Advertisement

World Animal Welfare Day: ಪ್ರಾಣಿಗಳ ಕ್ಷೇಮಕ್ಕಾಗಿ ಶ್ರಮಿಸುವ ಜಗತ್ತು ಸೃಷ್ಟಿಯಾಗಲಿ

12:02 AM Oct 04, 2023 | Team Udayavani |

ಜಗತ್ತಿನಲ್ಲಿ ಅಕ್ಟೋಬರ್‌ 4 ರಂದು ವಿಶ್ವ ಪ್ರಾಣಿ ಅಭ್ಯುದಯ ದಿವಸವನ್ನು ಆಚರಿಸಲಾಗುತ್ತದೆ. “ದೊಡ್ಡದಾಗಿರಲಿ, ಸಣ್ಣದಾಗಿರಲಿ ಎಲ್ಲ ಪ್ರಾಣಿಗಳನ್ನೂ ಪ್ರೀತಿಸು’- ಇದು 2023 ವಿಶ್ವ ಪ್ರಾಣಿ ಅಭ್ಯುದಯ ದಿವಸದ ಘೋಷವಾಕ್ಯ. ಪ್ರಾಣಿಗಳು ಮತ್ತು ಅವುಗಳ ಕ್ಷೇಮಾಭ್ಯುದಯದ ಕುರಿತಾದ ಜಾಗೃತಿ ಮತ್ತು ಗುಣಮಟ್ಟವನ್ನು ಅಭಿವೃದ್ಧಿಪಡಿಸುವುದು, ಮನುಷ್ಯಲೋಕ ಮತ್ತು ಪ್ರಾಣಿಲೋಕದ ಸಂಬಂಧವನ್ನು ಆಚರಣೆಯ ಮೂಲಕ ಪ್ರಚುರಪಡಿಸುವುದು ಇದರ ಉದ್ದೇಶ.

Advertisement

ಜಗತ್ತಿನಲ್ಲಿ ಪ್ರಾಣಿ ಅಭ್ಯುದಯ ಕಾರ್ಯಚಟುವಟಿಕೆಗಳ ಗುಣಮಟ್ಟವನ್ನು ಅಭಿವೃದ್ಧಿ ಪಡಿಸುವುದು, ಪ್ರಾಣಿಗಳನ್ನು ಪ್ರೀತಿಸುವ, ಅವುಗಳ ಬಗ್ಗೆ ಕಾಳಜಿವಹಿಸುವ ವ್ಯಕ್ತಿಗಳು, ಸಂಘಟನೆಗಳನ್ನು, ಆಂದೋಲನಗಳನ್ನು ಬೆಂಬಲಿಸುವುದು, ಉತ್ತೇಜಿಸುವುದು ವಿಶ್ವ ಪ್ರಾಣಿ ಅಭ್ಯುದಯ ದಿವಸದ ಉದ್ದೇಶವಾಗಿದೆ. ಇದೊಂದು ವಿಶ್ವದಾದ್ಯಂತ ಪ್ರಾಣಿ ಕ್ಷೇಮ ಚಳವಳಿಯನ್ನು ಸಂಘಟಿಸುವ ಸುಂದರ ಕಾರ್ಯಕ್ರಮವಾಗಿದೆ.

