ಬೆಂಗಳೂರು: ವಯಸ್ಸಾದ ಬಳಿಕ ಮಕ್ಕಳು ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದು, ಮನೆಯಲ್ಲಿದ್ದರೂ ಕಡೆಗಣಿಸುವಂಥ ಪ್ರಕರಣಗಳು ಇತ್ತೀಚೆಗೆ ಸಾಮಾನ್ಯವಾಗಿವೆ. ಇದರಿಂದ ಮಾನಸಿಕವಾಗಿ ಕುಗ್ಗುತ್ತಿರುವ ಹಿರಿಯ ನಾಗರಿಕರು, ಮನೆಯವರಿಗೆ ಹೊರೆಯಾಗದಿರಲಿ ಎಂಬ ಕಾರಣಕ್ಕೆ ವೃದ್ಧಾಪ್ಯದಲ್ಲೂ ದುಡಿಯುತ್ತಿದ್ದಾರೆ!
ಹೆಲ್ಪ್ ಏಜ್ ಇಂಡಿಯಾ ಸಂಸ್ಥೆಯು “ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನ’ದ ಅಂಗವಾಗಿ “ಮಹಿಳೆ ಮತ್ತು ಆಯಸ್ಸು; ಅದೃಶ್ಯ ಅಥವಾ ಸಶಕ್ತೀಕರಣ’ ವಿಷಯಕ್ಕೆ ಸಂಬಂಧಿಸಿ ರಚಿಸಿದ ರಾಷ್ಟ್ರೀಯ ವರದಿ-2023ರಲ್ಲಿ ಈ ಅಚ್ಚರಿಯ ಅಂಶ ಬಹಿರಂಗಗೊಂಡಿದೆ. ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಶೇಷಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ಡಾ| ಎನ್. ಮಂಜುಳಾ ಈ ವರದಿಯನ್ನು ಬಿಡುಗಡೆಗೊಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಸರಿಸುಮಾರು ಶೇ.55ರಷ್ಟು ವೃದ್ಧ ಮಹಿಳೆಯರು ಕಾರ್ಖಾನೆ, ಬಟ್ಟೆ ಅಂಗಡಿ ಸಹಿತ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಇದರಿಂದ ಅವರು ಆರ್ಥಿಕ ಸ್ವಾವಲಂಬನೆಯಾಗುವುದರ ಜತೆ ಮನೆಮಂದಿಯೂ ಉತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ ಎನ್ನುತ್ತಿದೆ ವರದಿ. ವೃದ್ಧೆಯರು ಕುಟುಂಬದಿಂದ ಹೊರ ಉಳಿಯಬೇಕಾದ ಸಂಕಟದೊಂದಿಗೆ ಸಾಮಾಜಿಕ, ಆರ್ಥಿಕ, ಡಿಜಿಟಲ್ ಅವಲಂಬನೆಯ ಕೊರತೆ ಜತೆಗೆ ವಿವಿಧ ರೀತಿಯ ನಿಂದನೆ, ತಾರತಮ್ಯಗಳನ್ನು ಅನುಭವಿಸುತ್ತಿರುವುದು ಕಂಡು ಬಂದಿದೆ. ಈ ಸಮಸ್ಯೆಗಳಿಂದ ತಪ್ಪಿಸಿ ಕೊಳ್ಳಲು, ರಾಜ್ಯದ 60ರಿಂದ 90 ವರ್ಷದ ವರೆಗಿನವರ ಪೈಕಿ ಸರಿ ಸುಮಾರು ಶೇ.98ರಷ್ಟು ಹಿರಿಯ ಮಹಿಳೆಯರು ಉದ್ಯೋಗ-ಸ್ನೇಹಿ ಪರಿಸರದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ವೃದ್ಧೆಯರ ಮೇಲೆಯೂ ಒಂದಲ್ಲೊಂದು ರೀತಿ ದೌರ್ಜನ್ಯಗಳು ನಡೆಯುತ್ತಿವೆ. ಬಹುತೇಕ ದೌರ್ಜನ್ಯ, ನಿಂದನೆ ಕುಟುಂಬದವರಿಂದಲೇ ನಡೆಯುತ್ತಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ರಾಜ್ಯದಲ್ಲಿ ಶೇ.49ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ.16ರಷ್ಟು ವೃದ್ಧೆಯರು, ತಮ್ಮ ಗಂಡು ಮಕ್ಕಳು, ಸೊಸೆಯರು ಹಾಗೂ ಸಂಬಂಧಿಗಳಿಂದ ವಿವಿಧ ರೀತಿಯ ದೌರ್ಜನ್ಯಗಳನ್ನು ಅನುಭವಿಸಿದ್ದೇವೆ ಎಂದಿದ್ದಾರೆ. ಮುಖ್ಯವಾಗಿ ಶೇ.50ರಷ್ಟು ದೈಹಿಕ ಹಿಂಸಾಚಾರದಿಂದ ನಿಂದನೆ, ಶೇ.46ರಷ್ಟು ಅಗೌರವ, ಶೇ.40ರಷ್ಟು ಭಾವನಾತ್ಮಕ ಹಾಗೂ ಮಾನಸಿಕ ನಿಂದನೆ, ಶೇ.40ರಷ್ಟು ಗಂಡು ಮಕ್ಕಳಿಂದ ದೌರ್ಜನ್ಯ ಹಾಗೂ ಶೇ.31ರಷ್ಟು ಇನ್ನಿತರ ಸಂಬಂಧಿಕರಿಂದ ತೊಂದರೆಗೆ ಈಡಾಗುತ್ತಿದ್ದಾರೆ.
ಇಂತಹವರಲ್ಲಿ ಶೇ.18ರಷ್ಟು ವೃದ್ಧರು ಪ್ರತೀಕಾರ ಅಥವಾ ಮತ್ತಷ್ಟು ನಿಂದನೆಯ ಭಯದಿಂದ ಯಾರಿಗೂ ಕಷ್ಟ ಹೇಳಿಕೊಳ್ಳದವರು, ಮನೆಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಗ್ಗೆ ಶೇ.16ರಷ್ಟು ವೃದ್ಧ ಮಹಿಳೆಯರಿಗೆ ಯಾವುದೇ ಅರಿವಿಲ್ಲ, ಶೇ.13ರಷ್ಟು ವೃದ್ಧರ ತಮ್ಮ ಕಳವಳಗಳನ್ನು ಯಾರೂ ಮನೆಯಲ್ಲಿ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಭಾವನೆಯಿಂದ ಕೊರಗುತ್ತಿರುವುದು ಕಂಡುಬಂದಿದೆ.