ಉಪೇಂದ್ರ ಅವರು ಆರ್.ಚಂದ್ರು ನಿರ್ದೇಶನದ “ಐ ಲವ್ ಯೂ’ ಚಿತ್ರದಲ್ಲಿ ನಟಿಸಲಿರುವ ಸುದ್ದಿ ನಿಮಗೆ ಗೊತ್ತೇ ಇದೆ. ಈಗಾಗಲೇ ಚಿತ್ರದ ಫೋಟೋಶೂಟ್ ಆಗಿದ್ದು, ಉಪ್ಪಿ ಸ್ಟೈಲಿಶ್ ಗೆಟಪ್‌ನಲ್ಲಿ ಮಿಂಚಿದ್ದಾರೆ. ಇಂದು ಈ ಚಿತ್ರದ ಮುಹೂರ್ತ ನಡೆಯಲಿದೆ. ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ಅದ್ಧೂರಿಯಾಗಿ ಜರುಗಲಿದೆ. ಶಿವರಾಜಕುಮಾರ್ ಅವರು ಚಿತ್ರಕ್ಕೆ ಕ್ಲಾಪ್ ಮಾಡಿದರೆ, ಶಾಸಕ ಭೈರತಿ ಸುರೇಶ್ ಕ್ಯಾಮರಾ ಚಾಲನೆ ಮಾಡಲಿದ್ದಾರೆ.
ಉಳಿದಂತೆ ಕನ್ನಡ ಚಿತ್ರರಂಗದ ಬಹುತೇಕ ಮಂದಿ ಈ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಚಿತ್ರವನ್ನು ಆರ್.ಚಂದ್ರು ಅವರೇ ನಿರ್ಮಿಸುತ್ತಿದ್ದಾರೆ. ಅಂದಹಾಗೆ, ಚಂದ್ರು ಈ ಚಿತ್ರದ ಮೂಲಕ ಪ್ರೀತಿಗೆ ಹೊಸ ವ್ಯಾಖ್ಯಾನ ನೀಡಲಿದ್ದಾರಂತೆ. ಇದು “ಎ’, “ಉಪೇಂದ್ರ’ ಹಾಗೂ “ಪ್ರೀತ್ಸೆ’ ಶೈಲಿಯ ಲವ್‌ಸ್ಟೋರಿಯಾಗಿದ್ದು, ಉಪೇಂದ್ರ ಅವರ ಪಾತ್ರ ಕೂಡಾ ವಿಭಿನ್ನವಾಗಿದೆಯಂತೆ.
ಉಪೇಂದ್ರ ಈ ಹಿಂದೆ ತಮ್ಮ “ಎ’ ಸಿನಿಮಾದಲ್ಲಿ, “ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದ್ನೇಕಾಯಿ’ ಎಂದಿದ್ದರು. ಆದರೆ, ಈಗ 15 ವರ್ಷಗಳ ನಂತರ ಉಪೇಂದ್ರ ಅವರು, ಅದೇ ಪ್ರೀತಿ ಬಗ್ಗೆ ಹೊಸ ಅಂಶವನ್ನು ಹೇಳಲಿದ್ದಾರಂತೆ. “ಚಿತ್ರದ ಕ್ಲೈಮ್ಯಾಕ್ಸ್ ತುಂಬಾ ಭಿನ್ನವಾಗಿದೆ. ಈಗಿನ ಟ್ರೆಂಡ್ ಅಲ್ಲಿ ಉಪೇಂದ್ರ ಅವರು ಪ್ರೀತಿಯನ್ನು ಹೇಗೆ ನೋಡುತ್ತಾರೆ, ಪ್ರೀತಿ ಎಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ ಸೇರಿದಂತೆ ಹಲವು ಅಂಶಗಳನ್ನು ಇಲ್ಲಿ ಹೇಳಿದ್ದೇವೆ.
ಆರಂಭದಲ್ಲಿ ಕಾಲೇಜು ಲವ್‌ಸ್ಟೋರಿಯಾಗಿರುವ ಸಿನಿಮಾ ಮುಂದೆ ಹೇಗೆ ಫ್ಯಾಮಿಲಿ ಎಂಟರ್‌ಟೈನರ್ ಆಗುತ್ತದೆ ಎಂಬ ಅಂಶ ಕೂಡಾ ಮಜಾವಾಗಿದೆ. “ಎ’, “ಉಪೇಂದ್ರ’, “ಪ್ರೀತ್ಸೆ’ ಹಾಗೂ “ತಾಜ್‌ಮಹಲ್’ ಚಿತ್ರಗಳ ಫ್ಲೇವರ್ ಇಲ್ಲಿರಲಿದೆ. ಆ ಸಿನಿಮಾಗಳ ಅಂಶಗಳು ಒಂದು ಕಡೆಯಾದರೆ ಹೇಗಿರಬಹುದು ನೀವೇ ಯೋಚಿಸಿ’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ ಚಂದ್ರು.
ಆರಂಭದಲ್ಲಿ “ಐ ಲವ್ ಯೂ’ ಎಂಬ ಟೈಟಲ್ ಅನ್ನು ಚಿಹ್ನೆ ಮೂಲಕ ಇರಲಿಲ್ಲ. ಆದರೆ, ಈಗ ಚಿತ್ರದ ಟೈಟಲ್ ಡಿಸೈನ್ ಬದಲಾಗಿದೆ. ಉಪೇಂದ್ರ ಅವರ ಫೆವರೇಟ್ ಸಿಂಬಲ್ ಶೈಲಿಯಲ್ಲೇ ಮಾಡಲಾಗಿದೆ. “ಇವತ್ತು ಟ್ರೆಂಡ್ ಬದಲಾಗಿದೆ. ಅದರಲ್ಲೂ ಕಾಲೇಜು ಹುಡುಗರು, ಐ ಲವ್ ಯೂ ಎಂದು ನೇರವಾಗಿ ಹೇಳುವುದಿಲ್ಲ. ಎಲ್ಲರೂ ಸಿಂಬಲ್ ಮೂಲಕ ತೋರಿಸುತ್ತಾರೆ.
ಆ ಅಂಶದ ಬಗ್ಗೆ ಗಮನ ಹರಿಸಿ ನಾವು ಟ್ರೆಂಡ್‌ಗೆ ಹೆಚ್ಚು ಹೊಂದುವಂತಹ ಸಿಂಬಲ್ ಡಿಸೈನ್ ಇಟ್ಟಿದ್ದೇವೆ’ ಎಂದು ಟೈಟಲ್ ಬಗ್ಗೆ ಹೇಳುತ್ತಾರೆ ನಿರ್ದೇಶಕ ಆರ್.ಚಂದ್ರು. ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಉಳಿದಂತೆ ಪ್ರದೀಪ್ ರಾವತ್, ಶಯ್ನಾಜಿ ಶಿಂಧೆ, ರವಿಕಾಳೆ, ರವಿಶಂಕರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ, ಕಿರಣ ತೊಟಮ್ ಬೈಲು ಸಂಗೀತವಿದೆ.