Advertisement

ಇಂದು ಮೂಡಬಿದಿರೆ ಕೋಟಿ ಚೆನ್ನಯ ಕಂಬಳ 

09:50 AM Nov 11, 2017 | |

ಮೂಡಬಿದಿರೆ: ಹಲವು ಅಡ್ಡಿ ಆತಂಕ, ಹೋರಾಟಗಳ ನಡುವೆ ಹೊಯ್ದಾಡಿದ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳ ಸುಮಾರು 1 ವರ್ಷ 8 ತಿಂಗಳ ಬಳಿಕ ಮತ್ತೆ ನಿಶಾನಿಗೆ ನೀರು ಹಾಯಿಸಲು ಅವಕಾಶ ಲಭಿಸಿದೆ. ಮೂಡಬಿದಿರೆಯ ಕಡಲಕೆರೆ ನಿಸರ್ಗ ಧಾಮದಲ್ಲಿ ಶನಿವಾರ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳ ನಡೆಯಲು ಸರ್ವ ಸಿದ್ಧತೆ ನಡೆದಿದೆ.

Advertisement

ನಾಗಭೂಷಣ ಕಾಮತ್‌ವೇದಿಕೆ
ಕೋಟಿ ಚೆನ್ನಯ ಕಂಬಳದೊಂದಿಗೆ ಅಭಿಮಾನಿ ಸ್ವಯಂಸೇವಕನಾಗಿ ಗುರುತಿಸಿಕೊಂಡು, ಓದುತ್ತಿರುವಾಗಲೂ ಉದ್ಯೋಗ ದೊರೆತ ಬಳಿಕವೂ ಬಿಡದೆ ಕಂಬಳಕ್ಕೆ ಬಂದು ತನ್ನ ಸೇವೆಯಿಂದ ಗಮನ ಸೆಳೆದಿದ್ದ ನಾಗಭೂಷಣ ಕಾಮತ್‌ ಇತ್ತೀಚೆಗೆ ನಿಧನ ಹೊಂದಿದ್ದು, ಈ ಬಾರಿ ವೇದಿಕೆಗೆಅವರ ಹೆಸರಿಡಲಾಗಿದೆ.

ಜೋಡುಕರೆಗಳನ್ನು ಉತ್ತು, ಹದಮಾಡಿ, ಹೊಗೆ ಎರಚುವ ಕಾರ್ಯ ನಡೆದಿದೆ. ಆವರಣವೆಲ್ಲ ಸುಣ್ಣ ಬಣ್ಣ ಹೊಡೆಸಿಕೊಂಡಿದೆ. ಕ್ರೀಡಾ ಇಲಾಖೆಯಿಂದ ನಿರ್ಮಿಸಲಾದ ಮುಖ ಮಂಟಪಗಳು, ತೀರ್ಪುಗಾರರ ಗ್ಯಾಲರಿ, ಮಹಿಳೆಯರ ಗ್ಯಾಲರಿ, ಇತರ ವೀಕ್ಷಣಾ ಗ್ಯಾಲರಿ ವ್ಯವಸ್ಥೆ ಆಗಿದೆ. ಹತ್ತಿರದಲ್ಲೇ ಇರುವ ಅಯ್ಯಪ್ಪ ಗುಡಿಯ ಪಕ್ಕ ಅಲ್ಲಿನ ಅಭಿಮಾನಿಗಳು ಕೆರೆಕಾಡು ಮಕ್ಕಳ ಮೇಳದ ಬಯಲಾಟ ಈ ಬಾರಿಯೂ ನಡೆಯಲಿದೆ.

