Advertisement

ಚುನಾವಣೆ ಬಳಕೆಗೆ ಇಂದು, ನಾಳೆ 400ಕ್ಕೂ ಹೆಚ್ಚು ಕೆಎಸ್ಸಾರ್ಟಿಸಿ ಬಸ್‌

01:51 AM Apr 17, 2019 | mahesh |

ಮಹಾನಗರ: ಸರಕಾರಿ ಬಸ್‌ಗಳನ್ನು ಚುನಾವಣೆಗೆ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಮತ್ತು ಗುರುವಾರ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆಯಲ್ಲಿ ಗಮನಾರ್ಹವಾದ ವ್ಯತ್ಯಯವಾಗಲಿದೆ. ಹಾಗಾಗಿ ಸಾರ್ವಜನಿಕರು ತಮ್ಮ ಓಡಾಟಕ್ಕೆ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಅನಿವಾರ್ಯ.

Advertisement

ಜಿಲ್ಲೆಯ ಸುಮಾರು 400ಕ್ಕೂ ಹೆಚ್ಚಿನ ಕೆಎಸ್ಸಾರ್ಟಿಸಿ ಬಸ್‌ಗಳು ಚುನಾವಣ ಕಾರ್ಯಕ್ಕೆ ತೆರಳಲಿವೆ. ಮಂಗಳೂರು ವಿಭಾಗದಿಂದ ಪ್ರತೀ ದಿನ ಸುಮಾರು 389ಕ್ಕೂ ಹೆಚ್ಚಿನ ಕೆಎಸ್ಸಾರ್ಟಿಸಿ ಬಸ್‌ಗಳು ವಿವಿಧ ಪ್ರದೇಶಗಳಿಗೆ ತೆರಳುತ್ತವೆ. ಈ ಬಾರಿ ಎ. 17, 18ರಂದು ಮಂಗಳೂರಿನ ಒಂದು ಮತ್ತು ಎರಡನೇ ಡಿಪೋದಿಂದ 138ಕ್ಕೂ ಹೆಚ್ಚಿನ ಕೆಎಸ್ಸಾರ್ಟಿಸಿ ಬಸ್‌ಗಳು ಚುನಾ ವಣೆಯ ಕಾರ್ಯಕ್ಕೆ ತೆರಳಲಿವೆ. ಇನ್ನು ಪುತ್ತೂರು ವಿಭಾಗದಿಂದ (ಪುತ್ತೂರು, ಬಿಸಿ ರೋಡ್‌, ಧರ್ಮ ಸ್ಥಳ, ಮಡಿಕೇರಿ, ಸುಳ್ಯ) ಪ್ರತಿ ದಿನ 560 ಬಸ್‌ಗಳು ಸಂಚರಿಸುತ್ತವೆ. ಇದರಲ್ಲಿ 263 ಬಸ್‌ಗಳು ವ್ಯತ್ಯಯ ಉಂಟಾಗಲಿವೆ. ಪುತ್ತೂರು ತಾಲೂಕಿಗೆ 35 ಬಸ್‌, ಬೆಳ್ತಂಗಡಿ ತಾಲೂಕಿಗೆ 36, ಬಂಟ್ವಾಳ-28, ಸುಳ್ಯ-27, ಮೂಡುಬಿದಿರೆ-47, ಮಡಿಕೇರಿ-42, ವಿರಾಜಪೇಟೆಗೆ-48 ಬಸ್‌ಗಳು ಚುನಾವಣ ಕಾರ್ಯನಿಮಿತ್ತ ಹೋಗಲಿದ್ದು, ಪ್ರಯಾಣಿಕರಿಗೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಲಿದೆ.

ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳುವ ಪ್ರಕಾರ, ಬಸ್‌ ವ್ಯತ್ಯಯದಿಂದಾಗಿ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಉಂಟಾಗದು. ಹೆಚ್ಚಿನ ಬಸ್‌ ಕಾರ್ಯಾಚರಿಸುತ್ತಿರುವ ರೂಟ್‌ಗಳಿಂದ ಬಸ್‌ ಕಡಿತಗೊಳಿಸಲಾಗಿದೆ. ಹೆಚ್ಚಿನ ಬಸ್‌ ಸಂಚರಿಸುವ ರೂಟ್‌ಗಳಿಂದ ಕಡಿಮೆ ಬಸ್‌ ಸಂಚರಿಸುವ ರೂಟ್‌ಗಳಿಗೆ ಬಸ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಕಾರಣಕ್ಕೆ ಗ್ರಾಮಾಂತರ ಪ್ರದೇಶ ಸಹಿತ ಪಟ್ಟಣ ಪ್ರದೇಶದ ಮಂದಿಗೆ ತೊಂದರೆ ಉಂಟಗದು ಎನ್ನುತ್ತಾರೆ.

