Advertisement

ಅದೃಷ್ಟದ ಬೆನ್ನೇರಿ ಹೊರಟಿವೆ…ಆರ್‌ಸಿ ಬೆಂಗಳೂರು, ಲಕ್ನೋ

10:53 PM Apr 18, 2022 | Team Udayavani |

ನವೀ ಮುಂಬಯಿ: ಆದೃಷ್ಟ ಹಾಗೂ ಸಾಧನೆಯ ಬೆನ್ನೇರಿ ಹೊರಟಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳು ಮಂಗಳವಾರ ರಾತ್ರಿಯ ಐಪಿಎಲ್‌ ಕೌತುಕವನ್ನು ಹೆಚ್ಚಿಸಲು ಟೊಂಕ ಕಟ್ಟಿವೆ.

Advertisement

ಈ ಎರಡೂ ತಂಡಗಳು 6 ಪಂದ್ಯಗಳಾನ್ನಾಡಿದ್ದು, ನಾಲ್ಕರಲ್ಲಿ ಜಯ ಸಾಧಿಸಿವೆ. ರನ್‌ರೇಟ್‌ನಲ್ಲಿ ಲಕ್ನೋ ತುಸು ಮೇಲಿದೆ. ಅಲ್ಲದೇ ಇತ್ತಂಡಗಳು ತಮ್ಮ ಹಿಂದಿನ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿದ ಅತ್ಯುತ್ಸಾಹದಲ್ಲಿವೆ. ಲಕ್ನೋ ಮುಂಬೈಯನ್ನು, ಆರ್‌ಸಿಬಿ ಡೆಲ್ಲಿಯನ್ನು ಉರುಳಿಸಿದ್ದು, ಇದರ ಸಂಭ್ರಮ ಇನ್ನೂ ಜಾರಿಯಲ್ಲಿದೆ!

ಎರಡೂ ನೆಚ್ಚಿನ ತಂಡಗಳು!:ಈವರೆಗಿನ ಒಟ್ಟಾರೆ ಸಾಧನೆಯನ್ನು ಗಮನಿಸಿದಾಗ ಹಾಗೂ ಬಲಾಬಲವನ್ನು ಗಮನಿಸುವಾಗ ಎರಡೂ ತಂಡಗಳನ್ನು ಗೆಲ್ಲುವ ಫೇವರಿಟ್‌ ಎಂದೇ ಪರಿಗಣಿಸಬೇಕಾಗುತ್ತದೆ. ಆದರೆ ಒಂದೊಂದು ತಂಡ ಒಂದೊಂದು ವಿಭಾಗದಲ್ಲಿ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿವೆ.

ದಿನೇಶ್‌ ಕಾರ್ತಿಕ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಶಬಾಜ್‌ ಅಹ್ಮದ್‌ ಅವರನ್ನೊಳಗೊಂಡ ಆರ್‌ಸಿಬಿ ಫಿನಿಶಿಂಗ್‌ ಅತ್ಯುತ್ತಮ ಮಟ್ಟದಲ್ಲಿದೆ.

ನಾಯಕ ಕೆ.ಎಲ್‌. ರಾಹುಲ್‌, ಕ್ವಿಂಟನ್‌ ಡಿ ಕಾಕ್‌ ಅವರಿಂದಾಗಿ ಲಕ್ನೋದ ಓಪನಿಂಗ್‌ಗೆ ಹೆಚ್ಚಿನ ಬಲ ಬಂದಿದೆ. ಡೆತ್‌ ಓವರ್‌ಗಳಲ್ಲಿ ಎರಡೂ ತಂಡಗಳ ಬೌಲಿಂಗ್‌ ಸ್ಟ್ರಾಂಗ್‌ ಎಂದೇ ಪರಿಗಣಿಸಬೇಕಾಗುತ್ತದೆ.

