Advertisement

ಏಕದಿನದಲ್ಲೂ ಭಾರತ ಏಕಚಕ್ರಾಧಿಪತ್ಯ?

12:30 AM Jan 12, 2019 | |

ಸಿಡ್ನಿ: ಕಾಂಗರೂ ನಾಡಿನಲ್ಲಿ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ನಿರ್ಮಿಸಿ ತನ್ನ ಆತ್ಮವಿಶ್ವಾಸವನ್ನು ಬಹಳ ಎತ್ತರಕ್ಕೆ ಏರಿಸಿಕೊಂಡಿರುವ ಭಾರತ, ಶನಿವಾರದಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಇದೇ ಮಟ್ಟವನ್ನು ಕಾಯ್ದುಕೊಳ್ಳುವ ಗುರಿಯೊಂದಿಗೆ ಹೋರಾಟ ಆರಂಭಿಸಲಿದೆ. ಜತೆಗೆ ವಿಶ್ವಕಪ್‌ ಅಭ್ಯಾಸದ ಹಿನ್ನೆಲೆಯಲ್ಲೂ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಆದರೆ ಭಾರತಕ್ಕೆ 3ನೇ ಟೆಸ್ಟ್‌ ಗೆಲುವನ್ನು ನಿರಾಕರಿಸಿದ ಮಳೆರಾಯ ಸಿಡ್ನಿಯಲ್ಲೇ ಠಿಕಾಣಿ ಹೂಡಿರುವುದರಿಂದ ಸರಣಿ ಆರಂಭಕ್ಕೆ ವಿಘ್ನ ಎದುರಾಗುವ ಸಾಧ್ಯತೆಯೊಂದು ಗೋಚರಿಸುತ್ತಿದೆ.

Advertisement

ಟೆಸ್ಟ್‌ ಪಂದ್ಯಗಳಂತೆ ಆಸ್ಟ್ರೇಲಿಯದಲ್ಲಿ ಭಾರತದ ಏಕದಿನ ದಾಖಲೆಗಳೂ ಕಳಪೆ. ಕಾಂಗರೂ ತಂಡದೆದುರು ಆಡಿರುವ 48 ಏಕದಿನಗಳಲ್ಲಿ ಭಾರತಕ್ಕೆ 35ರಲ್ಲಿ ಸೋಲೇ ಸಂಗಾತಿಯಾಗಿದೆ. ಆದರೆ ಟೆಸ್ಟ್‌ ಸರಣಿಯಂತೆ ಏಕದಿನ ದಾಖಲೆಯನ್ನೂ ತಿದ್ದಿ ಬರೆಯುವ ಅವಕಾಶವೊಂದು ಭಾರತ ತಂಡದ ಮುಂದಿದೆ.

ಭಾರತವೇ ಹೆಚ್ಚು ಬಲಿಷ್ಠ
ಎರಡೂ ತಂಡಗಳ ಬಲಾಬಲ ಗಮನಿಸಿದಾಗ ಭಾರತವೇ ಹೆಚ್ಚು ಸಶಕ್ತವಾಗಿ ಗೋಚರಿಸುತ್ತಿದೆ. ಟಿವಿ ಶೋ ಒಂದರಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಹಾರ್ದಿಕ್‌ ಪಾಂಡ್ಯ ಮತ್ತು ಕೆ.ಎಲ್‌. ರಾಹುಲ್‌ ಅವರನ್ನು ಈ ಪಂದ್ಯದಿಂದ ಹೊರಗಿಡಲಾಗಿದೆ. ಇದರಿಂದ ನಷ್ಟವೇನೂ ಇಲ್ಲ. ರೋಹಿತ್‌ ಶರ್ಮ-ಶಿಖರ್‌ ಧವನ್‌ ಇನಿಂಗ್ಸ್‌ ಆರಂಭಿಸಲು ಸಿದ್ಧರಾಗಿದ್ದಾರೆ. ಹಾರ್ದಿಕ್‌ ಪಾಂಡ್ಯ ಅವರ ಆಲ್‌ರೌಂಡ್‌ ಸ್ಥಾನ ತುಂಬಲು ರವೀಂದ್ರ ಜಡೇಜ ಇದ್ದಾರೆ. ಜಸಿøàತ್‌ ಬುಮ್ರಾಗೆ ವಿಶ್ರಾಂತಿ ನೀಡಿರುವುದರಿಂದ ಬೌಲಿಂಗ್‌ನಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆಯಾದೀತು. ಆದರೆ ಭುವನೇಶ್ವರ್‌ ಕುಮಾರ್‌ ಈ ಕೊರತೆಯನ್ನು ನೀಗಿಸುವ ವಿಶ್ವಾಸವಿದೆ.

