Advertisement

World Tourism Day: ನೋಡ ಬನ್ನಿ ಕರುನಾಡಿನ ಪ್ರವಾಸಿ ತಾಣಗಳ ಸೊಗಸ…

12:11 AM Sep 27, 2023 | Team Udayavani |

 

Advertisement

ಇಂದು ವಿಶ್ವ ಪ್ರವಾಸೋದ್ಯಮ ದಿನ. ಈ ಹಿನ್ನೆಲೆಯಲ್ಲಿ ಉದಯವಾಣಿ ಪತ್ರಿಕೆಯು ಅತ್ಯಂತ ಅಪರೂಪದ, ಜನರ ಕಣ್ಣಿಗೆ ಹೆಚ್ಚು ಕಾಣದ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹೊರತಾಗಿ, ರಾಜ್ಯದ ಬೇರೆ ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳ ಪರಿಚಯ ಇಲ್ಲಿದೆ.

ಶಕ್ತಿ ಸ್ವರೂಪ ಶ್ರೀ ಸೂಗೂರೇಶ್ವರ ಸ್ವಾಮಿ

ರಾಯಚೂರು ಜಿಲ್ಲೆಯ ಪ್ರಮುಖ ಧಾರ್ಮಿಕ ತಾಣಗಳಲ್ಲಿ ತಾಲೂಕಿನ ದೇವಸೂಗೂರಿನ ಶ್ರೀ ಸೂಗೂರೇಶ್ವರ ಸ್ವಾಮಿ ದೇವಸ್ಥಾನ ಬಹಳ ಪ್ರಭಾವಶಾಲಿ. ಇಲ್ಲಿ  ನಡೆಯುವ ಜೋಡು ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಸಾಕ್ಷಿಯಾಗು ತ್ತಾರೆ. ಜಂಗಮರೂಪಿ ಶ್ರೀ ಸೂಗೂರೇಶ್ವರ ಸ್ವಾಮಿ ನೆಲೆನಿಂತು ಅನೇಕ ಪವಾಡ ಗೈದ ಚರಿತ್ರೆ ಈ ಸ್ಥಳದ್ದಾಗಿದೆ. ಕರ್ನಾಟಕ ಮಾತ್ರವಲ್ಲ ಆಂಧ್ರ, ತೆಲಂಗಾಣ, ಮಹಾರಾಷ್ಟ್ರಗಳಿಂದಲೂ ಅಸಂಖ್ಯೆ ಭಕ್ತರು ಈ ದೇವಸ್ಥಾನಕ್ಕೆ ನಡೆದುಕೊಳ್ಳುವುದು ವಿಶೇಷ. ಅಮಾವಾಸ್ಯೆ, ಶ್ರಾವಣ, ಶಿವರಾತ್ರಿ, ಕಾರ್ತಿಕ ಮಾಸ, ಹಬ್ಬ ಹರಿದಿನಗಳಲ್ಲಿ ಇಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ.

ದಾರಿ: ರಾಯಚೂರಿನಿಂದ 18 ಕಿಮೀ ದೂರದಲ್ಲಿದ್ದು, ಬಸ್‌ ಸೌಲಭ್ಯವಿದೆ. ಆರ್‌ಟಿಪಿಎಸ್‌ ಇರುವುದು ಕೂಡ ಇದರ ಪಕ್ಕದಲ್ಲೇ. ದೇವಸ್ಥಾನಕ್ಕೆ ಹೋಗುವವರು ಸ್ಥಾವರಗಳನ್ನು ನೋಡಬಹುದು.

Advertisement

ಸನಿಹದ ತಾಣಗಳು: ಪಂಚಮುಖೀ ಗಾಣಧಾಲ ಕ್ಷೇತ್ರ, ಸಿಂಧನೂರು ತಾಲೂಕಿನ ಸೋಮಲಾಪುರದ ಸಿದ್ಧಪರ್ವತದಲ್ಲಿರುವ ಅಂಬಾಮಠ.ಆರ್‌ಟಿಪಿಎಸ್‌ ಸ್ಥಾವರಗಳು.

