Advertisement

ಇಂದು, ನಾಳೆ ಪ್ರೊ ಕಬಡ್ಡಿ ಆಟಗಾರರ ಹರಾಜು

09:31 PM Apr 07, 2019 | Sriram |

ಮುಂಬೈ: 7ನೇ ಆವೃತ್ತಿ ಪ್ರೊ ಕಬಡ್ಡಿ ಕೂಟಕ್ಕಾಗಿ ಹರಾಜು ಪ್ರಕ್ರಿಯೆ, ಸೋಮವಾರ ಮತ್ತು ಮಂಗಳವಾರ ಮುಂಬೈನಲ್ಲಿ ನಡೆಯಲಿದೆ.

Advertisement

ಐಪಿಎಲ್‌ ಹೊರತುಪಡಿಸಿದರೆ, ಭಾರತದ ಇನ್ನೊಂದು ಶ್ರೀಮಂತ ಕ್ರೀಡಾಕೂಟ ಎನ್ನುವ ಹೆಗ್ಗಳಿಕೆ ಪಡೆದುಕೊಳ್ಳುವತ್ತ ಧಾವಿಸುತ್ತಿರುವ ಪ್ರೊ ಕಬಡ್ಡಿ, ಈ ಬಾರಿ ಯಾವ ಅಚ್ಚರಿಗಳನ್ನು ದಾಖಲಿಸಲಿದೆ ಎನ್ನುವುದನ್ನು ಕಾದು ನೋಡಬೇಕು. ಈ ಬಾರಿ ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಬಹುದಾ, ಅನಿರೀಕ್ಷಿತ ಮಾರಾಟಗಳ ಪ್ರಮಾಣ ಎಷ್ಟಿರಬಹುದು ಎಂಬುದೆಲ್ಲ ಸದ್ಯದ ಕುತೂಹಲ.

ಪ್ರತಿ ಆವೃತ್ತಿಯಿಂದ ಆವೃತ್ತಿಗೆ ಪ್ರೊ ಕಬಡ್ಡಿ ಹರಾಜು ಮೊತ್ತದಲ್ಲಿ, ಆಟಗಾರರು ಪಡೆಯುವ ಹಣದಲ್ಲಿ ಭಾರೀ ಏರಿಕೆಯಾಗುತ್ತಿದೆ. 2018ರ ಹರಾಜಿನಲ್ಲಿ ಮೋನು ಗೋಯತ್‌ 1.51 ಕೋಟಿ ರೂ.ಗೆ ಹರ್ಯಾಣ ಸ್ಟೀಲರ್ಸ್‌ ತಂಡಕ್ಕೆ ಮಾರಾಟವಾಗಿದ್ದರು. ಇದು ಪ್ರೊ ಕಬಡ್ಡಿ ಇತಿಹಾಸದಲ್ಲೇ ಗರಿಷ್ಠ ಮೊತ್ತ. 2ನೇ ಗರಿಷ್ಠ ಮೊತ್ತ 1.29 ಕೋಟಿ ರೂ.ಗೆ ತೆಲುಗು ಟೈಟಾನ್ಸ್‌ ತಂಡದ ರಾಹುಲ್‌ ಚೌಧರಿ ಮಾರಾಟವಾದರು. ಈ ಬಾರಿ ಈ ಮೊತ್ತ ಇನ್ನೂ ಏರಬಹುದಾದ ಎಲ್ಲ ಸಾಧ್ಯತೆಗಳಿವೆ.

442 ಮಂದಿ ಹರಾಜಿನಲ್ಲಿ: ಬೆಂಗಳೂರು ಬುಲ್ಸ್‌ ತಂಡದ ಮಾಜಿ ಆಟಗಾರ ಕಾಶಿಲಿಂಗ್‌ ಅಡಕೆಯೂ ಸೇರಿ ಒಟ್ಟು 442 ಮಂದಿ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಈ ಪೈಕಿ 53 ಮಂದಿ ವಿದೇಶಿ ಆಟಗಾರರು, ಇನ್ನುಳಿದ 389 ಮಂದಿ ಸ್ವದೇಶಿ ಆಟಗಾರರು. ಎರಡು ದಿನಗಳ ಕಾಲ ಹರಾಜು ನಡೆಯಲಿದೆ.

ಆಟಗಾರರ ಉಳಿಕೆ ಹೇಗೆ?: ಒಂದು ತಂಡದ ಒಟ್ಟು ಗಾತ್ರ ಗರಿಷ್ಠ 25, ಕನಿಷ್ಠ 18 ಆಟಗಾರರು. ತಂಡವೊಂದಕ್ಕೆ ಗರಿಷ್ಠ 6 ಆಟಗಾರರನ್ನು ಹರಾಜಿಗೆ ಬಿಡದೇ ಉಳಿಸಿಕೊಳ್ಳುವ ಅವಕಾಶವನ್ನು ಈ ಬಾರಿ ನೀಡಲಾಗಿದೆ. ಅಂದರೆ ಹಿಂದಿನ ಬಾರಿಗಿಂತ ಎರಡು ಅವಕಾಶ ಹೆಚ್ಚಾಗಿದೆ. ಒಂದು ವೇಳೆ ಒಂದು ತಂಡ ಎಲ್ಲ ಆರು ಆಟಗಾರರನ್ನು ಉಳಿಸಿಕೊಂಡರೆ, ಹರಾಜಿನ ವೇಳೆ ಅದಕ್ಕೆ ಫೈನಲ್‌ ಬಿಡ್‌ ಮ್ಯಾಚ್‌ ಎಂಬ ಅವಕಾಶವಿರುವುದಿಲ್ಲ.

