ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳ ಆಡಳಿತ ಪರಿಷತ್ ಶಿಫಾರಸಿನಂತೆ 1989ರಿಂದ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸ ಲಾಗುತ್ತಿದೆ. 1987ರಲ್ಲಿ ಜಾಗತಿಕ ಜನಸಂಖ್ಯೆಯು ಐದು ಬಿಲಿಯನ್ ತಲುಪಿದಾಗ ವಿಶ್ವಬ್ಯಾಂಕ್‌ನ ಹಿರಿಯ ಜನಸಂಖ್ಯಾ ತಜ್ಞ ಡಾ| ಕೆ.ಸಿ.ಝಕಾರಿಯಾ ಅವರ ಸಲಹೆಯ ಮೇರೆಗೆ ಈ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಆ ಬಳಿಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1990ರಲ್ಲಿ ಈ ದಿನವನ್ನು ಅಧಿಕೃತಗೊಳಿಸಿತು. ಜನಸಂಖ್ಯೆಯ ಕುರಿತಾದ ವಿವಿಧ ಸಮಸ್ಯೆಗಳ ಬಗ್ಗೆ ಜಾಗತಿಕ ಸಮುದಾಯದ ಗಮನ ಸೆಳೆಯುವುದು ಈ ಆಚರಣೆಯ ಪ್ರಮುಖ ಉದ್ದೇಶ.
ಜಾಗತಿಕ ಜನಸಂಖ್ಯೆಯು ಪ್ರಸ್ತುತ 804 ಕೋಟಿಯನ್ನು ದಾಟಿದ್ದು ನಿಯಂತ್ರಣವು ಬಹಳ ದೊಡ್ಡ ಸವಾಲಾಗಿ ವಿಶ್ವದ ಮುಂದೆ ನಿಂತಿದೆ. ಜಾಗತಿಕ ಜನಸಂಖ್ಯೆಯ ಸೂಚ್ಯಂಕದಲ್ಲಿ ತೀರಾ ಇತ್ತೀಚೆಗಿನವರೆಗೆ ಚೀನ ದೇಶವು ಜಗತ್ತಿನ ಅಗ್ರಸ್ಥಾನಿಯಾಗಿತ್ತು. ಆದರೆ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ(ಯುಎನ್‌ಪಿಎಫ್ಎ) 2023ರ ಎಪ್ರಿಲ್‌ನಲ್ಲಿ ಘೋಷಣೆ ಮಾಡಿರು ವಂತೆ ಜನಸಂಖ್ಯೆಯಲ್ಲಿ ಭಾರತ, ಚೀನವನ್ನು ಹಿಂದಿಕ್ಕಿ “ವಿಶ್ವ ಚಾಂಪಿ ಯನ್’ ಆಗಿದೆ. ಇದು ಸಂಭ್ರಮಿಸುವ ವಿಚಾರವೇ? ಖಂಡಿತಾ ಅಲ್ಲ. ನಮ್ಮ ದೇಶದ ಮುಂದಿರುವ ಅತ್ಯಂತ ಗಂಭೀರ ವಾದ ಸಮಸ್ಯೆಯಿದು. 193ಕ್ಕಿಂತಲೂ ಹೆಚ್ಚು ರಾಷ್ಟ್ರಗಳನ್ನು ಹೊಂದಿರುವ ಜಾಗತಿಕ ಸಮುದಾಯ ದಲ್ಲಿ ಭಾರತದ ಜನಸಂಖ್ಯೆಯ ಪಾಲು ಶೇ.17.7.
