Advertisement

ಇಂದು ಅಂಡರ್‌-19 ಏಕದಿನ ವಿಶ್ವಕಪ್‌ ಫೈನಲ್‌: ಯಶ್‌ ಧುಲ್‌ ಬಳಗಕ್ಕೆ ಯಶಸ್ಸು ಒಲಿಯಲಿ

11:03 PM Feb 04, 2022 | Team Udayavani |

ನಾರ್ತ್‌ ಸೌಂಡ್‌ (ಆಂಟಿಗಾ): ಹದಿನಾಲ್ಕು ಪಂದ್ಯಾವಳಿ, ಎಂಟು ಫೈನಲ್ಸ್‌, ಅತ್ಯಧಿಕ ನಾಲ್ಕು ಸಲ ಚಾಂಪಿಯನ್‌… ಈ ರೀತಿಯಾಗಿ ಅಂಡರ್‌-19 ಏಕದಿನ ವಿಶ್ವಕಪ್‌ ಪಂದ್ಯಾವಳಿಯ ಅತ್ಯಂತ ಯಶಸ್ವಿ ತಂಡವಾಗಿರುವ ಭಾರತ ಶನಿವಾರ ಮತ್ತೊಂದು ಎತ್ತರಕ್ಕೆ ತಲುಪಲು ಸಜ್ಜಾಗಿದೆ. ಕೆರಿಬಿಯನ್‌ ದ್ವೀಪದ ನಾರ್ತ್‌ ಸೌಂಡ್‌ನ‌ “ಸರ್‌ ವಿವಿಯನ್‌ ರಿಚರ್ಡ್ಸ್‌ ಸ್ಟೇಡಿಯಂ’ನಲ್ಲಿ ಐದನೇ ಕಿರೀಟ ಏರಿಸಿಕೊಳ್ಳುವ ಯೋಜನೆಯಲ್ಲಿದೆ. ಎದುರಾಳಿ ಇಂಗ್ಲೆಂಡ್‌.

Advertisement

ಎರಡೂ ತಂಡಗಳದ್ದು ಅಜೇಯ ಅಭಿಯಾನ. ಭಾರತ ಮತ್ತು ಇಂಗ್ಲೆಂಡ್‌ ಲೀಗ್‌ ಹಂತದ ಮೂರೂ ಪಂದ್ಯಗಳನ್ನು ಗೆದ್ದಿವೆ. ಬಳಿಕ ಕ್ವಾರ್ಟರ್‌ ಫೈನಲ್‌ ಹಾಗೂ ಸೆಮಿಫೈನಲ್‌ ಹರ್ಡಲ್ಸ್‌ ಕೂಡ ದಾಟಿವೆ. ಮುಂದಿನದು ಫೈನಲ್‌ ಹಣಾಹಣಿ.

ಅಧಿಕಾರಯುತ ಗೆಲುವು
ಎರಡೂ ತಂಡಗಳು ಸಾಗಿ ಬಂದ ಹಾದಿಯನ್ನು ಗಮನಿಸುವಾಗ ಭಾರತದ ಗೆಲುವು ಹೆಚ್ಚು ಪರಿಪೂರ್ಣ ಹಾಗೂ ಅಧಿಕಾರಯುತ ಎನ್ನಲಡ್ಡಿಯಿಲ್ಲ. ನಾಯಕ ಧುಲ್‌ ಹಾಗೂ ಉಪನಾಯಕ ರಶೀದ್‌ ಸೇರಿದಂತೆ ತಂಡದ ಬಹಳಷ್ಟು ಮಂದಿಗೆ ಕೋವಿಡ್‌ ಸೋಂಕು ತಗುಲಿದರೂ ಧೈರ್ಯಗುಂದದ ಭಾರತ ದಿಟ್ಟ ಹೋರಾಟ ನಡೆಸಿ ಗೆದ್ದು ಬಂದಿತ್ತು. ಇವರಿಬ್ಬರೂ ಚೇತರಿಸಿಕೊಂಡು ತಂಡಕ್ಕೆ ಮರಳಿದ ಬಳಿಕ ತೋರ್ಪಡಿಸಿದ ಬ್ಯಾಟಿಂಗ್‌ ವೈಭವವನ್ನು ಮರೆಯುವಂತಿಲ್ಲ. ಸೆಮಿಫೈನಲ್‌ನಲ್ಲಿ ಈ ಜೋಡಿ ದ್ವಿಶತಕದ ಜತೆಯಾಟದ ಮೂಲಕ ಆಸ್ಟ್ರೇಲಿಯವನ್ನು ಚೆಂಡಾಡಿದ ಪರಿ ಫೈನಲ್‌ ಹೋರಾಟಕ್ಕೆ ಬಹು ದೊಡ್ಡ ಸ್ಫೂರ್ತಿ. ಇಂಗ್ಲೆಂಡ್‌ ಪಾಲಿಗೊಂದು ಎಚ್ಚರಿಕೆಯ ಗಂಟೆ.

ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕ
ಆರಂಭಿಕರಾದ ಹರ್ನೂರ್‌ ಸಿಂಗ್‌ ಮತ್ತು ಅಂಗ್‌ಕೃಷ್‌ ರಘುವಂಶಿ ತಂಡದ ಆಧಾರಸ್ತಂಭ. ಆದರೆ ಆಸ್ಟ್ರೇಲಿಯ ವಿರುದ್ಧ ಇಬ್ಬರೂ ವಿಫ‌ಲರಾಗಿದ್ದರು. ಫೈನಲ್‌ನಲ್ಲಿ ಹೆಚ್ಚು ಎಚ್ಚರಿಕೆಯಿಂದ ಗಟ್ಟಿಮುಟ್ಟಾದ ಅಡಿಪಾಯ ನಿರ್ಮಿಸಬೇಕಿದೆ.

ನಿಶಾಂತ್‌ ಸಿಂಧು, ರಾಜ್ಯವರ್ಧನ್‌ , ಕೀಪರ್‌ ದಿನೇಶ್‌ ಬಾನಾ, ರಾಜ್‌ ಬಾವಾ ಅವರಿಂದ ತಂಡದ ಮಧ್ಯಮ ಕ್ರಮಾಂಕ ಹೆಚ್ಚು ಶಕ್ತಿಶಾಲಿಯಾಗಿ ರೂಪುಗೊಂಡಿದೆ.

Advertisement

ಇದನ್ನೂ ಓದಿ:ಆ್ಯಶಸ್‌ ಸೋಲು; ಇಂಗ್ಲೆಂಡ್‌ ಕೋಚ್‌ ಸಿಲ್ವರ್‌ವುಡ್‌ ವಜಾ

ಆಲ್‌ರೌಂಡರ್ ಪಡೆ
ಆಲ್‌ರೌಂಡರ್‌ಗಳ ದೊಡ್ಡ ಪಡೆಯೇ ಇರುವುದು ಭಾರತದ ಹೆಗ್ಗಳಿಕೆ. ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ ಕೂಡ ಮಾಡಬಲ್ಲ 7 ಆಟಗಾರರು ಈ ತಂಡದಲ್ಲಿದ್ದಾರೆ. ಇವರಲ್ಲಿ ಯಾರೂ ಪಾರ್ಟ್‌ ಟೈಮ್‌ ಬೌಲರ್ ಅಲ್ಲ ಎಂಬುದನ್ನು ಗಮನಿಸಬೇಕು.

ಎಕ್ಸ್‌ಟ್ರಾ ಪೇಸ್‌ ಹೊಂದಿರುವ ರಾಜ್ಯವರ್ಧನ್‌, ಎಡಗೈ ಸ್ವಿಂಗ್‌ ಬೌಲರ್‌ ರವಿಕುಮಾರ್‌, ಸ್ಪಿನ್ನರ್‌ಗಳಾದ ವಿಕ್ಕಿ ಓಸ್ವಾಲ್‌, ನಿಶಾಂತ್‌ ಸಿಂಧು, ಕೌಶಲ್‌ ತಾಂಬೆ ಅವರನ್ನೊಳಗೊಂಡ ಶಕ್ತಿಶಾಲಿ ಬೌಲಿಂಗ್‌ ಪಡೆಯನ್ನು ಕೂಟದ ಬೇರೆ ಯಾವ ತಂಡವೂ ಹೊಂದಿಲ್ಲ. ಓಸ್ವಾಲ್‌ 12 ವಿಕೆಟ್‌ಗಳೊಂದಿಗೆ ಭಾರತದ ಟಾಪ್‌ ಬೌಲರ್‌ ಆಗಿದ್ದಾರೆ.

