ಹೂವಿನಹಡಗಲಿ: ನಾಡಿನ ಹೆಸರಾಂತ ಧಾರ್ಮಿಕ ಕ್ಷೇತ್ರ ಮೈಲಾರದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ ಫೆ.22 ಶುಕ್ರವಾರ ಸಂಜೆ ನಡೆಯಲಿದೆ. ಜಾತ್ರೆಗಾಗಿ ನಾಡಿನ ವಿವಿಧ ಮೂಲೆ ಮೂಲೆಗಳಿಂದಲೂ ಭಕ್ತ ಸಮೂಹ ಹರಿದು ಬರುತ್ತಿದೆ. ಸುಕ್ಷೇತ್ರಕ್ಕೆ ಆಗಮಿಸಿ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಕ್ತರು ವಿಶೇಷವಾಗಿ ಪಾಲ್ಗೊಳ್ಳುವುದು. ಜಾತ್ರೆಯ ಸಂಪ್ರದಾಯಗಳಲ್ಲಿ ಒಂದಾಗಿದೆ.
ಆ ಹಿನ್ನೆಲೆಯಲ್ಲಿ ಭಕ್ತರು ತಮ್ಮ ಗ್ರಾಮಗಳಿಂದಲೂ ಜಾತ್ರೆಗೆ ಬರುವ ಸಂದರ್ಭದಲ್ಲಿ ಕಟ್ಟಿಕೊಂಡು ಬಂದಿರುವ ಬುತ್ತಿಯನ್ನು ಮೀಸಲು ಬುತ್ತಿ ಎಂದು ಮೊದಲು ಸ್ವಾಮಿಗೆ ಸಮರ್ಪಣೆ ಮಾಡುವುದು ಮೈಲಾರಲಿಂಗ ಸಂಪ್ರದಾಯಗಳಲ್ಲಿ ಒಂದು. ಹೀಗಾಗಿ ಭಕ್ತರು ತಾವು ತಂದಿರುವ ಮೀಸಲು ಬುತ್ತಿಯನ್ನು ದೇವಸ್ಥಾನದ ಮುಂದೆ ಕುಳಿತಿರುವ ಗೊರವಯ್ಯವರ ದೋಣಿಗೆ ಹಾಕುವ ಮೂಲಕ ದೋಣಿಗೆ ಮೀಸಲು ಬುತ್ತಿ ನೀಡುವುದು ವಾಡಿಕೆ. ನಂತರದಲ್ಲಿ ಜಾತ್ರೆಗಾಗಿ ನಡೆದುಕೊಂಡು ಬರುವುದು ಜಾತ್ರೆಯ ಸಂಪ್ರದಾಯಗಳಲ್ಲಿ ಒಂದು.
ಭಕ್ತರು ತಾವು ಬೇಡಿಕೊಂಡಿದ್ದನ್ನು ಇಷ್ಟಾರ್ಥಿ ಸಿದ್ಧಿಗಾಗಿ ಜಾತ್ರೆಯ ಬಂಡಿ ಜೊತೆಯಲ್ಲಿ ಒಬ್ಬರು ಕಾಲ್ನಡಿಗೆಯಲ್ಲಿ ಬರುವುದಾಗಿ ಹರಕೆ ಹೊತ್ತಿರುತ್ತಾರೆ. ಅದರಂತೆ ಸುಕ್ಷೇತ್ರ ಮೈಲಾರಕ್ಕೆ ಕಾಲ್ನಡಿಗೆಯಲ್ಲಿ ಬಂದು ತಲುಪಿದ ತಕ್ಷಣ ದೂಳ್ ದುಡ್ಡು ಎಂದು ಕಾರ್ಣಿಕದ ಹುಂಡಿಗೆ ತಮಗೆ ಅನುಕೂಲವಾಗುಷ್ಟು ಕಾಣಿಕೆ ಹಾಕುತ್ತಾರೆ. ನಂತರದಲ್ಲಿ ದೇವರ ಸೇವೆ ಮಾಡುವ ಸಂಪ್ರದಾಯದಲ್ಲಿ ದೀವಟಿಗೆ ಬೆಳಗುವುದು. ಕುದುರೆ ಕಾರು ಸೇವೆ ಮಾಡುವುದು. ಹೀಗೆ ವಿಶಿಷ್ಟ ಧಾರ್ಮಿಕ ಸೇವೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ.