1959ರಲ್ಲಿ ಕೇವಲ 3 ಬಿಲಿಯನ್ ಇದ್ದ ವಿಶ್ವದ ಜನಸಂಖ್ಯೆ 40 ವರ್ಷಗಳಲ್ಲಿ (1999) 6 ಬಿಲಿಯನ್‌ಗೆ ಏರಿಕೆಯಾಯಿತು. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ 2058ರಲ್ಲಿ ಜಾಗತಿಕ ಜನಸಂಖ್ಯೆ 10 ಬಿಲಿಯನ್ ತಲುಪಬಹುದೆಂದು ಊಹಿಸಲಾಗಿದೆ. 2023 ಮತ್ತು 2050ರ ನಡುವಿನ ಅವಧಿಯಲ್ಲಿ ಅತ್ಯಧಿಕ ಜನಸಂಖ್ಯಾ ಬೆಳವಣಿಗೆ ಆಫ್ರಿಕಾ ಖಂಡದಲ್ಲಿ ಕಾಣಲಿದ್ದು ಯುರೋಪ್‌ನಲ್ಲಿ ಇಳಿಕೆಯಾಗಲಿದೆ. ದೇಶದ ಜನಸಂಖ್ಯಾ ಶಾಸ್ತ್ರದ ಕಡೆಗೆ ಕಣ್ಣು ಹಾಯಿಸಿದಾಗ ನಮ್ಮಲ್ಲಿ ಪ್ರತೀ ಚದರ ಕಿ. ಮೀ.ಗೆ 473.42ರಷ್ಟು ಜನ ಸಾಂದ್ರತೆಯಿದೆ. 2023ರ ಅಂದಾಜಿನಂತೆ ಭಾರ ತೀಯರ ಸರಾಸರಿ ಜೀವಿತಾವಧಿ ಸರಿಸುಮಾರು 72 ವರ್ಷಗಳಾಗಿವೆ. 2022ರ ಅಂದಾಜಿನಂತೆ ನಮ್ಮ ದೇಶದ ಜನಸಂಖ್ಯಾ ಬೆಳವಣಿಗೆ ದರ ಶೇ. 0.68. ವಯಸ್ಸಿನ ರಚನೆಯನ್ನು ಗಮನಿಸಿದರೆ 2021ರ ಅಂದಾಜಿನಂತೆ ಶೇ. 25.68 ಜನಸಂಖ್ಯೆಯು 0-14 ವರ್ಷದ ಒಳಗಿನವರಾಗಿದ್ದು ಶೇ. 67.49 ಜನ ಸಂಖ್ಯೆಯು 15-64 ವರ್ಷದ ಒಳಗಿನವರು ಹಾಗೂ ಶೇ. 6.63ರಷ್ಟು ಜನಸಂಖ್ಯೆ 65ಕ್ಕಿಂತಲೂ ಹೆಚ್ಚು ವಯಸ್ಸಿನವರು.
ಒಟ್ಟು ಜನಸಂಖ್ಯೆಯಲ್ಲಿ ಯುವಜನತೆಯ ಗಾತ್ರ ಹೆಚ್ಚಾಗಿರುವ ಕಾರಣ ನಮ್ಮ ದೇಶ ಇಂದು “ಯಂಗ್ ಇಂಡಿಯಾ’ ಎಂದು ಕರೆಯಲ್ಪಡುತ್ತಿದೆ. ರಾಷ್ಟ್ರವೊಂದರ ಶಕ್ತಿಯನ್ನು ನಿರ್ಧರಿಸಲು ಭೌಗೋಳಿಕತೆ, ನೈಸರ್ಗಿಕ ಸಂಪನ್ಮೂಲಗಳು, ಆರ್ಥಿಕತೆ, ಮಿಲಿಟರಿ ಸಾಮರ್ಥ್ಯ… ಹೀಗೆ ಹಲವಾರು ಅಂಶಗಳನ್ನು ಪರಿಗಣಿಸಲಾಗುತ್ತದೆ. ಈ ಯಾದಿಯಲ್ಲಿ ಜನಸಂಖ್ಯೆ ಕೂಡ ಒಂದು. ಹಾಗೆಂದ ಮಾತ್ರಕ್ಕೆ ದೇಶವೊಂದು ಶಕ್ತಿವರ್ಧನೆಗಾಗಿ ಸಂಪೂರ್ಣ ವಾಗಿ ಜನಸಂಖ್ಯೆಯನ್ನೇ ಅವಲಂಬಿಸಲು ಸಾಧ್ಯವಿಲ್ಲ. ಇತರ ಅಂಶಗಳು ಧನಾತ್ಮಕವಾಗಿ ಜತೆ ಸೇರಿದಾಗ ಬೆಳೆಯುವ ಜನಸಂಖ್ಯೆ ರಾಷ್ಟ್ರವೊಂದಕ್ಕೆ ಆಸ್ತಿಯಾಗ ಬಲ್ಲದು. ಹೆಚ್ಚಿನ ಜನಸಂಖ್ಯೆಯು ಹೆಚ್ಚಿನ ಮಾನವ ಸಂಪನ್ಮೂಲವನ್ನು ಸೂಚಿಸುತ್ತದೆ. ದುಡಿಯುವ ವಯಸ್ಸಿನ ಜನಸಂಖ್ಯೆ ಏರುಗತಿಯತ್ತ ಸಾಗಲಾರಂಭಿಸಿ ದಾಗ ಅವಲಂಬಿತ ಜನಸಂಖ್ಯೆಯ ಪ್ರಮಾಣ ಇಳಿ ಮುಖವಾಗುತ್ತದೆ. ಇದರಿಂದಾಗಿ ಹೆಚ್ಚಿನ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಲಭಿಸಿ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯವಾಗುತ್ತದೆ.
