ಮೈಸೂರು: ಜಿಲ್ಲೆಯ 34,685 ವಿದ್ಯಾರ್ಥಿಗಳು ಶುಕ್ರವಾರ (ಮಾ.1)ದಿಂದ ಆರಂಭವಾಗಲಿರುವ ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಬರೆಯಲಿದ್ದು, ಜಿಲ್ಲೆಯಲ್ಲಿ 50 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಪಿಯು ಶಿಕ್ಷಣ ಇಲಾಖೆ ಉಪ ನಿರ್ದೇಶಕ ದಯಾನಂದ್ ತಿಳಿಸಿದ್ದಾರೆ.
ಕಲಾ ವಿಭಾಗದಲ್ಲಿ 9671 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 12932 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 12082 ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೆ 34685 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 16875 ವಿದ್ಯಾರ್ಥಿಗಳು, 17810 ವಿದ್ಯಾರ್ಥಿನಿಯರಿದ್ದಾರೆ. ಇವರಲ್ಲಿ 28777ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿದ್ದು, 4495 ಪುನರಾವರ್ತಿತ ಅಭ್ಯರ್ಥಿಗಳು, 1413 ಖಾಸಗಿ ವಿದ್ಯಾರ್ಥಿಗಳು ಸೇರಿದ್ದಾರೆ.
ಮೈಸೂರು ನಗರದಲ್ಲಿ 26 ಹಾಗೂ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿ 3, ಪಿರಿಯಾಪಟ್ಟಣ ತಾಲೂಕಿನಲ್ಲಿ 4, ಕೆ.ಆರ್.ನಗರ ತಾಲೂಕಿನಲ್ಲಿ 3, ನಂಜನಗೂಡು ತಾಲೂಕಿನಲ್ಲಿ 4, ತಿ.ನರಸೀಪುರ ತಾಲೂಕಿನಲ್ಲಿ 6 ಹಾಗೂ ಹುಣಸೂರು ತಾಲೂಕಿನಲ್ಲಿ 4 ಸೇರಿದಂತೆ ಗ್ರಾಮಾಂತರ ಭಾಗದಲ್ಲಿ 24 ಸೇರಿದಂತೆ ಒಟ್ಟಾರೆ 50 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯಲ್ಲಿರುವ 250 ಪಿಯು ಕಾಲೇಜುಗಳನ್ನು ಈ ಪರೀಕ್ಷಾ ಕೇಂದ್ರಗಳಿಗೆ ಜೋಡಿಸಲಾಗಿದೆ ಎಂದು ತಿಳಿಸಿದರು.
ಬಿಗಿಭದ್ರತೆ: ಪರೀಕ್ಷೆ ನಡೆಯುವ ದಿನಗಳಂದು ಬೆಳಗ್ಗೆ 6.30 ರಿಂದ 7ಗಂಟೆಯೊಳಗೆ ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಸ್ವೀಕರಿಸಿ, ಜಿಲ್ಲೆಯ ಹತ್ತು ಮಾರ್ಗಗಳಿಗೆ ಜಿಪಿಎಸ್ ಅಳವಡಿಸಿದ ವಾಹನಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಗುವುದು.
ಜೊತೆಗೆ ಆಯಾಯ ತಾಲೂಕಿನ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರಾಂಶುಪಾಲರುಗಳು ಜೊತೆಗೆ ಹೋಗಲಿದ್ದಾರೆ. ಜಿಲ್ಲೆಯಲ್ಲಿ ಪಾರದರ್ಶಕ, ದೋಷರಹಿತ, ಶಾಂತಿ, ಸುವ್ಯವಸ್ಥಿತ ಪರೀಕ್ಷೆಗೆ ಎಲ್ಲ ರೀತಿಯ ಕ್ರಮ ಗಳನ್ನು ಕೈಗೊಳ್ಳಲಾಗಿದ್ದು, ಕಳೆದ ಸಾಲಿನಲ್ಲಿ 17ನೇ ಸ್ಥಾನ ಪಡೆದಿದ್ದ ಮೈಸೂರು ಜಿಲ್ಲೆಯನ್ನು ಈ ಬಾರಿ 10 ನೇ ಸ್ಥಾನಕ್ಕೆ ತರುವ ಗುರಿ ಹೊಂದಲಾಗಿದೆ ಎಂದು ಹೇಳಿದರು.