ಕಟಪಾಡಿ: ಪಿತೃ ಆರಾಧನೆಯಲ್ಲಿ ಹಲವು ವಿಧ. ಕೆಲವರು ಪಿತೃಗಳ ಪುಣ್ಯತಿಥಿಯಂದು ಶ್ರಾದ್ಧಾದಿಗಳನ್ನು ಮಾಡಿದರೆ ಇನ್ನು ಕೆಲವರು ದಾನ ಧರ್ಮಾದಿಗಳ ಮೂಲಕ ಆರಾಧಿಸುತ್ತಾರೆ. ಆದರೆ ಇಲ್ಲೊಬ್ಬರು ತನ್ನ ಮನೆಯಂಗಳದ ಹೂದೋಟದಲ್ಲೇ ತಂದೆಯ ಪುತ್ಥಳಿಯನ್ನು ಸ್ಥಾಪಿಸಿ ನಿತ್ಯ ಆರಾಧನೆ ಮೂಲಕ ವಿಶಿಷ್ಟವಾಗಿ ಪಿತೃಪ್ರೇಮ ತೋರುತ್ತಿದ್ದಾರೆ. ಜತೆಗೆ ತನ್ನ ಬದುಕಿಗೆ ವಿಶೇಷ ಪ್ರೇರಣೆ ಪಡೆಯುತ್ತಿದ್ದಾರೆ.
ಕಟಪಾಡಿ ಏಣಗುಡ್ಡೆಯ ಸನ್ನಿಧಿ ನಿವಾಸಿ ನಾಟಿ ವೈದ್ಯ ಇಂದುಶೇಖರ ಸುವರ್ಣ ಅವರ ತಂದೆ ಕಳತ್ತೂರು ಗರಡಿ ಮನೆ ಸೂರಪ್ಪ ಪಂಡಿತ್ 1985ರ ಮೇ 27ರಂದು ಗತಿಸಿದ್ದರು. ಸೂರಪ್ಪ ಅವರು ಕಳತ್ತೂರು, ಪಣಿಯೂರು ಬೈದರ್ಕಳ ಗರಡಿಗಳಲ್ಲಿ ದರ್ಶನ ಪಾತ್ರಿಯಾಗಿ ಸಲ್ಲಿಸಿದ್ದಲ್ಲದೆ ನಾಟಿ ವೈದ್ಯರಾಗಿ, ಕೃಷಿ, ಸಮಾಜ ಸೇವೆಯ ಮೂಲಕವೂ ಜನಪ್ರಿಯರಾಗಿದ್ದವರು.
ಬಡತನದ ಬದುಕಿನಲ್ಲೂ ಅನ್ಯರೆದುರು ಕೈಚಾಚದೆ ಸ್ವಾಭಿಮಾನಿಯಾಗಿ ಬದುಕಿದ ತಂದೆಯ ನೆನಪು ಶಾಶ್ವತವಾಗಿರಬೇಕೆಂದು ಬಯಸಿದ ಇಂದುಶೇಖರ ಅವರು ತಂದೆಯ 35ನೇ ವರ್ಷದ ಸಂಸ್ಮರಣೆ ಸಂದರ್ಭ ಅಂದರೆ 11 ವರ್ಷಗಳ ಹಿಂದೆ ಸಹೋದರ ವಿಶ್ವನಾಥ ಸುವರ್ಣ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿಗಳ ಮೂಲಕ ಪುತ್ಥಳಿಯನ್ನು ಸ್ಥಾಪಿಸಿದ್ದಾರೆ. ಕಾರ್ಕಳದ ಶಿಲ್ಪಿಯೋರ್ವರು 75 ಸಾವಿರ ರೂ. ವೆಚ್ಚದಲ್ಲಿ ಪುತ್ಥಳಿಯನ್ನು ನಿರ್ಮಿಸಿದ್ದರು.
ಇಂದು ಶೇಖರ ಅವರ ದಿನದ ಆರಂಭವೇ ತಂದೆಯ ಪುತ್ಥಳಿಯ ದರ್ಶನದೊಂದಿಗೆ ಆರಂಭವಾಗುತ್ತದೆ. ಪ್ರತಿದಿನ ಪತ್ನಿ ಜಯಂತಿ, ಮಕ್ಕಳಾದ ಶೀತಲ್, ಸೋನಲ್ ಜತೆಗೂಡಿ ಪೂಜಿಸುತ್ತಿದ್ದಾರೆ. ವರ್ಷಕ್ಕೊಮ್ಮೆ ಮನೆಮಂದಿ ಎಲ್ಲರೂ ಒಟ್ಟಾಗಿ ವಿಶೇಷವಾದ ಪೂಜೆ ಪುನಸ್ಕಾರಗಳನ್ನು ನಡೆಸಿ ಊರಿನವರಿಗೆ ಅನ್ನದಾನ ಮಾಡುತ್ತಿದ್ದಾರೆ. ಪ್ರಸ್ತುತ 5 ವರ್ಷದ ಹಿಂದೆ ಸ್ವರ್ಗಸ್ಥರಾದ ತಾಯಿ ಸಂಜೀವಿ ಸೂರಪ್ಪ ಅವರನ್ನೂ ಅದೇ ದಿನ ಜತೆಯಾಗಿ ಆರಾಧಿಸುತ್ತಾರೆ.ವಯಸ್ಸಾದ ಹೆತ್ತವರು ಮಕ್ಕಳಿಗೆ ಹೊರೆಯಾಗಿ ವೃದ್ಧಾಶ್ರಮದ ಹಾದಿ ಹಿಡಿಯುತ್ತಿರುವ ಇಂದಿನ ದಿನಗಳಲ್ಲಿ ಇಂದುಶೇಖರ ಅವರ ಪಿತೃಭಕ್ತಿ ಸಮಾಜಕ್ಕೆ ಆದರ್ಶ ಎನಿಸಿದೆ.