Advertisement

ಇದು ಹೇಗೆ?: ಹರಾಜಿನ ವೇಳೆ ಒಂದು ಫ್ರಾಂಚೈಸಿ ಹಣ ನೀಡಿ, ಆಟಗಾರನೊಬ್ಬನನ್ನು ಖರೀದಿಸಿರುತ್ತದೆ. ಒಂದು ವೇಳೆ ಆ ಆಟಗಾರನ ಹಿಂದಿನ ಫ್ರಾಂಚೈಸಿಗೆ ಆ ಆಟಗಾರ ತನಗೇ ಬೇಕು ಎನಿಸಿದರೆ, ಎಫ್ಬಿಎಂ ಅವಕಾಶ ಬಳಸಬಹುದು. ಆಗದು ಹರಾಜಿನಲ್ಲಿ ಆಟಗಾರ ಪಡೆದ ಮೊತ್ತವನ್ನು ತಾನೇ ನೀಡಬೇಕಾಗುತ್ತದೆ. ಹರಾಜಿಗೂ ಮುನ್ನ ತಂಡ 5 ಆಟಗಾರರನ್ನು ಉಳಿಸಿಕೊಂಡಿದ್ದರೆ, ಹರಾಜಿನಲ್ಲಿ ಎಫ್ಬಿಎಂ ಮೂಲಕ ಇನ್ನೊಬ್ಬನನ್ನು ಗಳಿಸಲು ಸಾಧ್ಯವಿದೆ. 4 ಅಥವಾ ಅದಕ್ಕಿಂತ ಕಡಿಮೆ ಆಟಗಾರರನ್ನು ಉಳಿಸಿಕೊಂಡಿದ್ದರೆ, ಹರಾಜಿನಲ್ಲಿ ಎಫ್ಬಿಎಂ ಮೂಲಕ ಇನ್ನಿಬ್ಬರನ್ನು ಕೊಳ್ಳಲು ಸಾಧ್ಯವಿದೆ. ಗರಿಷ್ಠ ಆರೂ ಆಟಗಾರರನ್ನು ಉಳಿಸಿಕೊಂಡಿದ್ದರೆ ಅದಕ್ಕೆ ಎಫ್ಬಿಎಂ ಆಯ್ಕೆಯಿಲ್ಲ.

ಪ್ರತೀ ಫ್ರಾಂಚೈಸಿಯ ಬಳಿ 4.4 ಕೋಟಿ ರೂ: ಈ ಬಾರಿ ಪ್ರತೀ ಫ್ರಾಂಚೈಸಿಗೆ 4.4 ಕೋಟಿ ರೂ.ವನ್ನು ವೇತನಕ್ಕೆ ಖರ್ಚು ಮಾಡಲು ಅನುಮತಿಯಿದೆ. ಇಲ್ಲಿ ಫ್ರಾಂಚೈಸಿ ಎಷ್ಟು ಆಟಗಾರರನ್ನು ಉಳಿಸಿಕೊಂಡಿದೆಯೋ, ಅವರಿಗೆ ನೀಡಬೇಕಾದ ವೇತನವನ್ನು ಕಳೆದು; ಉಳಿದ ಹಣವನ್ನು ಹರಾಜಿನಲ್ಲಿ ಬಳಸಿಕೊಳ್ಳಬಹುದು.

12 ತಂಡ: ಒಟ್ಟು 12 ತಂಡಗಳು ಪ್ರೊ ಕಬಡ್ಡಿಯಲ್ಲಿ ಸೆಣಸಲಿವೆ. ಅದಕ್ಕೆ ತಕ್ಕಂತೆ ಅಷ್ಟೂ ತಂಡಗಳು ಹರಾಜಿನಲ್ಲಿ ಪಾಲ್ಗೊಳ್ಳಲಿವೆ. ಬೆಂಗಳೂರು ಬುಲ್ಸ್‌, ಬೆಂಗಾಲ್‌ ವಾರಿಯರ್ಸ್‌, ತೆಲುಗು ಟೈಟಾನ್ಸ್‌, ಹರ್ಯಾಣ ಸ್ಟೀಲರ್ಸ್‌, ದಬಾಂಗ್‌ ಡೆಲ್ಲಿ, ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌, ಜೈಪುರ ಪಿಂಕ್‌ ಪ್ಯಾಂಥರ್ಸ್‌, ಪಾಟ್ನಾ ಪೈರೇಟ್ಸ್‌, ಪುನೇರಿ ಪಲ್ಟಾನ್‌, ತಮಿಳ್‌ ತಲೈವಾಸ್‌, ಯು ಮುಂಬಾ, ಯುಪಿ ಯೋಧಾಸ್‌ ಹರಾಜಿನಲ್ಲಿ ಜಿದ್ದಾಜಿದ್ದಿ ನಡೆಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next