Advertisement

ದೇವನಗರಿಯಲ್ಲಿ ಇಂದು-ನಾಳೆ ಕನ್ನಡ ಕಲರವ

05:45 AM Jan 30, 2019 | |

ದಾವಣಗೆರೆ: ಐತಿಹಾಸಿಕ ಹಿನ್ನೆಲೆಯ ಶಿಕ್ಷಣ ನಗರಿ, ಬೆಣ್ಣೆದೋಸೆ ತವರೂರು, ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಮೂರನೇ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗಿದೆ.

Advertisement

2010ರ ಮೇ 27 ಮತ್ತು 28 ರಂದು ಡಾ| ಎಂ. ಚಿದಾನಂದಮೂರ್ತಿ ಸರ್ವಾಧ್ಯಕ್ಷತೆಯಲ್ಲಿ ದಾವಣಗೆರೆಯಲ್ಲಿ ಮೊದಲ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ತದನಂತರ 2013ರ ಜೂ. 22 ಮತ್ತು 23 ರಂದು ಕುಂ.ಬಾ. ಸದಾಶಿವಪ್ಪ ಅಧ್ಯಕ್ಷತೆಯಲ್ಲಿ 2 ನೇ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು.

ಇಂದು, ನಾಳೆ (ಜ.30 ಮತ್ತು 31) ಮೂರನೇ ಬಾರಿಗೆ ದಾವಣಗೆರೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ದಾವಣಗೆರೆ ತಾಲೂಕಿನ ಅಗಸನಕಟ್ಟೆ ಗ್ರಾಮದ ಡಾ| ಲೋಕೇಶ್‌ ಅಗಸನಕಟ್ಟೆ ಸರ್ವಾಧ್ಯಕ್ಷರಾಗಿದ್ದಾರೆ.

ವಾಣಿಜ್ಯ ನಗರಿ ದಾವಣಗೆರೆ ಸಾಹಿತ್ಯ ಕ್ಷೇತ್ರದಲ್ಲೂ ತನ್ನದೇ ಆದ ಖ್ಯಾತಿ ಹೊಂದಿದೆ. ಸಂಸ್ಕೃತದ ದಟ್ಟ ಪ್ರಭಾವದ ನಡುವೆಯೂ ಕನ್ನಡದಲ್ಲಿ ಅನುಭಾವಮೃತ… ಕೃತಿ ಬರೆದ ಮಹಲಿಂಗರಂಗರು ಇದೇ ನೆಲದಲ್ಲಿ ನಡೆದಾಡಿದವರು. ಮಹಿಳಾ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿರುವ ಟಿ. ಗಿರಿಜಾ, ಪ್ರಖರ ವೈಚಾರಿಕ ಬರಹಗಳ ನಾಡಿನ ಮನೆ ಮಾತಾಗಿರುವ ಪ್ರೊ| ಬಿ.ವಿ. ವೀರಭದ್ರಪ್ಪ ಇತರರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದವರಾಗಿದ್ದಾರೆ.

ರಾಷ್ಟ್ರಕವಿ ಗೌರವಕ್ಕೆ ಪಾತ್ರರಾದ ಡಾ| ಜಿ.ಎಸ್‌. ಶಿವರುದ್ರಪ್ಪನವರು ಸಹ ದಾವಣಗೆರೆಯಲ್ಲೇ ಅಭ್ಯಾಸ ಮಾಡಿದವರು. ಜಯದೇವ ವಿದ್ಯಾರ್ಥಿ ನಿಲಯದಲ್ಲಿದ್ದ ಜಿ.ಎಸ್‌. ಶಿವರುದ್ರಪ್ಪ ಅವರು ಧರಾಮ ವಿಜ್ಞಾನ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಕೊನೆಗೆ ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಜಯದೇವ ವಿದ್ಯಾರ್ಥಿ ನಿಲಯದ ವಾರ್ಡನ್‌ ಆಗಿ ಸೇವೆ ಸಲ್ಲಿಸಿದ್ದರು.

Advertisement

ಅವರ ಸವಿನೆನಪಿಗಾಗಿ 2014ರ ನ. 29ರಂದು ಉದ್ಘಾಟನೆಗೊಂಡಿರುವ ಕುವೆಂಪು ಕನ್ನಡ ಭವನದ ವೇದಿಕೆಗೆ ಜಿ.ಎಸ್‌. ಶಿವರುದ್ರಪ್ಪ ಹೆಸರಿಡಲಾಗಿದೆ. ಈಗ ಅದೇ ವೇದಿಕೆಯಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.