ತ್ರಿವಳಿ ವೇಗ ಹಾಗೂ ಅವಳಿ ಸ್ಪಿನ್‌ ದಾಳಿ ಭಾರತದ ಬೌಲಿಂಗ್‌ ಯೋಜನೆಯಾಗಿ ಕಾಣುತ್ತದೆ. ಆಗ ಭುವಿಗೆ ಮೊಹಮ್ಮದ್‌ ಶಮಿ, ಖಲೀಲ್‌ ಅಹ್ಮದ್‌ ಸಾಥ್‌ ನೀಡಲಿದ್ದಾರೆ. ಚೈನಾಮನ್‌ ಕುಲದೀಪ್‌ ಯಾದವ್‌ 2ನೇ ಸ್ಪಿನ್ನರ್‌ ಆಗಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಕೇದಾರ್‌ ಜಾಧವ್‌ ಅರೆಕಾಲಿಕ ಸ್ಪಿನ್ನರ್‌ ಆಗಿ ನೆರವಿಗೆ ನಿಲ್ಲಬಲ್ಲರು.

ಕ್ಲಿಕ್‌ ಆಗಬಲ್ಲರೇ ಧೋನಿ?:
ಬ್ಯಾಟಿಂಗ್‌ ವಿಭಾಗದಲ್ಲಿ ನಾಯಕ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬರಲಿದ್ದಾರೆ. ಅಂಬಾಟಿ ರಾಯುಡು, ಧೋನಿ ಮತ್ತು ಜಾಧವ್‌ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಬೇಕಿದೆ. ಇವರಲ್ಲಿ ಧೋನಿ ಫಾರ್ಮ್ ಬಗ್ಗೆ ನಂಬಿಕೆ ಸಾಲದು. 2018ರ 20 ಏಕದಿನ ಪಂದ್ಯಗಳಲ್ಲಿ ಒಂದೂ ಅರ್ಧ ಶತಕ ಹೊಡೆಯದ ಧೋನಿ ಕೇವಲ 275 ರನ್‌ ಹೊಡೆದಿದ್ದಾರೆ. ವಿಶ್ವಕಪ್‌ ತನಕ ತಂಡದಲ್ಲಿ ಮುಂದುವರಿಯಬೇಕಾದರೆ ಧೋನಿ ಈ ಸರಣಿಯಲ್ಲಿ ಬ್ಯಾಟಿಂಗ್‌ ಲಯಕ್ಕೆ ಮರಳುವುದು ಅತ್ಯಗತ್ಯ. ಟೆಸ್ಟ್‌ ಸರಣಿಯಲ್ಲಿ ಬ್ಯಾಟಿಂಗ್‌ ಹಾಗೂ ಕೀಪಿಂಗ್‌ಗಳೆರಡರಲ್ಲೂ ಮಿಂಚಿದ ರಿಷಭ್‌ ಪಂತ್‌ ಅವರನ್ನು ಕೈಬಿಟ್ಟು ದಿನೇಶ್‌ ಕಾರ್ತಿಕ್‌ಗೆ ಮಣೆ ಹಾಕಿದ್ದು ಅಚ್ಚರಿಯಾಗಿ ಕಾಣುತ್ತದೆ.

Advertisement

ಕಾಂಗರೂ ಸಾಮಾನ್ಯ ತಂಡ: ಆಸ್ಟ್ರೇಲಿಯಕ್ಕೆ ವಾರ್ನರ್‌, ಸ್ಮಿತ್‌ ಗೈರು ಇಲ್ಲಿಯೂ ದುಬಾರಿಯಾಗಿ ಗೋಚರಿಸುವುದರಲ್ಲಿ ಅನುಮಾನವಿಲ್ಲ. ಟೆಸ್ಟ್‌ ಸರಣಿಯಲ್ಲಿ ರನ್‌ ಬರಗಾಲ ಅನುಭವಿಸಿದ ನಾಯಕ ಫಿಂಚ್‌, ಖವಾಜ, ಶಾನ್‌ ಮಾರ್ಷ್‌, ಹ್ಯಾಂಡ್ಸ್‌ಕಾಂಬ್‌ ಮೇಲೆ ನಂಬಿಕೆ ಇಡಲು ಧೈರ್ಯ ಸಾಲದು. ಕೀಪರ್‌ ಆಗಿರುವ ಕ್ಯಾರಿ ಆರಂಭಿಕನ ಜವಾಬ್ದಾರಿಯನ್ನೂ ಹೊರಬೇಕಿದೆ. ಕೆಳ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬರುವ ಮ್ಯಾಕ್ಸ್‌ವೆಲ್‌, ಸ್ಟಾಯಿನಿಸ್‌ ಕ್ಲಿಕ್‌ ಆದರಷ್ಟೇ ಕಾಂಗರೂ ಪಡೆಯಿಂದ ದೊಡ್ಡ ಮೊತ್ತ ನಿರೀಕ್ಷಿಸಬಹುದು.

