ಬೆಂಗಳೂರು: ಕೊನೆಗೂ ಜೆಡಿಎಸ್ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದು, “ಜನತಾ ಪ್ರಣಾಳಿಕೆ-ಜನರ ಆಳ್ವಿಕೆ’ ಹೆಸರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಬೆಳಗ್ಗೆ ಬಿಡುಗಡೆ ಮಾಡಲಿದ್ದಾರೆ.
ಈ ಬಾರಿಯ ಪ್ರಣಾಳಿಕೆ ರೈತಪರವಾಗಿರಲಿದೆ ಎಂದು ಈಗಾಗಲೇ ಹೇಳಿರುವ ಜೆಡಿಎಸ್, ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಎಲ್ಲ ಸಾಲಮನ್ನಾ, ರೈತರಿಗೆ ದಿನದ 24 ಗಂಟೆ ನಿರಂತರ ತ್ರಿಫೇಸ್ ವಿದ್ಯುತ್, ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಕೃಷಿ ಬ್ಯಾಂಕ್ ಸ್ಥಾಪನೆ, ರೈತರಿಗೆ ಉಚಿತವಾಗಿ ಕೃಷಿ ಯಂತ್ರೋಪಕರಣ ಬಳಕೆಗೆ ಅವಕಾಶ ಮುಂತಾದ ಪ್ರಣಾಳಿಕೆಯಲ್ಲಿ ಇರಬಹುದಾದ ಹಲವು ವಿಚಾರಗಳನ್ನು ಈಗಾಗಲೇ ಘೋಷಿಸಿದೆ.
ಹೀಗಾಗಿ ಸೋಮವಾರ ಬಿಡುಗಡೆಯಾಗಲಿರುವ ಪ್ರಣಾಳಿಕೆಯಲ್ಲಿ ಹೊಸ ಪ್ರಮುಖ ಅಂಶಗಳೇನಿರುತ್ತವೆ ಎಂಬ ಕುತೂಹಲ ಒಂದೇ ಬಾಕಿ ಉಳಿದಿದೆ.
ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್‌ಗೆ ಸ್ಪಷ್ಟ ಬಹುಮತ ದೊರೆಯುವ ವಿಶ್ವಾಸ ಇದೆ. ಒಂದು ವೇಳೆ ಈಗಾಗಲೇ ಬಂದ ಸಮೀಕ್ಷಾ ವರದಿಗಳ ಪ್ರಕಾರ ಬಹುಮತ ಬಾರದೇ ಇದ್ದರೂ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಯಾರ ಮನೆಯ ಬಾಗಿಲಿಗೂ ನಾನು ಹೋಗುವುದಿಲ್ಲ.
–
ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