Advertisement

ಇಂದು ದ್ವಿತೀಯ ಪಿಯುಸಿ ಫಲಿತಾಂಶ

10:02 AM Apr 30, 2018 | |

ಮಹಾನಗರ: ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯು ಎ. 30ರಂದು ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಗೊಳಿಸಲಿದ್ದು, ಜಿಲ್ಲೆಯಿಂದ ಪರೀಕ್ಷೆ ಬರೆದ 38,633 ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಕಳೆದ ವರ್ಷ ಜಿಲ್ಲೆಯು ಶೇ. 89.92 ಫಲಿತಾಂಶ ಪಡೆದು ದ್ವಿತೀಯ ಸ್ಥಾನ ಗಳಿಸಿದ್ದು, ಈ ವರ್ಷ ಯಾವ ಸ್ಥಾನ ಗಳಿಸಲಿದೆ ಎಂಬ ನಿರೀಕ್ಷೆಯನ್ನು ಹೆಚ್ಚಿಸಿದೆ.

Advertisement

ಮುಖ್ಯವಾಗಿ ಫಲಿತಾಂಶ ಬಂದಾಗ ನಿರೀಕ್ಷಿತ ಅಂಕ ಬಂದಿಲ್ಲ ಎಂಬ ಕಾರಣಕ್ಕಾಗಿ ವಿದ್ಯಾರ್ಥಿಗಳು ಮಾನಸಿಕವಾಗಿ ಖನ್ನರಾಗುತ್ತಾರೆ. ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೂ ತಲುಪುತ್ತಾರೆ. ಆದರೆ ವಿದ್ಯಾರ್ಥಿಗಳು ಇಂತಹ ಯಾವ ಆಲೋಚನೆಗಳನ್ನೂ ಮಾಡದೆ ಮುಂದಿನ ಯೋಜನೆಗಳನ್ನು ರೂಪಿಸಬೇಕಿದೆ.

ಒತ್ತಡ ಹೇರಬೇಡಿ
ಫಲಿತಾಂಶದ ಸಂದರ್ಭದಲ್ಲಿ ಹೆತ್ತವರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅಂಕಗಳು ಕಡಿಮೆ ಬಂತು ಎಂಬ ಕಾರಣಕ್ಕೆ ವಿದ್ಯಾರ್ಥಿಗಳ ಮನಸ್ಸಿಗೆ ಒತ್ತಡ ಹೇರಿ ಬೈಯುವ ಕೆಲಸವನ್ನೂ ಮಾಡಬಾರದು. ಫಲಿತಾಂಶ ನೋಡುವಾಗ ವಿದ್ಯಾರ್ಥಿಗಳ ಜತೆಗೆ ಹೆತ್ತವರು ಅಥವಾ ಆತ್ಮೀಯರು ಇದ್ದು, ಬಂದ ಅಂಕಗಳಿಗೆ ಸಮಾಧಾನ ಪಡಿಸುವ ಕಾರ್ಯವನ್ನು ಮಾಡಬೇಕಿದೆ.

ದ.ಕ. ಜಿಲ್ಲೆಯಲ್ಲಿ ಒಟ್ಟು 19,567 ವಿದ್ಯಾರ್ಥಿಗಳು ಹಾಗೂ 19,066 ವಿದ್ಯಾರ್ಥಿನಿಯರು ಸೇರಿ ಒಟ್ಟು 38,633 ಮಂದಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 34,863 ರೆಗ್ಯುಲರ್‌ ವಿದ್ಯಾರ್ಥಿಗಳು, 1,400 ಮಂದಿ ರಿಪೀಟರ್‌, 2,370 ಮಂದಿ ಖಾಸಗಿಯಾಗಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಕಲಾ ವಿಭಾಗದಲ್ಲಿ 4,901, ವಾಣಿಜ್ಯ ವಿಭಾಗದಲ್ಲಿ 17,045 ಹಾಗೂ ವಿಜ್ಞಾನ ವಿಭಾಗದಲ್ಲಿ 16,687 ವಿದ್ಯಾರ್ಥಿಗಳಿದ್ದರು.

ಕಳೆದ ವರ್ಷ ಉಡುಪಿ ಪ್ರಥಮ
ಕಳೆದ ಸಾಲಿನಲ್ಲಿ ಉಡುಪಿ ಜಿಲ್ಲೆಯು ಪ್ರಥಮ ಸ್ಥಾನ ಗಳಿಸಿದ್ದು, ಅದಕ್ಕಿಂತ ಹಿಂದಿನ ಸತತ ಮೂರು ವರ್ಷಗಳಲ್ಲಿ ದ.ಕ. ಜಿಲ್ಲೆಯು ಪಿಯುಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿತ್ತು. ಕಳೆದ ಬಾರಿ ರಾಜ್ಯಮಟ್ಟದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಪ್ರಥಮ ಹಾಗೂ ತೃತೀಯ, ವಾಣಿಜ್ಯ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದರು.

Advertisement

ಆತಂಕ ಪಡಬೇಕಿಲ್ಲ
ಫಲಿತಾಂಶ ನೋಡಿದ ಬಳಿಕ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ, ರಿಕೌಂಟಿಂಗ್‌ ಜತೆಗೆ ಮರುಪರೀಕ್ಷೆ ಬರೆಯುವುದಕ್ಕೂ ಅವಕಾಶವಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಆತಂಕ ಪಡಬೇಕಾದ ಸ್ಥಿತಿ ಇಲ್ಲ. ಜತೆಗೆ ತನಗೆ ಇಷ್ಟು ಅಂಕ ಕಡಿಮೆ ಬಂದ ಕಾರಣ ಮೆಡಿಕಲ್‌, ಎಂಜಿನಿಯರಿಂಗ್‌ ಸೀಟು ತಪ್ಪಿತು ಎಂಬ ಕೊರಗನ್ನೂ ಬಿಟ್ಟು ತಮ್ಮ ಅಂಕಕ್ಕೆ ಹೊಂದಿಕೊಳ್ಳುವ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ಮಾನಸಿಕ ರೋಗ ತಜ್ಞರು ಸಲಹೆ ನೀಡುತ್ತಾರೆ.

ಧನಾತ್ಮಕವಾಗಿ ಚಿಂತಿಸಿ
ವಿದ್ಯಾರ್ಥಿಗಳು ಎಷ್ಟೇ ಅಂಕಬಂದರೂ ಅದರ ಕುರಿತು ಧನಾತ್ಮಕವಾಗಿ ಆಲೋಚನೆ ಮಾಡಬೇಕು. ತಾವು ಎಲ್ಲಿ
ಎಡವಿದ್ದೇವೆ ಎಂಬುದನ್ನು ಆಲೋಚನೆ ಮಾಡಿಕೊಂಡು ಮುಂದಡಿ ಇಡಬೇಕು. ಪೋಷಕರು ಕೂಡ ಫಲಿತಾಂಶ
ನೋಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜತೆಗಿದ್ದು, ಅವರನ್ನು ಸಮಾಧಾನ ಪಡಿಸುವ ಕಾರ್ಯ ಮಾಡಬೇಕಿದೆ. ಭಾವೋದ್ವೇಗಕ್ಕೊಳಗಾಗದೆ ತಮ್ಮ ಅಂಕಗಳಿಗೆ ಸೂಕ್ತ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕಿದೆ.
– ಡಾ| ಸಿ.ಆರ್‌.ಚಂದ್ರಶೇಖರ್‌
ಮಾನಸಿಕ ರೋಗ ತಜ್ಞರು, ಬೆಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next