120 ಕಿ.ಮೀ ವ್ಯಾಪ್ತಿಯಲ್ಲಿ 30 ಅಪರೂಪದ ತಾಣಗಳು

ಕಲಬುರಗಿ ನಗರವೂ ಸೇರಿದಂತೆ ಜಿಲ್ಲೆ ಶರಣರ ಮತ್ತು ಸೂಫಿಗಳ ಕರ್ಮಭೂಮಿ ಹಾಗೂ ಭಾವೈಕ್ಯತೆಯ ನಾಡು. ಬೌದ್ಧ, ಜೈನರ ಜನವಸತಿಯೂ ಆಗಿತ್ತು. ರಾಷ್ಟ್ರಕೂಟ, ಯಾದವ, ಬಹುಮನಿ ಮತ್ತು ದಿಲ್ಲಿ ಸುಲ್ತಾನರು, ಕಲ್ಯಾಣಿ ಚಾಲುಕ್ಯರು ಆಳಿದ ಭೂಮಿ. ನ್ಯಾಯಶಾಸ್ತ್ರಕ್ಕೆ ಮಿತಾಕ್ಷರ ಸಂಹಿತಾ, ಕನ್ನಡ ಸಾಹಿತ್ಯಕ್ಕೆ ಕವಿರಾಜಮಾರ್ಗ ಕೃತಿ ಕೊಟ್ಟ ನೆಲವಿದು. ಇಲ್ಲಿನ ನೋಡ ಬಹುದಾದ 30 ಪ್ರವಾಸಿ ತಾಣಗಳಿವೆ. ಎಲ್ಲ ಪ್ರವಾಸಿ ತಾಣಗಳು ಜಿಲ್ಲಾ ಕೇಂದ್ರವಾದ ಕಲಬುರಗಿಯಿಂದ 120 ಕಿ.ಮೀ. ವ್ಯಾಪ್ತಿಯ ಒಳಗಿವೆ. ಕಲಬುರಗಿ ನಗರದ ಬಹುಮನಿ ಕೋಟೆ, ಶೋರ್‌(ಚೋರ್‌) ಗುಂಬಜ್‌, ಜಾಮೀಯಾ ಮಸೀದಿ, ಹಫ್‌ ಗುಂಬಜ್‌, ಬುದ್ಧ ವಿಹಾರ, ಹೋಳಕುಂದಾ, ಫಿರೋಜಾಬಾದ ಕೋಟೆ, ಶರಣಬಸವೇಶ್ವರ ದೇವಸ್ಥಾನ, ಬಂದೇ ನವಾಜ್‌ ದರ್ಗಾ ಇವೆಲ್ಲವೂ 10-15 ಕಿ.ಮೀ. ವ್ಯಾಪ್ತಿಯಲ್ಲಿವೆ.

ದಾರಿ: ಪ್ರಮುಖ ಸ್ಥಳಗಳಿಂದ ಕಲಬುರಗಿಗೆ ನೇರ ಬಸ್‌, ರೈಲು, ವಿಮಾನ ವ್ಯವಸ್ಥೆ ಇದೆ. ಸ್ಥಳೀಯವಾಗಿ ಟ್ಯಾಕ್ಸಿ ಲಭ್ಯ. ಸ್ವಂತ ವಾಹನವಿದ್ದವರು ಜಿಲ್ಲೆಯ ವಿವಿಧೆಡೆ ಧಾರ್ಮಿಕ ಕ್ಷೇತ್ರಗಳನ್ನೂ ನೋಡಬಹುದು.

ಸನಿಹದ ತಾಣಗಳು: ಗೊಟ್ಟಂಗೊಟ್ಟ ಜಲಪಾತಗಳು, ಚಂದ್ರಂಪಳ್ಳಿ, ಅಮರ್ಜಾ, ಬೆಣ್ಣೆತೋರಾ, ಭೋಸಗಾ ಕೆರೆಗಳ ವಿಹಂಗಮ ನೋಟ ಮತ್ತು ಬೋಟಿಂಗ್‌ ಮತ್ತು ಟ್ರಕ್ಕಿಂಗ್‌ ಮಾಡಬಹುದು.

ಹಸುರ ಮಡಿಲಲ್ಲಿ ಗವಿರಂಗಸ್ವಾಮಿ ಬೆಟ್ಟ

ಒಂದೆಡೆ ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುವ ಹಸುರು ಸಿರಿ, ಮತ್ತೂಂದಡೆ ಆಸ್ತಿಕರ ಶ್ರದ್ಧಾಭಕ್ತಿಯ ಕೇಂದ್ರವಾಗಿರುವ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಿಂಗ ರಾಜಪುರ ಗ್ರಾಮ ದಲ್ಲಿರುವ ಗವಿರಂಗ ಸ್ವಾಮಿ ಬೆಟ್ಟ ಬಹುತೇಕ ಪ್ರವಾಸಿಗರಿಗೆ ತಿಳಿದೇ ಇಲ್ಲ.  ಈ ಬೆಟ್ಟಕ್ಕೆ ಪೌರಾಣಿಕ ಹಿನ್ನೆಲೆ ಇದ್ದು, ಋಷ Â ಶƒಂಗ ಮಹಾಮುನಿಗಳು ತಪಸ್ಸು ಮಾಡಿದ್ದರು ಎಂಬ ಪ್ರತೀತಿ ಇದೆ. ಋಷಿಶೃಂಗರೇ ಇಲ್ಲಿ ರಂಗಸ್ವಾಮಿಯನ್ನು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ದೇವಾಲಯ ಗವಿಯಲ್ಲಿ ಇರುವ ಕಾರಣ ಇದಕ್ಕೆ ಗವಿರಂಗಸ್ವಾಮಿ ಎಂದು ಕರೆಯಲಾಗುತ್ತದೆ. ಇನ್ನು ಕಿರಿದಾದ ಗವಿಯಲ್ಲಿ ಆಕರ್ಷಕವಾದ ರಂಗಸ್ವಾಮಿ ಮೂರ್ತಿ ಇದ್ದು, ಗವಿಯೊಳಗೆ ಕೆಲವೇ ಕೆಲವು ಮಂದಿ ಮಾತ್ರ ಪ್ರವೇಶಿಸಲು ಸಾಧ್ಯ, ಭಕ್ತರು ಹೆಚ್ಚಾದಾಗ ಸರತಿ ಸಾಲಿನಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

