Advertisement

ಇಂದು ಕೋಲ್ಕತಾದಲ್ಲಿ  ಕೆಕೆಆರ್‌ಗೆ ಪಂಜಾಬ್‌ ಸವಾಲು

11:06 AM Apr 13, 2017 | Team Udayavani |

ಕೋಲ್ಕತಾ; ಎರಡು ಬಾರಿಯ ಚಾಂಪಿಯನ್‌ ಕೋಲ್ಕತಾ ನೈಟ್‌ರೈಡರ್ ತಂಡವು ಗುರುವಾರ ನಡೆಯುವ ಐಪಿಎಲ್‌ 10ರ ಪಂದ್ಯದಲ್ಲಿ ಉತ್ತಮ ಫಾರ್ಮ್ನಲ್ಲಿರುವ ಅಜೇಯ ಖ್ಯಾತಿಯ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಎದುರಿಸಲಿದೆ. 

Advertisement

2012 ಮತ್ತು 2014ರಲ್ಲಿ ಪ್ರಶಸ್ತಿ ಗೆದ್ದಿರುವ ಕೆಕೆಆರ್‌ ತಂಡವು ಪಂಜಾಬ್‌ ವಿರುದ್ಧ 13 ಜಯ-6 ಸೋಲಿನ ದಾಖಲೆ ಹೊಂದಿದೆ. ತವರಿನ ಲಾಭ ಪಡೆಯುವ ಕೆಕೆಆರ್‌ ಗೆಲುವಿನ ವಿಶ್ವಾಸದಲ್ಲಿದೆ. ಆದರೆ ಈ ಋತುವಿನ ಗರಿಷ್ಠ ರನ್‌ ಗಳಿಸಿರುವ ಕ್ರಿಸ್‌ ಲಿನ್‌ ಗಾಯಗೊಂಡಿರುವುದು ಕೆಕೆಆರ್‌ಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ.

ಆಸ್ಟ್ರೇಲಿಯದ ಕ್ರಿಸ್‌ ಲಿನ್‌ ಐಪಿಎಲ್‌ನ ನೂತನ ಬ್ಯಾಟಿಂಗ್‌ ತಾರೆಯಾಗಿ ಗೋಚರಿಸಿ ದ್ದಾರೆ. ಗುಜರಾತ್‌ ಲಯನ್ಸ್‌ ವಿರುದ್ಧ ಮೊದಲ ಪಂದ್ಯದಲ್ಲಿ ಲಿನ್‌ ಕೇವಲ 41 ಎಸೆತಗಳಲ್ಲಿ ಅಜೇ 93 ರನ್‌ ಸಿಡಿಸಿದರಲ್ಲದೇ ಗೌತಮ್‌ ಗಂಭೀರ್‌ ಜತೆಗೂಡಿ ಮುರಿಯದ ಮೊದಲ ವಿಕೆಟಿಗೆ ದಾಖಲೆಯ 184 ರನ್‌ ಪೇರಿಸಿ ತಂಡಕ್ಕೆ 10 ವಿಕೆಟ್‌ ಅಂತರದ ಜಯ ದೊರಕಿಸಿಕೊಟ್ಟಿದ್ದರು. 

ಆದರೆ ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆದ ಪಂದ್ಯದ ವೇಳೆ ಲಿನ್‌ ತನ್ನ ಎಡ ಭುಜಕ್ಕೆ ಗಾಯ ಮಾಡಿಕೊಂಡಿದ್ದು ತಂಡದಿಂದ ಹೊರಬೀಳುವ ಅಪಾಯಕ್ಕೆ ಸಿಲುಕಿದ್ದಾರೆ. ಹಳೇ ಗಾಯ ಉಲ್ಬಣಗೊಂಡಿದ್ದರಿಂದ ಅವರ ಐಪಿಎಲ್‌ ಅಭಿಯಾನ ಕೊನೆಗೊಳ್ಳುವ ಸಾಧ್ಯತೆಯಿದೆ. ಆದರೆ ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದೇವೆ. 2014ರಲ್ಲಿ ಇದೇ ಭುಜದ ಗಾಯಕ್ಕೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಲಿನ್‌ ತಂಡಕ್ಕೆ ಸೇರ್ಪಡೆಗೊಳ್ಳುವುದು ಸಂಶಯವಾಗಿದ್ದರೂ ಭಾರತ ತಂಡದ ಸ್ಟಾರ್‌ ವೇಗಿ ಉಮೇಶ್‌ ಯಾದವ್‌ ಈಗಾಗಲೇ ತಂಡಕ್ಕೆ ಸೇರ್ಪಡೆಯಾಗಿರುವುದು ಕೆಕೆಆರ್‌ನ ಬಲ ಹೆಚ್ಚಿಸಿದೆ. 