ಭಾರತದ ಕಳೆದ ಏಳು ದಶಕಗಳ ಟ್ರೆಂಡ್ ಗಮ ನಿಸಿದರೆ ದುಡಿಯುವ ವಯಸ್ಸಿನ ಜನಸಂಖ್ಯೆಯು ಶೇ. 50 ರಿಂದ 65ಕ್ಕೆ ಏರಿಕೆಯಾಗಿದೆ. ಕಳೆದ ನಾಲ್ಕು ದಶಕಗಳಿಂದ ಭಾರತದ ಸಾಕ್ಷರತಾ ಪ್ರಮಾಣವು ಏರುಗತಿಯಲ್ಲಿ ಇದ್ದು ನ್ಯಾಶನಲ್ ಸರ್ವೇ ಆಫ್ ಇಂಡಿಯಾದ ಪ್ರಕಾರ 2011ರಲ್ಲಿ ಶೇ. 73ರಷ್ಟಿದ್ದ ಸಾಕ್ಷರತಾ ಪ್ರಮಾಣವು 2023ರಲ್ಲಿ ಶೇ.77.7 ಕ್ಕೆ ಏರಿಕೆಯಾಗಿದೆ. ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದಾಗ ಇದು ಉತ್ತಮ ಬೆಳವಣಿಗೆ ಎಂದೇ ಹೇಳಬಹುದು. ಆದರೂ ಭಾರತದಲ್ಲಿ ತಲಾ ನಾಲ್ವರಲ್ಲಿ ಓರ್ವ ಓದಲು ಯಾ ಬರೆಯಲು ಅಸಮರ್ಥನಾಗಿ ¨ªಾನೆ. (ಜಾಗತಿಕ ಸರಾಸರಿ ಎಂಟರಲ್ಲಿ ಓರ್ವ). ಪ್ರಸ್ತುತ ನಮ್ಮ ದೇಶದಲ್ಲಿ ಪುರುಷರ ಸಾಕ್ಷರತಾ ಪ್ರಮಾಣ ಶೇ. 84.7 ಆಗಿದ್ದು ಮಹಿಳಾ ಸಾಕ್ಷರತಾ ಪ್ರಮಾಣ ಶೇ. 70.3 ಆಗಿರುತ್ತದೆ. “ಹೆಣ್ಣೊಂದು ಕಲಿತರೆ ಶಾಲೆ ಯೊಂದು ತೆರೆದಂತೆ’ ಎಂಬ ನಾಣ್ಣುಡಿಯನ್ನು ದಿನಾ ಪಠಿಸುವ ನಾವು, ದೇಶದಲ್ಲಿನ ಮಹಿಳಾ ಸಾಕ್ಷರತಾ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಪಣ ತೊಡಬೇಕಾಗಿದೆ. ವಿಶ್ವಸಂಸ್ಥೆಯ ಯುನೆಸ್ಕೋ 2060ಕ್ಕೆ ಭಾರತವು ಶೇ. 100 ಸಾಕ್ಷರತಾ ರಾಷ್ಟ್ರವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ಇನ್ನು ಲಿಂಗಾನುಪಾತವನ್ನು ಗಮನಿಸುವುದಾದರೆ ನಾವಿನ್ನೂ ಸಮಾನತೆಯ ಮಟ್ಟವನ್ನು ತಲುಪಿಯೇ ಇಲ್ಲ. 2011ರ ಜನಗಣತಿಯ ಪ್ರಕಾರ ತಲಾ 1,000 ಪುರುಷರಿಗೆ ಸ್ತ್ರೀಯರ ಸಂಖ್ಯೆ ಕೇವಲ 943 ಆಗಿತ್ತು. ಒಂದು ಅಂದಾಜಿನ ಪ್ರಕಾರ ಈ ಅನುಪಾತ 2036ರ ಹೊತ್ತಿಗೆ 952ಕ್ಕೆ ತಲುಪಲಿದೆ. ಶ್ರಮಿಕ ಶಕ್ತಿ ಪಾಲು ದಾರಿಕೆಯನ್ನು ಗಮನಿಸುವಾಗಲಂತೂ ನಾವಿನ್ನೂ ಸುಧಾರಣೆಯ ಹಾದಿಯಲ್ಲಿ ಬಹುದೂರ ಸಾಗಬೇಕಾಗಿದೆ.
