Advertisement

ರಾಯಲ್‌ ಚಾಲೆಂಜರ್ ಗೆ ರಾಯಲ್ಸ್‌ ಟೆಸ್ಟ್‌

10:57 PM Apr 04, 2022 | Team Udayavani |

ಮುಂಬಯಿ: ಎಂದಿಗಿಂತ ಹೆಚ್ಚು ಬಲಿಷ್ಠ ಗೊಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿರುವ ರಾಜಸ್ಥಾನ್‌ ರಾಯಲ್ಸ್‌ ಮತ್ತು ಇನ್ನಷ್ಟೇ “ಅನ್‌ಲಾಕ್‌’ ಆಗಬೇಕಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡಗಳು ಮಂಗಳವಾರ ಮುಖಾಮುಖಿಯಾಗಲಿವೆ. ತಾಣ “ವಾಂಖೇಡೆ ಸ್ಟೇಡಿಯಂ’.

Advertisement

ಎರಡೂ ತಂಡಗಳು ಗೆಲುವಿನ ಮುಖ ಹೊತ್ತೇ ಈ ಪಂದ್ಯವನ್ನು ಆಡಲಿಳಿಯುತ್ತಿವೆ. ಆದರೆ ರಾಜ ಸ್ಥಾನ್‌ ಎರಡೂ ಪಂದ್ಯಗಳನ್ನು ಜಯಿಸಿದೆ. ಆರ್‌ಸಿಬಿ ಸೋಲಿನ ಆರಂಭದ ಬಳಿಕ ಗೆಲುವಿನ ಖುಷಿ ಆಚರಿಸಿದೆ. ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ಸಂಜು ಸ್ಯಾಮ್ಸನ್‌ ಪಡೆಯ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಡು ಪ್ಲೆಸಿಸ್‌ ಪಡೆಗೆ ಸಾಧ್ಯವೇ ಎಂಬುದು ಇಲ್ಲಿನ ಕುತೂಹಲ. “ವಾಂಖೇಡೆ’ ಟ್ರ್ಯಾಕ್‌ ಪೇಸ್‌ ಬೌಲಿಂಗ್‌ಗೆ ಹೆಚ್ಚಿನ ನೆರವು ನೀಡುತ್ತಿದ್ದು, ಇದರ ಗರಿಷ್ಠ ಲಾಭ ಎತ್ತಿದವರು ಮೇಲುಗೈ ಸಾಧಿಸಲಿದ್ದಾರೆ ಎಂಬುದೊಂದು ಲೆಕ್ಕಾಚಾರ.

ಜೋಶ್‌ ತೋರಬೇಕಿದೆ ಆರ್‌ಸಿಬಿ
ಆರ್‌ಸಿಬಿ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್‌ಗ 5 ವಿಕೆಟ್‌ಗಳಿಂದ ಸೋತಿತ್ತು. ಅಲ್ಲಿ ಎರಡೇ ವಿಕೆಟಿಗೆ 205 ರನ್‌ ಪೇರಿಸಿದ್ದ ಬೆಂಗಳೂರು ಟೀಮ್‌ಗೆ ಈ ದೊಡ್ಡ ಮೊತ್ತವನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬೌಲಿಂಗ್‌ ತೀರಾ ಸಾಮಾನ್ಯ ಮಟ್ಟದಲ್ಲಿತ್ತು. ಆದರೆ ಕೆಕೆಆರ್‌ ಎದುರಿನ ಮುಂದಿನ ಪಂದ್ಯದಲ್ಲಿ ಆರ್‌ಸಿಬಿ ಬೌಲಿಂಗ್‌ ನಾಟಕೀಯ ರೀತಿಯಲ್ಲಿ ಚೇತರಿಕೆ ಕಂಡಿತು. ಶ್ರೇಯಸ್‌ ಅಯ್ಯರ್‌ ಪಡೆಯನ್ನು 128ಕ್ಕೆ ಹಿಡಿದು ನಿಲ್ಲಿಸಲು ಯಶಸ್ವಿಯಾಯಿತು. ಆದರೆ ಬ್ಯಾಟಿಂಗ್‌ ಟಾಪ್‌ ಲೆವೆಲ್‌ ತಲುಪಲಿಲ್ಲ. ಅಂತೂ ಇಂತೂ ಪರದಾಡಿ 7 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತ್ತು.