ದಾರಿ: ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ ಬಂದು ಅಲ್ಲಿಂದ ಸಾತನೂರು ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಿಂಗರಾಜಪುರ ಗ್ರಾಮದಲ್ಲಿ ಇಳಿದುಕೊಂಡು ಬೆಟ್ಟಕ್ಕೆ ನಡೆದು ಕೊಂಡು ಹೋಗ ಬೇಕು.

ಸನಿಹದ ತಾಣಗಳು: ಗವಿರಂಗಸ್ವಾಮಿ ದೇವಾಲಯದಿಂದ 5 ಕಿ.ಮೀ. ದೂರದಲ್ಲಿ ಪ್ರತಿಸಿದ್ದ ಕಬ್ಟಾಳಮ್ಮನ ದೇವಾಲಯವಿದೆ. ಅಲ್ಲಿಂದ 30 ಕಿ.ಮೀ. ದೂರದಲ್ಲಿ ಸಂಗಮ ಮತ್ತು ಮೇಕೆದಾಟು ಪ್ರದೇಶ ಇದೆ.

ಗ್ಯಾರಿಷನ್‌ ಸಿಮೆಟರಿ ಬ್ರಿಟಿಷ್‌ ಗೋರಿಗಳು

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಕೋಟೆ ಕೊತ್ತಲಗಳ ನಾಡಾಗಿದ್ದು, ಪ್ರವಾಸಿ ತಾಣಗಳು ಸಾಕಷ್ಟಿವೆ. ಇಲ್ಲಿಗೆ ಬಂದವರು ಒಮ್ಮೆ ಗ್ಯಾರಿಷನ್‌ ಸಿಮೆಟರಿ ಬ್ರಿಟಿಷ್‌ ಗೋರಿಗಳು ಎಂಬ ಸ್ಥಳಕ್ಕೆ ಭೇಟಿ ನೀಡಬೇಕು. ಇದು ಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿಯೇ 300 ಮೀಟರ್‌ ದೂರದಲ್ಲಿದೆ. ಪ್ರವಾಸಿ ಮಂದಿರಕ್ಕೆ ಹೋಗುವ ರಸ್ತೆಯಲ್ಲಿಯೇ ಚಿಕ್ಕದಾಗಿ ಕಲ್ಲಿನಲ್ಲಿ ಗ್ಯಾರಿಷನ್‌ ಸಿಮೆಟರಿ ಎಂದು ಬರೆಯಲಾಗಿದೆ. ತತ್‌ಕ್ಷಣ ಯಾರಿಗೂ ಕಾಣುವುದಿಲ್ಲ. ಆದರೆ ಗೊತ್ತಿರುವ ಪ್ರವಾಸಿಗರು ಹೆಚ್ಚು ಹೋಗಿ ಬರುತ್ತಾರೆ. ಇಲ್ಲಿ 1800ರಿಂದ 1860ರಲ್ಲಿ ನಡೆದ ಯುದ್ಧದಲ್ಲಿ ಮಡಿದ ಬ್ರಿಟಿಷ್‌ ಸೈನಿಕರ ಸಮಾಧಿಗಳಿವೆ. ಸುಮಾರು 2 ಸಾವಿರಕ್ಕೂ ಹೆಚ್ಚು ಸಮಾಧಿಗಳಿದ್ದು, ಈಗಲೂ ಅವರ ಸಂಬಂಧಿಕರು ಇಂಗ್ಲೆಂಡಿನಿಂದ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.

ತಂಗಲು ಶ್ರೀರಂಗಪಟ್ಟಣದಲ್ಲಿ ವ್ಯವಸ್ಥೆ ಇದೆ. ಇಲ್ಲಿಗೆ ವಾಹನಗಳು ಹೋಗುವುದಿಲ್ಲ. ಕಾಲು ದಾರಿಯಲ್ಲಿ ನಡೆದುಕೊಂಡು ಹೋಗಬೇಕು.

