Advertisement

ರಿಷಭ್‌ ಪಂತ್‌ಗೆ ಅಯ್ಯರ್‌ ಪಂಥಾಹ್ವಾನ

11:15 PM Apr 09, 2022 | Team Udayavani |

ಮುಂಬಯಿ: ರವಿವಾರದ ಅವಳಿ ಪಂದ್ಯಗಳಲ್ಲಿ ಕೋಲ್ಕತಾ ನೈಟ್‌ರೈಡರ್-ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯ ಹೆಚ್ಚಿನ ಕುತೂಹಲ ಮೂಡಿಸಿದೆ. ನಿಜಕ್ಕಾದರೆ, ಇದು ಡೆಲ್ಲಿ ತಂಡದ ಮಾಜಿ ನಾಯಕ ಶ್ರೇಯಸ್‌ ಅಯ್ಯರ್‌ ಈಗಿನ ಕಪ್ತಾನ ರಿಷಭ್‌ ಪಂತ್‌ಗೆ ನೀಡಿದ ಪಂಥಾಹ್ವಾನವಾಗಿದೆ. ಇದನ್ನು ಡೆಲ್ಲಿ ಹೇಗೆ ಸ್ವೀಕರಿಸಲಿದೆ ಎಂಬುದನ್ನು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

Advertisement

ಕೆಕೆಆರ್‌ ನಾಲ್ಕರಲ್ಲಿ ಮೂರನ್ನು ಗೆದ್ದು “ಟೇಬಲ್‌ ಟಾಪರ್‌’ ಎನಿಸಿದೆ. ಇನ್ನೊಂದೆಡೆ ಡೆಲ್ಲಿ ಮೂರರಲ್ಲಿ ಒಂದನ್ನಷ್ಟೇ ಜಯಿಸಿ 7ನೇ ಸ್ಥಾನಿಯಾಗಿದೆ. ಹೀಗಾಗಿ ನಾಯಕತ್ವದ ವಿಷಯದಲ್ಲಿ ಅಯ್ಯರ್‌ ಬಹಳ ಮೇಲ್ಮಟ್ಟದಲ್ಲಿದ್ದಾರೆ. 2020ರಲ್ಲಿ ಡೆಲ್ಲಿಯನ್ನು ಮೊದಲ ಸಲ ಐಪಿಎಲ್‌ ಫೈನಲ್‌ಗೆ ಕೊಂಡೊಯ್ದ ಹೆಗ್ಗಳಿಕೆಯೂ ಇವರದಾಗಿತ್ತು. ಆದರೂ ಡೆಲ್ಲಿ ಫ್ರಾಂಚೈಸಿ ಇವರನ್ನು ಉಳಿಸಿಕೊಳ್ಳಲಿಲ್ಲ. ಮೆಗಾ ಹರಾಜಿನಲ್ಲಿ ಕೆಕೆಆರ್‌ ಪಾಲಾದರು.

ಶ್ರೇಯಸ್‌ ಅಯ್ಯರ್‌ ಸಾರಥ್ಯದಲ್ಲಿ ಕೋಲ್ಕತಾ ಉತ್ತಮ ಪ್ರದರ್ಶನ ನೀಡುತ್ತ ಬಂದಿದೆ. ಸೋತದ್ದು ಆರ್‌ಸಿಬಿ ವಿರುದ್ಧ ಮಾತ್ರ. ಉಳಿದಂತೆ ಚಾಂಪಿಯನ್‌ ಚೆನ್ನೈಯನ್ನು ಉದ್ಘಾಟನ ಪಂದ್ಯದಲ್ಲೇ 6 ವಿಕೆಟ್‌ಗಳಿಂದ ಮಣಿಸಿ ಮೆರೆಯಿತು. ಬಳಿಕ ಪಂಜಾಬ್‌ಗ 6 ವಿಕೆಟ್‌, ಮುಂಬೈಗೆ 5 ವಿಕೆಟ್‌ ಸೋಲುಣಿಸಿತು. ಮುಂಬೈ ವಿರುದ್ಧ ಪ್ಯಾಟ್‌ ಕಮಿನ್ಸ್‌ ತೋರ್ಪಡಿಸಿದ ಬ್ಯಾಟಿಂಗ್‌ ಅಬ್ಬರ ಕೆಕೆಆರ್‌ಗೆ ಮುಂದಿನ ಹಲವು ಪಂದ್ಯಗಳಿಗೆ ಬೇಕಾಗುವಷ್ಟು ಆತ್ಮವಿಶ್ವಾಸವನ್ನು ಮೊಗೆದು ಕೊಟ್ಟಿದೆ.

