Advertisement

ಇಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 12 ವರ್ಷ ಪೂರ್ಣ

02:24 PM Aug 23, 2019 | Suhan S |

ಚಿಕ್ಕಬಳ್ಳಾಪುರ: ಅವಿಭಜಿತ ಕೋಲಾರ ಜಿಲ್ಲೆಯ ಉಪ ವಿಭಾಗವಾಗಿದ್ದ ಚಿಕ್ಕಬಳ್ಳಾಪುರ, ಸ್ವತಂತ್ರ ಜಿಲ್ಲೆಯಾಗಿ ರಚನೆಗೊಂಡು ಆ.23ಕ್ಕೆ 12 ವರ್ಷ ತುಂಬಿ 13ಕ್ಕೆ ಪಾದಾರ್ಪಣೆ ಮಾಡುತ್ತಿದೆ. ಆದರೆ ಕಳೆದ 12 ವರ್ಷ ದಲ್ಲಿ ಜಿಲ್ಲೆಯನ್ನು ಬರೋಬ್ಬರಿ 10 ವರ್ಷದ ಕಾಲ ಕಾಡಿದ ಬರ ಜಿಲ್ಲೆಯ ಜನತೆಯನ್ನು ಹೈರಾಣಾಗಿಸಿದೆ.

Advertisement

ಸರ್ಕಾರದ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಜಿಲ್ಲೆಗೆ ಯಾವುದೇ ಶಾಶ್ವತ ನೀರಾವರಿ ಹರಿಯದೇ ಜಿಲ್ಲೆಯ ಜನ ಜೀವನ ನಿತ್ಯ ಬರದ ಬೇಗುದಿಯಲ್ಲಿ ಇಂದಿಗೂ ನರಳಾಡುವಂತೆ ಮಾಡಿದೆ.

ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ: ಹೌದು, ಉಪ ವಿಭಾಗವಾಗಿದ್ದ ಚಿಕ್ಕಬಳ್ಳಾಪುರವನ್ನು ಜಿಲ್ಲೆಯಾಗಿ ಘೋಷಣೆ ಮಾಡಿದ್ದು, 2007ರ ಆಗಸ್ಟ್‌ 23 ರಂದು. ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರ ಸ್ವಾಮಿ ರಾಮನಗರವನ್ನು ಮಾತ್ರ ಜಿಲ್ಲೆಯಾಗಿ ಘೋಷಿಸಿದರೆ ಚಿಕ್ಕಬಳ್ಳಾಪುರ ಜನ ತಮ್ಮನ್ನು ತಪ್ಪಾಗಿ ಭಾವಿಸುತ್ತಾರೆ ಎಂದು ಹೇಳಿ ಚಿಕ್ಕಬಳ್ಳಾಪುರವನ್ನು ಜಿಲ್ಲೆಯಾಗಿ ಘೋಷಿಸಿದರು. ಆದರೆ ಜಿಲ್ಲೆಯಾಗಿ ಘೋಷಣೆಗೊಂಡಾಗ ಜಿಲ್ಲೆಯ ರೈತಾಪಿ ಜನರಲ್ಲಿ ಉಂಟಾದ ಸಂಭ್ರಮ, ಬಹುದಿನಗಳ ಕನಸು ಈಡೇರಿದ ಭಾವನೆ ಹೆಚ್ಚು ದಿನ ಉಳಿಯಲಿಲ್ಲ.

ಆಕ್ರೋಶ, ಅಸಮಾಧಾನ: ಚಿಕ್ಕಬಳ್ಳಾಪುರ ಉಪ ವಿಭಾಗ ಆಡಳಿತಾತ್ಮಕ‌ವಾಗಿ ಕೋಲಾರದಿಂದ ಬೇರ್ಪಟ್ಟು ಸ್ವತಂತ್ರ ಜಿಲ್ಲೆಯಾದರೂ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಇಂದಿಗೂ ಪರಿಹಾರ ಸಿಗಲಿಲ್ಲ ಎಂಬ ಆಕ್ರೋಶ, ಸಿಟ್ಟು, ಅಸಮಾಧಾನ ಜಿಲ್ಲೆಯ ಜನರ ನಾಡಮಿಡಿತಗಳಲ್ಲಿ ಜೀವಂತವಾಗಿದೆ.

