Advertisement

ಟೀಮ್‌ ಇಂಡಿಯಾಕ್ಕೆ ಟಿ20 ಟೆಸ್ಟ್‌

06:00 AM Nov 04, 2018 | |

ಕೋಲ್ಕತಾ: ಟೆಸ್ಟ್‌ ಹಾಗೂ ಏಕದಿನ ಸರಣಿಗಳೆರಡನ್ನೂ ಅಧಿಕಾರಯುತವಾಗಿ ವಶಪಡಿಸಿಕೊಂಡ ಭಾರತವಿನ್ನು ಚುಟುಕು ಮಾದರಿಯ ಟಿ20 ಸರಣಿಯಲ್ಲೂ ವೆಸ್ಟ್‌ ಇಂಡೀಸಿಗೆ ಬಿಸಿ ಮುಟ್ಟಿಸುವ ಯೋಜನೆ  ಹಾಕಿಕೊಂಡಿದೆ. ರವಿವಾರ ರಾತ್ರಿ ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ನಲ್ಲಿ 3 ಪಂದ್ಯಗಳ ಸರಣಿಗೆ ಚಾಲನೆ ಸಿಗಲಿದೆ.

Advertisement

ಪ್ರವಾಸಿ ವೆಸ್ಟ್‌ ಇಂಡೀಸ್‌ ಪಾಲಿಗೆ ಇದು ಪ್ರತಿಷ್ಠೆಯ ಸರಣಿ. ಟೆಸ್ಟ್‌ ಹಾಗೂ ಏಕದಿನಗಳೆರಡರಲ್ಲೂ ಸೊಲ್ಲೆತ್ತದೆ ಶರಣಾದ ವಿಂಡೀಸಿಗೆ ಟಿ20 ಸರಣಿಯನ್ನಾದರೂ ಗೆದ್ದು ತವರಿಗೆ ಮರಳುವಂತಾದರೆ ಅದೊಂದು ಮರ್ಯಾದೆ. ಇದಕ್ಕಿಂತ ಮಿಗಿಲಾದುದೆಂದರೆ, ವೆಸ್ಟ್‌ ಇಂಡೀಸ್‌ ಹಾಲಿ ಟಿ20 ವಿಶ್ವ ಚಾಂಪಿಯನ್‌ ಎಂಬುದು. ಮತ್ತೂಂದು ಗಮನಾರ್ಹ ಸಂಗತಿಯೆಂದರೆ, ಅದು ಕಳೆದ 2016ರ ಟಿ20 ವಿಶ್ವಕಪ್‌ ಕಿರೀಟ ಏರಿಸಿಕೊಂಡದ್ದು ಇದೇ “ಈಡನ್‌ ಗಾರ್ಡನ್ಸ್‌’ನಲ್ಲಿ ಎಂಬುದು. ಈವರೆಗೆ 2 ಸಲ ಟಿ20 ವಿಶ್ವಕಪ್‌ ಎತ್ತಿದ ವಿಶ್ವದ ಏಕೈಕ ತಂಡವೆಂಬ ಹೆಗ್ಗಳಿಕೆ ಕೂಡ ವಿಂಡೀಸ್‌ ಪಾಲಿಗೆ ಇದೆ. ಈ ಎಲ್ಲ ಕಾರಣಗಳಿಂದ ಕೆರಿಬಿಯನ್ನರ ಚುಟುಕು ಕ್ರಿಕೆಟ್‌ ಪಾರಮ್ಯಕ್ಕೆ ಈ ಸರಣಿ ವೇದಿಕೆಯಾಗಬೇಕಿದೆ.

ಜಾಸನ್‌ ಹೋಲ್ಡರ್‌ ಬದಲು 2016ರ ವಿಶ್ವಕಪ್‌ ಹೀರೋ ಕಾರ್ಲೋಸ್‌ ಬ್ರಾತ್‌ವೇಟ್‌ ವೆಸ್ಟ್‌ ಇಂಡೀಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಹೆಟ್‌ಮೈರ್‌, ಪೊಲಾರ್ಡ್‌, ರಸೆಲ್‌ ಅವರಂಥ ಸ್ಟಾರ್‌ ಆಟಗಾರರಿದ್ದಾರೆ. ಟಿ20ಯಲ್ಲಿ ಅಷ್ಟೇನೂ ಗಮನಾರ್ಹ ಸಾಧನೆ ಮಾಡದ ಡ್ಯಾರನ್‌ ಬ್ರಾವೊ ಈ ತಂಡದಲ್ಲಿರುವುದು, ಏಕದಿನ ಸರಣಿಯಲ್ಲಿ ಮಿಂಚಿದ ಕೀಪರ್‌ ಶೈ ಹೋಪ್‌ ಬದಲು ಅನುಭವಿ ದಿನೇಶ್‌ ರಾಮದಿನ್‌ ಕೀಪಿಂಗಿಗೆ ಆಯ್ಕೆ ಆಗಿರುವುದೆಲ್ಲ ಕೆರಿಬಿಯನ್‌ ಪಡೆಯ ಅಚ್ಚರಿಗಳಾಗಿವೆ.

