ಬೆಂಗಳೂರು: ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಹರಿಹರದಲ್ಲಿ 108 ತುಂಗಾಭದ್ರಾ ಆರತಿ ಮಂಟಪಗಳ ಕಾಮಗಾರಿಗೆ ರವಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮೀಜಿ ಹೇಳಿದರು.
ನಗರದ ಶ್ವಾಸಯೋಗ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಂಟಪಗಳ ಶಿಲಾವಿನ್ಯಾಸ ಮಾಹಿತಿ ಹಾಗೂ ಪರಿಕಲ್ಪನೆಯ ವೀಡಿಯೋ ಬಿಡುಗಡೆಗೊಳಿಸಿ ಮಾತನಾಡಿ, ತುಂಗಾಭದ್ರಾ ಆರತಿ ಮೂಲಕ ಹರಿಹರದ ಗತವೈಭವವನ್ನು ಮರಳಿ ಪಡೆಯುವ ಹಾಗೂ ದೇಶದಲ್ಲೇ ಪ್ರಮುಖ ಯಾತ್ರಾಸ್ಥಳ ವನ್ನಾಗಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.
ಯೋಜನೆಗೆ ಸರಕಾರ ಸಮ್ಮತಿಸಿದ್ದು, 30 ಕೋಟಿ ರೂ. ಅನುದಾನ ನೀಡಿದೆ. ಗಂಗಾರತಿ ರೀತಿಯಲ್ಲಿ ದಕ್ಷಿಣ ಭಾರತ ದಲ್ಲಿ ತುಂಗಾರತಿಯನ್ನು ಆರಂಭಿಸುವ ನಿಟ್ಟಿನಲ್ಲಿ ಭಕ್ತರೊಂದಿಗೆ ಸೇರಿ ತುಂಗೆಯನ್ನು ಶುಚಿಗೊಳಿಸುವ “ನಮಾಮಿ ತುಂಗೆ’ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.
ತುಂಗಾಭದ್ರಾ ನದಿ ಹರಿಯುವ ಎಲ್ಲ ಸ್ಥಳಗಳಲ್ಲೂ ಪ್ರವಾಸೋದ್ಯಮ, ಉದ್ಯೋಗಾವಕಾಶ ಹೆಚ್ಚಿಸುವುದು ಮತ್ತು ದೇಶದ ಪ್ರಮುಖ ಹಿಂದೂಯಾತ್ರಾ ಸ್ಥಳಗಳಲ್ಲಿ ಒಂದಾಗಿ ಗುರುತಿಸುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ.
-ಜಗದ್ಗುರು ವಚನಾನಂದ ಮಹಾಸ್ವಾಮೀಜಿ