ಸನಿಹದ ತಾಣಗಳು: ಶ್ರೀರಂಗಪಟ್ಟಣ ಟಿಪ್ಪು ಅರಮನೆ, ಗಂಜಾಂ, ಶ್ರೀರಂಗನಾಥ ದೇಗುಲ, ಕೆಆರ್‌ಎಸ್‌ ಮೈಸೂರು.

ಮಾಚಿದೇವರ ಜನ್ಮಸ್ಥಳ ದರ್ಶನ

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕೋಳೂರು ಪರಿಸರದಲ್ಲಿರುವ ವಿಜಯನಗರ ಸಾಮ್ರಾಜ್ಯದ ಕೊನೆ ಅರಸ ಅಳಿಯ ರಾಮರಾಯನ ಸಮಾಧಿ ಸ್ಥಳ. ವಿಜಯನಗರ ಸಾಮ್ರಾಟರು-ವಿಜಯಪುರ ಶಾಹಿ ಅರಸರ ಕಾಳಗಕ್ಕೆ ಸಾಕ್ಷಿಯಾಗಿದ್ದ ತಾಳಿಕೋಟೆ, ಕೃಷ್ಣಾ ನದಿ ತೀರದಲ್ಲಿರುವ ಬಸವೇಶ್ವರ ಧರ್ಮಪತ್ನಿ ಶರಣೆ ನೀಲಮ್ಮಳ ಸಮಾಧಿ ಸ್ಮಾರಕ, ವೀರಶರಣ ಮಡಿವಾಳ ಮಾಚಿದೇವರ ಜನ್ಮಸ್ಥಳ ದೇವರಹಿಪ್ಪರಗಿಯ ದೇವಾಲಯ ಸೇರಿದಂತೆ ಜಿಲ್ಲೆಯಲ್ಲಿ ಇನ್ನೂ ಹಲವು ತಾಣಗಳಿವೆ. ಇದಲ್ಲದೇ ಈಚೆಗೆ ಜಿಲ್ಲೆಯಲ್ಲಿ ನೀರಾವರಿಗಾಗಿ ನಿರ್ಮಿಸಿರುವ ಅಕ್ವಡಕ್ಟ್, ವೈಡಕ್ಟ್ ಯೋಜನೆಗಳ ನಿರ್ಮಿತಿಗಳು ಅಧ್ಯಯನ ಯೋಗ್ಯ ಸ್ಥಳಗಳಾಗಿವೆ.

ದಾರಿ: ಮುದ್ದೇಬಿಹಾಳ ತಾಲೂಕು ಕೇಂದ್ರದಿಂದ ಸುಮಾರು 20 ಕಿಮೀ ದೂರವಿದೆ. ಬಸ್‌ ಹಾಗೂ ಟ್ಯಾಕ್ಸಿ ಸೌಲಭ್ಯ ಇದೆ. ಸ್ವಂತ ವಾಹನವಿದ್ದರೆ ಸುತ್ತಲಿನ ವಿವಿಧ ಪ್ರೇಕ್ಷಣೀಯ ಸ್ಥಳನ್ನೂ ನೋಡಬಹುದು.

ಸನಿಹದ ತಾಣಗಳು: ಬಸವನಬಾಗೇವಾಡಿಯಲ್ಲಿರುವ ಮೂಲ ನಂದೀಶ್ವರ ದೇವಸ್ಥಾನ, ಸಾಮಾಜಿಕ ಕ್ರಾಂತಿವೀರ ಬಸವೇಶ್ವರ ಜನ್ಮಸ್ಥಳ ಸ್ಮಾರಕ, ಇಂಗಳೇಶ್ವರದಲ್ಲಿರುವ ನವ ನಿರ್ಮಾಣದ ವಚನ ಶಿಲಾಮಂಟಪವಿದೆ.

