Advertisement

ಇಂದು ಬಿಜೆಪಿಯಿಂದ ರಾಜ್ಯವ್ಯಾಪಿ ಪ್ರತಿಭಟನೆ

03:45 AM Feb 20, 2017 | Harsha Rao |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಬಿಜೆಪಿ ಸೋಮವಾರ (ಫೆ. 20) ಬೆಂಗಳೂರು ಸೇರಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಿದೆ.

Advertisement

ಬೆಂಗಳೂರು ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಈ ಕುರಿತು ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಲಾಗಿದೆ. ಅದೇ ರೀತಿ ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮತ್ತು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ನೇತೃತ್ವದಲ್ಲಿ ಹೋರಾಟ ನಡೆದರೆ, ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಶಾಸಕರು ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಈ ಹೋರಾಟದ ಮೂಲಕ ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲು ಬಿಜೆಪಿ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.

ಕಾಂಗ್ರೆಸ್‌ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಆದಾಯ ತೆರಿಗೆ ಇಲಾಖೆ ದಾಳಿಗೊಳಗಾಗಿರುವ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಡಬೇಕೆಂಬ ಒತ್ತಾಯ ಸೇರಿ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಮೇಲ್ಸೇತುವೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಅವರ ಶಿಷ್ಯರಿಗೆ ಕಮಿಷನ್‌
ಸಂದಾಯವಾಗಿದೆ ಹಾಗೂ ಮುಖ್ಯಮಂತ್ರಿಗಳು ಕಾಂಗ್ರೆಸ್‌ ಹೈಕಮಾಂಡ್‌ಗೆ 1000 ಕೋಟಿ ರೂ. ಕಪ್ಪ ನೀಡಿದ್ದಾರೆ ಎಂಬುದು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಬಳಿ ಪತ್ತೆಯಾದ ಡೈರಿಯಿಂದ ಗೊತ್ತಾಗಿದೆ ಎಂಬ ಯಡಿಯೂರಪ್ಪ ಅವರ ಆರೋಪವನ್ನು ಮುಂದಿಟ್ಟುಕೊಂಡು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಬಿ.ಎಸ್‌.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತಕುಮಾರ್‌ ಅವರ ಸಂಭಾಷಣೆಯನ್ನು ತಿರುಚಿ ಗೊಂದಲ
ಸೃಷ್ಟಿಸಲಾಗುತ್ತಿದ್ದು, ಈ ಕುರಿತು ತನಿಖೆ ನಡೆಸುವಂತೆಯೂ ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಲಿದ್ದಾರೆ.

Advertisement

22-23ರಂದು ಬಿಜೆಪಿ ಒಬಿಸಿ ಮೋರ್ಚಾ ಸಮಾವೇಶ
ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಫೆ. 22ರಂದು ಬೀದರ್‌ನಲ್ಲಿ ಹಾಗೂ 23ರಂದು
ಯಾದಗಿರಿಯಲ್ಲಿ ಒಬಿಸಿ ಮೋರ್ಚಾ ಸಮಾವೇಶ ನಡೆಯಲಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.
ಈಶ್ವರಪ್ಪ ತಿಳಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಾದ ಬಳಿಕ ರಾಜ್ಯದ ಎಲ್ಲ ಜಿಲ್ಲಾ
ಕೇಂದ್ರಗಳಲ್ಲಿಯೂ ಸಮಾವೇಶ ನಡೆಸಲಾಗುತ್ತದೆ. ಅಂತೆಯೇ ರಾಯಣ್ಣ ಬ್ರಿಗೇಡ್‌ ಕಾರ್ಯಚಟುವಟಿಕೆಗಳು ನಿಲ್ಲುವುದಿಲ್ಲ.

ರಾಜಕಿಯೇತರ ಕಾರ್ಯಕ್ರಮವಾಗಿ ಸಮಾವೇಶಗಳು ನಡೆಯಲಿವೆ ಎಂದರು. ರಾಜ್ಯದ ಹತ್ತು ಕಡೆ ವಿಭಾಗಮಟ್ಟದ
ಸಮ್ಮೇಳನ, ಬಳಿಕ ಜಿಲ್ಲಾ ಕೇಂದ್ರಗಳಲ್ಲಿ ಸಮಾವೇಶ ನಡೆಸಲಾಗುತ್ತದೆ. ಈ ಸಂಬಂಧ ಅರವಿಂದ ಲಿಂಬಾವಳಿ, ಬಿ.ಜೆ.
ಪುಟ್ಟಸ್ವಾಮಿ ಹಾಗೂ ತಮ್ಮ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು. ಸಿದ್ದರಾಮಯ್ಯನವರು ಹೈಕಮಾಂಡ್‌ಗೆ ಸಾವಿರ ಕೋಟಿ ಕಪ್ಪ ನೀಡಿದ್ದಾರೆಂದು ಯಡಿಯೂರಪ್ಪ ಅವರು ಮಾಡಿದ ಆರೋಪಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನವರು ನಕಲಿ ಸೀಡಿ ಬಿಡುಗಡೆ ಮಾಡಿದ್ದಾರೆ. ಆದರೆ ಆ ಸೀಡಿ ಸಾಚಾತನದ ಬಗ್ಗೆ ತನಿಖೆ ನಡೆಸಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next