Advertisement

ಡೆಲ್ಲಿ-ಪಂಜಾಬ್‌: ಬ್ಯಾಟಲ್‌ ಆಫ್ ಪವರ್‌ ಹಿಟ್ಟರ್

11:26 PM Apr 19, 2022 | Team Udayavani |

ಮುಂಬಯಿ: ಕೋವಿಡ್‌ ಸಂಕಟಕ್ಕೆ ಸಿಲುಕಿರುವ ಡೆಲ್ಲಿ ಕ್ಯಾಪಿಟಲ್ಸ್‌ ಬುಧವಾರದ ಮುಖಾಮುಖಿಯಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೆಣಸಾಟಕ್ಕೆ ಇಳಿಯಲಿದೆ. ಡೆಲ್ಲಿ ತಂಡದಲ್ಲಿ ಕೋವಿಡ್‌ ಪ್ರಕರಣ ಕಂಡುಬಂದ ಕಾರಣ ಈ ಪಂದ್ಯವನ್ನು ಪುಣೆಯಿಂದ ಮುಂಬಯಿಯ “ಬ್ರೆಬೋರ್ನ್ ಸ್ಟೇಡಿಯಂ’ಗೆ ಸ್ಥಳಾಂತರಿಸಲಾಗಿದೆ.

Advertisement

ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಕೋವಿಡ್‌ ಪಾಸಿಟಿವ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವುದು ಡೆಲ್ಲಿ ತಂಡಕ್ಕೆ ಎದುರಾಗಿರುವ ಭಾರೀ ಹಿನ್ನಡೆ. ಆದರೆ ಮಂಗಳವಾರದ ಕೋವಿಡ್‌ ಪರೀಕ್ಷೆಯ ವರದಿಯಲ್ಲಿ ಡೆಲ್ಲಿ ತಂಡದ ಆಟಗಾರರೆಲ್ಲರ ವರದಿ ನೆಗೆಟಿವ್‌ ಬಂದಿರುವುದು ಸಮಾಧಾನಕರ ಸಂಗತಿ. ಆದರೆ ಬುಧವಾರ ಬೆಳಗ್ಗೆಯೂ ಇವರೆಲ್ಲ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕಿದೆ. ಇಲ್ಲಿನ ಫ‌ಲಿತಾಂಶ ನಿರ್ಣಾಯಕ.

ಗೆಲುವಿನ ಹಳಿ ಏರಬೇಕಿದೆ
ಕೋವಿಡ್‌ ಸಾಂಕ್ರಾಮಿಕವನ್ನು ಬದಿಗಿರಿಸಿ ಮುಂದುವರಿಯುವುದಾದರೆ, ಡೆಲ್ಲಿ-ಪಂಜಾಬ್‌ ತಂಡಗಳೆರಡೂ ಅಗ್ರ 4ರ ಹಾದಿಯಿಂದ ಸಾಕಷ್ಟು ದೂರದಲ್ಲಿವೆ. ಪಂತ್‌ ಪಡೆಯಂತೂ ಎಂಟರಷ್ಟು ಕೆಳ ಸ್ಥಾನದಲ್ಲಿದೆ. ಅನಂತರದ ಸ್ಥಾನದಲ್ಲಿರುವುದು ಚೆನ್ನೈಹಾಗೂ ಮುಂಬೈ ಮಾತ್ರ. ಪಂಜಾಬ್‌ ಆರರಲ್ಲಿ 3 ಪಂದ್ಯ ಗೆದ್ದರೆ, ಡೆಲ್ಲಿ 5 ಪಂದ್ಯಗಳಲ್ಲಿ ಎರಡರಲ್ಲಷ್ಟೇ ಗೆಲುವಿನ ಸಂಭ್ರಮ ಆಚರಿಸಿದೆ. ಹೀಗಾಗಿ ಇಲ್ಲಿ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯ.

ಅಲ್ಲದೇ ಪಂಜಾಬ್‌ ಮತ್ತು ಡೆಲ್ಲಿ ತಂಡಗಳೆರಡೂ ಗೆಲುವಿನ ಹಳಿ ಏರಬೇಕಾದ ಒತ್ತಡದಲ್ಲಿವೆ. ಪಂಜಾಬ್‌ ಕಳೆದ ಮುಖಾಮುಖೀಯಲ್ಲಿ ಹೈದರಾಬಾದ್‌ಗೆ 7 ವಿಕೆಟ್‌ಗಳಿಂದ ಶರಣಾಗಿತ್ತು. ಅಂತೆಯೇ ಡೆಲ್ಲಿಯನ್ನು ಆರ್‌ಸಿಬಿ 16 ರನ್ನುಗಳಿಂದ ಕೆಡವಿತ್ತು.

