Advertisement

ಇಂದು ಪೌರ ಕಾರ್ಮಿಕರ ಮೊದಲ ತಂಡ ಸಿಂಗಾಪುರಕ್ಕೆ

11:51 AM Jul 04, 2017 | Team Udayavani |

ಬೆಂಗಳೂರು: ಪೌರ ಕಾರ್ಮಿಕರ ವಿದೇಶ ಪ್ರವಾಸಕ್ಕೆ ವೇದಿಕೆ ಸಿದ್ಧವಾಗಿದೆ. ರಾಜ್ಯದ 1,000 ಪೌರ ಕಾರ್ಮಿಕರ ಪೈಕಿ 40 ಮಂದಿಯ ಮೊದಲ ತಂಡ ಮಂಗಳವಾರ ಸಿಂಗಪುರಕ್ಕೆ ಪ್ರಯಾಣ ಬೆಳೆಸಲಿದೆ. ಪ್ರವಾಸಕ್ಕೆ ಹೊರಟು ನಿಂತಿದ್ದ 40 ಪೌರಕಾರ್ಮಿಕರಿಗೆ ಶುಭ ಹಾರೈಸಿದ ಬಳಿಕ ಸುದ್ದಿಗಾರರೊಂದಿಗೆ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದರು. ಸರ್ಕಾರ ಇಂಥ ಪ್ರಯೋಗ ಮಾಡಿರುವುದು ದೇಶದಲ್ಲೇ ಪ್ರಥಮ ಎಂದರು.

Advertisement

ಸಮಾಜ ಕಲ್ಯಾಣ ಇಲಾಖೆ ನೆರವಿನೊಂದಿಗೆ ಪೌರಾಡಳಿತ ಇಲಾಖೆ 1,000 ಪೌರ ಕಾರ್ಮಿಕರಿಗೆ ಸಿಂಗಪುರ ಪ್ರವಾಸ ಭಾಗ್ಯ ಹಮ್ಮಿಕೊಂಡಿದೆ. ಈ ಪೈಕಿ 40 ಮಂದಿಯ ಮೊದಲ ತಂಡ ಮಂಗಳವಾರ ವಿಮಾನದ ಮೂಲಕ ಸಿಂಗಪುರಕ್ಕೆ ತೆರಳಲಿದ್ದಾರೆ. ಅಲ್ಲಿ ನಾಲ್ಕು ದಿನ ಪ್ರವಾಸ ಕೈಗೊಂಡು ಅತ್ಯಾಧುನಿಕ ಸ್ವತ್ಛತಾ ವಿಧಾನ ಮತ್ತು ಮ್ಯಾನ್‌ಹೋಲ್‌ ಶುಚಿಗೊಳಿಸುವ ವಿಧಾನವನ್ನು ಪರಿಶೀಲಿಸಲಿದ್ದಾರೆಂದು ತಿಳಿಸಿದ್ದಾರೆ.

ಉಳಿದ ಪೌರ ಕಾರ್ಮಿಕರ ಪಾಸ್‌ಪೋರ್ಟ್‌ ಮತ್ತು ವೀಸಾ ಸಿದ್ಧಪಡಿಸಲಾಗುತ್ತಿದೆ. ಒಬ್ಬ ಕಾರ್ಮಿಕನ ಪ್ರವಾಸಕ್ಕೆ 75,000 ರೂ. ವೆಚ್ಚವಾಗಲಿದೆ. ಸಿಂಗಪುರ ಮಾತ್ರವಲ್ಲದೆ, ಇತರೆ ದೇಶಗಳಿಗೂ ಪೌರ ಕಾರ್ಮಿಕರನ್ನು ಕಳುಹಿಸಲು ತೀರ್ಮಾನಿಸಲಾಗಿದ್ದು, ಅದಕ್ಕಾಗಿ 7.50 ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಚಿವರು ತಿಳಿಸಿದರು.