ಸಂತೆಬೆನ್ನೂರಿನ ಸೌಂದರ್ಯದ ಖಣಿ ಪುಷ್ಕರಿಣಿ

ಐತಿಹಾಸಿಕ ಹಾಗೂ ಪ್ರಾಕೃತಿಕ ಸೊಬಗನ್ನು ಮೇಳೈಸಿಕೊಂಡು ಜನಮನ ಸೆಳೆಯುವ ವಿಶಿಷ್ಟ ಪ್ರವಾಸಿ ತಾಣವೊಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿದೆ. ಇಲ್ಲಿನ ರಾಮತೀರ್ಥ ಪುಷ್ಕರಿಣಿ ತನ್ನ ವೈಶಾಲ್ಯತೆ, ವಿನ್ಯಾಸ ಮತ್ತು ಮಧ್ಯದಲ್ಲಿರುವ ಕಾರಂಜಿ ಮಂಟಪಗಳ ಸೌಂದರ್ಯದಿಂದ ಲೋಕ ವಿಖ್ಯಾತವಾಗಿದೆ. ಸಂತೆಬೆನ್ನೂರು ಪಾಳೆಗಾರರಿಂದ ರಚಿತವಾದ 26 ಶಾಸನಗಳಿಂದ ಅಂದಿನ ಇತಿಹಾಸ ತಿಳಿದುಕೊಳ್ಳಬಹುದಾಗಿದ್ದು ಸುಂದರ ಪುಷ್ಕರಿಣಿ 235 ಅಡಿ ಉದ್ದ ಹಾಗೂ 245 ಅಡಿ ಅಗಲವಿದ್ದು, 30 ಅಡಿ ಆಳವಾಗಿದೆ. ಇದಕ್ಕೆ ಸ್ಥಳೀಯರು “ಹೊಂಡ’ ಎಂದೇ ಎನ್ನುತ್ತಾರೆ. ಸುತ್ತ ಮೂರು ಅಡಿ ಅಗಲದ ಪೌಳಿಗೋಡೆ ಇದೆ. ವಿಶಾಲವಾಗಿರುವ ಈ ಹೊಂಡಕ್ಕೆ ನಾಲ್ಕೂ ಕಡೆ ಸೋಪಾನಗಳಿವೆ. ಈ ಹೊಂಡದ ಎಂಟು ದಿಕ್ಕುಗಳಲ್ಲಿ ಒಂದೊಂದು ಮಿನಾರ್‌ಗಳಿವೆ. ಇವುಗಳಲ್ಲಿ ಆರು ಮಾತ್ರ ವಿವಿಧ ಸಂರಕ್ಷಣ ಸ್ಥಿತಿಯಲ್ಲಿವೆ. ಇಲ್ಲಿ ನಿರ್ಮಿಸಲಾಗಿರುವ ಚೌಕಾಕಾರದ ಮಂಟಪ ನಯನ ಮನೋಹರವಾಗಿದೆ.

ದಾರಿ: ದಾವಣಗೆರೆಯಿಂದ 36 ಕಿಮೀ ಮತ್ತು ಚನ್ನಗಿರಿಯಿಂದ 23 ಕಿಮೀ ದೂರದಲ್ಲಿದೆ. ನೇರ ಬಸ್‌ ಸಂಪರ್ಕವಿದೆ. ಉಳಿದುಕೊಳ್ಳಲು ಸುತ್ತಮುತ್ತ ಹೊಟೇಲ್‌ಗ‌ಳಿವೆ.

ಸನಿಹದ ತಾಣಗಳು: 64 ಕಿ.ಮೀ. ವಿಸ್ತಾರ ಹೊಂದಿರುವ ಶಾಂತಿಸಾಗರ ಕೆರೆ ಇದೆ. ದಕ್ಷಿಣ ಏಷ್ಯಾದಲ್ಲೇ 2ನೇ ಅತೀ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಇದಕ್ಕಿದೆ.

ಖಾನಾಪುರ ಪ್ರವಾಸಿಗರ ಸ್ವರ್ಗ

ಬೆಳಗಾವಿ ಖಾನಾಪುರ ತಾಲೂಕಿನ ಬಹುಭಾಗ ಸಹ್ಯಾದ್ರಿ ಗುಡ್ಡಗಾಡು ಪ್ರದೇಶ. ಗಿರಿಶಿಖರ, ಕಂದಕಗಳು, ನದಿಕೊಳ್ಳ ಹಾಗೂ ದಟ್ಟಕಾನನದಿಂದ ಸಮೃದ್ಧವಾಗಿದೆ. ಹುಲಿ, ಚಿರತೆ, ಕರಡಿ, ಅನೆ ಮೊದಲಾದ ವನ್ಯಪ್ರಾಣಿಗಳ ತಾಣ. ಜಲಪಾತಗಳು ನಯನ ಮನೋಹರ. ನಿಸರ್ಗದ ಸೌಂದರ್ಯ ಹಾಗೂ ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರು ಹಾಗೂ ಚಾರಣಪ್ರಿಯರನ್ನು ಕೈಬೀಸಿ ಕರೆಯುತ್ತದೆ. ತಾಲೂಕಿನ 10ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ಪ್ರವಾಸಿ ತಾಣಗಳ ಗುತ್ಛವೇ ಇದೆ. ಕಣಕುಂಬಿ, ಹಲಸಿ, ಭೀಮಗಢ, ನಂದಗಡ, ಚಿಕಲೆ, ಪಾರವಾಡ, ವಜ್ರಪೋಹಾ ಜಲಪಾತಗಳು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಮೆರುಗು ನೀಡಿವೆ. ಖಾನಾಪುರ ತಾಲೂಕಿನ ಕಣಕುಂಬಿ ಮಲಪ್ರಭಾ ನದಿಯ ಉಗಮಸ್ಥಾನ. ಕರ್ನಾಟಕದ ಕಟ್ಟಕಡೆಯ ಗ್ರಾಮ. ಇಲ್ಲಿಂದ ಮಹಾರಾಷ್ಟ್ರ ಗಡಿ ಐದು ಕಿ.ಮೀ. ಹಾಗೂ ಗೋವಾ ಗಡಿ ಎಂಟು ಕಿ.ಮೀ. ದೂರ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಇದು. ಇತಿಹಾಸ ಪ್ರಸಿದ್ಧ ಮಾಹುಲಿ ದೇವಿಯ ದೇವಸ್ಥಾನ ಇಲ್ಲಿದೆ