ಧೋನಿ ಇಲ್ಲದ ಭಾರತ
ಭಾರತ ತಂಡದ ಅಚ್ಚರಿಯೆಂದರೆ ಅನುಭವಿ ಸ್ಟಂಪರ್‌ ಮಹೇಂದ್ರ ಸಿಂಗ್‌ ಧೋನಿ ಅವರನ್ನು ಕೈಬಿಟ್ಟಿರುವುದು. ಆದರೆ ಇದು “ಧೋನಿ ಯುಗ’ ಮುಗಿದುದರ ಸೂಚನೆ ಅಲ್ಲ ಎಂಬುದಾಗಿ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ. ನಾಯಕ ವಿರಾಟ್‌ ಕೊಹ್ಲಿ ಮತ್ತೂಮ್ಮೆ ವಿಶ್ರಾಂತಿಗೆ ತೆರಳಿದ್ದಾರೆ. ಹೀಗಾಗಿ ರೋಹಿತ್‌ ಶರ್ಮ ಅವರಿಗೆ ಭಾರತ ತಂಡದ ನೇತೃತ್ವ ಲಭಿಸಿದೆ.

ಕೃಣಾಲ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ಶಾಬಾಜ್‌ ನದೀಂ, ಶ್ರೇಯಸ್‌ ಅಯ್ಯರ್‌ ಅವರೆಲ್ಲ ಟಿ20 ಸ್ಪೆಷಲಿಸ್ಟ್‌ಗಳೆಂಬ ಕಾರಣಕ್ಕೆ ಆಯ್ಕೆಯಾಗಿದ್ದಾರೆ. ಫಾರ್ಮ್ನಲ್ಲಿಲ್ಲದ ಶಿಖರ್‌ ಧವನ್‌ ಕೂಡ ಇದ್ದಾರೆ. ಏಕದಿನ ಸರಣಿಯಲ್ಲಿ ವೀಕ್ಷಕನಾಗಿ ಉಳಿದಿದ್ದ ಕೆ.ಎಲ್‌. ರಾಹುಲ್‌ ಇನ್ನಿಂಗ್ಸ್‌ ಆರಂಭಿಸಬಹುದು ಎಂಬುದೊಂದು ನಿರೀಕ್ಷೆ. ಧೋನಿ ಬದಲು ರಿಷಬ್‌ ಪಂತ್‌ ಕೀಪಿಂಗ್‌ ನಡೆಸಲಿದ್ದಾರೆ. 

Advertisement

ಮತ್ತೂಬ್ಬ ಕೀಪರ್‌ ದಿನೇಶ್‌ ಕಾರ್ತಿಕ್‌ “ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌’ ಆಗಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಭುವನೇಶ್ವರ್‌, ಬುಮ್ರಾ, ಕುಲದೀಪ್‌, ಚಾಹಲ್‌, ನದೀಂ, ಖಲೀಲ್‌ ಅವರೆಲ್ಲ ಬೌಲಿಂಗ್‌ ವಿಭಾಗದ ಪ್ರಮುಖ ಅಸ್ತ್ರಗಳಾಗಿದ್ದಾರೆ. ಇವರೊಂದಿಗೆ ಉಮೇಶ್‌ ಯಾದವ್‌ ಕೂಡ ಇದ್ದಾರೆ. ಈಗಾಗಲೇ 12ರ ಬಳಗವನ್ನು ಹೆಸರಿಸಿರುವ ಭಾರತ, ವಾಷಿಂಗ್ಟನ್‌ ಸುಂದರ್‌, ಉಮೇಶ್‌ ಯಾದವ್‌ ಮತ್ತು ಶಾಬಾಜ್‌ ನದೀಂ ಅವರನ್ನು ಹೊರಗಿರಿಸಿದೆ.

ನಾಯಕ ರೋಹಿತ್‌ ಶರ್ಮ ಪಾಲಿಗೆ “ಈಡನ್‌ ಗಾರ್ಡನ್ಸ್‌’ ಅದೃಷ್ಟದ ತಾಣ. ಏಕದಿನದಲ್ಲಿ ಸರ್ವಾಧಿಕ ಮೊತ್ತದ ವಿಶ್ವದಾಖಲೆ ನಿರ್ಮಿಸಿದ್ದು (264), ಮುಂಬೈ ಇಂಡಿಯನ್ಸ್‌ಗೆ 2 ಐಪಿಎಲ್‌ ಪ್ರಶಸ್ತಿಗಳನ್ನು ತಂದಿತ್ತದ್ದು (2013 ಮತ್ತು 2015) ಇದೇ ಅಂಗಳದಲ್ಲಿ. ಅವರ ಏಕದಿನ ಫಾರ್ಮ್ ಇಲ್ಲಿಯೂ ಮುಂದುವರಿದರೆ ಭಾರತಕ್ಕೆ ನಿಜಕ್ಕೂ ಬಂಪರ್‌.

