Advertisement

ಇಂದು ವಿಶ್ವ ಆರೋಗ್ಯ ದಿನ: ಸದೃಢ ಆರೋಗ್ಯಕ್ಕೆ ಬೇಕು ಜೀವನ ಕಾಳಜಿ

11:27 AM Apr 07, 2022 | Team Udayavani |

ಆರೋಗ್ಯದ ಕಾಳಜಿ ಕುರಿತು ಜನರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಮೊದಲ ಬಾರಿಗೆ 1950ರ ಎಪ್ರಿಲ್‌ 7ರಂದು “ವಿಶ್ವ ಆರೋಗ್ಯ ದಿನ’ವನ್ನು ಆಚರಿಸಿತು. ಆ ಬಳಿಕ ಪ್ರತೀ ವರ್ಷ ಎ. 7ರಂದು ಆರೋಗ್ಯ ರಕ್ಷಣೆ, ಕಾಳಜಿಯ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ವಿಶ್ವ ಆರೋಗ್ಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಜನರಿಗೆ ಮಾರ್ಗದರ್ಶನ ನೀಡುವ ಜತೆಯಲ್ಲಿ ನೈರ್ಮಲ್ಯಯುಕ್ತ ಸಮಾಜಕ್ಕೆ ಅಗತ್ಯವಾದ ಸ್ವತ್ಛತ ಅಭ್ಯಾಸಗಳು, ನೀರಿನ ಸಂರಕ್ಷಣೆ, ಪರಿಸರ ಸ್ವಚ್ಛತೆ ಹಾಗೂ ಆಯಾಯ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಗಳು, ಆರೋಗ್ಯ ಸಮಸ್ಯೆಗಳ ತ್ವರಿತ ತಪಾಸಣೆ ಮತ್ತು ಚಿಕಿತ್ಸೆ ಮುಂತಾದ ವಿಷಯಗಳ ಬಗ್ಗೆ ಈ ದಿನದಂದು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಈ ಬಾರಿ “ನಮ್ಮ ಗ್ರಹ, ನಮ್ಮ ಆರೋಗ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ.

Advertisement

ನೆನಪಿರಲಿ ಆರೋಗ್ಯವೇ ಭಾಗ್ಯ. ಇದಕ್ಕಿಂತ ಮಿಗಿಲಾದುದು ಯಾವುದೂ ಇರಲಾರದು. ಸದೃಢ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಕಲೆ. ನಮ್ಮ ಜೀವನ ಶೈಲಿ, ಆಹಾರ ಪದ್ಧತಿ ಇತ್ಯಾದಿಗಳೆಲ್ಲವೂ ಆರೋಗ್ಯದ ಮೇಲೆ ನೇರ ಅಥವಾ ಪರೋಕ್ಷ ಪರಿಣಾಮ ಬೀರುತ್ತಲೇ ಇರುತ್ತವೆ. ಅನಾರೋಗ್ಯಕ್ಕೆ ತುತ್ತಾದಾಗ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಕಾಯಿಲೆ ಬರುವ ಮೊದಲೇ ಅದರ ಬಗ್ಗೆ ಎಚ್ಚರ ವಹಿಸಿ, ತಡೆಗಟ್ಟಲು ಜಾಗೃತರಾಗುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) “ಸಮಾಜದ ಯೋಗಕ್ಷೇಮ’ ಎಂಬ ಪರಿಕಲ್ಪನೆಯಡಿ ಎ.7ರಂದು ವಿಶ್ವ ಆರೋಗ್ಯ ದಿನಾಚರಣೆ ಆಚರಿಸಲಿದೆ.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಜನರಲ್‌ ಮೆಡಿಸಿನ್‌ ವಿಭಾಗದ ಪ್ರಾಧ್ಯಾಪಕರಾದ ಡಾ| ವಾಸುದೇವ ಆಚಾರ್ಯ ಹಾಗೂ ಡಾ| ಸುಧಾ ವಿದ್ಯಾಸಾಗರ್‌ ಅವರು ಆರೋಗ್ಯ ಪೂರ್ಣ ಜೀವನಕ್ಕೆ ಕೆಲವು ಟಿಪ್ಸ್‌ಗಳನ್ನು ನೀಡಿದ್ದಾರೆ.