ದಾರಿ: ಖಾನಾಪುರ 36 ಕಿ.ಮೀ. ಹಾಗೂ ಬೆಳಗಾವಿಯಿಂದ 44 ಕಿ.ಮೀ. ದೂರದ ಕಣಕುಂಬಿಗೆ ಸಾಕಷ್ಟು ಬಸ್‌ ಸೌಲಭ್ಯ ಇದೆ. ನಿಮ್ಮದೇ ಸ್ವಂತ ವಾಹನ ಇದ್ದರೆ ಸುತ್ತಲಿನ ಪ್ರದೇಶ ನೋಡಬಹುದು.

ಸನಿಹದ ತಾಣಗಳು: ನಂದಗಡ, ಕಿತ್ತೂರು, ಗೋಕಾಕ. .

ಸಹಸ್ರ ಲಿಂಗಗಳ ಸಂಗಮ

ಶಾಲ್ಮಲಾ ನದಿಯೊಳಗೆ ಇರುವ ಊರು ಸಹಸ್ರಲಿಂಗ. ಉತ್ತರಕನ್ನಡ ಜಿಲ್ಲೆ ಶಿರಸಿಯಿಂದ ಅನತಿ ದೂರದ ಹುಳಗೋಳ ಬಳಿ ಇದೆ. ಸಹಸ್ರಾರು ಲಿಂಗಗಳು ಇರುವುದರಿಂದ ಸಹಸ್ರಲಿಂಗ ಎಂಬ ಅನ್ವರ್ಥ ನಾಮ. ವಚನ ಸಾಹಿತ್ಯ ಕಾಲವಾದ 12ನೇ ಶತಮಾನದಲ್ಲಿ ಈ ಸಹಸ್ರಲಿಂಗಗಳು ಕೆತ್ತಲ್ಪಟ್ಟವು. ಶಿವರಾತ್ರಿ, ಸಂಕ್ರಾಂತಿಗೆ ಭಕ್ತರ ದಂಡು ಆಗಮಿಸುತ್ತದೆ.  ಭೇಟಿಗೆ ಅಕ್ಟೋಬರ್‌ನಿಂದ ಜೂನ್‌ ಸಕಾಲ.

ದಾರಿ: ಶಿರಸಿಯಿಂದ 14 ಕಿ.ಮೀ. ದೂರದಲ್ಲಿದೆ. ಬಸ್‌ ಸೌಲಭ್ಯ ಹಾಗೂ ಸ್ಥಳೀಯ ಟ್ಯಾಕ್ಸಿ ಸೌಲಭ್ಯ ಇದೆ. ಸ್ವಂತ ವಾಹನ ಇದ್ದರೆ ಪ್ರಕೃತಿ ಸೊಬಗು ಸವಿಯಬಹುದು.