Advertisement

ಆರ್‌ಸಿಬಿಯಲ್ಲಿ ಹರ್ಷಲ್‌ ಪಟೇಲ್‌, ಜೋಶ್‌ ಹ್ಯಾಝಲ್‌ವುಡ್‌; ಲಕ್ನೋದಲ್ಲಿ ಆವೇಶ್‌ ಖಾನ್‌, ರವಿ ಬಿಷ್ಣೋಯಿ ಪರಿಣಾಮಕಾರಿಯಾಗಿದ್ದಾರೆ. . ಹಾಗೆಯೇ ಲಂಕೆಯ ಲೆಗ್‌ ಸ್ಪಿನ್ನಿಂಗ್‌ ಆಲ್‌ರೌಂಡರ್‌ ವನಿಂದು ಹಸರಂಗ ಕೂಡ ಮ್ಯಾಚ್‌ ಟರ್ನರ್‌ ಆಗಬಲ್ಲರು.

ಇದನ್ನೂ ಓದಿ:2ನೇ ಆರ್‌ಟಿಪಿಸಿಆರ್‌ : ಮಾರ್ಷ್‌ಗೆ ಪಾಸಿಟಿವ್‌: ಡೆಲ್ಲಿ-ಪಂಜಾಬ್‌ ಪಂದ್ಯಕ್ಕೆ ತೊಂದರೆ ಇಲ್ಲ

ಓಪನಿಂಗ್‌ ಪರಿಹಾರ ಅಗತ್ಯ ಆರ್‌ಸಿಬಿಯ ಓಪನಿಂಗ್‌ ವೈಫಲ್ಯ ಮುಂದುವರಿದಿರುವುದು ಚಿಂತೆಯ ಸಂಗತಿ. ಸಾಮಾನ್ಯವಾಗಿ ಕ್ರೀಸ್‌ ಆಕ್ರಮಿಸಿಕೊಂಡು ಬಿರುಸಿನ ಬ್ಯಾಟಿಂಗ್‌ಗೆ ಮುಂದಾಗುವ ಡು ಪ್ಲೆಸಿಸ್‌ ಚೆನ್ನೈಯಿಂದ ಆರ್‌ಸಿಬಿಗೆ ಬಂದೊಡನೆ ಮಂಕಾಗಿದ್ದಾರೆ.

ಆರಂಭಿಕ ಪಂದ್ಯದ ಬಳಿಕ ಇವರ ಬ್ಯಾಟ್‌ ಮುಷ್ಕರ ಹೂಡಲಾರಂಭಿಸಿದೆ. ಇವರ ಎಡಗೈ ಜತೆಗಾರ ಅನುಜ್‌ ರಾವತ್‌ ಕೂಡ ಮಿಂಚಿದ್ದು ಒಂದೇ ಪಂದ್ಯದಲ್ಲಿ. ವಿರಾಟ್‌ ಕೊಹ್ಲಿ ಎಲ್ಲ ಒತ್ತಡಗಳಿಂದ ಮುಕ್ತರಾದರೂ ರನ್‌ ಮಾತ್ರ ಪೇರಿಸುತ್ತಿಲ್ಲ. ಆಕಸ್ಮಾತ್‌ ದೊಡ್ಡ ಮೊತ್ತದ ಚೇಸಿಂಗ್‌ ಲಭಿಸಿದ ವೇಳೆ, ಈ 3 ವಿಕೆಟ್‌ ಬೇಗನೇ ಬಿದ್ದರೆ ಆರ್‌ಸಿಬಿ ತೀವ್ರ ಒತ್ತಡಕ್ಕೆ ಸಿಲುಕಬೇಕಾಗುತ್ತದೆ.

ಆದರೆ ಮಧ್ಯಮ ಕ್ರಮಾಂಕದಲ್ಲಿ ಆಸೀಸ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ಕೆಳ ಕ್ರಮಾಂಕದಲ್ಲಿ ದಿನೇಶ್‌ ಕಾರ್ತಿಕ್‌ ಅಮೋಘ ಫಾರ್ಮ್ ನಲ್ಲಿರುವುದು ಬೆಂಗಳೂರು ತಂಡದ ಅದೃಷ್ಟ. ಮ್ಯಾಕ್ಸ್‌ವೆಲ್‌ ಡೆಲ್ಲಿ ವಿರುದ್ಧ 34 ಎಸೆತಗಳಿಂದ 55 ರನ್‌ ಬಾರಿಸಿ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ದಿನೇಶ್‌ ಕಾರ್ತಿಕ್‌ ಪಂದ್ಯದಿಂದ ಪಂದ್ಯಕ್ಕೆ ಸ್ಫೋಟಕವಾಗಿ ಬೆಳೆಯುತ್ತಿದ್ದಾರೆ. ಡೆಲ್ಲಿ ವಿರುದ್ಧ ಇವರು ಪ್ರದರ್ಶಿಸಿದ ಇನ್ನಿಂಗ್ಸ್‌ ಐಪಿಎಲ್‌ ಇತಿಹಾಸದಲ್ಲೇ ಅವಿಸ್ಮರಣೀಯವಾದುದು.