ಕೋವಿಡ್‌ ಅನಂತರ ಹೇಗಿರಬೇಕು..
ಸಾಮಾನ್ಯ ವೈರಸ್‌ನಂತೆ ಕೋವಿಡ್‌ ಕೂಡ ಒಂದು ವೈರಸ್‌. ಇದು ವೇಗವಾಗಿ ಹರಡಿ ಜೀವಹಾನಿ ಮಾಡಿದೆ. ಮುಂದೆ ಈ ರೀತಿಯ ವೈರಸ್‌ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಲಸಿಕೆ ಪಡೆದಿರುವುದು ಸಾಕಷ್ಟು ರೀತಿಯಲ್ಲಿ ಉತ್ತಮ ಪರಿಣಾಮ ಬೀರಿದೆ. ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಅರ್ಹರೆಲ್ಲರೂ ಲಸಿಕೆ ಪಡೆಯುವುದು ಉತ್ತಮ. ಕೋವಿಡ್‌ ಮುಗಿಯಿತು ಎಂಬ ಮಾನಸಿಕತೆಯಲ್ಲಿ ಸಂಪೂರ್ಣ ಮೈಮರೆವು ಒಳ್ಳೆಯದಲ್ಲ. ಮಕ್ಕಳು, ವಯಸ್ಸಾದವರು, ಶ್ವಾಸಕೋಶ, ಕಿಡ್ನಿ ಸಂಬಂಧಿಸಿದ ಕಾಯಿಲೆ ಇರುವವರು ಜನದಟ್ಟಣೆಯ ಪ್ರದೇಶದಿಂದ ದೂರ ಇರಬೇಕು.

ರೋಗ ನಿರೋಧಕ ಶಕ್ತಿ ಚೆನ್ನಾಗಿರಲು ಬೇಕಾದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಮನೆ ಸಹಿತವಾಗಿ ನಾವಿರುವ ಪರಿಸರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಶುಚಿತ್ವಕ್ಕೆ ಆದ್ಯತೆ ನೀಡಲೇ ಬೇಕು.

Advertisement

ಗಾಯ ಗುಣವಾಗಿದ್ದರೂ ಕಲೆ ಇರುವಂತೆ..
ಸಾಮಾನ್ಯವಾಗಿ ದೇಹದ ಯಾವುದೇ ಭಾಗದಲ್ಲಿ ಗಾಯವಾದರೂ ಅದು ಗುಣವಾದ ಅನಂತರವೂ ಸ್ವಲ್ಪ ಸಮಯ ಅಥವಾ ದೀರ್ಘ‌ಕಾಲ ಕಲೆ ಹಾಗೇ ಇರುತ್ತದೆ. ಅದೇ ರೀತಿ ಶ್ವಾಸಕೋಶದ ಸಮಸ್ಯೆ ಇದ್ದವರಿಗೆ ಕೊರೊನಾದಿಂದ ಹಲವು ರೀತಿಯ ಸಮಸ್ಯೆ ಆಗಿರಬಹುದು ಮತ್ತು ಈಗಲೂ ಆಗುತ್ತಿರಬಹುದು. ಕೊರೊನಾ ಶ್ವಾಸಕೋಶಕ್ಕೆ ಹಾನಿ ಮಾಡಿದ್ದರೆ ಅದು ತತ್‌ಕ್ಷಣ ಸರಿಹೋಗುವುದಿಲ್ಲ. ಆಗಾಗ ಉಸಿರಾಟದ ಸಮಸ್ಯೆ, ಅಸ್ತಮಾ ರೀತಿಯಲ್ಲೂ ಕಾಣಿಸಿಕೊಳ್ಳಬಹುದು. ನಿರಾಸಕ್ತಿ, ಮೈ-ಕೈ ನೋವು, ಸುಸ್ತಾಗುವುದು ಇತ್ಯಾದಿ ಕಾಣಸಿಕೊಳ್ಳುತ್ತಿರಬಹುದು. ಇದಕ್ಕೆಲ್ಲ ವೈದ್ಯರ ಸಲಹೆಯೊಂದಿಗೆ ಚಿಕಿತ್ಸೆ ಪಡೆಯುವುದು ಉತ್ತಮ.

