Advertisement

ಇಂದು ವಿಧಾನಪರಿಷತ್‌ ಮತದಾನ

06:10 AM Jun 08, 2018 | |

ಬೆಂಗಳೂರು: ವಿಧಾನಪರಿಷತ್ತಿನ ಬೆಂಗಳೂರು ಪದವೀಧರ ಮತ್ತು ಆಗ್ನೆಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈಋತ್ಯ ಮತ್ತು ಈಶಾನ್ಯ ಪದವೀಧರ ಕ್ಷೇತ್ರಗಳ ಚುನಾವಣೆಗೆ ಶುಕ್ರವಾರ ಮತದಾನ ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಯೂ ಆದ ಬೆಂಗಳೂರು ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ.

Advertisement

ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗದಿಯಂತೆ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಜೂ.12ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.

ಬೆಂಗಳೂರು ಪದವೀಧರ ಮತ್ತು ಆಗ್ನೆಯ ಶಿಕ್ಷಕರ ಕ್ಷೇತ್ರ:
ಬೆಂಗಳೂರು ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲೆ, ಗ್ರಾಮಾಂತರ, ರಾಮ ನಗರ ಜಿಲ್ಲೆ, ಬಿಬಿಎಂಪಿ (ಕೇಂದ್ರ,ಉತ್ತರ ಮತ್ತು ದಕ್ಷಿಣ ವಲಯ) ಒಳಪಡುತ್ತವೆ. ಈ ಕ್ಷೇತ್ರದಲ್ಲಿ 38,451 ಪುರುಷರು, 26,891 ಮಹಿಳೆಯರು ಮತ್ತು 12 ಮಂದಿ ಇತರರು ಸೇರಿ ಒಟ್ಟು 65,354 ಮತದಾರರಿದ್ದಾರೆ.

ಕ್ಷೇತ್ರದ ವ್ಯಾಪ್ತಿಯಲ್ಲಿ 36 ಮುಖ್ಯ ಮತಗಟ್ಟೆಗಳು, 46 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು 82
ಮತಗಟ್ಟೆಗಳಿವೆ. ಕಣದಲ್ಲಿ 22 ಮಂದಿ ಸ್ಪರ್ಧಿಗಳಿದ್ದಾರೆ. ಮತದಾರರ ಎಡಗೈ ಉಂಗುರದ ಬೆರಳಿಗೆ ಶಾಯಿ ಹಾಕಲಾಗುವುದು.

ಕೈಗಾರಿಕಾ ಅಭಿವೃದ್ಧಿ ಆಯುಕ್ತರಾಗಿರುವ ಐಎಎಸ್‌ ಅಧಿಕಾರಿ ದರ್ಪಣ್‌ ಜೈನ್‌ ಅವರನ್ನು ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. 

Advertisement

ಆಗ್ನೇಯ ಶಿಕ್ಷಕರ ಕ್ಷೇತ್ರ: ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ದಾವಣಗೆರೆ (ದಾವಣಗೆರೆ, ಹರಿಹರ, ಜಗಳೂರು), ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಸೇರಲಿವೆ. ಕ್ಷೇತ್ರದಲ್ಲಿ 13,461 ಪುರುಷರು, 5,940 ಮಹಿಳೆಯರು ಮತ್ತು ಇತರೆ ಒಬ್ಬರು ಸೇರಿ ಒಟ್ಟು 19,402 ಮತದಾರರು ಇದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 31 ಮುಖ್ಯ ಮತಗಟ್ಟೆ, 6 ಹೆಚ್ಚುವರಿ ಮತಗಟ್ಟೆ ಸೇರಿದಂತೆ ಒಟ್ಟು 37 ಮತಗಟ್ಟೆ ಕೇಂದ್ರಗಳಿವೆ. ಕ್ಷೇತ್ರದ ಚುನಾವಣಾ ಕಣದಲ್ಲಿ 14 ಅಭ್ಯರ್ಥಿಗಳಿದ್ದಾರೆ. ಮತದಾರರ ಎಡಗೈ ಮಧ್ಯದ ಬೆರಳಿಗೆ ಶಾಯಿ ಹಾಕಲಾಗುವುದು.

ಐಎಎಸ್‌ ಅಧಿಕಾರಿ ಮಂಜುನಾಥ ಪ್ರಸಾದ್‌ ಅವರನ್ನು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ವೀಕ್ಷಕರನ್ನಾಗಿ
ನೇಮಕ ಮಾಡಲಾಗಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರ: ದಕ್ಷಿಣ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯಲ್ಲಿ ಮೈಸೂರು, ಚಾಮರಾಜ ನಗರ, ಮಂಡ್ಯ ಹಾಗೂ
ಹಾಸನ ಜಿಲ್ಲೆಗಳು ಬರಲಿದ್ದು, 20,678 ಮತದಾರರಿದ್ದಾರೆ. ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ನೈಋತ್ಯ ಶಿಕ್ಷಕರ, ಪದವೀಧರರ ಕ್ಷೇತ್ರ: ನೈಋತ್ಯ ಶಿಕ್ಷಕರ ಕ್ಷೇತ್ರವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆಯ ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕುಗಳು ಬರಲಿದ್ದು, ಒಟ್ಟು 20,481ಮತದಾರರಿದ್ದಾರೆ. 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ನೈಋತ್ಯ ಪದವೀಧರರ ಕ್ಷೇತ್ರ ವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ
ದಾವಣಗೆರೆಯ ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕುಗಳು ಬರಲಿದ್ದು, ಒಟ್ಟು 7,185 ಮತದಾರರಿದ್ದಾರೆ. 8
ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಲಗೈ ತೋರುಬೆರಳಿಗೆ, ಶಿಕ್ಷಕರ ಕ್ಷೇತ್ರದ
ಚುನಾವಣೆಯಲ್ಲಿ ಮತದಾರರಿಗೆ ಬಲಗೈ ಮಧ್ಯದ ಬೆರಳಿಗೆ ಶಾಯಿ ಹಾಕಲಾಗುವುದು.

ಈಶಾನ್ಯ ಪದವೀಧರ ಕ್ಷೇತ್ರ ಈಶಾನ್ಯ ಪದವೀಧರ ಕ್ಷೇತ್ರವ್ಯಾಪ್ತಿಯಲ್ಲಿ ಬೀದರ್‌, ಕಲಬುರಗಿ, ಯಾದಗಿರಿ, 
ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆ ಹಾಗೂ ದಾವಣಗೆರೆಯ ಹರಪನಹಳ್ಳಿ ತಾಲೂಕುಗಳು ಬರಲಿದ್ದು,
ಒಟ್ಟು 82,054 ಮತದಾರರಿದ್ದಾರೆ. 5 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಜೂ.12ಕ್ಕೆ ಫ‌ಲಿತಾಂಶ: ಮತ ಎಣಿಕೆ ಕಾರ್ಯ ಜೂ.12ರಂದು ನಡೆಯಲಿದೆ. ಅದೇ ದಿನ ಸಂಜೆ ವೇಳೆಗೆ ಫ‌ಲಿತಾಂಶ ಹೊರಬೀಳಲಿದೆ. ಬೆಂಗಳೂರು ಪದವೀಧರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಬೆಂಗಳೂರಿನಲ್ಲಿ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ರಾಮನಾರಾಯಣ ಚಲ್ಲಾರಾಮ್‌ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಯಿಂದ 14 ಟೇಬಲ್‌ಗ‌ಳಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next