ತವರಿನಲ್ಲಿ ನಿರಂತರ ಟೆಸ್ಟ್‌ ಆಡಿದ್ದರಿಂದ ಉಮೇಶ್‌ ಯಾದವ್‌ ಬಲ ಸೊಂಟ ಮತ್ತು ಕೆಳ ಬೆನ್ನಿನ ಸೆಳೆತದಿಂದಾಗಿ ಕೆಕೆಆರ್‌ನ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದರು. ತವರಿನಲ್ಲಿ ಭಾರತ ತಂಡ ಆಡಿದ 13 ಟೆಸ್ಟ್‌ಗಳಲ್ಲಿ ಯಾದವ್‌ 12ರಲ್ಲಿ ಆಡಿದ್ದರು ಮತ್ತು ಆಸ್ಟ್ರೇಲಿಯ ವಿರುದ್ಧ 2-1 ಸರಣಿ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡಿದ್ದರು.

Advertisement

ಸ್ಪಿನ್‌ಗೆ ನೆರವಾಗುವ ಈ ಪಿಚ್‌ನಲ್ಲಿ ಯಾದವ್‌ ತನ್ನ ಬಿಗು ದಾಳಿಯಿಂದ ಎದುರಾಳಿಯ ರನ್‌ವೇಗಕ್ಕೆ ಬ್ರೇಕ್‌ ನೀಡುವ ಸಾಧ್ಯತೆಯಿದೆ. ಟೆಸ್ಟ್‌ ಸರಣಿಯಲ್ಲೂ ಆರ್‌. ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ ಮ್ಯಾಜಿಕ್‌ ನಿರ್ವಹಣೆ ನೀಡಿದ್ದರೂ ಯಾದವ್‌ ನಿರ್ಣಾಯಕ ಹಂತದಲ್ಲಿ ಬ್ರೇಕ್‌ ನೀಡುವಲ್ಲಿ ಯಶಸ್ವಿಯಾಗಿದ್ದರು. ಅವರು ಮೂರನೇ ಯಶಸ್ವಿ ಬೌಲರ್‌ ಆಗಿದ್ದರು. 

ಯಾದವ್‌ ಅವರು ಅಂಕಿತ್‌ ರಜಪೂತ್‌ ಬದಲಿಗೆ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಅಂಕಿತ್‌ ಮುಂಬೈ ವಿರುದ್ಧದ ಪಂದ್ಯದ 19ನೇ ಓವರಿನಲ್ಲಿ 19  ರನ್‌ ಬಿಟ್ಟುಕೊಟ್ಟಿದ್ದರು. ಇದರಿಂದಾಗಿ 178 ರನ್‌ ಸವಾಲಿಗೆ ಉತ್ತರವಾಗಿ ಮುಂಬೈ ಒಂದು ಎಸೆತ ಬಾಕಿ ಇರುವಂತೆ ಜಯಭೇರಿ ಬಾರಿಸಿತ್ತು.

ಕೆಕೆಆರ್‌ನ ಪೂರ್ಣ ಶಕ್ತಿ ಬೌಲಿಂಗ್‌ನಲ್ಲಿ ಅಡಗಿದೆ. ಆದರೆ ಲಿನ್‌ ಅವರ ಅನುಪಸ್ಥಿತಿಯಲ್ಲಿ ತಂಡದ ಬ್ಯಾಟಿಂಗಿಗೆ ಹೊಡೆತ ಬೀಳುವ ಸಾಧ್ಯತೆಯಿದೆ. ಒಂದು ವೇಳೆ ಲಿನ್‌ ಹೊರಬಿದ್ದರೆ ಅವರ ಜಾಗದಲ್ಲಿ ಬಾಂಗ್ಲಾದೇಶದ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಅವರನ್ನು ಆಡಿಸುವ ಸಾಧ್ಯತೆಯಿದೆ. 