ಜಾನಪದ ಕ್ರೀಡಾ ಉತ್ಸವ
ಮೂಡಬಿದಿರೆ ಕಂಬಳವೆಂದರೆ ಅದು ಸರ್ವಧರ್ಮೀಯರು ಸೇರುವ ಜಾತ್ರೆ. ಜಾನಪದ ಕ್ರೀಡಾ ಉತ್ಸವ. ಶನಿವಾರ ಮುಂಜಾನೆ ಆರಂಭವಾಗುವ ಈ ಕಂಬಳದಲ್ಲಿ ನೇಗಿಲು ಕಿರಿಯ ವಿಭಾಗದ ಕೋಣಗಳು ಬೆಳಗ್ಗೆ ಗಂ. 8.30ಕ್ಕೆ , ಹಗ್ಗ ಕಿರಿಯ ವಿಭಾಗದ ಕೋಣಗಳು 11 ಗಂಟೆಗೆ, ನೇಗಿಲು ಹಿರಿಯ ವಿಭಾಗದ ಕೋಣಗಳು ಮಧ್ಯಾಹ್ನ 12.30ಕ್ಕೆ, ಹಗ್ಗ ಹಿರಿಯ ವಿಭಾಗದ ಕೋಣಗಳು ಅಪರಾಹ್ನ 2.30 ಹಾಗೂ ಕನೆಹಲಗೆ ಮತ್ತು ಅಡ್ಡ ಹಲಗೆಯ ಕೋಣಗಳು ಅಪರಾಹ್ನ ಗಂ. 4ಕ್ಕೆ ಇಳಿಯಲಿವೆ.

ಹಿಂಸೆಗೆ ಎಲ್ಲೂ ಅವಕಾಶವಿಲ್ಲದೆ, ಜಿಲ್ಲಾ ಕಂಬಳ ಸಮಿತಿ 2017-18ನೇ ಸಾಲಿನಲ್ಲಿ ಕೈಗೊಂಡಿರುವ ಮಾರ್ಗದರ್ಶಿ ಸೂಚನೆಗಳ ಪ್ರಕಾರ ಕಂಬಳ ನಡೆಯಲಿದೆ. ಶುಕ್ರವಾರ ಸಂಜೆ ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಎಸ್‌. ಕೋಟ್ಯಾನ್‌, ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಪ್ರ. ಕಾರ್ಯದರ್ಶಿ ವಿಜಯಕುಮಾರ್‌ ಕಂಗಿನಮನೆ, ಮೂಡಬಿದಿರೆ ಕಂಬಳ ಸಮಿತಿ ಅಧ್ಯಕ್ಷ ಶಾಸಕ ಕೆ. ಅಭಯಚಂದ್ರ ಸಹಿತ ಜಿಲ್ಲೆಯ ಸರ್ವ ಕಂಬಳ ಸಮಿತಿಗಳ, ವ್ಯವಸ್ಥಾಪಕರ ತುರ್ತು ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಯಿತು.

Advertisement

ಬಹುಮಾನಗಳು
ಕನೆಹಲಗೆಯಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ ಹಗ್ಗ, ನೇಗಿಲು ಹಿರಿಯ ವಿಭಾಗದ ಕೋಣಗಳಿಗೆ
ಕ್ರಮವಾಗಿ ಪ್ರಥಮ 2 ಪವನ್‌, ದ್ವಿತೀಯ 1 ಪವನ್‌ ಚಿನ್ನ, ಅಡ್ಡ ಹಲಗೆ, ಹಗ್ಗ, ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ 1 ಪವನ್‌, ದ್ವಿತೀಯ ಅರ್ಧ ಪವನ್‌ ಬಹುಮಾನಗಳಿವೆ. ಇದಲ್ಲದೆ, ವಿಶೇಷವಾಗಿ, ವಿಜೇತ ಕೋಣಗಳನ್ನು ಓಡಿಸಿದವರಿಗೆ ಕಾಲು ಪವನ್‌ ಚಿನ್ನ ಹಾಗೂ ಸಹಾಯಕ ತಂಡದವರಿಗೆ ರೂ. 1,000 ನಗದು ಬಹುಮಾನ ನೀಡಿ ಗೌರವಿಸುವ ಕ್ರಮ ಕೋಟಿ ಚೆನ್ನಯ ಕಂಬಳದಲ್ಲಿ ಮಾತ್ರ ರೂಢಿಯಲ್ಲಿದೆ.