ಸನಿಹದ ತಾಣಗಳು: ಸೋಂದಾ ಸ್ವರ್ಣವಲ್ಲೀ, ವಾದಿರಾಜ, ಜೈನ ಮಠಗಳು

ರಾಕ್‌ ಗಾರ್ಡನ್‌

ಹಾವೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಶಿಗ್ಗಾವಿಯ ತಾಲೂಕು ಗೊಟಗೋಡಿಯಲ್ಲಿರುವ ಉತ್ಸವ ರಾಕ್‌ ಗಾರ್ಡನ್‌ ವೈವಿಧ್ಯಮಯ ಹಾಗೂ ಅನನ್ಯ ಕಲಾಪೋಷಣಾ ಕೇಂದ್ರವಾಗಿದ್ದು, ತನ್ನೊಳಗೆ ಮಾನವ ನಿರ್ಮಿತ ಸುಂದರ ಕಲೆಗಳನ್ನು ಒಳಗೊಂಡಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಉತ್ತರ ಕರ್ನಾ ಟಕದ ಹಿಂದಿನ ಗ್ರಾಮ ಸಾಮ್ರಾಜ್ಯ ಬಿಂಬಿಸುವ ಕಲಾಕೃತಿಗಳು ಈ ಪ್ರವಾಸಿ ತಾಣದ ಕೇಂದ್ರ ಬಿಂದುವಾಗಿವೆ. ಇಲ್ಲಿಯ ಶಿಲ್ಪಗಳು, ಅವುಗಳಿಗೆ ಪೂರಕ ವಾಗುವಂತೆ ಜೋಡಿಸಿದ ಸುತ್ತಲಿನ ದಿನಬಳಕೆಯ ಗ್ರಾಮ್ಯ ಸಾಮಗ್ರಿಗಳು, ಮನೆಗಳ ಮಾದರಿಗಳು, ಇತ್ಯಾದಿ ದೃಶ್ಯಗಳು ಹಿಂದಿನ ಗ್ರಾಮ ಸಾಮ್ರಾಜ್ಯದ ಸೊಬಗನ್ನು ನೆನಪಿಸುತ್ತವೆ. ನಮ್ಮ ನಾಡಿನ ಗ್ರಾಮೀಣ ಸಂಸ್ಕೃತಿಯ ಮಜಲುಗಳನ್ನೆಲ್ಲಾ ಸಾವಿರಾರು ಶಿಲ್ಪಗಳಲ್ಲಿ ಹಿಡಿದಿಟ್ಟಿರುವುದರಿಂದ ಎಂಟು ವಿಶ್ವ ದಾಖಲೆಗಳಲ್ಲಿ ಉತ್ಸವ ರಾಕ್‌ ಗಾರ್ಡನ್‌ ಹೆಸರಿಸಲ್ಪಟ್ಟಿದೆ. ಜೋಳದ ರೊಟ್ಟಿ, ಚಪಾತಿ, ಮೂರು ತರದ ಪಲೆÂಗಳು, ಜುಣುಕದ ವಡೆ, ಬಿರಂಜಿ ರೈಸ್‌, ಶೇಂಗಾ ಹೋಳಿಗೆ ಸೇರಿದಂತೆ ವಿವಿಧ ಖಾದ್ಯಗಳನ್ನು ಸವಿಯಬಹುದಾಗಿದೆ. ಪ್ರವಾಸಿಗರು ಈ ತಾಣಕ್ಕೆ ಬೆಳಗಿನ ಸಮಯಕ್ಕೆ ಭೇಟಿ ನೀಡಿದರೆ ಉತ್ತಮ. ಅದರಲ್ಲಿಯೂ ಅಕ್ಟೋಬರ್‌ನಿಂದ ಮೇ ತಿಂಗಳ ಸಂದರ್ಭದಲ್ಲಿ ಈ ಪ್ರವಾಸಿ ತಾಣಕ್ಕೆ ಭೇಟಿ ನೀಡುವುದು ಸೂಕ್ತವಾಗಿದೆ.

ದಾರಿ: ಹುಬ್ಬಳ್ಳಿಯಿಂದ 30 ಶಿಗ್ಗಾಂವಿಯಿಂದ 10 ಕಿ.ಮೀ. ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಬಸ್‌ ಸಂಪರ್ಕ ಹೇರಳವಾಗಿದೆ.

ಸನಿಹದ ತಾಣಗಳು: ಬಾಡದ ಕನಕರ ಅರಮನೆ, ಗಾಯಿತ್ರಿ ತಪೋಭೂಮಿ, ಜೈನ ಬಸದಿ, ಶರೀಫಗಿರಿ, ಸವಣೂರಿನ ವಿಷ್ಣುತೀರ್ಥ, ಕಾಗಿನೆಲೆ.

ಮುಳಬಾಗಿಲು ವಿರೂಪಾಕ್ಷ ದೇಗುಲ

ಗುಹಾಂತರ ದೇವಾಲಯ ಅಂದ ತತ್‌ಕ್ಷಣ ನಮ್ಮ ಕಣ್ಣು ಮುಂದೆ ಅಜಂತಾ, ಎಲ್ಲೋರಾ ನೆನಪಿಗೆ ಬರುತ್ತದೆ. ಆದರೆ ಕರ್ನಾಟಕದ ಅಜಂತಾ ಎಲ್ಲೋರಾದಂಥಾ ಗುಹೆಗಳಿದ್ದು ಇದನ್ನು ನೋಡಲು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಕೈಲಾಸಗಿರಿಗೆ ಭೇಟಿ ನೀಡಬೇಕು. ಚಿಂತಾಮಣಿಯ ಅಂಬಾಜಿದುರ್ಗ ಹೋಬಳಿಯಲ್ಲಿರುವ ಈ ಕೈಲಾಸಗಿರಿ ಬೆಟ್ಟಕ್ಕೆ ಮೂರು ಸುರಂಗ ಮಾರ್ಗಗಳಿವೆ. ಮೊದಲ ಸುರಂಗದಲ್ಲಿ ಪ್ರವೇಶಿಸಿದರೆ ವಲ್ಲಭ ಗಣಪತಿಯ ದರ್ಶನವಾಗುತ್ತದೆ. ಬಳಿಕ ಎರಡನೇ ಸುರಂಗದಲ್ಲಿ ನಾಲ್ಕು ದಿಕ್ಕುಗಳಿಗೆ ಮುಖ ಮಾಡಿರುವ ಚರ್ತುಮುಖ ಶಿವಲಿಂಗವಿದೆ. 3ನೇ ಸುರಂಗದಲ್ಲಿ ಪಾವರ್ತಿತಿ ದೇವಿ ದರ್ಶನ ಆಗುತ್ತಾಳೆ. ಗುಹಾಂತರದೊಳಗೆ 300 ಮಂದಿ ಕೂರುವ ಬೃಹತ್‌ ಸಭಾಂಗಣ ಇದೆ. ಪ್ರತೀ ಸುರಂಗ ಮಾರ್ಗವೂ ವಿಭಿನ್ನ ಅನುಭವ ಕೊಡುತ್ತದೆ.