ಜಗತ್ತಿನ 60 ಬಿಲಿಯ ಕೃಷಿ ಉಪಯೋಗಿ ಪ್ರಾಣಿಗಳಿಗೆ ನೀಡುವ ಅಮಾನವೀಯ ಹಿಂಸೆ, ಬೀದಿ ನಾಯಿ, ಬೆಕ್ಕುಗಳ ಬಗ್ಗೆ ಅಸಡ್ಡೆ, ಅಕ್ರಮ ಪ್ರಾಣಿ ವಧೆ ಮತ್ತು ಮಾರಾಟ ಮತ್ತು ವಿಶೇಷವಾಗಿ ನೈಸರ್ಗಿಕ ಪ್ರಕೋಪಗಳಲ್ಲಿ ಪ್ರಾಣಿ ಸಂಕುಲವನ್ನು ಮರೆತು ಬಿಡುವ ಪ್ರವೃತ್ತಿಗಳು ಹೆಚ್ಚುತ್ತಿವೆ. ಶಿಕ್ಷಣ ಮತ್ತು ಜನಜಾಗೃತಿಯ ಮೂಲಕ ಪ್ರಾಣಿಗಳು ಚೇತನಯುಕ್ತ ಜೀವಿಗಳೆಂದು ಪರಿಗಣಿಸಿ ಗೌರವಿಸುವ ಅವುಗಳ ಕ್ಷೇಮಕ್ಕಾಗಿ ಶ್ರಮಿಸುವ ಜಗತ್ತನ್ನು ಸೃಷ್ಟಿಮಾಡಬಹುದು. ಒಂದು ದೇಶದ ಶ್ರೇಷ್ಠತೆ ಮತ್ತು ಅದರ ನೈತಿಕ ಬೆಳವಣಿಗೆಯು ಅದು ಹೇಗೆ ತನ್ನ ಪ್ರಾಣಿಗಳನ್ನು ನಡೆಸಿಕೊಳ್ಳುತ್ತದೆ ಎಂಬುದರ ಮೇಲೆ ನಿರ್ಧರಿಸಬಹುದು ಎಂದು ಮಹಾತ್ಮಾ ಗಾಂಧೀಜಿ ನುಡಿದಿದ್ದರು.

ಪ್ರಾಣಿಗಳ ದುಃಸ್ಥಿತಿ!: ಭಾರತವೂ ಸೇರಿದಂತೆ ಜಗತ್ತಿನಲ್ಲಿ ಮನುಷ್ಯರು ಮಾನವೀ ಯತೆಯನ್ನು ಕಳೆದುಕೊಳ್ಳುತ್ತಿದ್ದಾರೋ ಎಂದು ಭಾಸವಾಗುತ್ತಿದೆ. ಆಹಾರಕ್ಕಾಗಿ ಪ್ರಾಣಿ ಹತ್ಯೆಯು ಹಿಂಸಾತ್ಮಕ ರೀತಿಯಲ್ಲಿ ನಿಷ್ಠುರವಾಗಿ ನಡೆಯುತ್ತಿದೆ. ಪ್ರಾಣಿಗಳನ್ನು ಪೂಜಿ ಸುವ ಈ ಭೂಮಿಯಲ್ಲಿ ಕ್ರೂರವಾಗಿ ಕೊಲ್ಲಲಾಗುತ್ತಿದೆ. ಒಂದೆಡೆ ದೇವಾಲಯಗಳಲ್ಲಿ ಪ್ರಾಣಿಪಕ್ಷಿ ವಾಹನವುಳ್ಳ ದೇವರನ್ನು ನೋಡಿ ಭಕ್ತಿಯಿಂದ ನಮಿಸುತ್ತೇವೆ. ಇನ್ನೊಂದೆಡೆ ಅದೇ ಪ್ರಾಣಿಗಳನ್ನು ಆಹಾರಕ್ಕಾಗಿ ವಧಿಸುವುದನ್ನು ಕಂಡರೂ ಸುಮ್ಮನಿರುತ್ತೇವೆ! ಕೊರೊನಾ ಸಾಂಕ್ರಾಮಿಕದ ವೇಳೆ ತಿರುಗಾಟವಿರದೆ ಮನೆಯೊಳಗೆ ಬಂಧಿಯಾಗಿದ್ದ ನಾವು ಚಡಪಡಿಸುತ್ತಿದ್ದೆವು. ಆದರೆ ಬದುಕನ್ನೇ ಪ್ರಾಣಿ ಸಂಗ್ರಹಾಲಯ, ಸರ್ಕಸ್‌, ಏಕೆ ಮನೆಯ ಗೂಡಿನೊಳಗೆ ಕಳೆಯುವ ಪ್ರಾಣಿಗಳ ಬಗ್ಗೆ ಎಂದಾದರೂ ಯೋಚಿಸಿದ್ದೇವೆಯೇ?