ದುಷ್ಪರಿಣಾಮ: ವಿಶೇಷವಾಗಿ ಶಾಶ್ವತ ನೀರಾವರಿ ಸೇರಿದಂತೆ ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಒದಗಿಸುವ ಕೈಗಾರಿಕೆಗಳು ತಲೆ ಎತ್ತಲಿಲ್ಲ ಎಂಬ ಆಕ್ರೋಶ ಜಿಲ್ಲೆಯ ಜನರಲ್ಲಿ ಕೇಳಿ ಬರುತ್ತಿದೆ. ಇದಕ್ಕಿಂತ ಮುಖ್ಯವಾಗಿ ಕಳೆದ 12 ವರ್ಷದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ 10 ವರ್ಷಗಳ ಕಾಲ ಮಳೆ ಬೆಳೆ ಕೊರತೆಯಿಂದ ಬರಗಾಲಕ್ಕೆ ತುತ್ತಾಗಿ ಜಿಲ್ಲೆಯ ಜನಜೀವನ ಪರಿತಪಿಸುವಂತಾಗಿದ್ದು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದೆ.

Advertisement

ಈಡೇರದ ನೀರಾವರಿ ಕನಸು: ಜಿಲ್ಲೆಯಾಗಿ 12 ವರ್ಷ ತುಂಬಿ 13ನೇ ವರ್ಷಕ್ಕೆ ಪಾರ್ದಪಣೆ ಮಾಡುತ್ತಿ ರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಜಪ ಮುಂದುವರಿದಿದೆ. ಸತತ 25 ವರ್ಷಗಳಿಂದಲೂ ನೀರಾವರಿ ಹೋರಾಟ ನಡೆದರೂ ಸರ್ಕಾರಗಳ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಯಿಂದ ಜಿಲ್ಲೆಯ ನೀರಾವರಿ ಹೋರಾಟ ಕೇವಲ ಅರಣ್ಯರೋದನವಾಗಿದೆ.

ಬಯಲುಸೀಮೆ ಜಿಲ್ಲೆಗಳಿಗೆ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಈ ಭಾಗದಲ್ಲಿ ದೀರ್ಘ‌ ಕಾಲದಿಂದ ಹೋರಾಟಗಳು ನಡೆದರೂ ಸರ್ಕಾರಗಳು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಬರೀ ಯೋಜನೆಗಳ ಹೆಸರಿನಲ್ಲಿ ಜಿಲ್ಲೆಯ ಜನತೆಯನ್ನು ಕಣ್ಣೊರೆಸುತ್ತಿವೆಂಬ ಆಕ್ರೋಶ ಇದೆ.

ಅಗತ್ಯವಾದ ಭೂಸ್ವಾಧೀನವಾಗಿಲ್ಲ: ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಿದ್ದ ಡಿ.ವಿ.ಸದಾನಂದ ಗೌಡ ಅವಧಿಯಲ್ಲಿ ಅನುಮೋದನೆ ಪಡೆದ ಎತ್ತಿನಹೊಳೆ ಯೋಜನೆಗೆ ಕಾಂಗ್ರೆಸ್‌ ಸರ್ಕಾರ ಶಂಕುಸ್ಥಾಪನೆ ನೆರವೇರಿಸಿತು. ಆದರೆ ಇಂದಿಗೂ ಯೋಜನೆಗೆ ಅಗತ್ಯವಾದ ಭೂಸ್ವಾಧೀನವಾಗಿಲ್ಲ.

ಯೋಜನೆಗೆ 13 ಸಾವಿರ ಕೋಟಿ ನಿಗದಿಪಡಿಸಿ 5 ಸಾವಿರ ಕೋಟಿ ಖರ್ಚು ಮಾಡಿದ್ದರೂ ಜಿಲ್ಲೆಗೆ ನೀರಾವರಿ ಸಿಗುವ ಲಕ್ಷಣಗಳು ಕಾಣುತ್ತಿಲ್ಲ.

