Advertisement

ಪರಿಸರ ರಕ್ಷಣೆ: ಕರಾವಳಿ ಹಸಿರು ಪಡೆಯ ಹೊಣೆ…!

06:00 AM Jun 05, 2018 | |

ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದು ಪರಿಸರ ಹಾನಿಯಿಂದಾಗುವ ದುಷ್ಪಾರಿಣಾಮ. ಪರಿಸರದ ಬಗೆಗಿನ ಕಾಳಜಿ ಪ್ರತಿಯೊಬ್ಬರಲ್ಲೂ ಮೂಡಬೇಕಾದುದು ಇಂದಿನ ಅಗತ್ಯ. ಆ ಕಾರಣದಿಂದ  ಪ್ಲಾಸ್ಟಿಕ್‌ ತೊಲಗಿಸುವ ಸಂಕಲ್ಪವನ್ನು ಎಲ್ಲರೂ ಕೈಗೊಳ್ಳಬೇಕು ಎನ್ನುವುದು ಈ ವರ್ಷದ ಘೋಷವಾಕ್ಯವಾಗಿದೆ.

Advertisement

ಕುಂದಾಪುರ: ಇಂದು ವಿಶ್ವ ಪರಿಸರ ದಿನಾಚರಣೆ. ಪರಿಸರದ ಬಗೆಗಿನ ಕಾಳಜಿ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾದ ಈ ಕಾಲಘಟ್ಟದಲ್ಲಿ ಪರಿಸರದ ರಕ್ಷಣೆಗಾಗಿಯೇ ಇಲ್ಲೊಂದು ವಿದ್ಯಾರ್ಥಿಗಳ ತಂಡವಿದೆ.

ಕೋಡಿಯ ಕೆ. ಮೊದಿನ್‌ ಬ್ಯಾರೀಸ್‌ ಅನುದಾನಿತ ಪ್ರೌಢಶಾಲೆಯ “ಕರಾವಳಿ ಹಸಿರು ಪಡೆ ‘ ಎನ್ನುವ ವಿದ್ಯಾರ್ಥಿಗಳ ತಂಡ ವರ್ಷವಿಡಿ ಪರಿಸರ ಸಂಬಂಧ ಕಾಳಜಿ ಮೂಡಿಸುವ ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ವಿಶೇಷ.

ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 2004ರಿಂದ ಕೋಡಿಯ ಶಾಲೆಯಲ್ಲಿ ಈ ಕರಾವಳಿ ಹಸಿರು ಪಡೆ ಎನ್ನುವ ವಿದ್ಯಾರ್ಥಿಗಳ ತಂಡ ಆರಂಭವಾಗಿದ್ದು, ಪ್ರತಿ ವರ್ಷ 30ರಿಂದ 40 ಮಕ್ಕಳು ಈ ತಂಡದಲ್ಲಿರುತ್ತಾರೆ.