ದಾಖಲೆಗಳೆಲ್ಲ ವಿಂಡೀಸ್‌ ಪರ
ಭಾರತ-ವೆಸ್ಟ್‌ ಇಂಡೀಸ್‌ ಈವರೆಗೆ ಆಡಿದ್ದು 8 ಟಿ20 ಮಾತ್ರ. ಇದರಲ್ಲಿ ಭಾರತ ಎರಡನ್ನಷ್ಟೇ ಗೆದ್ದು ಐದರಲ್ಲಿ ಸೋತಿದೆ. ಇದರಲ್ಲೊಂದು ದೊಡ್ಡ ಸೋಲು 2016ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಎದುರಾಗಿತ್ತು. ಭಾರತ ಕೊನೆಯ ಸಲ ಟಿ20ಯಲ್ಲಿ ವೆಸ್ಟ್‌ ಇಂಡೀಸನ್ನು ಸೋಲಿಸಿದ್ದು 2014ರ ಮಾರ್ಚ್‌ 23ರಂದು. ಅಂದು ಬಾಂಗ್ಲಾದೇಶದಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಈ ಗೆಲುವು ಒಲಿದಿತ್ತು.

ಆದರೆ ದಾಖಲೆ, ಇತಿಹಾಸಗಳಾÂವುವೂ ಟಿ20ಯಲ್ಲಿ ನೆರವಿಗೆ ಬರದು. ಯಾರನ್ನೂ ಫೇವರಿಟ್‌ ಎಂದು ಗುರುತಿಸಲಿಕ್ಕೂ ಆಗದು. ಇಲ್ಲಿ ಆಯಾ ದಿನದ, ಆಯಾ ಹೊತ್ತಿನ ನಿರ್ವಹಣೆಯಷ್ಟೇ ಮುಖ್ಯ. ಒಬ್ಬ ಆಟಗಾರ, ಒಂದು ಓವರ್‌, ಒಂದು ಜೋಡಿಯಿಂದ ಪಂದ್ಯದ ಗತಿಯೇ ಬದಲಾಗುವುದು ಈ ಇನ್‌ಸ್ಟಂಟ್‌ ಕ್ರಿಕೆಟಿನ ವೈಶಿಷ್ಟé.

ತಂಡಗಳು
ಭಾರತ:
ರೋಹಿತ್‌ ಶರ್ಮ (ನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ದಿನೇಶ್‌ ಕಾರ್ತಿಕ್‌, ಮನೀಷ್‌ ಪಾಂಡೆ, ಶ್ರೇಯಸ್‌ ಅಯ್ಯರ್‌, ರಿಷಬ್‌ ಪಂತ್‌, ಕೃಣಾಲ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಖಲೀಲ್‌ ಅಹ್ಮದ್‌, ಉಮೇಶ್‌ ಯಾದವ್‌, ಶಾಬಾಜ್‌ ನದೀಂ.

ವೆಸ್ಟ್‌ ಇಂಡೀಸ್‌: ಕಾರ್ಲೋಸ್‌ ಬ್ರಾತ್‌ವೇಟ್‌ (ನಾಯಕ), ಫ್ಯಾಬಿಯನ್‌ ಅಲೆನ್‌, ಡ್ಯಾರನ್‌ ಬ್ರಾವೊ, ಶಿಮ್ರನ್‌ ಹೆಟ್‌ಮೈರ್‌, ಕೀಮೊ ಪೌಲ್‌, ಕೈರನ್‌ ಪೊಲಾರ್ಡ್‌, ದಿನೇಶ್‌ ರಾಮದಿನ್‌, ಆ್ಯಂಡ್ರೆ ರಸೆಲ್‌, ಶಫೇìನ್‌ ರುದರ್‌ಫೋರ್ಡ್‌, ಒಶಾನೆ ಥಾಮಸ್‌, ಖಾರಿ ಪಿಯರೆ, ಒಬೆಡ್‌ ಮೆಕಾಯ್‌, ರೋವ್‌ಮನ್‌ ಪೊವೆಲ್‌, ನಿಕೋಲಸ್‌ ಪೂರಣ್‌.

ಆರಂಭ: ಸಂಜೆ 7.00
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next