ಬೆಂಗಳೂರು: ವೀರಶೈವ ಮಹಾಸಭೆಯ ವಾರ್ಷಿಕ ಸಾಮಾನ್ಯ ಸಭೆ ಹಾಗೂ ವಿಶೇಷ ಸಭೆ ಭಾನುವಾರ ನಡೆಯಲಿದೆ. ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಎಂಬ ಹೋರಾಟ ಆರಂಭವಾದ ನಂತರ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.
ಅಲ್ಲದೇ ವೀರಶೈವ ಮತ್ತು ಲಿಂಗಾಯತರು ಒಂದೇ ಎಂದು ಪ್ರತಿಪಾದಿಸುತ್ತಿರುವ ವೀರಶೈವ ಮಹಾಸಭೆ ಹದಿನೈದು ವರ್ಷಗಳ ನಂತರ ವಿಶೇಷ ಸಭೆ ಕರೆದಿದ್ದು, ಈ ಸಭೆಯಲ್ಲಿ ಪ್ರಮುಖವಾಗಿ ವೀರಶೈವ ಮಹಾಸಭೆಗೆ ಲಿಂಗಾಯತ ಪದ ಸೇರಿಸುವ ಕುರಿತು ಚರ್ಚಿಸಲು ನಿರ್ಧರಿಸಿದೆ. ಅಲ್ಲದೇ ಮಹಾಸಭೆಯ ಚುನಾವಣೆಯ ಪದ್ಧತಿಯನ್ನು ಸರಳೀಕರಿಸುವ ಕುರಿತಂತೆಯೂ ಮಹಾಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಲಿಂಗಾಯತರು ಗೈರು: ಭಾನುವಾರ ನಡೆಯುವ ಮಹಾಸಭೆಯ ಸಾಮಾನ್ಯ ಸಭೆಗೆ ಹಾಜರಾಗದಿರಲು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರು ನಿರ್ಧರಿಸಿದ್ದಾರೆ. ವೀರಶೈವ ಮಹಾಸಭೆ ರಾಜ್ಯ ಸರ್ಕಾರ ನೇಮಿಸಿರುವ ತಜ`ರ ಸಮಿತಿಯನ್ನು ವಿರೋಧಿಸಿದ್ದು, ಮಹಾಸಭೆಯ ನಿಲುವಿಗೆ ಲಿಂಗಾಯತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀರಶೈವ ಮಹಾಸಭೆ ಲಿಂಗಾಯತ ವಿರೋಧಿ ನೀತಿ ಅನುಸರಿಸುತ್ತಿರುವುದರಿಂದ ಅವರು ಕರೆದಿರುವ ಸಭೆಗೆ ಹಾಜರಾಗುವ ಅಗತ್ಯವಿಲ್ಲ ಎಂದು ಪ್ರತ್ಯೇಕ ಲಿಂಗಾಯತ ಧರ್ಮ ವೇದಿಕೆಯ ಸಂಚಾಲಕ ಜಿ.ಬಿ. ಪಾಟೀಲ್ ಹೇಳಿದ್ದಾರೆ.
ಜನವರಿ 10 ಕ್ಕೆ ಲಿಂಗಾಯತರ ಸಭೆ: ರಾಜ್ಯ ಸರ್ಕಾರ ನೇಮಿಸಿರುವ ಸಮಿತಿ ವರದಿ ನೀಡಲು ಆರು ತಿಂಗಳು ಸಮಯ ಕೇಳಿರುವುದರಿಂದ ಮುಂದಿನ ಹೋರಾಟ ಹೇಗೆ ಮುನ್ನಡೆಸಬೇಕೆಂಬ ಕುರಿತು ಚರ್ಚಿಸಲು ಲಿಂಗಾಯತ ಮುಖಂಡರು ಜನವರಿ 10ರಂದು ಸಭೆ ಕರೆದಿದ್ದಾರೆ. 2018 ರ ಚುನಾವಣೆ ಮುಂಚೆಯೇ ಪ್ರತ್ಯೇಕ ಧರ್ಮ ಘೋಷಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತದೆ ಎಂದು ವಿಶ್ವಾಸ ಇಟ್ಟುಕೊಂಡಿದ್ದ ಲಿಂಗಾಯತ ಹೋರಾಟಗಾರರು, ಈಗ ವಿಳಂಬವಾಗುವುದರಿಂದ ಹೋರಾಟವನ್ನು ಜೀವಂತವಾಗಿಡಲು ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿದ್ದಾರೆ. ಅದರಂತೆ ಜನವರಿ 8 ರಂದು ರಾಣೆಬೆನ್ನೂರು ಜನವರಿ 24 ಅರಸಿಕೆರೆ ಹಾಗೂ ತಿಂಗಳಾಂತ್ಯಕ್ಕೆ ಮೈಸೂರಿನಲ್ಲಿ ಸಮಾವೇಶ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ.