯಕ್ಕೆ ಕಾರಣವಾಯಿತು.
ರಂಗಭೂಮಿಯೂ ಸಾಂಸ್ಕೃತಿಕವಾದ ಜನಪರವಾದ ವೇದಿಕೆ. ಹಲವಾರು ಕಲಾ ಪ್ರಕಾರಗಳ ಮೂಲಕ ಇಂದು ಜಗತ್ತಿನೆದುರು ರಂಗಭೂಮಿ ಗುರುತಿಸಿಕೊಂಡಿದೆ. ಇವುಗಳಲ್ಲಿ ನಾಟಕ, ಬೀದಿ ನಾಟಕ, ದೊಡ್ಡಾಟ, ಯಕ್ಷಗಾನ
ಹಾಗೂ ಬೊಂಬೆಯಾಟಯಾದಿಯಾಗಿ ಇನ್ನೂ ಹಲವಾರು ಪ್ರಕಾರಗಳಿವೆ. ರಂಗಭೂಮಿಯ ಕಲಾ ಪ್ರಕಾರಗಳು ಕೇವಲ ಮನೋರಂಜನೆಗಾಗಿ ಮಾತ್ರ ಉದಯಿಸಿದ್ದಲ್ಲ, ಬದಲಾಗಿ ಮನೋ ವಿಕಾಸಕ್ಕಾಗಿ ಎಂಬುದನ್ನು ಅರಿಯಬೇಕಾಗಿದೆ. ಸಮಾಜದಲ್ಲಿನ ತುಡಿತಗಳಿಗೆ ಧ್ವನಿಯಾದವು. ಮಾನವ ಅನುಭವಿಸುತ್ತಿದ್ದ ಸಂಕಷ್ಟಗಳಿಗೆ ಪಾತ್ರ ನೀಡಿದವು. ಹಾಗಾಗಿ ಇಂದು ರಂಗಭೂಮಿ ಜಗತ್ತಿನಲ್ಲಿ ಕೀರ್ತಿಪ್ರಾಯವಾಗಿದೆ. ಇಷ್ಟು ವಿಶೇಷಣಗಳಿಂದ ಕಳಶಪ್ರಾಯವಾಗಿರುವ ರಂಗಭೂಮಿಯ ಕಲಾವಿದ, ಕಲೆಗಳ ಬಗ್ಗೆ ಒಂದು ದಿನದ ಸಂಭ್ರಮ ಆಚರಣೆಗೆಂದೇ
ಮಾರ್ಚ್‌ 27ರಂದು ವಿಶ್ವ ರಂಗಭೂಮಿ ದಿನ ಎಂದು ಆಚರಿಸಲಾಗುತ್ತದೆ.
ಹಿನ್ನೆಲೆ
ರಂಗಭೂಮಿಯ ಕಲಾವಿದರು ಸೇರಿ 1948ರಲ್ಲಿ ಯುನೆಸ್ಕೋ ಪ್ರಾಯೋಜಕತ್ವದಲ್ಲಿ ಇಂಟರ್‌ನ್ಯಾಶನಲ್‌ ಥೀಯಟರ್‌ ಆಫ್ ಇನ್‌ಸ್ಟಿಟ್ಯೂಟ್‌ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಈ ಸಂಘಟನೆಯೂ ರಂಗಭೂಮಿ ಕ್ಷೇತ್ರದ ಸಾಧಕರನ್ನು ಹಾಗೂ ಕಲಾವಿದರನ್ನು ಗುರುತಿಸಿ, ಅವರನ್ನು ಮುನ್ನೆಲೆಗೆ ತರಲು ವೇದಿಕೆಯಾಯಿತು. ಸಂಘಟನೆಯ ಸಹಯೋಗದಲ್ಲಿ 1961ರಲ್ಲಿ ಜರಗಿದ 9ನೇ ವಿಶ್ವ ಕಾಂಗ್ರೆಸ್‌ ಅಧಿವೇಶನದಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದ ಆರವಿ ಕಿವಿಯಾ ಎಂಬವರು ವಿಶ್ವ ರಂಗಭೂಮಿ ದಿನಾಚರಣೆಯ ಬಗ್ಗೆ ಪ್ರಸ್ತಾವಿಸಿದರು. ಅನಂತರ 1962 ಮಾರ್ಚ್‌ 27ರಂದು ಪ್ಯಾರಿಸ್‌ನಲ್ಲಿ ಥೀಯಟರ್‌ ಅಫ್ ನೇಶನ್ಸ್‌ ಅಸ್ತಿತ್ವಕ್ಕೆ ಬಂದ ಸವಿನೆನಪಿಗಾಗಿ ವಿಶ್ವ ರಂಗಭೂಮಿ ದಿನವನ್ನ ಆಚರಿಸಲು ನಿರ್ಧರಿಸಲಾಯಿತು.
ರಂಗಭೂಮಿ ಹಾಗೂ ಚಿಂತನೆ
ಮನೋರಂಜನೆಯೊಂದಿಗೆ ಮಾನವ ಏಳ್ಗೆಗೆ ಕಾರಣವಾದ ರಂಗಭೂಮಿ ಕಲೆಯೂ ಜಾತಿ, ಮತ, ಪಂಥ, ಭಾಷೆ ಹಾಗೂ ಲಿಂಗಗಳ ಗಡಿ ಮೀರಿದುದಾಗಿದೆ. ಕಲೆಗಾರನು ನೇಪಥ್ಯದಿಂದ ಬಣ್ಣ ಹಚ್ಚಿ ವೇದಿಕೆಗೆ ಬಂದರೆ ಆತ ಈ ಎಲ್ಲ ಸಂಕೋಲೆಗಳಿಂದ ಬಿಡಿಸಿಕೊಂಡು, ತನ್ನ ನಟನೆಯ ಮೂಲಕ ಜಗತ್ತಿಗೆ ಸಂದೇಶ ನೀಡುವುದು ಆತನ ಪ್ರಮುಖ ಕರ್ತವ್ಯ. ಕಲೆಗಾರರಿಗೆ ಯಾವುದೇ ಜಾತಿ, ಮತ, ಪಂಥ- ಲಿಂಗಗಳ ಯಾವುದೇ ಭೇದ- ಭಾವವಿಲ್ಲ, ರಂಗದ ಬೆಳಕಿನಲ್ಲಿ ಗಂಡು ಹೆಣ್ಣಾಗಬಹುದು, ಹೆಣ್ಣು ಗಂಡಾಗಬಹುದು. ಇನ್ನು ಯಾವುದೇ ಧರ್ಮಗಳ ಹಮ್ಮುಬಿಮ್ಮುಗಳಿರುವುದಿಲ್ಲ.
ಆಧುನಿಕತೆಯ ಹೊಡೆತ
ಜೀವನವೆಂಬುವುದು ನಾಟಕ ರಂಗ ಎಂದು ಖ್ಯಾತ ನಾಟಕಕಾರ ಷೇಕ್ಸ್ ಪಿಯರ್‌ನ ಮಾತಿನಂತೆ ಈಗ ನಾಟಕ ರಂಗದ ಜೀವನ ಆಧುನೀಕತೆ ಎಂಬ ಬಿರುಗಾಳಿಗೆ ಸಿಲುಕಿ, ರೆಕ್ಕೆ- ಪುಕ್ಕಗಳಿಲ್ಲದ ಹಕ್ಕಿಯಂತಾಗಿದೆ. ಈ ಹಕ್ಕಿಗೆ ಹಾರುವ ತವಕ, ಕುಣಿದಾಡುವ ಉತ್ಸಾಹ ಇದ್ದರೂ ಕೂಡ ಪ್ರೇಕ್ಷಕ- ಪ್ರೋತ್ಸಾಹಕ ಇಲ್ಲದಂತಾಗಿದೆ ಎಂಬ ಮಾತು ಆಗಾಗ ಕೇಳಿಬರುವುದುಂಟು. ಇದರ ಮಧ್ಯೆಯೂ ಇಂದು ರಂಗಭೂಮಿ ಕಲೆಯೂ ವಿವಿಧ ಕಲಾ ಪ್ರಕಾರಗಳ ಮೂಲಕ ಸಾಮಾಜಿಕ ಕಳಕಳಯೊಂದಿಗೆ ಜೀವಂತವಾಗಿದ್ದು, ಇದನ್ನು ಪೋಷಿಸಿ, ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ.
ವಿಶೇಷ ಸಂದೇಶವಾಹಕರು
ಪ್ರತಿ ವರ್ಷದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ವಿಶ್ವದ ಪ್ರಸಿದ್ಧ ರಂಗಕರ್ಮಿಯೊಬ್ಬರನ್ನು ಆಹ್ವಾನಿಸಿ ವಿಶ್ವ ರಂಗ ಸೌಹಾರ್ದತೆ ಕುರಿತು ಅನಿಸಿಕೆ ವ್ಯಕ್ತಪಡಿಸಿ, ಅಂತಾರಾಷ್ಟ್ರೀಯ ರಂಗ ಸಂದೇಶವನ್ನು ಪ್ರಚುರಪಡಿಸಲಾಗುತ್ತದೆ. 2019ರ ವಿಶ್ವ ರಂಗಭೂಮಿ ದಿನಾಚರಣೆಯ ಸಂದೇಶವನ್ನು ಕ್ಯೂಬಾದ ಪ್ರಸಿದ್ಧ ರಂಗಕರ್ಮಿ ಕಾರ್ಲ್ಸ್‌ ಕೆಲ್ಡಾನ್‌ ನೀಡಲಿದ್ದಾರೆ. ಈ ಹಿಂದೆ 2002ರಲ್ಲಿ ವಿಶ್ವ ರಂಗ ಸಂದೇಶವನ್ನು ಭಾರತದ ಪರವಾಗಿ ಜ್ಞಾನಪೀಠ ಪ್ರಶಸ್ತಿ ವಿಜೇತ ಖ್ಯಾತ ನಾಟಕಕಾರ ಗಿರೀಶ್‌ ಕಾರ್ನಾಡ್‌ ನೀಡಿದ್ದರು ಎಂಬುದು ಹೆಮ್ಮೆಯ ಸಂಗತಿ.
ಶಿವ ಸ್ಥಾವರಮಠ 
Advertisement

Udayavani is now on Telegram. Click here to join our channel and stay updated with the latest news.

Next