ಇಷ್ಟಲ್ಲದೇ ಕಳೆದ 75 ವರ್ಷಗಳಲ್ಲಿ ದೇಶದಲ್ಲಿನ ರೋಗಗಳ ಮಾದರಿಯೂ ಅಗಾಧವಾದ ಬದಲಾವಣೆ ಯನ್ನು ಕಂಡಿದೆ. ಸಾಂಕ್ರಾಮಿಕ ರೋಗಗಳ ವಿರುದ್ಧ ವಾಗಿ ನಡೆಯುತ್ತಿರುವ ಹೋರಾಟಗಳ ನಡುವೆಯೇ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಜನರನ್ನು ತೀವ್ರ ತರವಾಗಿ ಬಾಧಿಸಲಾರಂಭಿಸಿವೆ. ಮಧುಮೇಹ, ರಕ್ತ ದೊತ್ತಡ ಹಾಗೂ ಎಳೆಯ ಪ್ರಾಯದಲ್ಲಿ ಉಂಟಾ ಗುತ್ತಿರುವ ಹೃದಯಾಘಾತಗಳು ಆಡಳಿತ ಹಾಗೂ ಜನರನ್ನು ಚಿಂತೆಗೀಡು ಮಾಡಿವೆ. ವಾಯುಮಾಲಿನ್ಯ ದಿಂದಾಗಿ ಜಗತ್ತಿನಲ್ಲಿ ಸಂಭವಿಸುತ್ತಿರುವ ಸಾವುಗಳಲ್ಲಿ ಶೇ. 25ಕ್ಕಿಂತಲೂ ಹೆಚ್ಚು ಭಾರತದಲ್ಲಿ ಸಂಭವಿಸುತ್ತಿವೆ.
ಈ ಎಲ್ಲ ಕಾರಣಗಳಿಂದ ಜನಸಂಖ್ಯೆ ಹೆಚ್ಚಳವು ಭಾರತಕ್ಕೆ ನಿಸ್ಸಂದೇಹವಾಗಿ ಬಹುದೊಡ್ಡ ಸವಾಲು. ಈ ಸವಾಲನ್ನು ಎದುರಿಸಬೇಕಾದ ಅನಿವಾರ್ಯತೆ ಅಡ ಳಿತದ ಮೇಲಿದೆ. ಪ್ರಸ್ತುತ “ಯಂಗ್ ಇಂಡಿಯಾ’ ಬಿರು ದಾಂಕಿತರಾದ ನಾವು 2050ರ ಹೊತ್ತಿಗೆ ಈ ಬಿರುದನ್ನು ಕಳೆದುಕೊಳ್ಳಲಿದ್ದೇವೆ. ಆದ್ದರಿಂದ ವೃದ್ಧರನ್ನು ಸೂಕ್ತವಾದ ಸಾಮಾಜಿಕ, ಆರ್ಥಿಕ ಹಾಗೂ ಆರೋಗ್ಯ ಯೋಜನೆಗಳ ಮೂಲಕ ಬೆಂಬಲಿಸಬೇಕಾದೀತು. ಅಲ್ಲದೇ ಪ್ರಸಕ್ತ ಜನಸಂಖ್ಯೆಯನ್ನು ಜನಶಕ್ತಿಯಾಗಿ ಪರಿವರ್ತಿಸಿಕೊಳ್ಳುವರೇ ಅಗತ್ಯ ಮೂಲ ಸೌಕರ್ಯ ಗಳು, ಅನುಕೂಲಕರ ಸಮಾಜ ಕಲ್ಯಾಣ ಯೋಜನೆ ಗಳು ಹಾಗೂ ಬಹಳ ಪ್ರಮುಖವಾಗಿ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳ ಕಡೆಗೆ ಗಮನವನ್ನು ಕೇಂದ್ರೀಕರಿಸಬೇಕಾಗಿದೆ. ಉತ್ಪಾದಕ ಉದ್ಯೋಗ ಹಾಗೂ ಯೋಗ್ಯ ಕೆಲಸಗಳನ್ನು ಉತ್ತೇಜಿಸುವ ಮೂಲಕ ನಿರುದ್ಯೋಗವನ್ನು ಹೋಗಲಾಡಿಸುವ ಅಗತ್ಯತೆಯೂ ಇದೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಸೂಕ್ತವಾದ ಕೌಶಲ, ತರಬೇತಿ ಹಾಗೂ ವೃತ್ತಿಪರ ಶಿಕ್ಷಣದ ಕಡೆಗೂ ಸಾಗಬೇಕಾಗಿದೆ.
ಒಟ್ಟಿನಲ್ಲಿ ಏರುತ್ತಿರುವ ಜನಸಂಖ್ಯೆಯ ಮೇಲೆ ನಿಯಂತ್ರಣ ಸಾಧಿಸುವ ಜತೆಗೆ ಜನಸಂಖ್ಯೆಯನ್ನು ಜನಶಕ್ತಿಯಾಗಿ ಪರಿವರ್ತಿಸಿಕೊಂಡಲ್ಲಿ ನಾವು ಖಂಡಿತ ವಾಗಿಯೂ ವಿಶ್ವ ಚಾಂಪಿಯನ್ಸ್ ಆಗಿ ಹೊರಹೊಮ್ಮುವುದು ನಿಸ್ಸಂದೇಹ.
-ಪುಷ್ಪರಾಜ್ ಕೆ.,ಮಂಗಳೂರು