ಅಧಿಕಾರಯುತ ಗೆಲುವೇನೂ ಇದಾಗಿರಲಿಲ್ಲ. ಆರ್‌ಸಿಬಿ ಆಸೀಸ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ ವೆಲ್‌ ಆಗಮನದ ನಿರೀಕ್ಷೆಯಲ್ಲಿದೆ. ಈ ಪಂದ್ಯಕ್ಕೆ ಅವರು ಲಭ್ಯರಾಗುವುದು ಇನ್ನೂ ಖಾತ್ರಿಯಾಗಿಲ್ಲ. ಹಾಗೆಯೇ ಕಾಂಗರೂ ನಾಡಿನ ವೇಗಿ ಜೋಶ್‌ ಹ್ಯಾಝಲ್‌ವುಡ್‌ ಕೂಡ ತಂಡವನ್ನು ಸೇರಿಕೊಂಡಿಲ್ಲ. ಇವರಿಬ್ಬರ ಆಗಮನವಾದರೆ ಅದು ಎದುರಾಳಿಗಳ ಪಾಲಿಗೆ ಖಂಡಿತ ಎಚ್ಚರಿಕೆಯ ಗಂಟೆ ಆಗಲಿದೆ.

ಡು ಪ್ಲೆಸಿಸ್‌ಗೆ ಸಮರ್ಥ ಜತೆಗಾರನೊಬ್ಬ ದಕ್ಕದಿರು ವುದು ಆರ್‌ಸಿಬಿಗೆ ಎದುರಾಗಿರುವ ಮೊದಲ ಹಂತದ ಹಿನ್ನಡೆ. ಎಡಗೈ ಬ್ಯಾಟರ್‌ ಅನುಜ್‌ ರಾವತ್‌ ಅಷ್ಟೇನೂ ಯಶಸ್ವಿ ಆಯ್ಕೆ ಎಂದೆನಿಸದು. ಬದಲಿ ಸ್ಪೆಷಲಿಸ್ಟ್‌ ಓಪನರ್‌ ಕೂಡ ತಂಡದ ಬಳಿ ಇಲ್ಲ. ಆಗ ಮತ್ತೆ ವಿರಾಟ್‌ ಕೊಹ್ಲಿಯೇ ಆರಂಭಿಕನಾಗಿ ಇಳಿಯಬೇಕಾಗುತ್ತದೆ.

Advertisement

ತಂಡದ ಮಧ್ಯಮ ಸರದಿಯಲ್ಲೂ ಡ್ಯಾಶಿಂಗ್‌ ಬ್ಯಾಟರ್‌ಗಳು ಕಾಣಿಸುತ್ತಿಲ್ಲ. ರುದರ್‌ಫೋರ್ಡ್‌, ದಿನೇಶ್‌ ಕಾರ್ತಿಕ್‌, ಆಲ್‌ರೌಂಡರ್‌ಗಳಾದ ಶಬಾಜ್‌ ಅಹ್ಮದ್‌, ವನಿಂದು ಹಸರಂಗ, ಡೇವಿಡ್‌ ವಿಲ್ಲಿ ಹೆಚ್ಚಿನ ಜವಾಬ್ದಾರಿ ಹೊರಬೇಕಾಗುತ್ತದೆ.

ಬಹು ಕೋಟಿಯ ಆಲ್‌ರೌಂಡರ್‌ ಹಸರಂಗ, ಡೆತ್‌ ಓವರ್‌ ಸ್ಪೆಷಲಿಸ್ಟ್‌ ಹರ್ಷಲ್‌ ಪಟೇಲ್‌ ಕೆಕೆಆರ್‌ ವಿರುದ್ಧ ಮ್ಯಾಜಿಕ್‌ ಸ್ಪೆಲ್‌ ನಡೆಸಿ ಸೈ ಎನಿಸಿಕೊಂಡಿದ್ದರು. ಇದನ್ನು ರಾಜಸ್ಥಾನ್‌ ವಿರುದ್ಧವೂ ಪುನರಾವರ್ತಿಸಬೇಕಿದೆ.

