ಕ್ಲೀಷ್ಟೇಷು ಜೀವೇಷು ಕೃಪಾಪರತ್ವಂ
ಮಧ್ಯಸ್ಥಭಾವಂ ವಿಪರೀತವೃತೌ¤
ಸದಾ ಮಮಾತ್ಮಾ ವಿದಧಾತು ದೇವ
ಎಂಬ ಸುಂದರ ಸೂಕ್ತಿಯಂತೆ ಜ್ಞಾನ ವಂತ ಗುಣವಂತರೊಂದಿಗೆ ಮೈತ್ರಿ ಯನ್ನೂ ದುಃಖೀ ಜೀವಿಗಳೊಂದಿಗೆ ಕೃಪೆಯೂ ಕರುಣೆಯೂ ವಿಪರೀತದ ವ್ಯಕ್ತಿತ್ವದವರೊಂದಿಗೆ ಉದಾಸೀನ ಭಾವನೆಯೂ ಹೃದಯದಲ್ಲಿ ಸದಾ ಸರ್ವಜ್ಞ ವೀತರಾಗನ ನೆನಪೂ ಸಜ್ಜನರ ಲಕ್ಷಣ.
Advertisement
ಭವ್ಯ ಭಾರತವು ಸನಾತನ ಪರಂಪರೆಯ ವೈದಿಕ ಹಾಗೂ ಶ್ರಮಣ ಪರಂಪರೆಯ ಋಷಿ-ಮುನಿಗಳ ತಪೋಭೂಮಿ. ಸದಾ ಚಾರ, ಸದ್ವಿಚಾರ, ಸದಾಶಯಗಳ ಮೇರು ಸಂಸ್ಕೃತಿಯ ಭದ್ರ ಬುನಾದಿಯನ್ನು ನೆಲೆಗೊಳಿಸಿದ ಧರ್ಮನೇತಾರರು, ಮತಾಚಾರ್ಯರು, ತಪೋಮುನಿ ಗಳಿಂದ ಸಕಲ ಜೀವಿಗಳ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಿದ್ದ, ಪ್ರಾರ್ಥಿಸುತ್ತಿರುವ ಮಹಾನ್ ದೇಶ. ಈ ಪವಿತ್ರ ಭೂಮಿಯಲ್ಲಿ ಈಗಿನ ಬಿಹಾರ ರಾಜ್ಯದ ವೈಶಾಲಿ ಕುಂಡ ಗ್ರಾಮದಲ್ಲಿ ವೀರಕ್ಷತ್ರಿಯ ಕಾಶ್ಯಪ ಗೋತ್ರದ ಜ್ಞಾತೃ ವಂಶದ ಸಿದ್ಧಾರ್ಥ ರಾಜ, ತ್ರಿಶಲಾ ದೇವಿಯ ಪುತ್ರರಾಗಿ ಚೈತ್ರ ಶುಕ್ಲ ತ್ರಯೋದಶಿ ಉತ್ತರ ಫಾಲ್ಗುಣಿ ನಕ್ಷತ್ರ ಸೋಮವಾರ ಕ್ರಿ. ಪೂ. 27-03- 598ರಂದು ಜನಿಸಿದರು. ಸಂಪನ್ನಭರಿತ ನಾಡಾದ ಬಿಹಾರದಲ್ಲಿ ಪ್ರಜಾಪ್ರಭುತ್ವ ಮಾದರಿಯ ರಾಜ್ಯ ಭಾರ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಜೀವಹಿಂಸೆ, ಮೂಢ ಭಕ್ತಿ, ಸಾಮಾಜಿಕ ಅಸಮತೆಯನ್ನು ಹೋಗಲಾಡಿ ಸುವ ಕೆಲಸವನ್ನು ಭಗವಾನ್ ಮಹಾವೀರರು ಮಾಡಿದರು.
Related Articles
ಜೈನ ಧರ್ಮದಲ್ಲಿ ವ್ಯಕ್ತಿಪೂಜೆಯ ಬದಲು ಗುಣಗಳ ಆರಾಧನೆಗೆ ಹೆಚ್ಚಿನ ಮಹತ್ವ. ಯಾವ ವ್ಯಕ್ತಿಯು ಸಂಸ್ಕಾರವಂತನಾಗಿ ಆತ್ಮವು ಮಹಾತ್ಮನಾಗಿ ಪರಮಾತ್ಮನಾಗುತ್ತದೆ. ಆತ್ಮೋನ್ನತಿಯ ದಾರಿಯಲ್ಲಿ ಗಮನಾರ್ಹ ಸಾಧನೆ ಮಾಡಿ ಐದು ಹಂತಗಳನ್ನು ಏರಿದ ಜೀವ ಸಿದ್ಧರಾಗುತ್ತಾರೆ. ದೇವರು ಹೊರಗೆ ಇಲ್ಲ, ದೂರವೂ ಇಲ್ಲ, ದೇವರಾಗುವ ಅರ್ಹತೆ ಉಳ್ಳ ಚೈತನ್ಯಾತ್ಮ ಎಲ್ಲರಲ್ಲೂ ಇದೆ ಎಂಬುದು ಮಹಾವೀರರ ಧರ್ಮೋಪದೇಶವಾಗಿತ್ತು.
