ಧಾರವಾಡ: ರಂಗು-ರಂಗಿನ ಬಣ್ಣಗಳ ಹೋಳಿಯ ಓಕುಳಿಗೆ ಧಾರಾನಗರಿ ಸಜ್ಜುಗೊಂಡಿದ್ದು, ಜನತೆ ಸೋಮವಾರ ಬಣ್ಣದಲ್ಲಿ ಮಿಂದೇಳಲಿದ್ದಾರೆ. ಹೋಳಿ ಮುನ್ನಾ ದಿನದ ರವಿವಾರ ಸಂಜೆ ಮಾರುಕಟ್ಟೆಯಲ್ಲಿ ಹೋಳಿ ಆಚರಣೆಯ ವಿವಿಧ ಬಗೆಯ ಬಣ್ಣಗಳು, ಸಾಮಗ್ರಿಗಳ ಖರೀದಿ ಜೋರಾಗಿತ್ತು. ಅದರಲ್ಲೂ ಸೂಪರ್ ಮಾರುಕಟ್ಟೆ ಸೇರಿದಂತೆ ಸುಭಾಸ ರಸ್ತೆಯಲ್ಲಿ ಬಣ್ಣದ ವ್ಯಾಪಾರ ತುಸು ಜೋರಾಗಿತ್ತು.
ಇನ್ನೊಂದು ಕಡೆ ಪೈಬರ್ ಹಲಿಗೆ ಹಾಗೂ ವಿವಿಧ ಬಗೆಯ ಮುಖವಾಡಗಳ ಮಾರಾಟವೂ ಭರದಿಂದ ಸಾಗಿತ್ತು. ನಗರದ ಗೊಲ್ಲರಕಾಲನಿ, ಕಾಮನಕಟ್ಟಿ, ಭೂಸಗಲ್ಲಿ ಸೇರಿದಂತೆ ಈಗಾಗಲೇ ರತಿಕಾಮಣ್ಣರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಸೋಮವಾರ ಕಾಮದಹನ ನಡೆಯಲಿದೆ.
ಗ್ರಾಮೀಣದಲ್ಲೂ ಸಡಗರ: ಅದೇ ರೀತಿಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲೂ ಹೋಳಿ ಆಚರಿಸಲಾಗುತ್ತಿದ್ದು, ಗ್ರಾಮಗಳಲ್ಲಿ ಕಾಮದಹನದ ಬಳಿಕ ಬಣ್ಣದ ಓಕುಳಿಯಾಟ ಆರಂಭಗೊಳ್ಳಲಿದೆ. ವಯಸ್ಸಿನ ಹಂಗಿಲ್ಲದೇ ಎಲ್ಲರೂ ಕೂಡಿಬಣ್ಣದ ಲೋಕದಲ್ಲಿ ತೇಲಾಡಲು ಜನತೆ ಕಾಯುತ್ತಿದ್ದಾರೆ.
ಹೋಳಿ ಆಚರಣೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ರೀತಿಯಲ್ಲಿ ಅವಘಡಕ್ಕೆ ಆಸ್ಪದೆ ಆಗದಂತೆ ಮುನ್ನಚ್ಚರಿಕೆ ಕ್ರಮವಾಗಿ ಕೆಲ ಜನರನ್ನು ಈಗಾಗಲೇ ಪೊಲೀಸ್ ಇಲಾಖೆ ಬಂಧಿಸಿದೆ. ಸೋಮವಾರದ ಹೋಳಿಯಾಟಕ್ಕೆ ಇಲಾಖೆಯಿಂದ ಸಕಲ ರೀತಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪರಿಸರ ಸ್ನೇಹಿ ಹೋಳಿ: ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ರಾಜ್ಯಾದ್ಯಂತ ಬಿರು ಬಿಸಿಲು. ಕುಡಿಯುವ ನೀರಿಗೂ ವಿಪರೀತ ತತ್ವಾರ. ಬಿಸಿಲ ಬೇಗೆಯ ಮಧ್ಯೆ ಬಣ್ಣಗಳ ಹಬ್ಬ ಹೋಳಿ ಆಚರಣೆ ಬೇರೆ.
ಹೀಗಾಗಿ, ಯುವಜನತೆ ಮತ್ತು ಮಕ್ಕಳ ಚರ್ಮ, ಸೂಕ್ಷ್ಮಅವಯವಗಳಾದ ಕಣ್ಣು, ಕಿವಿ, ಮೂಗು, ಬಾಯಿಯ ಆರೋಗ್ಯಕ್ಕೆ ಅಡ್ಡ ಪರಿಣಾಮ ಬೀರುವ ಅಥವಾ ವೈದ್ಯಕೀಯ ಚಿಕಿತ್ಸೆಯ ಅನಿವಾರ್ಯತೆ ಸೃಷ್ಟಿಯಾಗುವ ಬಣ್ಣಗಳ ಬಳಕೆಯನ್ನು ಸಂಪೂರ್ಣ ಕೈ ಬಿಡಬೇಕಿದೆ ಎಂದು ಪರಿಸರ ಹೋರಾಟಗಾರರು ಮನವಿ ಮಾಡಿದ್ದಾರೆ.