ಬುಧವಾರ ಬೆಳಗ್ಗೆ 8:30ಕ್ಕೆ ಮೇಯರ್‌ ಶೋಭಾ ಪಲ್ಲಾಗಟ್ಟೆ ರಾಷ್ಟ್ರ ಧ್ವಜಾರೋಹಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಎಚ್.ಎಸ್‌. ಮಂಜುನಾಥ ಕುರ್ಕಿ ಪರಿಷತ್ತಿನ ಧ್ವಜಾರೋಹಣ ನೆರೆವೇರಿಸುವರು. 9 ಕ್ಕೆ ಮೋತಿ ವೀರಪ್ಪ ಕಾಲೇಜು ಮೈದಾನದಿಂದ ಪ್ರಾರಂಭವಾಗುವ ಮೆರವಣಿಗೆಯನ್ನು ಜಿಲ್ಲಾ ರಕ್ಷಣಾಧಿಕಾರಿ ಆರ್‌.ಚೇತನ್‌ ಉದ್ಘಾಟಿಸುವರು. ಸಮ್ಮೇಳನದ ಸರ್ವಾಧ್ಯಕ್ಷ ಡಾ| ಲೋಕೇಶ್‌ ಅಗಸನಕಟ್ಟೆಯವರ ಬದಲಿಗೆ ಭುವನೇಶ್ವರಿ ಮಾತೆಯ ಭಾವಚಿತ್ರದ ಮೆರವಣಿಗೆ ನಡೆಯಲಿದೆ.

ಮೋತಿ ವೀರಪ್ಪ ಕಾಲೇಜು ಮೈದಾನದಿಂದ ಪ್ರಾರಂಭವಾಗುವ ಮೆರವಣಿಗೆ ಬಾಪೂಜಿ ದಂತವಿಜ್ಞಾನ ಕಾಲೇಜು ರಸ್ತೆಯ ಮೂಲಕ ಕುವೆಂಪು ಕನ್ನಡ ಭವನ ತಲುಪುವುದು. ಬೆಳಗ್ಗೆ 11ಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಎಸ್‌.ಜಿ. ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌, ಸಂಸದ ಜಿ.ಎಂ. ಸಿದ್ದೇಶ್ವರ್‌, ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಕೃತಿಗಳ ಬಿಡುಗಡೆ ಮಾಡುವರು. ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಅಧ್ಯಕ್ಷತೆ ವಹಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಎಸ್‌.ಬಿ.ರಂಗನಾಥ್‌ ಸಮ್ಮೇಳನದ ಸರ್ವಾಧ್ಯಕ್ಷ ಡಾ| ಲೋಕೇಶ್‌ ಅಗಸನಕಟ್ಟೆಯವರಿಗೆ ಕನ್ನಡ ಧ್ವಜ ಹಸ್ತಾಂತರಿಸುವರು.

ವಿಧಾನ ಪರಿಷತ್‌ ಸದಸ್ಯ ಕೆ. ಅಬ್ದುಲ್‌ ಜಬ್ಟಾರ್‌, ಶಾಸಕರಾದ ಎಸ್‌. ರಾಮಪ್ಪ, ಪ್ರೊ| ಎನ್‌. ಲಿಂಗಣ್ಣ, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಪಂ ಸಿಇಒ ಎಸ್‌. ಅಶ್ವತಿ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಆರ್‌.ಉಜನಪ್ಪ ಇತರರು ಪಾಲ್ಗೊಳ್ಳುವರು. ಹಾಲಿ ಅಧ್ಯಕ್ಷ ಡಾ| ಎಚ್.ಎಸ್‌. ಮಂಜುನಾಥ ಕುರ್ಕಿ ಪ್ರಾಸ್ತವಿಕ ನುಡಿಗಳಾನ್ನಾಡುವರು. ಪ್ರಾಧ್ಯಾಪಕ ಡಾ| ಎಚ್.ಟಿ. ಕೃಷ್ಣಮೂರ್ತಿ ಸಮ್ಮೇಳನಾಧ್ಯಕ್ಷರ ಪರಿಚಯಿಸುವರು.