ತಂಡದಲ್ಲಿ ಇಬ್ಬರೇ ಮಹಿಳೆಯರು: ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ಕಾರ್ಮಿಕರನ್ನು ಆಯ್ಕೆ ಮಾಡಲಾಗುತ್ತಿದ್ದು, ಪಾಲಿಕೆಗಳಿಂದ 6 ಮಂದಿ, ಪಟ್ಟಣ ಪಂಚಾಯಿತಿಗಳಿಂದ ಇಬ್ಬರನ್ನು ಆರಿಸಲಾಗುತ್ತಿದೆ. ಮೊದಲ 40 ಮಂದಿಯ ತಂಡದಲ್ಲಿ ಅಳ್ನಾವರ ಪಟ್ಟಣ ಪಂಚಾಯ್ತಿಯ ಸಾವಿತ್ರಿ ಗುತ್ತಿ ಮತ್ತು ಮಂಗಳೂರು ನಗರ ಪಾಲಿಕೆಯ ವಿಜಯಲಕ್ಷಿ ಬಿಟ್ಟರೆ ಉಳಿದವರೆಲ್ಲಾ ಪುರಷರು. ಪ್ರವಾಸದಲ್ಲಿ ಮಹಿಳೆಯರಿಗೂ ಸಮಾನ ಅವಕಾಶ ನೀಡಲಾಗಿತ್ತು. ಆದರೆ, ಅವರು ಮುಂದೆ ಬರುತ್ತಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಯಾತಕ್ಕಾಗಿ ಈ ಪ್ರವಾಸ? 
ಪ್ರವಾಸ ಸಂದರ್ಭದಲ್ಲಿ ಸಿಂಗಪುರದ ರಸ್ತೆಗಳ ತ್ಯಾಜ್ಯ ನಿರ್ವಹಣೆ, ಅಪಾರ್ಟ್‌ಮೆಂಟ್‌ಗಳಲ್ಲಿ ಕಸ ನಿರ್ವಹಣೆ ಬಗ್ಗೆ ವಿಶ್ವ ಶೌಚಾಲಯ ಸಂಘಟನೆ ತಜ್ಞರು ಕಾರ್ಮಿಕರಿಗೆ ತರಬೇತಿ ನೀಡಲಿದ್ದಾರೆ. ಪ್ರಮುಖ ತಾಣಗಳಿಗೆ ಕರೆದೊಯ್ದು ಸ್ವತ್ಛತೆ ಬಗ್ಗೆ ತಿಳಿವಳಿಕೆ ನೀಡಲಿದ್ದಾರೆ

Advertisement

ಖರ್ಚಿಗೆ 100 ಡಾಲರ್‌ 
ಕಾರ್ಮಿಕರಿಗೆ ಭತ್ಯೆ ಮಾತ್ರವಲ್ಲದೆ ಸಿಂಗಪುರದಲ್ಲಿ ವೆಚ್ಚ ಮಾಡಲು ತಲಾ 100 ಡಾಲರ್‌ ನೀಡಲಾಗಿದೆ. ಅಧ್ಯಯನಕ್ಕೆ ಪೂರಕವಾಗಿ ಇವರೊಂದಿಗೆ ಅಧಿಕಾರಿಗಳನ್ನೂ ಕಳುಹಿಸಲಾಗುತ್ತಿದೆ. ಸಿಂಗಪುರದಲ್ಲಿ “ಯುನೈಟೆಡ್‌ ನೇಶನ್‌’ ಎಂಬ ಅಂಗ ಸಂಸ್ಥೆ ಪೌರ ಕಾರ್ಮಿಕರಿಗೆ ಎಲ್ಲಾ ವ್ಯವಸ್ಥೆ ಮಾಡುತ್ತಿದೆ. ಇದಕ್ಕೆ ಕರ್ನಾಟಕ ಮೂಲದ ಸಿಂಗಪುರದಲ್ಲಿರುವ ಸಿಟಿ ಮ್ಯಾನೇಜರ್‌ ಅಸೋಸಿಯೇಷನ್‌ ಸಂಸ್ಥೆ ಸಹಕಾರ ನೀಡುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next