ಬೇಸಗೆಯಲ್ಲೇನು ಮಾಡಬೇಕು?
ಬೇಸಗೆಯಲ್ಲಿ ದಿನಕ್ಕೆ ಕನಿಷ್ಠ 3ರಿಂದ ನಾಲ್ಕು ಲೀಟರ್‌ ನೀರು ಕುಡಿಯಲೇ ಬೇಕು. ಬೇಸಗೆಯಲ್ಲಿ ಕಿಡ್ನಿ ಸ್ಟೋನ್‌ ಸಹಿತವಾಗಿ ಕೆಲವೊಂದು ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನೀರು ಹೆಚ್ಚೆಚ್ಚು ಕುಡಿಯಬೇಕು. ದೇಹ ಒಣಗಲು ಬಿಡಬಾರದು. ಆದಷ್ಟು ಆಹಾರ ಸೇವನೆಯಲ್ಲಿ ಎಚ್ಚರ ವಹಿಸಬೇಕು. ನಿದ್ರೆ ಚೆನ್ನಾಗಿ ಮಾಡಬೇಕು.

ಮಳೆಗಾಲದ ಎಚ್ಚರ
ಬೇಸಗೆ ಕಾಲ ಮುಗಿ ಯುತ್ತಿದ್ದಂತೆ ಮಳೆಗಾಲ ಆರಂಭವಾಗುತ್ತದೆ. ಮಳೆ ಗಾಲದಲ್ಲಿ ಜ್ವರ, ಶೀತ, ಕೆಮ್ಮು ಇತ್ಯಾದಿ ದಿಢೀರ್‌ ಅಸ್ವಸ್ಥತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಳೆಗಾಲದ ಬಹುತೇಕ ಕಾಯಿಲೆಗಳ ಮೂಲ ಸೊಳ್ಳೆಗಳು. ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳನ್ನು ಗುರುತಿಸಿ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕಳೆದ ಎರಡು ವರ್ಷಗಳಿಂದ ಮಲೇರಿಯಾ ಪ್ರಮಾಣ ಕಡಿಮೆಯಾಗಿದೆ. ಇದಕ್ಕೆ ಹಲವು ಕಾರಣಗಳು ಇರಬಹುದು. ಡೆಂಗ್ಯೂ, ಚಿಕನ್‌ಗುನ್ಯ ಇತ್ಯಾದಿ ಕಾಯಿಲೆಗಳು ಮಳೆಗಾಲದಲ್ಲಿ ಹೆಚ್ಚೆಚ್ಚು ಇರುತ್ತದೆ. ಜ್ವರ, ಶೀತ, ಕೆಮ್ಮು ಒಟ್ಟಿಗೆ ಕಾಣಿಸಿಕೊಂಡ ತತ್‌ಕ್ಷಣವೇ ಮಾತ್ರೆ ತೆಗೆದುಕೊಳ್ಳುವ ಆವಶ್ಯಕತೆ ಇಲ್ಲ. ಒಂದು ದಿನ ಕಳೆದರೂ ಕಡಿಮೆಯಾಗದೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ ಅವರಿಂದ ಸಲಹೆ ಪಡೆದೇ ಔಷಧ ಸೇವನೆ ಮಾಡಬೇಕು. ಎರಡು ಅಥವಾ ಮೂರು ದಿನದಿಂದ ಜ್ವರ ಮಾತ್ರ ಕಾಣಿಸಿಕೊಂಡಲ್ಲಿ ಪರೀಕ್ಷೆಗೆ ಒಳಪಡಿಸಿ ಅನಂತರ ಔಷಧ ಪಡೆಯಬೇಕಾಗುತ್ತದೆ. ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದೇ ಅತೀ ಮುಖ್ಯ.

ಮಂಗನ ಕಾಯಿಲೆ
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಈ ವರ್ಷ ಮಂಗನ ಕಾಯಿಲೆಯ ಪ್ರಮಾಣ ತುಂಬ ಕಡಿಮೆ ಇದೆ. ಆದರೂ ವಹಿಸಲೇ ಬೇಕು. ಕಾಡುಗಳಲ್ಲಿ ಕೆಲಸ ಮಾಡುವವರು ಇದರ ಬಗ್ಗೆ ಅತಿಯಾದ ಜಾಗ್ರತೆ ವಹಿಸಬೇಕು. ಮಂಗಗಳು ಸತ್ತಾಗ ಅದರ ಬಗ್ಗೆ ತತ್‌ಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು. ಸಾಮೂಹಿಕವಾಗಿ ಮಂಗಗಳು ಸತ್ತಿರುವುದು ತಿಳಿದಾಗ ಅಗತ್ಯ ಮುನ್ನೆಚ್ಚರಿಕ ಕ್ರಮವನ್ನು ತೆಗೆದುಕೊಳ್ಳಬೇಕು. ಜ್ವರ ಕಾಣಿಸಿಕೊಂಡಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಪರೀಕ್ಷೆ ಮಾಡಿಸಿಕೊಳ್ಳಬೇಕು.