ಮ್ಯಾಚ್‌ ಆಫ್ ಬಿಗ್‌ ಹಿಟ್ಟರ್
ಇದು ಬಿಗ್‌ ಹಿಟ್ಟರ್‌ಗಳ ಪಂದ್ಯ. ಡೆಲ್ಲಿಯಲ್ಲಿ ಡೇವಿಡ್‌ ವಾರ್ನರ್‌, ಪೃಥ್ವಿ ಶಾ, ನಾಯಕ ರಿಷಭ್‌ ಪಂತ್‌ ಮುಂಚೂಣಿಯಲ್ಲಿದ್ದಾರೆ. ಇತ್ತ ಶಿಖರ್‌ ಧವನ್‌, ಲಿಯಮ್‌ ಲಿವಿಂಗ್‌ಸ್ಟೋನ್‌, ಶಾರೂಖ್‌ ಖಾನ್‌ ಅವರೆಲ್ಲ ಪಂಜಾಬ್‌ ಕಡೆಯ ಹೊಡಿಬಡಿ ಆಟಗಾರರು. ಕಳೆದ ಪಂದ್ಯ ವೇಳೆ ಗಾಯಾಳಾಗಿ ಹೊರಗುಳಿದಿದ್ದ ಪಂಜಾಬ್‌ ನಾಯಕ ಮಾಯಾಂಕ್‌ ಅಗರ್ವಾಲ್‌ ಬುಧವಾರದ ಮುಖಾಮುಖೀಗೆ ಮರಳುವ ಸಾಧ್ಯತೆ ಇದೆ. ಪಂಜಾಬ್‌ಗ ಇದು ಅನಿವಾರ್ಯವೂ ಹೌದು. ಅಗರ್ವಾಲ್‌ ಗೈರಲ್ಲಿ ತಂಡವನ್ನು ಮುನ್ನಡೆಸಿದ ಶಿಖರ್‌ ಧವನ್‌ ದಯನೀಯ ವೈಫ‌ಲ್ಯ ಕಂಡಿದ್ದರು. ಹಾಗೆಯೇ ಆರಂಭಕಾರ ಪ್ರಭ್‌ಸಿಮ್ರಾನ್‌ ಕೂಡ ವಿಫ‌ಲರಾಗಿದ್ದರು.

Advertisement

ಪಂಜಾಬ್‌ನ ಮಧ್ಯಮ ಕ್ರಮಾಂಕ ಜಾನಿ ಬೇರ್‌ಸ್ಟೊ, ಲಿಯಮ್‌ ಲಿವಿಂಗ್‌ಸ್ಟೋನ್‌, ಶಾರೂಖ್‌ ಖಾನ್‌ ಅವರಂಥ ಟಿ20 ಸ್ಪೆಷಲಿಸ್ಟ್‌ಗಳನ್ನೇನೋ ಹೊಂದಿದೆ. ಇವರಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದವರು ಲಿವಿಂಗ್‌ಸ್ಟೋನ್‌ ಮಾತ್ರ.

ಹೈದರಾಬಾದ್‌ ವಿರುದ್ಧ ಇವರದು ಏಕಾಂಗಿ ಹೋರಾಟವಾಗಿತ್ತು. 33 ಎಸೆತಗಳಿಂದ 60 ರನ್‌ ಬಾರಿಸಿದ್ದರು. ಶಾರೂಖ್‌ ಖಾನ್‌ ಸಿಡಿಯುವ ಜತೆಗೆ ಕ್ರೀಸ್‌ ಆಕ್ರಮಿಸಿಕೊಳ್ಳುವ ಅಗತ್ಯ ಎಂದಿಗಿಂತ ಹೆಚ್ಚೇ ಇದೆ.

ಡೆಲ್ಲಿ ಬೌಲಿಂಗ್‌ ಹೆಚ್ಚು ಘಾತಕ
ಡೆಲ್ಲಿ ಬೌಲಿಂಗ್‌ ಸರದಿ ಹೆಚ್ಚು ಘಾತಕ. ಕುಲದೀಪ್‌ ಯಾದವ್‌ 11 ವಿಕೆಟ್‌ ಕಿತ್ತು ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದಾರೆ. ಇವರೊಂದಿಗೆ ಅಕ್ಷರ್‌ ಪಟೇಲ್‌, ಪೇಸರ್‌ ಶಾರ್ದೂಲ್ ಠಾಕೂರ್, ಖಲೀಲ್‌ ಅಹ್ಮದ್‌ ಅವರ ಎಸೆತಗಳನ್ನು ನಿಭಾಯಿಸಿ ನಿಲ್ಲಬೇಕಾದ ಒತ್ತಡ ಪಂಜಾಬ್‌ ಮೇಲಿದೆ. ಆರ್‌ಸಿಬಿ ವಿರುದ್ಧ 48 ರನ್‌ ಬಿಟ್ಟುಕೊಟ್ಟ ಮುಸ್ತಫಿಜುರ್‌ ರೆಹಮಾನ್‌ ನಿಯಂತ್ರಣ ಕಂಡುಕೊಳ್ಳಬೇಕಾದ ಅಗತ್ಯವಿದೆ.

ಡೆಲ್ಲಿಗೆ ಹೋಲಿಸಿದರೆ ಪಂಜಾಬ್‌ ಬೌಲಿಂಗ್‌ ತುಸು ದುರ್ಬಲವಾಗಿ ಗೋಚರಿಸುತ್ತಿದೆ. ಕಾಗಿಸೊ ರಬಾಡ ಇನ್ನೂ ಘಾತಕವಾಗಿ ಪರಿಣಮಿಸಿಲ್ಲ. ಆಲ್‌ರೌಂಡರ್‌ ಒಡೀನ್‌ ಸ್ಮಿತ್‌ ಕೂಡ ಇದೇ ಸಾಲಿನಲ್ಲಿದ್ದಾರೆ. ಹೀಗಾಗಿ ಭಾರತೀಯರಾದ ವೈಭವ್‌ ಅರೋರ, ಆರ್ಷದೀಪ್‌ ಸಿಂಗ್‌ ಮತ್ತು ರಾಹುಲ್‌ ಚಹರ್‌ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next