ಡಿಫ‌ರೆಂಟ್‌ ಬಾಲ್‌ ಗೇಮ್‌
ಆಸ್ಟ್ರೇಲಿಯ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತಕ್ಕೆ ತುಸು ಆತಂಕವಿತ್ತು. ಭಾರತ ಹೊರತುಪಡಿಸಿದರೆ ಆಸೀಸ್‌ ಕಿರಿಯರ ವಿಶ್ವಕಪ್‌ ಇತಿಹಾಸದ ಅತ್ಯಂತ ಯಶಸ್ವಿ ತಂಡ. ಹೀಗಾಗಿ ಧುಲ್‌ ಪಡೆಗೆ ಇದು ಫೈನಲ್‌ಗ‌ೂ ಮಿಗಿಲಾದ ಸವಾಲು ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಯಾವಾಗ ನಮ್ಮವರು ಬಲಿಷ್ಠ ಆಸ್ಟ್ರೇಲಿಯದ ಮೇಲೆ ಸವಾರಿ ಮಾಡಿ 96 ರನ್ನುಗಳ ಜಯಭೇರಿ ಮೊಳಗಿಸಿದರೋ, ಆಗಲೇ ಇವರು ಇಂಗ್ಲೆಂಡನ್ನು ಮಣಿಸಬಲ್ಲರೆಂಬ ವಿಶ್ವಾಸ ಹೆಪ್ಪುಗಟ್ಟಿದೆ.

ಟಾಮ್‌ ಪ್ರಸ್ಟ್‌ ನಾಯಕತ್ವದ ಇಂಗ್ಲೆಂಡ್‌ ಆಸ್ಟ್ರೇಲಿಯದಷ್ಟು ಬಲಿಷ್ಠವಲ್ಲ. ಅಲ್ಲದೇ ಸ್ಪಿನ್‌ ದಾಳಿಯನ್ನು ನಿಭಾಯಿಸುವಲ್ಲೂ ಹಿಂದುಳಿದಿದೆ. ಅಫ್ಘಾನ್‌ ಎದುರಿನ ಸೆಮಿಫೈನಲ್‌ನಲ್ಲಿ ಇವರು ಗೆದ್ದದ್ದಲ್ಲ, ಸೋಲಿನ ದವಡೆಯಿಂದ ಪಾರಾದದ್ದು!

ಆದರೆ ಫೈನಲ್‌ ಎನ್ನುವುದು “ಡಿಫ‌ರೆಂಟ್‌ ಬಾಲ್‌ ಗೇಮ್‌’. ಇಲ್ಲಿ ಏನೂ ಸಂಭವಿಸಬಹುದು ಎನ್ನುವುದಕ್ಕೆ 2020ರ ಪ್ರಶಸ್ತಿ ಸಮರವೇ ಸಾಕ್ಷಿ. ಅಲ್ಲಿ ಬಾಂಗ್ಲಾದೇಶ ಫೇವರಿಟ್‌ ಭಾರತವನ್ನು ಕೆಡವಿ ಚಾಂಪಿಯನ್‌ ಆಗಿತ್ತು. ಅಂದಿನ ಪ್ರಶಸ್ತಿ ಹಣಾಹಣಿಯನ್ನು ಧುಲ್‌ ಬಳಗ ಮರೆಯುವಂತಿಲ್ಲ. ಏಕೆಂದರೆ ಈ ಸಲವೂ “ಯಂಗ್‌ ಇಂಡಿಯಾ’ವೇ ಫೇವರಿಟ್‌. ಇಂಗ್ಲೆಂಡ್‌ ಅಂಡರ್‌ಡಾಗ್ಸ್‌!