ನೀರಾವರಿಯಿಂದ ಜಿಲ್ಲೆ ವಂಚಿತ: ಎತ್ತಿನಹೊಳೆ ವಿಳಂಬವಾಗುವುದನ್ನು ಸರ್ಕಾರವೇ ಒಪ್ಪಿಕೊಂಡು ಸಾವಿರ ಕೋಟಿ ವೆಚ್ಚದಲ್ಲಿ ಹೆಬ್ಟಾಳ, ನಾಗವಾರ ಕೆರೆಗಳ ತ್ಯಾಜ್ಯ ನೀರನ್ನು ಸಂಸ್ಕರಿಸಿ ಜಿಲ್ಲೆಯ ಕೆರೆಗಳ ತುಂಬಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದ್ದರೂ ಜಿಲ್ಲೆಯ ಬೇಡಿಕೆಯಾದ ಸಮಗ್ರ ನೀರಾವರಿ ಜತೆಗೆ ಕೃಷಿಗೆ ಅಗತ್ಯವಾದ ನೀರಾವರಿಯಿಂದ ಜಿಲ್ಲೆ ವಂಚಿತವಾಗುವುದು ಎದ್ದು ಕಾಣುತ್ತಿದೆ.

ತ್ವರಿತಗತಿಯಲ್ಲಿ ಸಾಗುತ್ತಿಲ್ಲ: ವಿಪರ್ಯಾಸವೆಂದರೆ ಈ ಆಗಸ್ಟ್‌ ವೇಳೆಗೆ ಕಂದವಾರದ ಕೆರೆಗೆ ನೀರು ಹರಿಸುವುದಾಗಿ ಹೇಳಿದ್ದ ಸರ್ಕಾರ, ಇದೀಗ ಇನ್ನೂ ನಾಲ್ಕೈದು ತಿಂಗಳು ಕಾಲಾವಕಾಶಬೇಕೆಂದು ಹೇಳು ತ್ತಿದೆ. ಸದ್ಯ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ ಎತ್ತಿನಹೊಳೆ, ಎಚ್.ಎನ್‌. ವ್ಯಾಲಿ ನೀರಾವರಿ ಯೋಜನೆಗಳು ತ್ವರಿತಗತಿಯಲ್ಲಿ ಸಾಗುತ್ತಾ ಇಲ್ಲ. ಆಮೆಗತಿ ಹಿಡಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಕೈಗಾರಿಕೆ, ಮೆಡಿಕಲ್ ಕಾಲೇಜು ಠುಸ್‌: ಜಿಲ್ಲೆಯಾಗಿ ಇದುವರೆಗೂ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗಲಿಲ್ಲ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಘೋಷಣೆಯಾದ ವೈದ್ಯಕೀಯ ಕಾಲೇಜು ಕನಸಾಗಿಯೇ ಉಳಿದಿದೆ. ಜಿಲ್ಲೆಯಾದಾಗಿ ನಿಂದ ಸುಸಜ್ಜಿತ ಜಿಲ್ಲಾಡಳಿತ ಭವನ ಆಗಿರುವುದು ಬಿಟ್ಟರೆ ಜಿಲ್ಲಾಸ್ಪತ್ರೆ, ಬಸ್‌ ನಿಲ್ದಾಣ ಸ್ಥಾಪನೆ ಜನರಲ್ಲಿ ತುಸು ಸಮಾಧಾನ ಇದೆ. ಆದರೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಶಾಶ್ವತ ನೀರಾವರಿ, ಮೆಡಿಕಲ್ ಕಾಲೇಜು ಸ್ಥಾಪನೆ, ಜಿಲ್ಲಾ ಕೇಂದ್ರಕ್ಕೆ ಮೂಲ ಸೌಕರ್ಯ, ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಜಿಲ್ಲೆಯ ಪಾಲಿಗೆ ಇನ್ನೂ ಮರೀಚಿಕೆಯಾಗಿ ಉಳಿದಿದ್ದು, ಇದರ ಜೊತೆಗೆ ಸತತವಾಗಿ ಕಾಡುತ್ತಿರುವ ಬರಗಾಲ ಜಿಲ್ಲೆಯ ಜನ ಜೀವನವನ್ನು ಸಂಕಷ್ಟಕ್ಕೆ ತಳ್ಳಿದೆ.

Advertisement

Udayavani is now on Telegram. Click here to join our channel and stay updated with the latest news.

Next