Advertisement

ಚೆನ್ನೈ ವರ್ಸಸ್‌ ಮುಂಬೈ: ಎಲಿಮಿನೇಶನ್‌ ತಪ್ಪಿಸಲು ಹೋರಾಟ

11:26 PM Apr 20, 2022 | Team Udayavani |

ನವೀ ಮುಂಬಯಿ: ಐಪಿಎಲ್‌ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಈ ಬಾರಿ ಅಂತಿಮ ಸ್ಥಾನಕ್ಕೆ ಪೈಪೋಟಿ ನೀಡುವ ರೀತಿಯಲ್ಲಿ ಆಡುತ್ತಿವೆ.

Advertisement

ಮುಂಬೈ ಮೊದಲ ಆರೂ ಪಂದ್ಯಗಳನ್ನು ಸೋತರೆ, ಹಾಲಿ ಚಾಂಪಿಯನ್‌ ಚೆನ್ನೈ ಆರರಲ್ಲಿ ಒಂದನ್ನಷ್ಟೇ ಗೆದ್ದು ತನ್ನ ದೌರ್ಬಲ್ಯನ್ನು ಸಾಬೀತುಪಡಿಸುತ್ತ ಬಂದಿದೆ. ಇಷ್ಟೊಂದು ತೀವ್ರ ಸಂಕಟದಲ್ಲಿರುವ ಈ ತಂಡಗಳೆರಡು ಗುರುವಾರ ಪರಸ್ಪರ ಎದುರಾಗಲಿವೆ.

ಐಪಿಎಲ್‌ ಎಲಿಮಿನೇಶನ್‌ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಇತ್ತಂಡಗಳ ಹೋರಾಟ ಸಾಗಬೇಕಿದೆ. 5 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಆರರಲ್ಲೂ ಎಡವಿದ್ದು ಐಪಿಎಲ್‌ ಇತಿಹಾಸದ ಆಘಾತ ಹಾಗೂ ಅಚ್ಚರಿ ಗಳಲ್ಲೊಂದೆನಿಸಿದೆ.

ಮೆಗಾ ಹರಾಜಿನ ಬಳಿಕ ತಂಡದ ಸ್ವರೂಪದಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಂಭವಿಸಿದ್ದು, ತಂಡದ ಯಶಸ್ಸಿನ ಪಾಲುದಾರರಾದ ಬಹುತೇಕ ಸ್ಟಾರ್‌ ಆಟಗಾರರ ಬೇರೆ ತಂಡದ ಪಾಲಾದದ್ದು, ಉಳಿದವರು ತಮ್ಮ ನೈಜ ಸಾಮರ್ಥ್ಯ ಪ್ರದರ್ಶಿಸುವಲ್ಲಿ ವಿಫ‌ಲರಾಗುತ್ತಿರುವುದೆಲ್ಲ ಮುಂಬೈ ವೈಫ‌ಲ್ಯಕ್ಕೆ ಮುಖ್ಯ ಕಾರಣ ಎನ್ನಬಹುದು.

ನಾಯಕನ ರನ್‌ ಬರಗಾಲ
ಸ್ವತಃ ನಾಯಕ ರೋಹಿತ್‌ ಶರ್ಮ ತೀವ್ರ ರನ್‌ ಬರಗಾಲದಲ್ಲಿರುವುದು ತಂಡಕ್ಕೆ ಎದುರಾಗಿರುವ ಮೊದಲ ಆಘಾತ. 6 ಇನ್ನಿಂಗ್ಸ್‌ಗಳಿಂದ ಅವರು ಗಳಿಸಿದ್ದು 114 ರನ್‌ ಮಾತ್ರ. ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಇದು ತಂಡಕ್ಕೆ ಭಾರೀ ಹಿನ್ನಡೆಯಾಗಿ ಪರಿಣಮಿಸುತ್ತದೆ. ಯಂಗ್‌ ಬ್ಯಾಟರ್‌ ಇಶಾನ್‌ ಕಿಶನ್‌ ತಮ್ಮ 15.25 ಕೋಟಿ ರೂ. ಮೊತ್ತಕ್ಕೆ ನ್ಯಾಯ ಸಲ್ಲಿಸಲು ವಿಫ‌ಲರಾಗುತ್ತಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿದರೂ ಬಳಿಕ ಬ್ಯಾಟಿಂಗ್‌ ಬರಗಾಲಕ್ಕೆ ಸಿಲುಕಿದ್ದಾರೆ. 6 ಪಂದ್ಯಗಳಿಂದ ಇವರ ಗಳಿಕೆ ಕೇವಲ 191 ರನ್‌.