ಕಿರಿಯರಿಗೆ ಕೊಹ್ಲಿ ಟಿಪ್ಸ್‌
ಮುಂಬಯಿ: ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ಗ‌ೂ ಮುನ್ನ ಯಶ್‌ ಧುಲ್‌ ಬಳಗಕ್ಕೆ 2008ರ ವಿಶ್ವಕಪ್‌ ವಿಜೇತ ತಂಡದ ನಾಯಕ ವಿರಾಟ್‌ ಕೊಹ್ಲಿ ಉಪಯುಕ್ತ ಟಿಪ್ಸ್‌ ನೀಡಿದ್ದಾರೆ. ಇದನ್ನು ತಂಡದ ಬಹುತೇಕ ಕ್ರಿಕೆಟಿಗರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ವಿರಾಟ್‌ ಕೊಹ್ಲಿ ಆನ್‌ಲೈನ್‌ ಮೀಟಿಂಗ್‌ ನಡೆಸಿ ಕಿರಿಯ ಕ್ರಿಕೆಟಿಗರೊಂದಿಗೆ ಮಾತುಕತೆ ನಡೆಸಿದರು. ಪ್ರಧಾನ ಕೋಚ್‌ ಋಷಿಕೇಶ್‌ ಕಾನಿಟ್ಕರ್‌ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಭಾವ್ಯ ತಂಡಗಳು
ಭಾರತ: ಹರ್ನೂರ್‌ ಸಿಂಗ್‌, ಅಂಗ್‌ಕೃಷ್‌ ರಘುವಂಶಿ, ಶೇಖ್‌ ರಶೀದ್‌, ಯಶ್‌ ಧುಲ್‌ (ನಾಯಕ), ರಾಜ್ಯವರ್ಧನ್‌ ಹಂಗಗೇಕರ್‌, ನಿಶಾಂತ್‌ ಸಿಂಧು, ದಿನೇಶ್‌ ಬಾನಾ, ರಾಜ್‌ ಬಾವಾ, ಕೌಶಲ್‌ ತಾಂಬೆ, ವಿಕ್ಕಿ ಓಸ್ವಾಲ್‌, ರವಿಕುಮಾರ್‌.
ಇಂಗ್ಲೆಂಡ್‌: ಜಾರ್ಜ್‌ ಥಾಮಸ್‌, ಜೇಕಬ್‌ ಬೆಥೆಲ್‌, ಟಾಮ್‌ ಪ್ರಸ್ಟ್‌ (ನಾಯಕ), ಜೇಮ್ಸ್‌ ವಿಲ್‌ ಲಕ್ಸ್‌ಟನ್‌, ಜಾರ್ಜ್‌ ಬೆಲ್‌, ರೆಹಾನ್‌ ಅಹ್ಮದ್‌, ಅಲೆಕ್ಸ್‌ ಹೋರ್ಟನ್‌, ಜೇಮ್ಸ್‌ ಸೇಲ್ಸ್‌, ಥಾಮಸ್‌ ಆ್ಯಸ್ಪಿನ್‌ವಾಲ್‌, ಜೋಶುವಾ ಬಾಯೆxನ್‌.
ಆರಂಭ: ಸಂಜೆ 6.30, ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಭಾರತದ ಕಿರಿಯರ 4 ವಿಶ್ವಕಪ್‌ ಗೆಲುವು

2000, ಕೊಲಂಬೊ: ಲಂಕಾ ವಿರುದ್ಧ 6 ವಿಕೆಟ್‌ ಜಯ
ನಾಯಕ: ಮೊಹಮ್ಮದ್‌ ಕೈಫ್, ಪಂದ್ಯಶ್ರೇಷ್ಠ: ರಿತೀಂದರ್‌ ಸಿಂಗ್‌ ಸೋಧಿ (ಅಜೇಯ 39), ಸರಣಿಶ್ರೇಷ್ಠ: ಯುವರಾಜ್‌ ಸಿಂಗ್‌ (203 ರನ್‌, 12 ವಿಕೆಟ್‌)

ಸ್ಕೋರ್‌: ಶ್ರೀಲಂಕಾ-48.1 ಓವರ್‌ಗಳಲ್ಲಿ 178 (ಜೇಹಾನ್‌ ಮುಬಾರಕ್‌ 58, ಸಲಭ್‌ ಶ್ರೀವಾಸ್ತವ 33ಕ್ಕೆ 3). ಭಾರತ-40.4 ಓವರ್‌ಗಳಲ್ಲಿ 4 ವಿಕೆಟಿಗೆ 180 (ಸೋಧಿ ಔಟಾಗದೆ 39, ನೀರಜ್‌ ಪಟೇಲ್‌ ಔಟಾಗದೆ 34, ಮನೀಶ್‌ ಶರ್ಮ 27, ಯುವರಾಜ್‌ 27).