Advertisement
ವಿಶ್ವಶಾಂತಿಯ ಮಾರ್ಗೋಪಾಯಮಹಾವೀರರು ಸರಳವಾದ, ಸುಲಭವಾದ ಆ ಸಂದರ್ಭದಲ್ಲಿ ಪ್ರಚಲಿತದಲ್ಲಿದ್ದ ಅರ್ದ ಮಾಗಧಿ ಎನ್ನುವ ಪ್ರಾಕೃತ ಭಾಷೆಯಲ್ಲಿ ಕೇವಲಜ್ಞಾನವಾದ ಅನಂತರ ತಮ್ಮ 30ನೇ ವಯಸ್ಸಿನಿಂದ 32 ವರ್ಷಗಳ ಕಾಲ ಧರ್ಮೋಪದೇಶ ವನ್ನು ನಿರಂತರ ನೀಡಿದರು. ಅವರ ಒಟ್ಟು ಜೀವಿತಾವ ಧಿ 72 ವರ್ಷಗಳು. ಅಂದರೆ 15-10-527ರ ಅಮಾವಾಸ್ಯೆ ಯಂದು ಮೋಕ್ಷವನ್ನು ಪಡೆದರು. ಜೈನರು ಆ ದಿನವನ್ನು ದೀಪಾವಳಿ ಎಂದು ಸಂಭ್ರಮದಿಂದ ಆಚರಿಸುತ್ತಾರೆ. ಅವರ ತಣ್ತೀಗಳು, ಬೋಧನೆಗಳು ಸಾರ್ವಕಾಲಿಕ ಸತ್ಯ ಹಿತಕಾರಿಗಳಾಗಿತ್ತು. ಅವರ ಧರ್ಮಬೋಧನೆಗಳನ್ನು ಅವರ ಗಣಧರರಾದ ವೈದಿಕ ಶ್ರೇಷ್ಠ ಗೌತಮರು ಸರ್ವರಿಗೂ ತಿಳಿಸುತ್ತಿದ್ದರು. ಕ್ಷತ್ರಿಯ ರಾಜ ಶ್ರೇಣಿಕ, ಬಿಂಬಸಾರ ಮೊದಲಾದವರು ಆಕರ್ಷಿತರಾಗಿದ್ದರು. ವೃತ್ತಿಧರ್ಮದ ಭೇದವಿಲ್ಲದೆ ಎಲ್ಲರೂ ಅವರ ಅನುಯಾಯಿಗಳಾಗಿದ್ದರು. ಸತ್ಯ, ಅಹಿಂಸೆ, ಅಚೌರ್ಯ, ಅಪರಿಗ್ರಹ, ಬ್ರಹ್ಮಚರ್ಯ ಎಂಬ ಪಂಚ ಶೀಲಗಳನ್ನು ಬೋಧಿಸಿದರು. ಇವು ಮಾನವೀಯ ಗುಣ ಮೌಲ್ಯಗಳೆಂದು ತಿಳಿಸಿ ಸ್ವಕಲ್ಯಾಣ ಪರಕಲ್ಯಾಣದ ಆತ್ಮಸಾಧನೆಯು ಸರ್ವರಿಗೂ ಸುಖ ಮತ್ತು ಶಾಂತಿಯನ್ನು ನೀಡುತ್ತದೆ. ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂದು ನುಡಿದರು. ಪ್ರಾಣಿದಯೆ, ಕರುಣೆ, ಸಹಬಾಳ್ವೆ, ಕ್ಷಮೆ, ಮೃದು ಸ್ವಭಾವ, ಸರಳ ಸಾತ್ವಿಕ ಜೀವನ, ಶ್ರದ್ಧಾವಂತ, ವಿವೇಕವಂತ ಸಾಧಕರ ಲಕ್ಷಣ ಎಂದರು. ಧರ್ಮದಲ್ಲಿ ಒಳನುಸುಳಿದ್ದ ಶಿಥಿಲಾಚಾರವನ್ನು ಹೋಗಲಾಡಿಸಿದರು. ಭಕ್ತ ಹಾಗೂ ಭಗವಂತನ ನಡುವೆ ಕಂದರ ಸಲ್ಲದು ಎಂದರು. ಜೀವ ಹಿಂಸೆಯಿಂದ, ರಕ್ತಪಾತದಿಂದ, ಪ್ರಾಣಿಗಳನ್ನು