ಸರಕಾರದಿಂದ ಅನುದಾನ
ಈ ಕರಾವಳಿ ಹಸಿರು ಪಡೆಯ ಕಾರ್ಯ- ಚಟುವಟಿಕೆಗಳಿಗಾಗಿ ವರ್ಷಕ್ಕೆ 2,000 ರೂ. ವಿಶೇಷ ಅನುದಾನ ಸಿಗುತ್ತಿದ್ದರೆ, ಈಗ ಅದನ್ನು 5,000 ರೂ. ಏರಿಸಲಾಗಿದೆ. ಸರಕಾರದಿಂದ ಬರುವ ಅನುದಾನವನ್ನು ಪರಿಸರ ಸಂಬಂಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತೇವೆ ಎಂದು ಈ ಹಸಿರು ಪಡೆಯ ಸಂಚಾಲಕ, ಶಿಕ್ಷಕ ಸಂತೋಷ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಕಾರ್ಯ ಚಟುವಟಿಕೆಗಳೇನು ?
ಪ್ರತಿ ವರ್ಷ ಈ ಹಸಿರು ಪಡೆಯಲ್ಲಿರುವ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಆ ವಿದ್ಯಾರ್ಥಿಗಳು ಬಾಕಿ ಉಳಿದ ವಿದ್ಯಾರ್ಥಿಗಳಿಗೆ, ಮನೆಯವರು, ನೆರೆ-ಹೊರೆಯವರಿಗೆ ಜಾಗೃತಿ ಮೂಡಿಸುತ್ತಾರೆ. ಶಾಲಾ ಕೈತೋಟದ ನಿರ್ವಹಣೆಯನ್ನು ಇದೇ ತಂಡದ ವಿದ್ಯಾರ್ಥಿಗಳು ಮಾಡುತ್ತಾರೆ. ಜಪ್ತಿಯ ನೀರಿನ ಶುದ್ಧೀಕರಣ ಘಟಕ, ಫಿಶ್‌ಮಿಲ್‌, ಕಾಂಡ್ಲಾ ವನದಂತಹ ಪ್ರದೇಶಗಳಿಗೆ ವಿದ್ಯಾರ್ಥಿಗಳನ್ನು ಫೀಲ್ಡ್‌ ವಿಸಿಟ್‌ಗಾಗಿ ಕರೆದೊಯ್ಯಲಾಗುತ್ತದೆ.

ಪರಿಸರದ ಜಾಗೃತಿ ಕಾರ್ಯಕ್ರಮ
ಪರಿಸರದ ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕೋಡಿಯ ಶಾಲೆಯಲ್ಲಿ ಈ ತಂಡವನ್ನು ರಚಿಸಿದ್ದಾರೆ. ಅದಲ್ಲದೆ ಕುಂದಾಪುರ ವಲಯದ ಎಲ್ಲ ಪ್ರೌಢಶಾಲೆಗಳಲ್ಲಿಯೂ ಇಕೋ ಕ್ಲಬ್‌ ಇದೆ. ಕೆಲವು ಕಡೆಗಳಲ್ಲಿ 6 -8 ನೇ ತರಗತಿಗಳಲ್ಲಿಯೂ ಇಕೋ ಕ್ಲಬ್‌ ಇದೆ. ಇದರಿಂದ ಪರಿಸರ ದಿನದಂದು ಗಿಡ ನೆಡುವ, ಪರಿಸರದ ಜಾಗೃತಿಯಂತಹ 10-12 ಕಾರ್ಯಕ್ರಮಗಳನ್ನು ನಡೆಸುತ್ತಾರೆ.
– ಅಶೋಕ ಕಾಮತ್‌, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ

ಮಕ್ಕಳಿಗೆ ಪರಿಸರ ಜಾಗೃತಿ
ಮಕ್ಕಳಿಗೆ ಎಳವೆಯಲ್ಲೇ ಪರಿಸರದ ಬಗೆಗಿನ ಜಾಗೃತಿ ಮೂಡಿಸಿದರೆ, ಅವರು ದೊಡ್ಡವರಾದ ನಂತರವೂ, ಯಾವುದೇ ಹುದ್ದೆಯಲ್ಲಿದ್ದರೂ, ಪರಿಸರದ ರಕ್ಷಣೆಯ ಕುರಿತು ಅರಿವಿರುತ್ತದೆ. ಆ ನಿಟ್ಟಿನಲ್ಲಿ ಶಾಲೆಯಲ್ಲಿ ಈ ರೀತಿಯ ತಂಡವನ್ನು ಕಟ್ಟಿಕೊಂಡು ಪರಿಸರದ ಬಗ್ಗೆ ತಿಳಿಸಿಕೊಡಲಾಗುತ್ತದೆ. ವಿದ್ಯಾರ್ಥಿಗಳು ಆಸಕ್ತಿಯಿಂದಲೇ ಇದರಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುತ್ತಾರೆ.
– ಜಯಂತಿ,ಕೋಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next