ಬೆಂಗಳೂರು: ಕೆಳವರ್ಗದ ಹೆಣ್ಣುಮಕ್ಕಳ ಶೈಕ್ಷಣಿಕ ಅವಶ್ಯಕತೆಗಳಿಗಾಗಿ ಸಂಪನ್ಮೂಲ ಕ್ರೋಢೀಕರಿಸಲು ಟೈಟನ್ ಕಂಪೆನಿ ಲಿ. ಟಾಟಾ ಸಮೂಹದ ಸಹಯೋಗದಲ್ಲಿ ಆರಂಭಿಸಿರುವ “ಟೈಟನ್-ಇಸಿಎಚ್‌ಓ’ (ಎಜುಕೇಟ್ ಟು ಕ್ಯಾರಿ ಹರ್ ಆನ್‌ವರ್ಡ್ಸ್) ಅಭಿಯಾನದ ಭಾಗವಾಗಿ ಟೈಟನ್ ಕಂಪೆನಿಯ ಉದ್ಯಮ ಸಹವರ್ತಿ ಹಾಗೂ ಅಂತಾರಾಷ್ಟ್ರೀಯ ಸ್ಕೇಟರ್ ರಾಣಾ ಉಪ್ಪಲ್‌ಪಟಿ ಭಾನುವಾರ (ಸೆ.9) ಹುಬ್ಬಳ್ಳಿ ತಲುಪಲಿದ್ದಾರೆ.
ಸುಮಾರು 90 ದಿನಗಳ ಕಾಲ ನಡೆಯುವ ಈ ಅಭಿಯಾನ ರಾಜ್ಯದ ವಿವಿಧ ಕಡೆ ಸ್ಕೇಟಿಂಗ್ ಮೂಲಕ ಅಂದಾಜು 6 ಸಾವಿರ ಕಿ.ಮೀ. ಕ್ರಮಿಸಲಿದೆ. ಅಭಿಯಾನದ ಈ ಅವಧಿಯಲ್ಲಿ ಸುಮಾರು 25 ಸಾವಿರ ಕೆಳವರ್ಗದ ಹೆಣ್ಣು ಮಕ್ಕಳ ಶೈಕ್ಷಣಿಕ ಅಗತ್ಯತೆಗಳಿಗೆ ಸಂಪನ್ಮೂಲ ಕ್ರೋಢೀಕರಿಸುವುದರ ಜತೆಗೆ 6 ಲಕ್ಷ ಮಕ್ಕಳಲ್ಲಿ ಬಾಲಕಿಯರ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಗುವುದು. ವಿಶೇಷವಾಗಿ ಲೈಂಗಿಕ ಶೋಷಣೆ ಬಗ್ಗೆ ತಿಳಿವಳಿಕೆ ಮೂಡಿಸಲು “ಗುಡ್ ಟಚ್ ಆ್ಯಂಡ್ ಬ್ಯಾಡ್ ಟಚ್’ ಜಾಗೃತಿ ಹಮ್ಮಿಕೊಳ್ಳಲಾಗುವುದು.
ಹೊಸೂರಿನಲ್ಲಿರುವ ಟೈಟನ್ ವಾಚ್ ಕಾರ್ಖಾನೆಯಿಂದ ಸೆ.5ರಂದು ಆರಂಭವಾದ ಸ್ಕೇಟಿಂಗ್ ಅಭಿಯಾನ 4 ದಿನಗಳಲ್ಲಿ ತುಮಕೂರು, ಶಿರಾ, ಚಿತ್ರದುರ್ಗ ಮೂಲಕ ಸಾಗಿ ಬಂದಿದೆ. ಈ ಅಭಿಯಾನದಲ್ಲಿ ಕೆ.ಸಿ. ಮಹೀಂದ್ರಾ ಎಜುಕೇಷನಲ್ ಟ್ರಸ್ಟ್, ಮುಂಬೈ, ಐಐಎಂ ಪ್ಯಾಕ್ಟ್ ದೆಹಲಿ ಕೈ ಜೋಡಿಸಿದ್ದು, ಹಣ ಸಂಗ್ರಹಣೆ ಮತ್ತು ವಿತರಣೆಗೆ ಒತ್ತು ನೀಡಲಿವೆ. ಈ ಎರಡೂ ಕಂಪೆನಿಗಳು ಈಗಾಗಲೇ ಟೈಟನ್ ಜತೆಗೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಕೈಜೋಡಿಸಿವೆ. ಟೈಟನ್ ಜತೆ ಸೇರಿ ಸಿಐಐ-ಯಂಗ್ ಇಂಡಿಯನ್ಸ್ ಮತ್ತು ಅವರ “ಪ್ರಾಜೆಕ್ಟ್ ಮಾಸೂಮ್’ ಮೂಲಕ ಮಕ್ಕಳ ಸುರಕ್ಷತೆಗಾಗಿ 6 ಸಾವಿರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.
ರಾಣಾ ಅವರ ಸ್ಕೇಟಿಂಗ್ ಪ್ರಯಾಣದ ಉಸ್ತುವಾರಿಯನ್ನು “ಯೂ ಟೂ ಕ್ಯಾನ್ ರನ್’ ನಿರ್ವಹಿಸಲಿದೆ. ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಟೈಟನ್ ಕಂಪೆನಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್, ಇದು ಟೈಟನ್ ಆಯ್ಕೆ ಮಾಡಿಕೊಂಡಿರುವ ಅತ್ಯುತ್ತಮ ಪ್ರಯಾಣ. ಉತ್ತಮ ಬದಲಾವಣೆ ತರುವ ಉದ್ದೇಶ ಇದು ಹೊಂದಿದೆ.
ಟಾಟಾ ಸಮೂಹದ 150ನೇ ವಾರ್ಷಿಕೋತ್ಸವದ ಭಾಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಂಸ್ಥೆಯ ಕಾರ್ಪೋರೇಟ್ ವಿಭಾಗದ ಮುಖ್ಯಸ್ಥ ಎನ್.ಇ. ಶ್ರೀಧರ್ ಮಾತನಾಡಿ, ರಾಣಾ ಅವರು ಈ ಪ್ರಯಾಣ ಯಶಸ್ವಿಯಾಗಿ ಪೂರೈಸಲಿ ಎಂದು ಹಾರೈಸಿದರು. ಇದೇ ವೇಳೆ ತಮ್ಮ ಅನುಭವಗಳನ್ನು ಹಂಚಿಕೊಂಡ ರಾಣಾ ಉಪ್ಪಲ್‌ಪಟಿ, ಟೈಟನ್ ಜತೆಗೆ ಒಂದು ಒಳ್ಳೆಯ ಕಾರ್ಯದಲ್ಲಿ ಕೈಜೋಡಿಸಲು ಹೆಮ್ಮೆ ಅನಿಸುತ್ತಿದೆ ಎಂದರು.