ಕುಂದಾಪುರ: ನಾಲ್ಕು ಬಾರಿ ವಿಧಾನಸಭೆ ಸದಸ್ಯರಾಗಿ, ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ 36 ವರ್ಷಗಳ ಸುದೀರ್ಘ ಶಾಸಕತ್ವ ಅವಧಿ ಹೊಂದಿದ್ದ ಕೆ. ಪ್ರತಾಪಚಂದ್ರ ಶೆಟ್ಟಿ ಅವರ ಶಾಸಕತ್ವ ಜ. 5ರಂದು ಕೊನೆಯಾಗಲಿದೆ.
ಪ್ರಸ್ತುತ ಚುನಾವಣಾ ರಾಜಕೀಯದಿಂದ ದೂರ ಇರುವ ಅವರು ಎಐಸಿಸಿ ಸದಸ್ಯರಾಗಿದ್ದುಕೊಂಡು ಪಕ್ಷ ಹಾಗೂ ರೈತ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳಲಿದ್ದಾರೆ.
1983, 1985, 1989, 1994ರಲ್ಲಿ ವಿಧಾನಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. 2004,2010, 1016ರಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. 2018ರಿಂದ ವಿಧಾನಪರಿಷತ್ ಸಭಾಪತಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ:ದೇಶದಲ್ಲಿ ಹೆಚ್ಚಲಿದೆ ಆನ್‌ಲೈನ್ ಖರೀದಿ : 2025ರ ವೇಳೆಗೆ ಶೇ.17ಕ್ಕೆ ಏರಿಕೆ ಸಾಧ್ಯತೆ
ಕುಂದಾಪುರ ತಾಲೂಕಿನ ಹೈಕಾಡಿ ನಿವಾಸಿ ಪ್ರತಾಪಚಂದ್ರ ಶೆಟ್ಟರು ಕೊಳ್ಕೆಬೈಲಿನಲ್ಲಿ 1950ರ ಸೆ. 4ರಂದು ಜನಿಸಿದರು. ಬಿಎ ಪದವಿ ಬಳಿಕ ವಿಜಯ ಬ್ಯಾಂಕ್ ಉದ್ಯೋಗಿಯಾಗಿದ್ದರು. ತಂದೆಯ ನಿಧನದ ಬಳಿಕ ಬ್ಯಾಂಕ್ ಉದ್ಯೋಗ ತೊರೆದು ಕೃಷಿಯಲ್ಲಿ ನಿರತರಾದರು. ಬಳಿಕ ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಅಂದಿನ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಲ್ಲದೆ ಎಐಸಿಸಿ ಸದಸ್ಯರಾಗಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದವರು. ಶೆಟ್ಟರು ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಮೊದಲ ಸ್ಪೀಕರ್, ಅವಿಭಜಿತ ದ.ಕ. ಜಿಲ್ಲೆಯ ಎರಡನೇ ಸ್ಪೀಕರ್ ಎನಿಸಿದ್ದರು.