ಮಾರನೇಯ ದಿವಸ ತಾವು ಬೀಡು ಬಿಟ್ಟಿದ್ದ ಜಾತ್ರೆಯ ಸ್ಥಳದಿಂದಲೇ ಮೀಸಲು ಬುತ್ತಿಯನ್ನು ಮಾಡಿಕೊಂಡು ದೋಣಿ ತುಂಬಿಸುವ ಕಾರ್ಯವನ್ನು ಮಾಡುತ್ತಾರೆ. ಅ ಸಂದರ್ಭದಲ್ಲಿ ಹಣ್ಣು- ತುಪ್ಪ ನೀಡುವುದು ಮೈಲಾರಲಿಂಗ ಸ್ವಾಮಿ ಸಂಪ್ರದಾಯಗಳಲ್ಲಿ ಒಂದಾಗಿದೆ.
ಅಲ್ಲದೆ ಬೆಲ್ಲದ ಬಂಡಿ ಸೇವೆ ಎಂದು ಭಕ್ತರು ಸುಕ್ಷೇತ್ರದಲ್ಲಿ ಹರಿಯುತ್ತಿರುವ ತುಂಗಾಭದ್ರಾ ನದಿಗೆ ಬೆಳಗ್ಗೆ ಮಡಿಯಿಂದ ಹೋಗಿ ಗಂಗೆಗೆ ಪೂಜೆ ಮಾಡಿ ಎತ್ತಿನ ಬಂಡಿಯಲ್ಲಿ ನದಿ ನೀರನ್ನು ತುಂಬಿಕೊಂಡು ಅದಕ್ಕೆ ತಕ್ಕದಾದ ಪ್ರಮಾಣದಲ್ಲಿ ಬೆಲ್ಲ ಮಿಶ್ರಣ ಮಾಡಿ ಬೆಲ್ಲದ ನೀರನ್ನು ಕಾರ್ಣಿಕ ನುಡಿಯುವ ಡೆಂಕನ ಮರಡಿಗೆ ಕೊಂಡೊಯ್ದು ಭಕ್ತರಿಗೆ ವಿತರಣೆ ಆಡುತ್ತಾರೆ. ಇದರಿಂದಾಗಿ ಎಲ್ಲವೂ ಒಳಿತಾಗುತ್ತದೆ ಎನ್ನುವುದು ನಂಬಿಕೆಯಾಗಿದೆ.
ರೈತರ ಜಾತ್ರೆ: ಪ್ರಸ್ತುತ ಜಾತ್ರೆಯಲ್ಲಿ ಎಲ್ಲಾ ವರ್ಗದ ಜಾತಿ, ಜನಾಂಗದವರು ಬಂದು ಸೇರುತ್ತಾರೆಯಾದರೂ ಸಹ ಹೆಚ್ಚಾಗಿ ರೈತಾಪಿ ವರ್ಗದವರೆ ಸಂಖ್ಯೆ ಹೆಚ್ಚು ಕಾಣುತ್ತದೆ. ಇದಕ್ಕೆ ಕಾರಣ ವರ್ಷಾನುಗಟ್ಟಲೇ ದುಡಿದು ಹೊಲ ಗದ್ದೆಗಳಲ್ಲಿ ಕೆಲಸ ಮಾಡಿ ದಣಿದ ರೈತರ ದೇಹಕ್ಕೆ ದಣಿವಾರಿಸಿಕೊಳ್ಳುವ ಸಂದರ್ಭದಲ್ಲಿಯೇ ಮೈಲಾರಲಿಂಗ ಜಾತ್ರೆ ಬರುವುದರಿಂದಾಗಿ ಈ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುತ್ತಾರೆ. ಇದರಿಂದಾಗಿ ಅವರಿಗೆ ಮನರಂಜನೆಯು ಸಹ ದೊರಕಿದಂತಾಗುತ್ತದೆ. ಒಟ್ಟಾರೆಯಾಗಿ ಮೈಲಾರಲಿಂಗ ಸ್ವಾಮಿ ದೇವರ ಜಾತ್ರೆ ಒಂದು ಕಡೆ ವಿಶಿಷ್ಠತೆಯಿಂದ ಕೂಡಿದ ಜಾನಪದದ ಬಗ್ಗೆ ಬೆಳಕು ಚೆಲ್ಲುತ್ತಿದ್ದರೆ ಮತ್ತೂಂದು ಕಡೆಯಲ್ಲಿ ಐತಿಹಾಸಿಕ ಪೌರಾಣಿಕ ಹಿನ್ನೆಲೆಯಲ್ಲಿ ಬೆಳಕು ಚೆಲ್ಲುವ ಮೂಲಕವಾಗಿ ಇತರೆ ಜಾತ್ರೆಗಳಿಗಿಂತ ವಿಭಿನ್ನ ಎನ್ನುವುದನ್ನು ಸಾಬೀತು ಮಾಡುತ್ತದೆ.
ವಿಶ್ವನಾಥ ಹಳ್ಳಿಗುಡಿ