ಪ್ರಧಾನ ವೇಗಿ ಉಮೇಶ್‌ ಯಾದವ್‌ ಅವರ ಪ್ರಚಂಡ ಫಾರ್ಮ್ ತಂಡಕ್ಕೊಂದು ಬೂಸ್ಟ್‌. ಪವರ್‌ ಪ್ಲೇಯಲ್ಲಿ ಅವರು ಅತ್ಯಂತ ಅಪಾಯಕಾರಿಯಾಗಿ ಗೋಚ ರಿಸುತ್ತಿದ್ದಾರೆ. ವೆಂಕಟೇಶ್‌ ಅಯ್ಯರ್‌, ಸುನೀಲ್‌ ನಾರಾಯಣ್‌, ಶ್ರೇಯಸ್‌ ಅಯ್ಯರ್‌, ಆ್ಯಂಡ್ರೆ ರಸೆಲ್‌ ಕೂಡ ಉತ್ತಮ ಲಯದಲ್ಲಿದ್ದಾರೆ.

ಜೋಶ್‌ ತೋರದ ಡೆಲ್ಲಿ
ಡೆಲ್ಲಿ ಕ್ಯಾಪಿಟಲ್ಸ್‌ ಉತ್ತಮ ಬ್ಯಾಟಿಂಗ್‌ ಯೂನಿಟ್‌ ಹೊಂದಿದ್ದರೂ ಇನ್ನೂ ಜೋಶ್‌ ತೋರಿಲ್ಲ. ಲಕ್ನೋ ಎದುರಿನ ಕೊನೆಯ ಪಂದ್ಯದಲ್ಲಿ ಪೃಥ್ವಿ ಶಾ ಅವರ ಸ್ಫೋಟಕ ಆರಂಭದ ಹೊರತಾಗಿಯೂ ಗಳಿಸಲು ಸಾಧ್ಯವಾದದ್ದು 149 ರನ್‌ ಮಾತ್ರ. 7 ವಿಕೆಟ್‌ ಕೈಯಲ್ಲಿದ್ದೂ, ಹೊಡಿಬಡಿ ಬ್ಯಾಟರ್‌ಗಳಾದ ಪಂತ್‌- ಸರ್ಫರಾಜ್ ಕ್ರೀಸಿನಲ್ಲಿದ್ದೂ ಡೆಲ್ಲಿ ಬ್ಯಾಟಿಂಗ್‌ ಚಡಪಡಿಕೆ ಅನುಭವಿಸಿತ್ತು. ಡೇವಿಡ್‌ ವಾರ್ನರ್‌ ವೈಫ‌ಲ್ಯ ಮೊದಲ ಪಂದ್ಯಕ್ಕಷ್ಟೇ ಸೀಮಿತಗೊಂಡರೆ ತಂಡಕ್ಕೆ ಲಾಭ. ರೋವ¾ನ್‌ ಪೊವೆಲ್‌ ಕೂಡ ಸಿಡಿದು ನಿಲ್ಲಬೇಕಿದೆ. ಆ್ಯನ್ರಿಚ್‌ ನೋರ್ಜೆ ಬಂದರೂ ಡೆಲ್ಲಿಯ ಬೌಲಿಂಗ್‌ ಸುಧಾರಣೆ ಕಂಡಿಲ್ಲ. ಎರಡು ಬೀಮರ್‌ ಅವರಿಗೆ ಮುಳುವಾಗಿ ಪರಿಣಮಿಸಿತು. ಮುಸ್ತಫಿಜುರ್‌ ರೆಹಮಾನ್‌ ಈತನಕ ಘಾತಕವಾಗಿ ಪರಿಣಮಿಸಿಲ್ಲ. ಒಟ್ಟಾರೆ, ಸತತ ಎರಡು ಸೋಲಿನಿಂದ ಹೊರಬರಲು ಡೆಲ್ಲಿ ಮಾರ್ಗವನ್ನು ಹುಡುಕುತ್ತಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next