ಎ. 21ಕ್ಕೆ ಹೆಚ್ಚುವರಿ ಬಸ್‌ ಕಾರ್ಯಾಚರಣೆ
ದೂರದ ಊರುಗಳಿಂದ ಮತದಾನಕ್ಕೆಂದು ತಮ್ಮ ಊರುಗಳಿಗೆ ಬಂದ ಮಂದಿಗೆ ಸರಣಿ ರಜೆ ಸಿಗುತ್ತದೆ. ಎ. 17ರಂದು ಮಹಾವೀರ ಜಯಂತಿ ರಜೆ ಇದ್ದು, ಎ. 18ರಂದು ಚುನಾವಣೆ, ಎ. 19ರಂದು ಗುಡ್‌ಫ್ರೈಡೆ ರಜೆ ಇದ್ದು, ಎ. 20ರಂದು ರಜಾ ತೆಗೆದುಕೊಂಡರೆ, ಎ. 21ರಂದು ರವಿವಾರದ ರಜಾ ಸಿಗುತ್ತದೆ. ಎ. 21ರಂದು ಈಗಾಗಲೇ ಹೆಚ್ಚಿನ ಬಸ್‌ ಮುಂಗಡ ಬುಕ್ಕಿಂಗ್‌ ಆಗಿದೆ. ಇದೇ ಕಾರಣಕ್ಕೆ ಮಂಗಳೂರಿನಿಂದ ಮೈಸೂರು, ಬೆಂಗಳೂರು ಮತ್ತಿತರ ರೂಟ್‌ಗಳಿಗೆ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್‌ ನಿಯೋಜಿಸಲು ಕೆಎಸ್ಸಾರ್ಟಿಸಿ ತೀರ್ಮಾನಿಸಿದೆ.

ಸಿಟಿ ಬಸ್‌ಗಳು ಎಂದಿನಂತೆ ಸಂಚಾರ
ಕಳೆದ ಬಾರಿಯ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆಯ ಕಾರ್ಯದ ನಿಮಿತ್ತ ಜಿಲ್ಲೆಯ ಹೆಚ್ಚಿನ ಖಾಸಗಿ, ಸಿಟಿ ಬಸ್‌ಗಳು ತೆರಳಿದ್ದವು. ಆದರೆ ಈ ಬಾರಿ ಮಂಗಳೂರಿನ ಯಾವುದೇ ಸಿಟಿ ಬಸ್‌ಗಳು ಚುನಾವಣೆ ಕಾರ್ಯಕ್ಕೆ ಹೋಗುವುದಿಲ್ಲ. ಹಾಗಾಗಿ ಮತದಾನದ ದಿನ ಎಲ್ಲ ಸಿಟಿ ಬಸ್‌ಗಳು ಎಂದಿನಂತೆ ಕಾರ್ಯಾಚರಿಸಲಿವೆ.

Advertisement

ರಾಜ್ಯದ 3,314 ಬಸ್‌ ಚುನಾವಣ ಕಾರ್ಯಕ್ಕೆ
ಲೋಕಸಭಾ ಚುನಾವಣೆಯ ಮೊದಲನೇ ಹಂತದ ಮತದಾನದ ಹಿನ್ನೆಲೆಯಲ್ಲಿ ಚುನಾವಣ ಕಾರ್ಯದ ನಿಮಿತ್ತ ರಾಜ್ಯದ 8,705 ಕೆಎಸ್ಸಾರ್ಟಿಸಿ ಬಸ್‌ಗಳ ಪೈಕಿ 3,314 ಬಸ್‌ಗಳು ಚುನಾವಣ ಕಾರ್ಯಕ್ಕೆ ತೆರಳಲಿವೆ.

ತೊಂದರೆಯಾಗದಂತೆ ಕಾರ್ಯನಿರ್ವಹಣೆ
ಈ ಬಾರಿಯ ಲೋಕಸಭಾ ಚುನಾವಣೆ ಕಾರ್ಯಕ್ಕೆ ಪುತ್ತೂರು ಡಿಪೋದಿಂದ 263 ಬಸ್‌ಗಳು ತೆರಳಲಿವೆ. ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದ ರೀತಿಯಲ್ಲಿ ಬಸ್‌ ಕಾರ್ಯಾಚರಣೆ ಮಾಡಲಾಗುತ್ತದೆ. ಇನ್ನು ಮತದಾನ ಮುಗಿಸಿ ದೂರದ ಊರುಗಳಿಗೆ ತೆರಳುವ ಸಂಬಂಧ ಎ. 21ರಂದು ಹೆಚ್ಚಿನ ಸಂಖ್ಯೆಯ ಬಸ್‌ ನಿಯೋಜಿಸಲಾಗಿದೆ.
ದೀಪಕ್‌ ಕುಮಾರ್‌, ಕೆಎಸ್ಸಾರ್ಟಿಸಿ ನಿಯಂತ್ರಣಾಧಿಕಾರಿ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next