ಮಧ್ಯಾಹ್ನ 2ಕ್ಕೆ ದಾವಣಗೆರೆ ಜಿಲ್ಲೆಯ ಅನನ್ಯತೆ ವಿಷಯ ಕುರಿತು 1ನೇ ಗೋಷ್ಠಿ, 3:30ಕ್ಕೆ ಕನ್ನಡ ಸಾಹಿತ್ಯ: ಸಾಮರಸ್ಯದ ನೆಲೆಗಳು ವಿಷಯ ಕುರಿತು 2ನೇ ಗೋಷ್ಠಿ ನಡೆಯುವುದು. ಸಂಜೆ 5 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಗುರುವಾರ ಬೆಳಗ್ಗೆ 9:30 ಕ್ಕೆ ಕವಿಗೋಷ್ಠಿ, 11:30ಕ್ಕೆ ಮಹಿಳೆ: ಸೃಜನಶೀಲತೆಯ ಸಾಧ್ಯತೆಗಳು… ವಿಷಯ ಕುರಿತು 4ನೇ ಗೋಷ್ಠಿ, ಮಧ್ಯಾಹ್ನ 2ಕ್ಕೆ ಜಿಲ್ಲಾ ಭೌಗೋಳಿಕ ವಿಂಗಡಣೆಯ ಹಿಂದಿನ ಸವಾಲುಗಳು… ಕುರಿತು 5ನೇ ಸಂವಾದ, ಗೋಷ್ಠಿ ನಡೆಯುವುದು. ಸಂಜೆ 4 ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಎಚ್.ಎಸ್‌. ಮಂಜುನಾಥ ಕುರ್ಕಿ ಅಧ್ಯಕ್ಷತೆಯಲ್ಲಿನ ಬಹಿರಂಗ ಅಧಿವೇಶನದಲ್ಲಿ ಪರಿಷತ್ತಿನ ಖಜಾಂಚಿ ಬುರುಡೇಕಟ್ಟೆ ಮಂಜಪ್ಪ ನಿರ್ಣಯ ಮಂಡಿಸಲಿದ್ದಾರೆ.

ಸಂಜೆ 4:30ಕ್ಕೆ ಸನ್ಮಾನ ಮತ್ತು ಸಮಾರೋಪ ಸಮಾರಂಭದಲ್ಲಿ ಸಾಹಿತಿ ಡಾ| ಕುಂ. ವೀರಭದ್ರಪ್ಪ ಸಮಾರೋಪ  ನುಡಿಗಳನ್ನಾಡುವರು. ಡಾ| ಲೋಕೇಶ್‌ ಅಗಸನಕಟ್ಟೆ ಸಮ್ಮೇಳನಾಧ್ಯಕ್ಷರ ನುಡಿಗಳಾಡುವರು. ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಕೆ. ಮಾಡಾಳ್‌ ವಿರೂಪಾಕ್ಷಪ್ಪ, ಎಸ್‌.ವಿ. ರಾಮಚಂದ್ರ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಂ. ಬಸವಪ್ಪ, ಎಸ್‌.ಎಚ್. ಹೂಗಾರ್‌, ಬಿ.ಎಂ. ಸದಾಶಿವಪ್ಪ ಶ್ಯಾಗಲೆ ಇತರರು ಭಾಗವಹಿಸುವರು. ಪ್ರಕೃತಿ ವಿಕೋಪ, ಬರದ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಎರಡು ದಿನಗಳ ಕಾಲ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ.

ಹಿಂದಿನ ಸಮ್ಮೇಳನಗಳು
•ಕಾರಿಗನೂರು- 2006, ಮೇ. 27,28- ಡಾ| ಮುದೇನೂರು ಸಂಗಣ್ಣ(ಸರ್ವಾಧ್ಯಕ್ಷರು)
•ಹರಪನಹಳ್ಳಿ- 2008, ಫೆ. 23, 24- ಟಿ. ಗಿರಿಜಾ.(ಸರ್ವಾಧ್ಯಕ್ಷರು)
•ದಾವಣಗೆರೆ- 2010, ಮೇ. 27, 28- ಡಾ| ಎಂ. ಚಿದಾನಂದಮೂರ್ತಿ.(ಸರ್ವಾಧ್ಯಕ್ಷರು)
•ಹೊನ್ನಾಳಿ- 2011, ಜ.29, 30- ಡಾ| ಎಚ್.ಎಸ್‌. ವೆಂಕಟೇಶಮೂರ್ತಿ.(ಸರ್ವಾಧ್ಯಕ್ಷರು)
•ದಾವಣಗೆರೆ- 2013 ಜೂ. 22, 23- ಕುಂ.ಬಾ. ಸದಾಶಿವಪ್ಪ.(ಸರ್ವಾಧ್ಯಕ್ಷರು)
•ಹರಿಹರ- 2014 ಜೂ. 28, 29- ಡಾ| ಎಂ.ಜಿ. ಈಶ್ವರಪ್ಪ.(ಸರ್ವಾಧ್ಯಕ್ಷರು)
•ಹರಪನಹಳ್ಳಿ- 2015, ಜೂ. 24, 25- ಪ್ರೊ. ಎಚ್.ಎ. ಭಿಕ್ಷಾವರ್ತಿಮs್.(ಸರ್ವಾಧ್ಯಕ್ಷರು)
•ಸಂತೇಬೆನ್ನೂರು-2017,ಜ.21, 22- ಪ್ರೊ.ಎಸ್‌.ಬಿ. ರಂಗನಾಥ್‌.(ಸರ್ವಾಧ್ಯಕ್ಷರು)

Advertisement

Udayavani is now on Telegram. Click here to join our channel and stay updated with the latest news.

Next