ಇಲಿ ಜ್ವರ
ಕರಾವಳಿಯಲ್ಲಿ ಜೂನ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಇಲಿ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇಲಿಗಳು ಸತ್ತು ನೀರಿನಲ್ಲಿ ಬಿದ್ದಾಗ ಆ ನೀರನ್ನು ಉಪಯೋಗಿಸಿದಾಗ ಇಲಿ ಜ್ವರ ಕಾಣಿಸಿಕೊಳ್ಳುತ್ತದೆ ಅಥವಾ ಇಲಿಗಳು ಮುಟ್ಟಿದ ಪದಾರ್ಥ ಸೇವನೆಯಿಂದಲೂ ಬರಬಹುದು. ಹೀಗಾಗಿ ಶುದ್ಧ ನೀರು ಹಾಗೂ ಶುದ್ಧ ಆಹಾರ ಸೇವನೆ ಅತೀ ಮುಖ್ಯವಾಗುತ್ತದೆ. ಎಲ್ಲ ಪದಾರ್ಥಗಳನ್ನು ಮುಚ್ಚಿಡಬೇಕಾಗುತ್ತದೆ.

ಆಹಾರ ಪದ್ಧತಿ ಪಾಲನೆ
ಪ್ರತಿಯೊಬ್ಬರಿಗೂ ಅವರದ್ದೇ ಆಹಾರ ಪದ್ಧತಿ ಇರುತ್ತದೆ. ಆರೋಗ್ಯಪೂರ್ಣ ಜೀವನಕ್ಕೆ ಬೇಕಾದ ಕೆಲವೊಂದು ಪ್ರಮುಖ ಅಂಶಗಳು ಆಹಾರ ಪದ್ಧತಿಯಲ್ಲೇ ಅಡಗಿರುತ್ತದೆ. ಈ ನಿಟ್ಟಿನಲ್ಲಿ ಸೊಪ್ಪು, ತರಕಾರಿ, ನಾರಿನ ಅಂಶಗಳು ಇರುವ ಪದಾರ್ಥಗಳ ಸೇವನೆ ಮಾಡಬೇಕು. ಕೊಬ್ಬಿನ ಅಂಶ ಕಡಿಮೆ ಇರುವ ಆಹಾರಕ್ಕೆ ಆದ್ಯತೆ ನೀಡಬೇಕು. ಜಂಕ್‌ ಫ‌ುಡ್‌ಗಳಿಂದ ಮಕ್ಕಳನ್ನು ಆದಷ್ಟು ದೂರ ಇರಿಸಬೇಕು. ಮಾಂಸ ಆಹಾರ ಸೇವನೆ ಮಾಡುವವರು ಮನೆಯಲ್ಲೇ ಸಿದ್ಧಪಡಿಸಿ ಕೊಂಡು ಉಪಯೋಗಿ ಸುವುದು ಒಳ್ಳೆಯದು. ರಸ್ತೆಬದಿ ಆಹಾರದಿಂದ ಆದಷ್ಟು ಅಂತರ ಕಾಯ್ದುಕೊಳ್ಳಬೇಕು.

ವ್ಯಾಯಾಮ ಬ್ರಹ್ಮಾಸ್ತ್ರ ಇದ್ದಂತೆ
ಸದೃಢ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಬ್ರಹ್ಮಾಸ್ತ್ರ ಇದ್ದಂತೆ. ಇದಕ್ಕೆ ಪರ್ಯಾಯವಾದುದು ಯಾವುದೂ ಇಲ್ಲ. ನಿತ್ಯವೂ 30ರಿಂದ 45 ನಿಮಿಷ ಜೋರಾದ ನಡಿಗೆ (ಬ್ರಿಕ್ಸ್‌ ವಾಕ್‌) ಮಾಡಬೇಕು. ಇದನ್ನು ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು. ಮಕ್ಕಳು, ವಯಸ್ಕರೂ ಎಲ್ಲರೂ ಮಾಡಬೇಕು. ಸೂರ್ಯನಮಸ್ಕಾರ ಸಹಿತವಾಗಿ ಸರಳ ಯೋಗಗಳನ್ನು ನಿತ್ಯ ಮಾಡಬೇಕು. ದಿನದಲ್ಲಿ ಕನಿಷ್ಠ 30ರಿಂದ 60 ನಿಮಿಷ ವ್ಯಾಯಾಮಕ್ಕಾಗಿ ಮೀಸಲಿಡಲೇ ಬೇಕು.