ಇದನ್ನೂ ಓದಿ:ಲಕ್ನೋ, ಅಹ್ಮದಾಬಾದ್‌ನಲ್ಲಿ ಐಪಿಎಲ್‌ ನಾಕೌಟ್‌ ಪಂದ್ಯ?

ಹಾರ್ಡ್‌ ಹಿಟ್ಟಿಂಗ್‌ ರಾಜಸ್ಥಾನ್‌
ಒಟ್ಟು ಸಾಮರ್ಥ್ಯಕ್ಕೆ ಹೋಲಿಸಿದರೆ ಆರ್‌ಸಿಬಿಗಿಂತ ರಾಜಸ್ಥಾನ್‌ ತಂಡವೇ ಮೇಲ್ಮಟ್ಟದಲ್ಲಿದೆ. ತಂಡದ ಹಾರ್ಡ್‌ ಹಿಟ್ಟಿಂಗ್‌ ಬ್ಯಾಟಿಂಗ್‌ ಯೂನಿಟ್‌ ಅತ್ಯಂತ ಅಪಾಯಕಾರಿ. ಬಟ್ಲರ್‌, ಜೈಸ್ವಾಲ್‌, ಪಡಿಕ್ಕಲ್‌, ಸ್ಯಾಮ್ಸನ್‌, ಹೆಟ್‌ಮೈರ್‌… ಇವರಲ್ಲಿ ಒಬ್ಬರು ಸಿಡಿದು ನಿಂತರೂ ಯಾವುದೇ ಪಿಚ್‌ ಮೇಲೂ ಬೃಹತ್‌ ಮೊತ್ತಕ್ಕೆ ಕೊರತೆ ಎದುರಾಗದು. ಬಟ್ಲರ್‌ ಅವರಂತೂ ಮುಂಬೈ ವಿರುದ್ಧ ಶತಕ ಸಿಡಿಸಿದ ಹುಮ್ಮಸ್ಸಿನಲ್ಲಿದ್ದಾರೆ!

ಹಾಗೆಯೇ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಅಶ್ವಿ‌ನ್‌, ಚಹಲ್‌ ಅವರನ್ನೊಳಗೊಂಡ ರಾಜಸ್ಥಾನ್‌ ಬೌಲಿಂಗ್‌ ಕೂಡ ಘಾತಕ. ಕಳೆದ ಸಲ ಆರ್‌ಸಿಬಿಯಲ್ಲಿದ್ದ ದೇವದತ್ತ ಪಡಿಕ್ಕಲ್‌, ಯಜುವೇಂದ್ರ ಚಹಲ್‌ ಅವರೆಲ್ಲ ಈ ಬಾರಿ ಎದುರಾಳಿ ರಾಜಸ್ಥಾನ್‌ ತಂಡದ ಸದಸ್ಯರಾಗಿರುವುದು ಕೂಡ ಈ ಪಂದ್ಯದ ಕುತೂಹಲವನ್ನು ಹೆಚ್ಚಿಸಿದೆ.

ಆರ್‌ಸಿಬಿ ಸತತ 4 ಜಯ
ದಾಖಲೆ ಅಥವಾ ಅಂಕಿಅಂಶ ಕುರಿತು ಹೇಳುವುದಾದರೆ, 2019ರ ಬಳಿಕ ಆರ್‌ಸಿಬಿ ವಿರುದ್ಧ ಗೆಲ್ಲಲು ರಾಜಸ್ಥಾನ್‌ಗೆ ಸಾಧ್ಯವಾಗಿಲ್ಲ. 2020 ಮತ್ತು 2021ರಲ್ಲಿ ಆಡಲಾದ ನಾಲ್ಕೂ ಪಂದ್ಯಗಳಲ್ಲಿ ಆರ್‌ಸಿಬಿಯೇ ಗೆದ್ದು ಬಂದಿದೆ. ಈ ನಾಲ್ಕೂ ಪಂದ್ಯಗಳನ್ನು ಅಂದಿನ ಕೊಹ್ಲಿ ಪಡೆ ಚೇಸಿಂಗ್‌ ಮೂಲಕವೇ ಜಯಿಸಿದ್ದು ಇನ್ನೊಂದು ಸ್ವಾರಸ್ಯ!

Advertisement

Udayavani is now on Telegram. Click here to join our channel and stay updated with the latest news.

Next