ಲಿನ್‌ ಅನುಪಸ್ಥಿತಿಯಲ್ಲಿ ರಾಬಿನ್‌ ಉತ್ತಪ್ಪ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದೆ. ಆದರೆ ದೀರ್ಘ‌ ಸಮಯದಿಂದ ಅವರ ಕಳಪೆ ಫಾರ್ಮ್ ಕೆಕೆಆರ್‌ಗೆ ಚಿಂತೆಯನ್ನುಂಟು ಮಾಡಿದೆ. ಆದರೆ ದೇಶೀಯ ಕ್ರಿಕೆಟಿಗರಾದ  ಮನೀಷ್‌ ಪಾಂಡೆ, ಸೂರ್ಯಕುಮಾರ್‌ ಯಾದವ್‌ ಮಿಂಚುತ್ತಿರುವುದು ತಂಡದ ಬಲವಾಗಿದೆ. ಪಾಂಡೆ ಮುಂಬೈ ವಿರುದ್ಧ 47 ಎಸೆತಗಳಿಂದ 81 ರನ್‌ ಸಿಡಿಸಿದ್ದರಿಂದ ಕೆಕೆಆರ್‌ ಆರಂಭಿಕ ಕುಸಿತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿತ್ತು.

ಪಂಜಾಬ್‌ ಅಜೇಯ
ಕಳೆದ 9 ಐಪಿಎಲ್‌ಗ‌ಳಲ್ಲಿ 2014ರಲ್ಲಿ ಫೈನಲ್‌ ಹಂತಕ್ಕೇರಿರುವುದು ಪಂಜಾಬ್‌ನ ಶ್ರೇಷ್ಠ ಸಾಧನೆಯಾಗಿತ್ತು. ಇದೀಗ ವೀರೇಂದ್ರ ಸೆಹವಾಗ್‌ ಮಾರ್ಗದರ್ಶನದಲ್ಲಿ ತಂಡ ಅಮೋಘ ನಿರ್ವಹಣೆ ನೀಡುತ್ತಿದ್ದು ಆಡಿದ ಎರಡು ಪಂದ್ಯಗಳಲ್ಲಿ ಪುಣೆ ಮತ್ತು ಆರ್‌ಸಿಬಿ ವಿರುದ್ಧ ಜಯ ಸಾಧಿಸಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದೆ.

ಚೊಚ್ಚಲ ನಾಯಕತ್ವದಲ್ಲಿ ಆಸ್ಟ್ರೇಲಿಯದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಅಮೋಘ ನಿರ್ವಹಣೆ ಗಮನ ಸೆಳೆದಿದೆ. ರಾಂಚಿಯಲ್ಲಿ ನಡೆದ ಭಾರತ ವಿರುದ್ಧದ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಸಂಭ್ರಮದಲ್ಲಿದ್ದ ಮ್ಯಾಕ್ಸ್‌ವೆಲ್‌ ಅವರನ್ನು ಇವೋನ್‌ ಮಾರ್ಗನ್‌ ಮತ್ತು ಡ್ಯಾರನ್‌ ಸಮ್ಮಿ ಅವರನ್ನು ಬಿಟ್ಟು ಪಂಜಾಬ್‌ ತಂಡದ ನಾಯಕರನ್ನಾಗಿ ಹೆಸರಿಸಲಾಗಿತ್ತು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಮ್ಯಾಕ್ಸ್‌ವೆಲ್‌ ಎರಡೂ ಪಂದ್ಯಗಳಲ್ಲಿ ಅಮೋಘ ನಿರ್ವಹಣೆ ನೀಡಿ ತನ್ನ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟರು. ಅಜೇಯ 44 ರನ್‌ ಬಾರಿಸುವ ಮೂಲಕ ಪುಣೆ ವಿರುದ್ಧ ತಂಡಕ್ಕೆ ಆರು ವಿಕೆಟ್‌ಗಳ ಜಯ ದೊರಕಿಸಿಕೊಟ್ಟ ಮ್ಯಾಕ್ಸ್‌ವೆಲ್‌ ಆರ್‌ಸಿಬಿ ವಿರುದ್ಧ 22 ಎಸೆತಗಳಿಂದ 43 ರನ್‌ ಸಿಡಿಸಿ ಎಂಟು ವಿಕೆಟ್‌ಗಳ ಭರ್ಜರಿ ಜಯಕ್ಕೆ ಕಾರಣರಾದರು.

Advertisement

Udayavani is now on Telegram. Click here to join our channel and stay updated with the latest news.

Next