ಹೃದಯ ಚೆನ್ನಾಗಿಟ್ಟುಕೊಳ್ಳುವ ಬಗೆ
ಹೃದಯವನ್ನು ಚೆನ್ನಾಗಿಟ್ಟುಕೊಳ್ಳಲು ನಿತ್ಯ ವಾಕಿಂಗ್‌ ಮಾಡಬೇಕು. ದೇಹದಲ್ಲಿ ಸಕ್ಕರೆ ಅಂಶ(ಶುಗರ್‌) ಮತ್ತು ಕೊಬ್ಬಿನ ಅಂಶ, ಎಣ್ಣೆಯಲ್ಲಿ ಕರಿದ ಆಹಾರದ ಅತಿಯಾದ ಸೇವನೆ ಹೃದಯಕ್ಕೆ ಒಳ್ಳೆಯದಲ್ಲ. ಸಿಹಿ ಮತ್ತು ಕೊಬ್ಬಿನ ಅಂಶ ಇರುವ ಆಹಾರ ಪದಾರ್ಥವನ್ನು ಆದಷ್ಟು ಕಡಿಮೆ ಮಾಡಬೇಕು. ಮದ್ಯಪಾನ ಹಾಗೂ ಬೀಡಿ, ಸಿಗರೇಟು ಸಹಿತ ತಂಬಾಕು ಸೇವನೆಯಿಂದ ದೂರ ಇರಬೇಕು. ನಿತ್ಯವೂ ಕನಿಷ್ಠ ಅರ್ಧಗಂಟೆ ಸರಳ ವ್ಯಾಯಾಮ ಮಾಡಬೇಕು. ಹೃದಯಾಘಾತ ಎಂದರೆ ರಕ್ತನಾಳದಲ್ಲಿ ಬ್ಲಾಕ್‌ ಆಗುವುದು. ಇಂತಹ ಸಂದರ್ಭದಲ್ಲಿ ತತ್‌ಕ್ಷಣವೇ ಸಮೀಪದ ಕ್ಲಿನಿಕ್‌ ಅಥವಾ ಆಸ್ಪತ್ರೆಗೆ ಭೇಟಿ ನೀಡಬೇಕು.

ಕೋವಿಡ್‌ ತೀವ್ರತೆ ಕಡಿಮೆಯಾಗಿದೆ ಎಂದ ಮಾತ್ರಕ್ಕೆ ಮುಂದೆ ಇಂತಹ ವೈರಸ್‌ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆರೋಗ್ಯದ ಬಗ್ಗೆ ಸದಾ ಜಾಗೃತರಾಗಬೇಕು. ಉತ್ತಮ ಆಹಾರ ಪದ್ಧತಿಯ ಜತೆಗೆ ಜೀವನ ಕ್ರಮದಲ್ಲೂ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಎರಡು ಅಥವಾ ಮೂರು ದಿನಗಳಿಂದ ನಿರಂತರ ಜ್ವರ, ಶೀತ, ಕೆಮ್ಮು ಇದ್ದರೂ ವೈದ್ಯರ ಸಲಹೆ ಇಲ್ಲದೇ ಔಷಧ ತೆಗೆದುಕೊಳ್ಳುವುದು ಸರಿಯಲ್ಲ.
– ಡಾ| ವಾಸುದೇವ ಆಚಾರ್ಯ

ಕೊಬ್ಬು ಮತ್ತು ಸಕ್ಕರೆ ಅಂಶ ಇರುವ ಆಹಾರದಿಂದ ಆದಷ್ಟು ದೂರ ಇರಬೇಕು. ನಿತ್ಯ ವ್ಯಾಯಾಮಕ್ಕೆ ನಿರ್ದಿಷ್ಟ ಸಮಯ ಮೀಸಲಿರಿಸಬೇಕು. ಬೇಸಗೆಯಲ್ಲಿ
ಹೆಚ್ಚೆಚ್ಚು ನೀರು ಕುಡಿಯಬೇಕು.
-ಡಾ| ಸುಧಾ ವಿದ್ಯಾಸಾಗರ್‌

Advertisement

Udayavani is now on Telegram. Click here to join our channel and stay updated with the latest news.

Next