ಕೇಂದ್ರ-ರಾಜ್ಯ ಸಚಿವರು, ಸಂಸದರು, ಶಾಸಕರು, ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಪುರಸಭೆ, ಗ್ರಾಮ ಪಂಚಾಯತ್‌ ಸದಸ್ಯರು, ಉದ್ಯಮಿಗಳು, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ವಕ್ತಾರರು, ದಾನಿಗಳು ಅಲ್ಲದೆ ವಿಶೇಷ ಆಹ್ವಾನಿತರಾಗಿ ತುಳು ನಾಟಕ-ಚಲನಚಿತ್ರ ಕಲಾವಿದರೂ ಕಂಬಳ ಉಳಿಸುವ ಹೋರಾಟದಲ್ಲಿ ಜತೆಗೂಡಿದವರೂ ಆಗಿರುವ ದೇವದಾಸ್‌ ಕಾಪಿಕಾಡ್‌, ವಿಜಯಕುಮಾರ್‌ ಕೊಡಿಯಾಲ್‌ಬೈಲ್‌, ನವೀನ್‌ ಡಿ. ಪಡೀಲ್‌, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್‌, ಅರ್ಜುನ್‌ ಕಾಪಿಕಾಡ್‌ ಇವರೇ ಮೊದಲಾದವರೂ ಈ ಕಂಬಳಕ್ಕೆ ವಿಶೇಷವಾಗಿ ಆಹ್ವಾನಿತರಾಗಿದ್ದಾರೆ.

ಸಿದ್ಧತೆ ಪೂರ್ಣ
ವರ್ಷದಿಂದ ವರ್ಷಕ್ಕೆ ಇಲ್ಲಿ ಪಾಲ್ಗೊ ಳ್ಳುವ ಕೋಣಗಳ ಸಂಖ್ಯೆ ಏರುತ್ತಿದ್ದು, ಈ ಬಾರಿ 200ರಷ್ಟು ಜತೆ ಕೋಣಗಳು, ಓಟಗಾರರು, ಯಜಮಾನರು, ಪರಿವಾರ ವರ್ಗದೊಂದಿಗೆ ಪಾಲ್ಗೊಳ್ಳುವ ನಿರೀಕ್ಷೆ ಇದೆ. 146 ಮೀ. ಉದ್ದ, 6 ಮೀ. ಅಗಲದ ಜೋಡುಕರೆಗಳು, 110 ಅಡಿ ಉದ್ದ, 80 ಅಡಿ ಅಗಲದ ಬೃಹತ್‌ ವೇದಿಕೆ, ಕೋಣಗಳಿಗೆ ಪ್ರಾಕೃತಿಕ ಈಜುಕೊಳ, ಸಾಕಷ್ಟು ನೀರಿನ ಪೂರೈಕೆ, 30,000 ಲೀ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಅನುಭವಿ ತೀರ್ಪುಗಾರರು, ಲೇಸರ್‌ ಬೀಮ್‌ ಜೋಡಿಸಿದ ಟೈಮರ್‌ನಿಂದ ಕರಾರುವಕ್ಕಾದ ತೀರ್ಮಾನ ಇಲ್ಲಿನ ವಿಶೇಷತೆ.

2016 ಮಾರ್ಚ್‌2ರಂದು ಕಂಬಳಕ್ಕೆ ತಡೆಯಾಜ್ಞೆ, ಬಂದಿದ್ದು, ಬಳಿಕ ಕಂಬಳ ನಡೆದಿರಲಿಲ್ಲ. ಸುಮಾರು 1 ವರ್ಷ 8ತಿಂಗಳ ಬಳಿಕ ಮತ್ತೆ ಆಚರಣೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದ್ದು, ಸಹಜವಾಗಿಯೇ ಕಂಬಳ ಅಭಿಮಾನಿಗಳ ಮನದಲ್ಲಿ ಸಂತಸ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next