ಯಾವುದೇ ಎದುರಾಳಿಯನ್ನು ಕನಸಲ್ಲೂ ಬೆಚ್ಚಿಬೀಳಿಸುವ ರೀತಿಯಲ್ಲಿ ಕಾರ್ತಿಕ್‌ ಅಬ್ಬರಿಸಿದ್ದರು. ಈವರೆಗಿನ 6 ಪಂದ್ಯಗಳಲ್ಲಿ ಅವರು ಔಟಾದುದು ಕೇವಲ ಒಂದೇ ಸಲ ಎಂಬುದನ್ನು ಮರೆಯುವಂತಿಲ್ಲ. ಆದರೂ ಆರ್‌ಸಿಬಿ ಹೆಚ್ಚಿನ ಸಿದ್ಧತೆಯೊಂದಿಗೆ ಬ್ಯಾಟಿಂಗ್‌ ಹೋರಾಟವನ್ನು ಸಂಘಟಿಸಬೇಕಾಗುತ್ತದೆ. ಪ್ರತೀ ಸಲವೂ ದಿನೇಶ್‌ ಕಾರ್ತಿಕ್‌ ಅವರನ್ನು ನಂಬಿ ಕೂರುವುದು ಅಪಾಯಕ್ಕೆ ಎಡೆ ಮಾಡುವ ಸಾಧ್ಯತೆ ಇದೆ.

ಅಪಾಯಕಾರಿ ಲಕ್ನೋ
ಲಕ್ನೋ ನಾಯಕ ಕೆ.ಎಲ್‌. ರಾಹುಲ್‌ ಕಳೆದ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮೆರೆದಿದ್ದಾರೆ. ಸೋಮವಾರ 30ನೇ ಬರ್ತ್‌ಡೇಯನ್ನೂ ಆಚರಿಸಿದ್ದಾರೆ. ಇವೆರಡರ ಸಂಭ್ರಮ ಮೇಳೈಸಿದರೆ ಆರ್‌ಸಿಬಿ ವಿರುದ್ಧವೂ ಈ “ಮ್ಯಾಂಗಲೂರ್‌ ಬಾಯ್‌’ ರನ್‌ ಮಳೆ ಸುರಿಸುವ ಸಾಧ್ಯತೆ ಇದ್ದೇ ಇದೆ. ರಾಜಸ್ಥಾನ್‌ನ ಜಾಸ್‌ ಬಟ್ಲರ್‌ (272) ಬಳಿಕ ಅತ್ಯಧಿಕ ರನ್‌ ಗಳಿಸಿದ ಹೆಗ್ಗಳಿಕೆ ರಾಹುಲ್‌ ಅವರದ್ದಾಗಿದೆ (235). ಲಕ್ನೋದ ಟಾಪ್‌ ಆರ್ಡರ್‌ ಬ್ಯಾಟಿಂಗ್‌ ಪವರ್‌ ಭರ್ಜರಿಯಾಗಿದೆ. ಡಿ ಕಾಕ್‌, ಈ ಕೂಟದ ಸೆನ್ಸೇಶನಲ್‌ ಆಯುಷ್‌ ಬದೋನಿ, ದೀಪಕ್‌ ಹೂಡಾ, ಕೃಣಾಲ್‌ ಪಾಂಡ್ಯ, ಮಲ್ಟಿ ಟ್ಯಾಲೆಂಟರ್‌ಗಳಾದ ಜೇಸನ್‌ ಹೋಲ್ಡರ್‌, ಮಾರ್ಕಸ್‌ ಸ್ಟೋಯಿನಿಸ್‌ ಅವರೆಲ್ಲ ಭಾರೀ ಡೇಂಜರಸ್‌.

Advertisement

Udayavani is now on Telegram. Click here to join our channel and stay updated with the latest news.

Next