ನಾವೇನು ಮಾಡಬಹುದು?: ಪ್ರಾಣಿಗಳ ಬಗ್ಗೆಯೂ ಪ್ರತಿಯೋರ್ವನಲ್ಲೂ ಜವಾಬ್ದಾರಿಯಿರಲಿ. ನೀವು ಪ್ರಾಣಿದಯೆಯ ಬಗ್ಗೆ ಇತರರಿಗೆ ಮಾದರಿಯಾಗಿರಿ. ಪ್ರಾಣಿಗಳ ಬಗ್ಗೆ ಕ್ರೌರ್ಯ, ಅಸಡ್ಡೆಯನ್ನು ಕಂಡರೆ ಸಾಧ್ಯವಾದರೆ ತಡೆಗಟ್ಟಲು ಪ್ರಯತ್ನಿಸಿ. ಇತರರ ಸಹಾಯವನ್ನು ಪಡೆಯಿರಿ. ಪೊಲೀಸರಿಗೆ ಮಾಹಿತಿ ನೀಡಿ. ನಿಮ್ಮ ಮಕ್ಕಳಿಗೆ ಪ್ರಾಣಿಗಳಿಗೆ ಗೌರವ ನೀಡುವುದನ್ನು ಕಲಿಸಿ. ಅವರಿಗೆ ಪ್ರಾಣಿಪ್ರೀತಿಯನ್ನು ತೋರಿಸಿ. ಪ್ರಾಣಿ ರಕ್ಷಣೆಗಾಗಿ ಕಠಿನ ಕಾನೂನಿಗೆ ಬೇಡಿಕೆಯಿಡಿ. ಶಕ್ತಿಶಾಲಿ ಪ್ರಾಣಿ ಅಭ್ಯುದಯ ಕಾನೂನುಗಳು ಮತ್ತು ಕಠಿನ ಶಿಕ್ಷೆ, ದಂಡ ಪ್ರಾಣಿಕ್ರೌರ್ಯವನ್ನು ನಿಯಂತ್ರಿಸಬಲ್ಲುದು. ಸಾಧ್ಯವಾದರೆ ಪ್ರಾಣಿಗಳಿಗೆ ಆಶ್ರಯವನ್ನು ಕಲ್ಪಿಸುವುದು ಅಥವಾ ಅಂತಹ ಸೌಲಭ್ಯವಿರುವ ಸಂಸ್ಥೆಗಳಿದ್ದರೆ ಕಳಿಸುವುದು. ನಮ್ಮ ನೆರೆಕರೆಯ ಜನರಿಗೆ ಪ್ರಾಣಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಕನಿಷ್ಠ ನಮ್ಮ ಕರ್ತವ್ಯವಾಗಿರಲಿ. ಯಾರು ಪ್ರಾಣಿಗಳ ಬಗ್ಗೆ ಕ್ರೂರಿಯಾಗಿರುತ್ತಾನೋ ಅವನು ಮನುಷ್ಯನೊಂದಿಗೆ ವ್ಯವಹಾರಗಳಲ್ಲೂ ಕಠಿನನಾಗಿರುತ್ತಾನೆ. ನಾವು ಒಬ್ಬನ ಹೃದಯವನ್ನು ಅವನು ಪ್ರಾಣಿಗಳನ್ನು ನಡೆಸುವ ರೀತಿಯಿಂದ ನಿರ್ಧರಿಸಬಹುದು   ಎಂಬುದೊಂದು ಪ್ರಸಿದ್ಧ ಘೋಷವಾಕ್ಯ.

Advertisement

ಜಲಂಚಾರು ರಘುಪತಿ ತಂತ್ರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next