2008, ಪುಚೋಂಗ್‌: ದಕ್ಷಿಣ ಆಫ್ರಿಕಾ ವಿರುದ್ಧ ಡಿ-ಎಲ್‌ ನಿಯಮದಂತೆ 12 ರನ್‌ ಜಯ
ನಾಯಕ: ಕೊಹ್ಲಿ, ಪಂದ್ಯಶ್ರೇಷ್ಠ: ಅಜಿತೇಶ್‌ ಅರ್ಗಾಲ್‌ (7 ರನ್ನಿಗೆ 2 ವಿಕೆಟ್‌), ಸರಣಿಶ್ರೇಷ್ಠ: ಟಿಮ್‌ ಸೌಥಿ (17 ವಿಕೆಟ್‌) ಸ್ಕೋರ್‌: ಭಾರತ-45.4 ಓವರ್‌ಗಳಲ್ಲಿ 159 (ತನ್ಮಯ್‌ ಶ್ರೀವಾಸ್ತವ 46, ಸೌರಭ್‌ ತಿವಾರಿ 20, ಪಾಂಡೆ 20, ವೇಯ್ನ ಪಾರ್ನೆಲ್‌ 21ಕ್ಕೆ 2, ಮ್ಯಾಥ್ಯೂ ಅರ್ನಾಲ್ಡ್‌ 30ಕ್ಕೆ 2, ರಾಯ್‌ ಆ್ಯಡಮ್ಸ್‌ 38ಕ್ಕೆ 2). ದಕ್ಷಿಣ ಆಫ್ರಿಕಾ ಗುರಿ-25 ಓವರ್‌ಗಳಲ್ಲಿ 116. ಗಳಿಸಿದ್ದು 8ಕ್ಕೆ 103 (ರೀಝ ಹೆಂಡ್ರಿಕ್ಸ್‌ 35, ಪಾರ್ನೆಲ್‌ 29, ಅಜಿತೇಶ್‌ 7ಕ್ಕೆ 2, ಜಡೇಜ 25ಕ್ಕೆ 2, ಕೌಲ್‌ 26ಕ್ಕೆ 2).

2012, ಟೌನ್ಸ್‌ವಿಲ್ಲೆ: ಆಸೀಸ್‌ ವಿರುದ್ಧ 6 ವಿಕೆಟ್‌ ಜಯ
ನಾಯಕ: ಉನ್ಮುಕ್ತ್ ಚಂದ್‌, ಪಂದ್ಯಶ್ರೇಷ್ಠ: ಉನ್ಮುಕ್‌¤ ಚಂದ್‌ (ಅಜೇಯ 111), ಸರಣಿಶ್ರೇಷ್ಠ: ವಿಲಿಯಂ ಬೊಸಿಸ್ಟೊ (276 ರನ್‌)
ಸ್ಕೋರ್‌: ಆಸ್ಟ್ರೇಲಿಯ-8ಕ್ಕೆ 225 (ಬೊಸಿಸ್ಟೊ ಔಟಾಗದೆ 87,  ಟರ್ನರ್‌ 43, ಟ್ರ್ಯಾವಿಸ್‌ ಹೆಡ್‌ 37, ಸಂದೀಪ್‌ ಶರ್ಮ 54ಕ್ಕೆ 4). ಭಾರತ-47.4 ಓವರ್‌ಗಳಲ್ಲಿ 4 ವಿಕೆಟಿಗೆ 227 (ಉನ್ಮುಕ್‌¤ ಚಂದ್‌ ಔಟಾಗದೆ 111, ಸ್ಮಿತ್‌ ಪಟೇಲ್‌ ಔಟಾಗದೆ 62, ಬಾಬಾ ಅಪರಾಜಿತ್‌ 33).

2018, ಮೌಂಟ್‌ ಮೌಂಗನಿ: ಆಸ್ಟ್ರೇಲಿಯ ವಿರುದ್ಧ 8 ವಿಕೆಟ್‌ ಜಯ
ನಾಯಕ: ಪೃಥ್ವಿ ಶಾ, ಪಂದ್ಯಶ್ರೇಷ್ಠ: ಮನ್‌ಜೋತ್‌ ಕಾಲ್ರಾ (ಅಜೇಯ 101), ಸರಣಿಶ್ರೇಷ್ಠ: ಗಿಲ್‌ (372 ರನ್‌)
ಸ್ಕೋರ್‌: ಆಸ್ಟ್ರೇಲಿಯ-47.2 ಓವರ್‌ಗಳಲ್ಲಿ 216 (ಜೊನಾಥನ್‌ ಮೆರ್ಲೊ 76, ಪರಮ್‌ ಉಪ್ಪಲ್‌ 34, ಇಶಾನ್‌ ಪೊರೆಲ್‌ 30ಕ್ಕೆ 2, ಅನುಕೂಲ್‌ ರಾಯ್‌ 32ಕ್ಕೆ 2, ಶಿವ ಸಿಂಗ್‌ 36ಕ್ಕೆ 2). ಭಾರತ-38.5 ಓವರ್‌ಗಳಲ್ಲಿ 2 ವಿಕೆಟಿಗೆ 220 (ಮನ್‌ಜೋತ್‌ ಔಟಾಗದೆ 101, ಹಾರ್ವಿಕ್‌ ದೇಸಾಯಿ ಔಟಾಗದೆ 47, ಶುಭಮನ್‌ ಗಿಲ್‌ 31, ಪೃಥ್ವಿ ಶಾ 29).

Advertisement

Udayavani is now on Telegram. Click here to join our channel and stay updated with the latest news.

Next