ದಾರಿ: ಕೈಲಾಸಗಿರಿಗೆ ತೆರಳಬೇಕಾದರೆ ಬೆಂಗಳೂರಿನಿಂದ ಕೇವಲ 72 ಕಿ.ಮೀ ದೂರ.

ಸನಿಹದ ತಾಣಗಳು: ಕೈವಾರ ಯೋಗಿ ನಾರೇಯಣ ಮಠ, ಅಲಂಬಗಿರಿಯ ವೆಂಕಟರವಣಸ್ವಾಮಿ, ಮುರಗಮಲ್ಲ ಮುಕ್ತೀಶ್ವರ ದೇವಾಲಯ.

ಚಿಂತಾಮಣಿಯ ಅಜಂತಾ, ಎಲ್ಲೋರಾ …

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿರುವ ವಿಜಯನಗರ ಅರಸರ ಆಳ್ವಿಕೆ ಕಾಲದ ವಿರೂಪಾಕ್ಷಿ ಗ್ರಾಮದ ಪ್ರಸಿದ್ದ ವಿರೂಪಾಕ್ಷಸ್ವಾಮಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ರಾಜ್ಯದ ಮೂಡಣ ಬಾಗಿಲು ಎಂದೇ ಕರೆಯಲ್ಪಡುವ ಮುಳಬಾಗಿಲು ವಿಜಯನಗರ ಎರಡನೇ ರಾಜಧಾನಿ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಇಲ್ಲೊಂದು ಬಣ್ಣ ಬದಲಿಸುವ ಶಿವಲಿಂಗವಿದೆ. ಚೌರಸವಾದ ದ್ರಾವಿಡ ಶೈಲಿಯ ಗರ್ಭಗೃಹದಲ್ಲಿನ ಚೌಕಾಕಾರದ ಪಾಣಿ ಪೀಠದ ಮೇಲೆ ಸ್ಥಾಪಿಸಿರುವ ಆತ್ಮಲಿಂಗ ಬೆಳಗಿನ ಹೊತ್ತು  ಜೇನುತುಪ್ಪ ಹಾಗೂ ಸಂಜೆ ಬಿಳಿ ಮಿಶ್ರಿತ ಬಣ್ಣಗಳನ್ನು ಹೊರ ಹೊಮ್ಮಿಸುತ್ತಿರುವುದು ಈ ಲಿಂಗದ ವಿಶೇಷ. ಮುಳಬಾಗಿಲು ನಗರದಿಂದ ಕೇವಲ 5 ಕಿ.ಮೀ. ದೂರದಲ್ಲಿ ಈ ದೇಗುಲವಿದೆ. ಈ ದೇಗುಲದಲ್ಲಿ ಶಿವರಾತ್ರಿ ,ಕಾರ್ತಿಕ ಮಾಸಗಳಲ್ಲಿ ವಿಶೇಷ ಪೂಜೆ, ರಥ ಸಪ್ತಮಿ, ಬ್ರಹ್ಮೋತ್ಸವಗಳು ನಡೆಯುತ್ತವೆ.

ದಾರಿ: ಕುರುಡುಮಲೆ, ಮುಳಬಾಗಿಲು ಆಂಜನೇಯಸ್ವಾಮಿ, ಗರುಡ ದೇವಾಲಯಕ್ಕೆ ಭೇಟಿ ನೀಡುವವರು ವಿರೂಪಾಕ್ಷಿಯನ್ನು ದರ್ಶಿಸಿ ಮುಳಬಾಗಿಲು ದೋಸೆಯನ್ನು ಸವಿದು ಹೋಗಲು ಬೆಂಗಳೂರಿನಿಂದ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ.

ಸನಿಹದ ತಾಣಗಳು: ಕುರುಡುಮಲೆ ಗಣಪತಿ ದೇಗುಲ, ಮುಳಬಾಗಿಲು ಆಂಜನೇಯ ಸ್ವಾಮಿ, ಗರುಡ ದೇಗುಲ

Advertisement

Udayavani is now on Telegram. Click here to join our channel and stay updated with the latest news.

Next