ತ್ರಿವಳಿ ವೇಗಿಗಳಾದ ಸ್ಟಾರ್ಕ್‌, ಕಮಿನ್ಸ್‌ ಮತ್ತು  ಹೇಜಲ್‌ವುಡ್‌ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅಲ್ಲಿಗೆ ಬೌಲಿಂಗ್‌ ವಿಭಾಗ ಕೂಡ ದುರ್ಬಲಗೊಂಡಂತಾಗಿದೆ. ಈಗಾಗಲೇ ಪ್ರಕಟಿಸಲಾಗಿರುವ ಆಡುವ ಬಳಗದಲ್ಲಿ ಲಿಯೋನ್‌ ಒಬ್ಬರೇ ತಜ್ಞ ಸ್ಪಿನ್ನರ್‌ ಆಗಿದ್ದಾರೆ. ವೇಗಿ ಸಿಡ್ಲ್ 2010ರ ಬಳಿಕ ತಂಡದಲ್ಲಿ ಕಾಣಿಸಿಕೊಂಡಿರುವುದೊಂದು ಅಚ್ಚರಿ. ಎಡಗೈ ವೇಗದ ಬೌಲರ್‌ ಬೆಹೆÅಂಡಾಫ್ì ಇನ್ನಷ್ಟೇ ಏಕದಿನಕ್ಕೆ ಪದಾರ್ಪಣೆ ಮಾಡಬೇಕಿದೆ. ಭಾರತದೆದುರಿನ ಹಿಂದಿನ ಮೇಲುಗೈ ದಾಖಲೆಗಳಷ್ಟೇ ಆಸ್ಟ್ರೇಲಿಯ ಪಾಲಿಗೆ ಶ್ರೀರಕ್ಷೆಯಾಗಬೇಕಿದೆ.

ತಂಡಗಳು
ಭಾರತ (ಸಂಭಾವ್ಯ ಪಡೆ):
ರೋಹಿತ್‌ ಶರ್ಮ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಅಂಬಾಟಿ ರಾಯುಡು, ಮಹೇಂದ್ರ ಸಿಂಗ್‌ ಧೋನಿ, ಕೇದಾರ್‌ ಜಾಧವ್‌, ರವೀಂದ್ರ ಜಡೇಜ, ಭುವನೇಶ್ವರ್‌ ಕುಮಾರ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಖಲೀಲ್‌ ಅಹ್ಮದ್‌, ಮೊಹಮ್ಮದ್‌ ಶಮಿ.

ಆಸ್ಟ್ರೇಲಿಯ (ಆಡುವ ಬಳಗ): ಏರಾನ್‌ ಫಿಂಚ್‌ (ನಾಯಕ), ಅಲೆಕ್ಸ್‌ ಕ್ಯಾರಿ, ಉಸ್ಮಾನ್‌ ಖವಾಜ, ಶಾನ್‌ ಮಾರ್ಷ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಮಾರ್ಕಸ್‌ ಸ್ಟಾಯಿನಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಪೀಟರ್‌ ಸಿಡ್ಲ್, ಜೇ ರಿಚಡ್ಸìನ್‌, ನಥನ್‌ ಲಿಯೋನ್‌, ಜೇಸನ್‌ ಬೆಹೆÅಂಡಾಫ್ì.
* ಆರಂಭ: ಬೆಳಗ್ಗೆ 7.50
* ಪ್ರಸಾರ: ಸೋನಿ ಸಿಕ್ಸ್‌

Advertisement

Udayavani is now on Telegram. Click here to join our channel and stay updated with the latest news.

Next