ನೋಯಿಸುವುದರಿಂದ, ಅತೀ ಭಾರಾರೋಪಣೆ ಮಾಡುವುದರಿಂದ, ಮೂಕಪ್ರಾಣಿಗಳ ವೇದನೆಯು ಭವ ಭವದಲ್ಲಿ ನಮ್ಮ ದುಃಖವನ್ನು ಹೆಚ್ಚಿಸುತ್ತದೆ. ಜೀವದಯಾಪರವಾದ ಅಹಿಂಸೆಯೇ ಪರಮ ಧರ್ಮ ವೆಂದು ಬೋ ಧಿಸಿದರು. ನೀವೂ ಬದುಕಿ, ಇತರರನ್ನೂ ಬದುಕಗೊಡಿ ಎಂಬುದು ಅವರ ಜನಪ್ರಿಯ ಸಂದೇಶವಾಗಿತ್ತು. ಹಿಂಸೆಯಿಂದ ಎಲ್ಲೂ ಶಾಂತಿ ಇಲ್ಲ, ಅಹಿಂಸಾ ಧರ್ಮ ಪಾಲನೆಯಿಂದ ಜಗತ್ತು ಸುಖಿಯಾಗುತ್ತದೆ. ಅನಾದಿಕಾಲದಿಂದಲೂ ಪಂಚಶೀಲಗಳ ಅನುಸರಣೆಯನ್ನು ಆತ್ಮೋನ್ನತಿಗಾಗಿ ಸರ್ವರೂ ಮಾಡಬೇಕೆಂದರು. ಅಪರಿಗ್ರಹ ವ್ರತವು ಆತ್ಮಶುದ್ಧಿಗೆ ಕಾರಣ. ತನ್ನನ್ನು ತಾನೇ ಇಂದ್ರಿಯದಮನ ಮಾಡಿ ಕೊಳ್ಳಬೇಕು. ಮನಸ್ಸಿನ ವಿಕಾರಗಳನ್ನು ನಿರ್ನಾಮ ಮಾಡಬೇಕು. ಶತ್ರುಗಳು ಹೊರಗೆ ಎಲ್ಲೂ ಇಲ್ಲ. ನಮ್ಮೊಳಗೇ ಇರುವ ಕಾಮ, ಕ್ರೋಧ, ಮದ, ಮತ್ಸರ, ಮೋಹಗಳನ್ನು ಅಣುವ್ರತ, ಗುಣವ್ರತ, ಶಿಕ್ಷಾವ್ರತ ಆಚರಿಸುವ ಮೂಲಕ ಜೀವನದ ನಿಜವಾದ ಸಂತೋಷವನ್ನು ಕಾಣೋಣ. ಶರೀರವು ನೌಕೆಯಂತಿದೆ. ಆತ್ಮ ನಾವಿಕನಂತಿದೆ. ಸಂಸಾರವನ್ನು ಸಮುದ್ರ ಎನ್ನಲಾಗಿದೆ. ಈ ಸಂಸಾರ ಸಾಗರದ ದುಃಖದ ಪ್ರಯಾಣವನ್ನು ಯೋಗ್ಯ ಜ್ಞಾನ ತಪಸ್ಸಿನ ಸದ್ವಿವೇಕದ ಮೂಲಕ ಅಪಾಯ ವಿಲ್ಲದೆ ಸುಖವಾಗಿ ದಾಟೋಣ ಎಂದು ನುಡಿದ ಭಗವಾನ್ ಮಹಾವೀರರ ಜಯಂತಿ ಮತ್ತೊಮ್ಮೆ ಬಂದಿದೆ. ಆ ಯುಗ ಪುರುಷರ ಸಹಸ್ರ ಸಹಸ್ರ ವರ್ಷಗಳ ಹಿಂದಿನ ವಿಚಾರಧಾರೆ ಇಂದಿಗೂ ಪ್ರಸ್ತುತ. ಸರ್ವೋದಯ ಧರ್ಮತೀರ್ಥದ ಪ್ರವರ್ತಕ ಭಗವಾನ್ ಮಹಾವೀರರ ಸಂದೇಶಗಳನ್ನು ಸಾಧ್ಯವಾದಷ್ಟು ಪಾಲಿಸುವ ಮೂಲಕ ಅವರಿಗೆ ಭಕ್ತಿಯ ಕುಸುಮವನ್ನು ಸಮರ್ಪಿಸೋಣ. -ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ
ಶ್ರೀ ಜೈನ ಮಠ, ಮೂಡುಬಿದಿರೆ