Advertisement

ಇಂದು ಬೆಂಗಳೂರಿನಲ್ಲಿ ವಿಕಾಸಪರ್ವ ಸಮಾವೇಶ

06:15 AM Feb 17, 2018 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡುವ ಜೆಡಿಎಸ್‌ ವಿಕಾಸಪರ್ವ ಸಮಾವೇಶ ಶನಿವಾರ ನಡೆಯಲಿದೆ.

Advertisement

ಸಮಾವೇಶದಲ್ಲಿ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಭಾಗವಹಿಸುವ ನಿರೀಕ್ಷೆಯಿದ್ದು, 120 ರಿಂದ 140 ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಸಹ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಯಲಹಂಕ ಸಮೀಪದ ನಿಟ್ಟೆ ಮೀನಾಕ್ಷಿ ಕಾಲೇಜು ಬಳಿ 150 ಎಕರೆ ಪ್ರದೇಶದಲ್ಲಿ ಸಮಾವೇಶಕ್ಕಾಗಿ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ. ಶನಿವಾರ ಮಧ್ಯಾಹ್ನ 2 ಗಂಟೆಗೆ ಸಮಾವೇಶ ಪ್ರಾರಂಭವಾಗಲಿದೆ. ವಿಕಾಸಪರ್ವ ಸಮಾವೇಶಕ್ಕಾಗಿ ಮಧು ಬಂಗಾರಪ್ಪ, ಬಿ.ಎಂ.ಫ‌ರೂಕ್‌ ಜತೆಗೂಡಿ ಕಳೆದೊಂದು ವಾರದಿಂದ ಸಿದ್ಧತೆ ನಡೆಸಿರುವ ಕುಮಾರಸ್ವಾಮಿ, ಹತ್ತು ಲಕ್ಷ ಜನ ಸೇರಿಸುವ ನಿರೀಕ್ಷೆಯಲ್ಲಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಶಕ್ತಿ ಪ್ರದರ್ಶನದ ಮೂಲಕ ಸೆಡ್ಡು ಹೊಡೆಯಲು ಮುಂದಾಗಿರುವ ಕುಮಾರಸ್ವಾಮಿ, ಇದಕ್ಕಾಗಿ ಕಳೆದ ಹತ್ತು ದಿನಗಳಿಂದ ಜಿಲ್ಲಾ ಮುಖಂಡರ ಜತೆ ನಿರಂತರ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಶುಕ್ರವಾರ ವಿಧಾನಸಭೆಗೂ ಗೈರು ಹಾಜರಾಗಿದ್ದ ಕುಮಾರಸ್ವಾಮಿ, ವಿಕಾಸಪರ್ವ ಸಮಾವೇಶದ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದರು. ಸದನಕ್ಕೆ ಆಗಮಿಸಿದ್ದ ಜೆಡಿಎಸ್‌ ಶಾಸಕರು ಬಜೆಟ್‌ ಮಂಡನೆ ಮುಗಿದ ತಕ್ಷಣ ಸಮಾವೇಶ ಸ್ಥಳಕ್ಕೆ ತೆರಳಿದರು.

ಸಮಾವೇಶದಲ್ಲಿ ಬಿಎಸ್‌ಪಿ, ಎನ್‌ಸಿಪಿ, ಎಡಪಕ್ಷಗಳ ಜತೆಗಿನ ಮೈತ್ರಿಯನ್ನು ಅಧಿಕೃತವಾಗಿ ಘೋಷಣೆ ಮಾಡಿ ಕನ್ನಡ, ದಲಿತ, ರೈತಪರ ಸಂಘಟನೆಗಳ ಜತೆಯೂ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ತೃತೀಯ ಶಕ್ತಿ ರಚನೆ ಬಗ್ಗೆಯೂ ಪ್ರಸ್ತಾಪಿಸುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next