Advertisement

ಮಧ್ಯಮ ಕ್ರಮಾಂಕದಲ್ಲಿ ಡಿವಾಲ್ಡ್‌ ಬ್ರೇವಿಸ್‌, ತಿಲಕ್‌ ವರ್ಮ ಮತ್ತು ಸೂರ್ಯಕುಮಾರ್‌ ಯಾದವ್‌ ಅವರಂಥ ಬಿಗ್‌ ಹಿಟ್ಟರ್ ಇದ್ದಾರೆ. ವೈಯಕ್ತಿಕವಾಗಿ ಅಲ್ಲಲ್ಲಿ ಇವರ ಆಟ ಕ್ಲಿಕ್‌ ಆಗಿರಬಹುದು, ಆದರೆ ಒಟ್ಟಾಗಿ ಸಿಡಿದು ನಿಲ್ಲಲು ಇವರಿಗೆ ಈವರೆಗೆ ಸಾಧ್ಯವಾಗಿಲ್ಲ. ಆಲ್‌ರೌಂಡರ್‌ ಕೈರನ್‌ ಪೊಲಾರ್ಡ್‌ ಕೈಲಾಗದವರ ರೀತಿಯಲ್ಲಿ ಪರದಾಡುತ್ತಿರುವುದು ಮುಂಬೈಗೆ ಎದುರಾಗಿರುವ ಮತ್ತೂಂದು ಆಘಾತ. ಇವರದ್ದು ಸಂಪೂರ್ಣ ವೈಫ‌ಲ್ಯ. ಈವರೆಗೆ ಗಳಿಸಿದ್ದು 82 ರನ್‌ ಮಾತ್ರ.

ಬ್ಯಾಟಿಂಗ್‌ ಅವಸ್ಥೆ ಈ ರೀತಿಯಾದರೆ, ಮುಂಬೈ ಬೌಲಿಂಗ್‌ ಸಂಕಟ ಇನ್ನೊಂದು ರೀತಿಯದು. ತಂಡದ ಪ್ರಧಾನ ವೇಗಿ, ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ ಸತತ ವೈಫ‌ಲ್ಯ ಕಾಣುತ್ತಿದ್ದಾರೆ. ಟೈಮಲ್‌ ಮಿಲ್ಸ್‌, ಜೈದೇವ್‌ ಉನಾದ್ಕತ್‌, ಬಾಸಿಲ್‌ ಥಂಪಿ, ಮುರುಗನ್‌ ಅಶ್ವಿ‌ನ್‌, ಫ್ಯಾಬಿಯನ್‌ ಅಲೆನ್‌ ಅವರದ್ದೆಲ್ಲ ತೀರಾ ಸಾಮಾನ್ಯ ಪ್ರದರ್ಶನ. ಮುಂಬೈ ತಂಡದ ಇಷ್ಟು ವರ್ಷಗಳ ಘಾತಕ ಕಾಂಬಿನೇಶನ್‌ ಈ ಬಾರಿ ಕಾಣಿಸುತ್ತಿಲ್ಲ.

ಇದನ್ನೂ ಓದಿ:ಐಪಿಎಲ್‌: ಪಂಜಾಬ್‌ ಕಿಂಗ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಗೆ ಭರ್ಜರಿ ಗೆಲುವು

ಚೆನ್ನೈ ಬ್ಯಾಟಿಂಗ್‌ ಓಕೆ
ಮುಂಬೈಗೆ ಹೋಲಿಸಿದರೆ ಚೆನ್ನೈ ಬ್ಯಾಟಿಂಗ್‌ ಲೈನ್‌ಅಪ್‌ ಹೆಚ್ಚು ಬಲಿಷ್ಠ. ಮುಖ್ಯವಾಗಿ ಋತುರಾಜ್‌ ಗಾಯಕ್ವಾಡ್‌ ಫಾರ್ಮ್ ಕಂಡುಕೊಂಡದ್ದು ತಂಡಕ್ಕೊಂದು ಬೂಸ್ಟ್‌ ಆಗಲಿದೆ. ಮತ್ತೋರ್ವ ಆರಂಭಕಾರ ರಾಬಿನ್‌ ಉತ್ತಪ್ಪ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಶಿವಂ ದುಬೆ, ಅಂಬಾಟಿ ರಾಯುಡು ಮೇಲೆ ನಂಬಿಕೆ ಇಡಬಹುದು. ಆದರೆ ಮೊಯಿನ್‌ ಅಲಿ ಪ್ರದರ್ಶನ ಸಾಲದು. ನಾಯಕ, ಮಾಜಿನಾಯಕರಾದ ರವೀಂದ್ರ ಜಡೇಜ, ಎಂ.ಎಸ್‌. ಧೋನಿ ಹಳೆಯ ಜೋಶ್‌ಗೆ ಮರಳಬೇಕಿದೆ.

ಚೆನ್ನೈ ಬೌಲಿಂಗ್‌ ಸಂಪೂರ್ಣವಾಗಿ ದಿಕ್ಕು ತಪ್ಪಿದೆ. ಮುಕೇಶ್‌ ಚೌಧರಿ, ಕ್ರಿಸ್‌ ಜೋರ್ಡನ್‌, ಮಹೀಶ್‌ ತೀಕ್ಷಣ, ಡ್ವೇನ್‌ ಬ್ರಾವೊ ತೀಕ್ಷ್ಣ ಪರಿಣಾಮ ಬೀರುವಲ್ಲಿ ವಿಫ‌ಲರಾಗಿದ್ದಾರೆ. ಪೇಸರ್‌ ದೀಪಕ್‌ ಚಹರ್‌ ಹೊರಬಿದ್ದದ್ದು ಚೆನ್ನೈ ಬೌಲಿಂಗ್‌ ವಿಭಾಗಕ್ಕೆ ಬಿದ್ದ ದೊಡ್ಡ ಏಟು. ಇವರ ಬದಲಿಗೆ ಬಂದಿರುವ ಆ್ಯಡಂ ಮಿಲ್ನೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ಕಾಣಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next